ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಚಿನ್ನಾಭರಣ ಹಾಗೂ ನಗದು ಹಣವನ್ನು ಪ್ರದರ್ಶಿಸುತ್ತಿದ್ದ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಜನಪ್ರಿಯ ಯೂಟ್ಯೂಬರ್ ಮಧುಮಿತ ಅವರ ಮನೆಯಲ್ಲಿ ಸುಮಾರು ₹1 ಕೋಟಿ ಮೌಲ್ಯದ ಚಿನ್ನಾಭರಣಗಳು ಕಳವಾಗಿವೆ. ಆದರೆ ಈ ಭಾರಿ ಕಳವು ನಡೆದ ಕೆಲವೇ ಗಂಟೆಗಳಲ್ಲಿ ಅವರು ಮತ್ತೆ ಹತ್ತಾರು ರೀಲ್ಸ್ಗಳನ್ನು ಹಂಚಿಕೊಂಡಿದ್ದು, ಅವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಒಂದೂವರೆ ಕೋಟಿಗೂ ಅಧಿಕ ವೀವ್ಸ್ ಪಡೆದುಕೊಂಡಿವೆ.
ಕನ್ಯಾಕುಮಾರಿ ಜಿಲ್ಲೆಯ ನಾಗರ್ಕೋವಿಲ್ ಸಮೀಪದ ತಮ್ಮಟ್ಟುಕೋಣಂ ನಿವಾಸಿಯಾದ ಯೂಟ್ಯೂಬರ್ ಮತ್ತು ಇನ್ಫ್ಲುಯೆನ್ಸರ್ ಮಧುಮಿತ (29), ತಮ್ಮ ಪತಿ ವಿನೋದ್ ಕುಮಾರ್ ಹಾಗೂ ಎರಡು ವರ್ಷದ ಮಗಳೊಂದಿಗೆ ವಾಸಿಸುತ್ತಿದ್ದಾರೆ. ಗುರುವಾರ ಸಂಜೆ 5 ಗಂಟೆಗೆ ಮಗಳ ಜನ್ಮದಿನದ ಶಾಪಿಂಗ್ಗಾಗಿ ಕುಟುಂಬ ಸಮೇತ ತಿರುನೆಲ್ವೇಲಿಗೆ ತೆರಳಿದ್ದರು. ರಾತ್ರಿ 11:50 ರ ಸುಮಾರಿಗೆ ಮನೆಗೆ ಹಿಂತಿರುಗಿ ನೋಡಿದಾಗ, ಮನೆಯ ಹಿಂಬಾಗಿಲು ಮುರಿದಿರುವುದು ಕಂಡುಬಂದಿದೆ. ಒಳಗೆ ತೆರಳಿ ಪರಿಶೀಲಿಸಿದಾಗ, ಬೀರುವಿನಲ್ಲಿದ್ದ ಸುಮಾರು 118 ಸವರನ್ (ಅಂದಾಜು 944 ಗ್ರಾಂ) ಚಿನ್ನಾಭರಣಗಳು, ವಜ್ರದ ಒಡವೆಗಳು ಹಾಗೂ ನಗದು ಕಳವಾಗಿರುವುದು ಬೆಳಕಿಗೆ ಬಂದಿದೆ.
ತಕ್ಷಣವೇ ದಂಪತಿ ರಾಜಕ್ಕಾಮಂಗಲಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಾಹಿತಿ ಪಡೆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅನ್ಶುಲ್ ನಗರ್ ನೇತೃತ್ವದ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ.ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಬೆರಳಚ್ಚುಗಳ ಆಧಾರದ ಮೇಲೆ ವಿಶೇಷ ತಂಡಗಳು ಶೋಧ ನಡೆಸುತ್ತಿದ್ದು, ಶಂಕಿತ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮುಖ್ಯವಾಗಿ, ಮಧುಮಿತ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಚಿನ್ನಾಭರಣ ಮತ್ತು ಹಣದ ಕಂತೆಗಳನ್ನು ಪ್ರದರ್ಶಿಸುತ್ತಿದ್ದುದು ಹಾಗೂ ತಾವು ಹೊರಗಡೆ ಹೋಗುವ ದಿನಚರಿಯನ್ನು ಹಂಚಿಕೊಳ್ಳುತ್ತಿದ್ದುದೇ ಕಳ್ಳರಿಗೆ ಸುಳಿವು ನೀಡಿತೇ ಎಂಬ ಕೋನದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆದರೆ ಎಲ್ಲರನ್ನೂ ಅಚ್ಚರಿಗೊಳಿಸಿದ ಸಂಗತಿಯೆಂದರೆ, ಮನೆಯಲ್ಲಿ ₹1 ಕೋಟಿ ಮೌಲ್ಯದ ಕಳವು ನಡೆದ ಕೆಲವೇ ಗಂಟೆಗಳಲ್ಲಿ ಮಧುಮಿತ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೋಬ್ಬರಿ 10 ಹೊಸ ರೀಲ್ಸ್ಗಳನ್ನು ಪೋಸ್ಟ್ ಮಾಡಿದ್ದಾರೆ. ತಲೆಯ ಮೇಲೆ ನೋಟಿನ ಕಂತೆಗಳನ್ನು ಸುರಿದುಕೊಂಡು ನೃತ್ಯ ಮಾಡುವುದು, ಹಣವನ್ನು ಗಾಳಿಯಲ್ಲಿ ತೂರುವಂತಹ ವಿಡಿಯೋಗಳನ್ನು “ಯಾವುದೂ ಶಾಶ್ವತವಲ್ಲ” ಎಂಬ ಒಕ್ಕಣೆಯೊಂದಿಗೆ ಹಂಚಿಕೊಂಡಿದ್ದಾರೆ.
ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಕೇವಲ 40 ಗಂಟೆಗಳಲ್ಲಿ ಒಂದೇ ವಿಡಿಯೋಗೆ 39 ಲಕ್ಷ ವೀವ್ಸ್ ಹಾಗೂ ಉಳಿದ ವಿಡಿಯೋಗಳಿಗೆ ಒಟ್ಟಾರೆಯಾಗಿ 1.5 ಕೋಟಿಗೂ ಅಧಿಕ ವೀವ್ಸ್ ದಾಖಲಾಗಿವೆ. ಇದರ ಬೆನ್ನಲ್ಲೇ ಅವರ ಫಾಲೋವರ್ಸ್ ಸಂಖ್ಯೆಯೂ 5 ಲಕ್ಷಕ್ಕೆ ಏರಿಕೆಯಾಗಿದೆ. ಕೋಟಿ ಮೌಲ್ಯದ ಕಳವು ನಡೆದಾಗಲೂ ಇಂತಹ ವರ್ತನೆ ತೋರಿರುವುದಕ್ಕೆ ನೆಟ್ಟಿಗರಿಂದ ತೀವ್ರ ಪರ-ವಿರೋಧ ಚರ್ಚೆಗಳು ವ್ಯಕ್ತವಾಗುತ್ತಿವೆ.
