ಚಾಟ್‌ಜಿಪಿಟಿಯ ಮಾತೃಸಂಸ್ಥೆ ಓಪನ್‌ಎಐ ಸಂಸ್ಥೆಯ ವಿಷಲ್ ಬ್ಲೋವರ್ ಸುಚಿರ್ ಬಾಲಾಜಿ (26) ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ.
ಭಾರತೀಯ ಮೂಲದ ಇವರು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಅವರ ನಿವಾಸದಲ್ಲಿ ಶವವಾಗಿ ಕಾಣಿಸಿಕೊಂಡಿದ್ದಾರೆ. ಅವರು ನವೆಂಬರ್ 26 ರಂದು ನಿಧನರಾಗಿದ್ದು ಈ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಇತ್ತೀಚಿನ ಅಂತಾರಾಷ್ಟ್ರೀಯ ಮಾಧ್ಯಮ ವರದಿಗಳು ಇದನ್ನು ಬಹಿರಂಗಪಡಿಸಿವೆ. ಪ್ರಾಥಮಿಕ ತನಿಖೆಯ ನಂತರ ಇದು ಆತ್ಮಹತ್ಯೆ ಎಂದು ಪೊಲೀಸರು ಭಾವಿಸಿದ್ದಾರೆ. ಸದ್ಯ ಈ ಘಟನೆಯಲ್ಲಿ ಯಾವುದೇ ಅನುಮಾನಾಸ್ಪದ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂದು ಅವರು ಹೇಳಿದ್ದಾರೆ.
ಓಪನ್ AI ಕಾರ್ಯಾಚರಣೆಗಳು ಮತ್ತು ಅನುಸರಿಸಿದ ಕಾರ್ಯವಿಧಾನಗಳು ಆತಂಕಕಾರಿ ಎಂದು ಬಾಲಾಜಿ ಈ ಹಿಂದೆ ತಮ್ಮ ಸಂಶೋಧನೆಯ ಮೂಲಕ ಬಹಿರಂಗಪಡಿಸಿದ್ದರು. ಕಂಪನಿಯು ಹಲವಾರು ಹಕ್ಕುಸ್ವಾಮ್ಯಗಳನ್ನು ಉಲ್ಲಂಘಿಸಿದೆ ಎಂದು ಸಹ ಅವರು ಆರೋಪಿಸಸಿದ್ದರು.
ಆರೋಪ ಕೇಳಿ ಬಂದ ಮೂರು ತಿಂಗಳ ನಂತರ ಬಾಲಾಜಿ ಸಾವಿಗೀಡಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಅವರು ನವೆಂಬರ್ 2020ರಿಂದ ಈ ವರ್ಷದ ಆಗಸ್ಟ್ ತನಕ ಓಪನ್ AI ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾರೆ. ಈ ಮೊದಲು, ಈ ಯುವ ಟೆಕ್ಕಿ ನ್ಯೂಯಾರ್ಕ್ ಟೈಮ್ಸ್ ಜೊತೆ ಮಾತನಾಡುತ್ತಾ, ಸಮಾಜಕ್ಕೆ ಒಳಿತಿಗಿಂತ ಹೆಚ್ಚು ಹಾನಿ ಮಾಡುವ ತಂತ್ರಜ್ಞಾನಗಳಿಗಾಗಿ ಇನ್ನು ಮುಂದೆ ಕೆಲಸ ಮಾಡಲು ಬಯಸುವುದಿಲ್ಲ ಮತ್ತು ಅದಕ್ಕಾಗಿಯೇ ತಾನು ಕಂಪನಿಯನ್ನು ತೊರೆಯುತ್ತಿರುವುದಾಗಿ ತಿಳಿಸಿದ್ದರು.