ದೆಹಲಿ: ಪಂಜಾಬ್-ಹರಿಯಾಣ ಗಡಿ ಪ್ರದೇಶ ಶಂಭು ಗಡಿಯಲ್ಲಿ ಮತ್ತೊಮ್ಮೆ ಉದ್ವಿಗ್ನತೆ ಉಂಟಾಗಿದೆ. ಶನಿವಾರ ಮಧ್ಯಾಹ್ನ ‘ದೆಹಲಿ ಚಲೋ’ ಪಾದಯಾತ್ರೆ ಆರಂಭಿಸಿದ ರೈತರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿ ಪ್ರಯೋಗಿಸಿದರು.
ಕನಿಷ್ಠ ಬೆಂಬಲ ಬೆಲೆ ಸೇರಿದಂತೆ 11 ಬೇಡಿಕೆಗಳ ಈಡೇರಿಕೆಗಾಗಿ 101 ರೈತರು ಈ ಜಾಥಾದಲ್ಲಿ ಪಾಲ್ಗೊಂಡಿದ್ದರು.
ಡಿಸೆಂಬರ್ 6ರಿಂದ ದೆಹಲಿಯತ್ತ ತೆರಳಲು ರೈತರು ಪ್ರಯತ್ನಿಸುತ್ತಿದ್ದಾರೆ. ಆದರೆ ಇಂದು ಮೂರನೇ ಬಾರಿಗೆ ಅವರ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದಾರೆ. ಏತನ್ಮಧ್ಯೆ, ಇತ್ತೀಚಿನ ದೆಹಲಿ ಮಾರ್ಚ್ ಅನ್ನು ಗಮನದಲ್ಲಿಟ್ಟುಕೊಂಡು, ಹರಿಯಾಣ ಸರ್ಕಾರವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಮೊಬೈಲ್ ಇಂಟರ್ನೆಟ್ ಸೇವೆಗಳು ಸ್ಥಗಿತಗೊಂಡಿವೆ. ಇಂದು ಬೆಳಗ್ಗೆ 6 ಗಂಟೆಯಿಂದ 17ರ ಮಧ್ಯರಾತ್ರಿಯವರೆಗೆ ಸೇವೆ ಸ್ಥಗಿತಗೊಳ್ಳಲಿದೆ ಎಂದು ಪ್ರಕಟಣೆ ಹೊರಡಿಸಲಾಗಿದೆ.
‘‘ಒಂದೆಡೆ ಸರಕಾರ ರೈತರನ್ನು ತಡೆಯುತ್ತಿಲ್ಲ ಎಂದು ಹೇಳುತ್ತಿದೆ. ಮತ್ತೊಂದೆಡೆ ಅವರ ಮೇಲೆ ಅಶ್ರುವಾಯು ಪ್ರಯೋಗಿಸಲಾಗುತ್ತಿದೆ. ಪಾಕಿಸ್ತಾನ ಗಡಿಯೆನ್ನುವಂತೆ ವರ್ತಿಸುತ್ತಿದೆ. ನಾಯಕರು ದೆಹಲಿಗೆ ಹೋಗಿ ಪ್ರತಿಭಟನೆ ಮಾಡಬೇಕೆಂದರೆ ಅನುಮತಿ ತೆಗೆದುಕೊಳ್ಳುತ್ತಾರಾ..? ರೈತರು ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಮಾತ್ರ ಕೇಳುತ್ತಿದ್ದಾರೆ. ನಾವು ಯಾವಾಗಲೂ ಅವರ ಬೆಂಬಲಕ್ಕೆ ನಿಲ್ಲುತ್ತೇವೆ” ಎಂದು ಸ್ಟಾರ್ ಕುಸ್ತಿಪಟು ಮತ್ತು ಕಾಂಗ್ರೆಸ್ ನಾಯಕ ಬಜರಂಗ್ ಪುನಿಯಾ ಶಂಭು ಗಡಿ ಉದ್ವಿಗ್ನತೆಗೆ ಪ್ರತಿಕ್ರಿಯಿಸಿದ್ದಾರೆ.