ಬೆಂಗಳೂರು : ಬಿಜೆಪಿ ವಿಧಾನಸಭಾ ಟಿಕೆಟ್ ನ ಕೋಟಿ ಕೋಟಿ ವಂಚನೆ ಪ್ರಕರಣ ದಾಖಲಾಗಿ 11 ದಿನಗಳ ನಂತರ ಕಳ್ಳಸ್ವಾಮಿ ಎಂದೇ ಕುಖ್ಯಾತಿ ಪಡೆದ ಹಾಲಶ್ರೀ ಬಂಧನವಾಗಿದೆ. ಸಿಸಿಬಿ ಪೊಲೀಸರಿಂದ ಒಡಿಶಾದಲ್ಲಿ ತಲೆಮರೆಸಿಕೊಂಡಿದ್ದ ಹಾಲಶ್ರೀ ಸ್ವಾಮಿಯನ್ನು ಸಿಸಿಬಿ ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ.
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತಂದಿರುವ ಸಿಸಿಬಿ ಪೊಲೀಸರು ಗುಟ್ಟಾಗಿ ಹಾಲಶ್ರೀಯನ್ನು ಕರೆದೊಯ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ವಿಮಾನ ನಿಲ್ದಾಣದಿಂದ ನೇರವಾಗಿ ಕೋರ್ಟ್ ಗೆ ಹಾಜರುಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಕರಣದ ಅಡಿಯಲ್ಲಿ ಹೆಚ್ಚಿನ ತನಿಖೆ ಕಾರಣಕ್ಕೆ ಸಿಸಿಬಿ ಅಧಿಕಾರಿಗಳಿಗೆ ಕೋರ್ಟ್ ನ ಅನುಮತಿ ಬೇಕಿದ್ದು, ಕಾನೂನು ಪ್ರಕಾರವೇ ಎಲ್ಲಾ ಪ್ರಕ್ರಿಯೆ ಮುಂದುವರಿಸಲಿದ್ದಾರೆ. ಹಾಗಾಗಿ ವಿಮಾನ ನಿಲ್ದಾಣದ ನಿರ್ಗಮನ ಗೇಟ್ ನಿಂದಲೇ ರಹಸ್ಯ ಸ್ಥಳಕ್ಕೆ ಹಾಲಶ್ರೀ ಸ್ವಾಮಿಯನ್ನು ಶಿಫ್ಟ್ ಮಾಡುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಒಡಿಶಾದಲ್ಲಿ ಪೊಲೀಸರಿಗೇ ವಂಚಿಸಿ ಪರಾರಿಯಾಗಲು ಹೊರಟಿದ್ದ ಹಾಲಶ್ರೀ ಸ್ವಾಮಿಯನ್ನು ಗುಪ್ತವಾಗಿ ರಹಸ್ಯ ಸ್ಥಳಕ್ಕೆ ಕರೆದೊಯ್ಯಬೇಕು. ಸ್ವಲ್ಪ ಹೆಚ್ಚು ಕಡಿಮೆ ಆದರೂ ಆತ ತಪ್ಪಿಸಿಕೊಳ್ಳಲು ಸಾಧ್ಯತೆ ಇದೆ ಅಥವಾ ಕಾನೂನಿನ ಅಡಿಯಲ್ಲೇ ಆತ ನುಣುಚಿಕೊಳ್ಳಬಹುದು. ಹಾಗಾಗಿ ತನಿಖೆ ಚುರುಕುಗೊಳ್ಳಲು ಈ ಗೌಪ್ಯತೆ ಅಗತ್ಯ ಎಂದು ಸಿಸಿಬಿ ಮೂಲಗಳಿಂದ ತಿಳಿದು ಬಂದಿದೆ.
ಹಾಲಶ್ರೀ ಬಂಧನದಿಂದ ಈಗ ಬಿಜೆಪಿ ಪಕ್ಷದ ಒಳಗೆ ಟಿಕೆಟ್ ಲಾಭಿಯಲ್ಲಿ ಭಾಗಿಯಾಗಿದ್ದವರಿಗೆ, ಭಾಷಣದ ಮೂಲಕ ಎಲ್ಲರನ್ನೂ ಯಾಮಾರಿಸಿ ಸಾಚಾತನ ಪ್ರದರ್ಶನ ಮಾಡಿದವರಿಗೆ ಈಗ ದಿಗಿಲು ಹುಟ್ಟಿದಂತಾಗಿದೆ. ಸಧ್ಯಕ್ಕೆ ಹಾಲಶ್ರೀ ಜೊತೆಗೆ ಭಾಗಿ ಆಗಿರಬಹುದಾದ ಪ್ರಮುಖ ವ್ಯಕ್ತಿಗಳ ಚಲನವಲನಗಳ ಬಗ್ಗೆಯೂ ಸಿಸಿಬಿ ಪೊಲೀಸರು ಕಣ್ಣಿಟ್ಟಿದ್ದಾರೆ.