ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಬಸೋಲಿ ಬಳಿಯ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಕ್ಯಾಂಪ್‌ನಲ್ಲಿ ಯೋಧರ ನಡುವೆ ನಡೆದ ಗಲಾಟೆಯ ಬಳಿಕ ನಡೆದ ಗುಂಡಿನ ದಾಳಿಯಲ್ಲಿ ಅಸಿಸ್ಟೆಂಟ್ ಕಮಾಂಡೆಂಟ್ ಸೇರಿದಂತೆ ನಾಲ್ವರು ಯೋಧರು ಮೃತಪಟ್ಟಿದ್ದಾರೆ.
ಹಿಮಾಚಲ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ಬಸೋಲಿಯ ಮಶ್ಕಾ ಗ್ರಾಮದಲ್ಲಿರುವ ‘ಸೇವಾ-2’ ಜಲವಿದ್ಯುತ್ ಯೋಜನೆಗೆ ಭದ್ರತೆ ಒದಗಿಸಲು ಸಿಐಎಸ್ಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಮಂಗಳವಾರ ಸಂಜೆ ಸುಮಾರು 7:10ರ ವೇಳೆಗೆ ಕರ್ತವ್ಯದ ಪಾಳಿ ಬದಲಾವಣೆ ಸಂದರ್ಭದಲ್ಲಿ ಯೋಧರ ನಡುವೆ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ತೀವ್ರ ವಾಗ್ವಾದ ನಡೆದಿದೆ. ಜಗಳ ತಾರಕಕ್ಕೇರಿದಾಗ 2009ರ ಬ್ಯಾಚ್‌ನ ಹೆಡ್ ಕಾನ್‌ಸ್ಟೆಬಲ್ ಒಬ್ಬರು ತಮ್ಮ ಸರ್ವೀಸ್ ರೈಫಲ್‌ನಿಂದ ಸಹೋದ್ಯೋಗಿಗಳ ಮೇಲೆ ಅಂಧಾಧುಂದಿಯಾಗಿ ಗುಂಡು ಹಾರಿಸಿದ್ದಾರೆ.
ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಯೋಧರನ್ನು ತಕ್ಷಣವೇ ಎನ್‌ಎಚ್‌ಪಿಸಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ನಾಲ್ವರೂ ಸಾವನ್ನಪ್ಪಿದ್ದಾರೆ. ಮೃತ ಯೋಧರನ್ನು ಕಂಪನಿ ಕಮಾಂಡರ್ ಆಗಿದ್ದ ಅಸಿಸ್ಟೆಂಟ್ ಕಮಾಂಡೆಂಟ್ ಅಂಕಿತ್ ಕುಮಾರ್ ಪಾಂಡೆ, ಸಬ್-ಇನ್‌ಸ್ಪೆಕ್ಟರ್ ಲಕ್ಷ್ಮಣ್ ಸಿಂಗ್, ಕಾನ್‌ಸ್ಟೆಬಲ್ ರಫೀಕ್ ಅಹ್ಮದ್ ಹಾಗೂ ಕಾನ್‌ಸ್ಟೆಬಲ್ ಸಂದೀಪ್ ಕುಮಾರ್ ಎಂದು ಗುರುತಿಸಲಾಗಿದೆ.
ಘಟನೆಯ ನಂತರ ಆರೋಪಿ ಹೆಡ್ ಕಾನ್‌ಸ್ಟೆಬಲ್‌ನನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಹಾಗೂ ಭದ್ರತಾ ಅಧಿಕಾರಿಗಳು ಧಾವಿಸಿದ್ದು, ಈ ಗುಂಡಿನ ದಾಳಿಗೆ ನಿಖರ ಕಾರಣವೇನು ಎಂಬುದರ ಕುರಿತು ಸಿಐಎಸ್ಎಫ್ ಆಂತರಿಕ ತನಿಖೆ ಆರಂಭಿಸಿದೆ ಮತ್ತು ಪೊಲೀಸರೂ ಪ್ರತ್ಯೇಕ ತನಿಖೆ ಕೈಗೊಂಡಿದ್ದಾರೆ.
