Home ರಾಜಕೀಯ ಬಿಜೆಪಿಯಲ್ಲಿ ʻಜೋಕರ್ʼ ಆಗಿಯೇ ಉಳಿದುಬಿಟ್ಟರಾ ಬಸನಗೌಡ ಪಾಟೀಲ್‌ ಯತ್ನಾಳ್?‌

ಬಿಜೆಪಿಯಲ್ಲಿ ʻಜೋಕರ್ʼ ಆಗಿಯೇ ಉಳಿದುಬಿಟ್ಟರಾ ಬಸನಗೌಡ ಪಾಟೀಲ್‌ ಯತ್ನಾಳ್?‌

0

ಭಾರತೀಯ ಜನತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಬಿ.ವೈ.ವಿಜಯೇಂದ್ರ ನೇಮಕ ಆದ ಬೆನ್ನಲ್ಲೇ ವಿಧಾನಸಭೆ ಪ್ರತಿಪಕ್ಷ ನಾಯಕ ಸ್ಥಾನ ಆರ್.ಅಶೋಕ್‌ ಅವರಿಗೆ ಒಲಿದುಬಂದಿದೆ. ಸದ್ಯದ ಮಟ್ಟಿಗೆ ರಾಜ್ಯ ಬಿಜೆಪಿಯಲ್ಲಿ ಇರುವುದು ಎರಡೇ ಪ್ರಮುಖ ಹುದ್ದೆಗಳು. ಈ ಎರಡರಲ್ಲಿ ಒಂದು ತನಗೆ ಒಲಿಯಬಹುದೆಂದು, ಅದರಲ್ಲೂ ಪ್ರತಿಪಕ್ಷ ನಾಯಕನ ಸ್ಥಾನ ತನಗೇ ದೊರೆಯಬಹುದೆಂದು ಕಾದಿದ್ದ ಬಸನಗೌಡ ಪಾಟೀಲ ಯತ್ನಾಳ್‌ ಅವರಿಗೆ ದೊಡ್ಡ ನಿರಾಶೆಯಾಗಿದೆ. ನಿರಾಶೆ ಮಾತ್ರವಲ್ಲ ಅದು ಹತಾಶೆಯ ಹಾಗೂ ಕಾಣುತ್ತಿದೆ. ಬಿಜೆಪಿ ಪಾಲಿಗೆ ಯತ್ನಾಳ್‌ ಒಬ್ಬ ಜೋಕರ್‌ ಆಗಿಯೇ ಉಳಿದುಹೋಗಿದ್ದಾರೆ.

ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಹಿಂದೆ ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ರೈಲ್ವೆ ಇಲಾಖೆ ರಾಜ್ಯ ಸಚಿವರಾಗಿದ್ದರು. ಅವರ ರಾಜಕೀಯ ಜೀವನದ ದೊಡ್ಡ ಸಾಧನೆ ಅದೇನೇ. ನಂತರ ಯತ್ನಾಳ್‌ ಪಕ್ಷ ತೊರೆದು ಜೆಡಿಎಸ್‌ ಸೇರಿದರು. ಅಲ್ಲೂ ಅವರು ಬಾಳಲಿಲ್ಲ. ಮತ್ತೆ ಬಿಜೆಪಿಗೆ ಬಂದರಾದರೂ ಪಕ್ಷದಲ್ಲಿ ಅವರು ಬಯಸುವ ಸ್ಥಾನಮಾನ ಸಿಗಲೇ ಇಲ್ಲ. ಬಹುಶಃ ಅದು ಸಿಗುವುದೂ ಇಲ್ಲ. ಯಾಕೆಂದರೆ ಬಿಜೆಪಿ ಯತ್ನಾಳ್‌ ಅವರನ್ನು ಎಂದೂ ಗಂಭೀರವಾಗಿ ತೆಗೆದುಕೊಂಡಿದ್ದೇ ಇಲ್ಲ.

ಬಹುಶಃ ಇಡೀ ದೇಶದಲ್ಲಿ ಪಕ್ಷ ವಿರೋಧಿ ಮಾತುಗಳನ್ನು ಆಡಿದ ಎಲ್ಲ ರಾಜಕೀಯ ಪಕ್ಷಗಳ ಧುರೀಣರ ಪಟ್ಟಿ ಮಾಡಿದರೆ ಯತ್ನಾಳ್‌ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನ ಬೇಕೆಂದರೆ ಹೈಕಮಾಂಡ್‌ ಗೆ ಇಪ್ಪತ್ತೈದು ಸಾವಿರ ಕೋಟಿ ರುಪಾಯಿ ಕೊಡಬೇಕು ಎಂದುಬಿಟ್ಟಿದ್ದರು ಯತ್ನಾಳ್.‌ ಬೇರೆ ಯಾರಾದರೂ ಈ ಮಾತು ಆಡಿದ್ದರೆ ಇಪ್ಪತ್ತ್ನಾಲ್ಕು ಗಂಟೆಯೊಳಗೆ ಅವರು ಉಚ್ಛಾಟನೆಗೊಳ್ಳುತ್ತಿದ್ದರು. ಆದರೆ ಯತ್ನಾಳ್‌ ಅವರನ್ನು ಬಿಜೆಪಿ ನಾಯಕರು ಉಚ್ಛಾಟಿಸಲಿಲ್ಲ, ಕನಿಷ್ಠ ಅಮಾನತು ಕೂಡ ಮಾಡಲಿಲ್ಲ.

ಇದೊಂದೇ ವಿಷಯವೆಂದೇನಲ್ಲ, ಯತ್ನಾಳ್‌ ಸತತವಾಗಿ ಪಕ್ಷದ ನಾಯಕರ ವಿರುದ್ಧ ಗುರುಗುಟ್ಟುತ್ತಲೇ ಬಂದಿದ್ದಾರೆ. ಅದರಲ್ಲೂ ರಾಜ್ಯ ಬಿಜೆಪಿಯ ಮುಂಚೂಣಿ ನಾಯಕ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕಿಡಿಕಾರುತ್ತಲೇ ಬಂದಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕರು ಯತ್ನಾಳ್‌ ಹೇಳಿಕೆಗಳನ್ನೇ ಕೋಟ್‌ ಮಾಡುತ್ತಾ ಇದೆಲ್ಲ ನೋಡಿ ನಿಮ್ಮ ಪಕ್ಷದವರೇ ಹೇಳಿರೋದು ಎಂದು ಮುಜುಗರಕ್ಕೆ ಸಿಲುಕಿಸಿದ್ದರು. ಏನೇ ಆದರೂ ಯತ್ನಾಳ್‌ ಅವರ ವಿರುದ್ಧ ಪಕ್ಷ ಶಿಸ್ತುಕ್ರಮ ತೆಗೆದುಕೊಳ್ಳಲೇ ಇಲ್ಲ. ಒಂದು ಬಾರಿ ನೋಟೀಸ್‌ ಕೊಟ್ಟರೂ ಅದು ಮುಂದಕ್ಕೆ ಹೋಗಲೇ ಇಲ್ಲ. ಬಿಜೆಪಿ ನಾಯಕರಿಗೆ ಯತ್ನಾಳ್‌ ಪಕ್ಷ ಬಿಡುವುದೂ ಬೇಕಿಲ್ಲ. ಸಮಯ ಬಂದಾಗ ಎದುರಾಳಿಗಳ ವಿರುದ್ಧ ತನ್ನ ಹರಿತ ನಾಲಿಗೆಯಿಂದ ನಿಂದಿಸಲು ಯತ್ನಾಳ್‌ ಅವರಿಗೆ ಬೇಕು. ಹಿಂದು-ಮುಸ್ಲಿಂ ವಿಷಯ ಬಂದಾಗ ವಿಷ ಕಾರುವ ಹೇಳಿಕೆ ನೀಡಲೂ ಯತ್ನಾಳ್‌ ಬೇಕು. ಆದರೆ ಅಧಿಕಾರ-ಸ್ಥಾನಮಾನ ಮಾತ್ರ ಕೊಡುವುದಿಲ್ಲ.

ಯತ್ನಾಳ್‌ ಮುಸ್ಲಿಂ ಬಾಹುಳ್ಯವುಳ್ಳ ವಿಜಯಪುರ ಕ್ಷೇತ್ರದಿಂದ ಆರಿಸಿ ಬರುತ್ತಿದ್ದಾರೆ. ಅಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಒಂದು ಲಕ್ಷ ಮೂವತ್ತು ಸಾವಿರಕ್ಕೂ ಹೆಚ್ಚು. ಹೇಳಿಕೇಳಿ ಯತ್ನಾಳ್‌ ಮುಸ್ಲಿಂ ದ್ವೇಷದ ಹೇಳಿಕೆ ನೀಡುವುದರಲ್ಲಿ ಎತ್ತಿದ ಕೈ. ಹೀಗಿದ್ದೂ ಅಲ್ಲಿ ಗೆಲ್ಲುತ್ತಿರುವುದೇ ಯತ್ನಾಳ್‌ ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಾರೆ ಮತ್ತು ರಾಜಾರೋಷವಾಗಿ ಮುಸ್ಲಿಮರ ಮತಗಳು ತನಗೆ ಬೇಕಾಗಿಲ್ಲ ಎಂದು ಚುನಾವಣಾ ಪೂರ್ವದಲ್ಲಿ ಘೋಷಿಸಿಕೊಳ್ಳುತ್ತಾರೆ. ವಿಜಯಪುರದಲ್ಲಿ ಮುಸ್ಲಿಂ ಮತಗಳು ಪ್ರತಿ ಚುನಾವಣೆಯಲ್ಲಿ ವಿಭಜನೆಯಾಗಿ ಯತ್ನಾಳ್‌ ಗೆಲ್ಲುತ್ತಾರೆ. ಇದನ್ನು ತಡೆಯುವ ಪ್ರಯತ್ನವನ್ನು ಕಾಂಗ್ರೆಸ್‌ ಪಕ್ಷ ಮಾಡಿಯೂ ಇಲ್ಲ. ಕೆಲವು ಹಿರಿಯ ಕಾಂಗ್ರೆಸ್‌ ಮುಖಂಡರು ಯತ್ನಾಳ್‌ ಗೆಲಿಸುವ ಸಲುವಾಗಿಯೇ ದುರ್ಬಲ ಅಭ್ಯರ್ಥಿಗಳನ್ನು ಹಾಕುತ್ತಾರೆ ಎಂಬ ಮಾತಿದೆ. ಹಿಂದೂಗಳ ಮತಗಳನ್ನೂ ಸೆಳೆಯಬಲ್ಲ ಪ್ರಬಲ ಅಭ್ಯರ್ಥಿಯನ್ನು ಸ್ಪರ್ಧೆಗೆ ತಂದರೆ ಯತ್ನಾಳ್‌ ಸೋಲುವುದು ಖಚಿತ. ಒಂದು ರೀತಿಯಲ್ಲಿ ಅವರಿಗೆ ಕಾಂಗ್ರೆಸ್‌ ಋಣವೂ ಇದೆ. ಭಾರತೀಯ ಜನತಾ ಪಕ್ಷದ ಮುಖಂಡರಿಗೆ ಈ ಸೂಕ್ಷ್ಮಗಳೆಲ್ಲ ಗೊತ್ತಿಲ್ಲ. ಕ್ಷೇತ್ರದಿಂದ ಆಚೆಗೆ ಯತ್ನಾಳ್‌ ಅವರಿಗೆ ಇರುವ ಬೆಂಬಲ ಅಷ್ಟಕ್ಕಷ್ಟೆ. ಮೀಡಿಯಾಗಳ ಮುಂದೆ ಅಬ್ಬರಿಸುವುದನ್ನು ಹೊರತುಪಡಿಸಿ ರಚನಾತ್ಮಕವಾಗಿ ಕೆಲಸ ಮಾಡಿದ ಹಿನ್ನೆಲೆ ಯತ್ನಾಳ್‌ ಅವರಿಗಿಲ್ಲ. ಹೀಗಾಗಿ ಅವರಿಗೆ ಮಹತ್ವದ ಹುದ್ದೆಗಳನ್ನು ಅದು ಕೊಡುವುದೂ ಇಲ್ಲ.

ವಿರೋಧ ಪಕ್ಷದ ನಾಯಕಸ್ಥಾನ ತಪ್ಪಿದ ಸಿಟ್ಟಿನಲ್ಲಿ ಯತ್ನಾಳ್‌ ಮಾಧ್ಯಮದವರ ಜೊತೆ ಮಾತನಾಡುತ್ತ, ಬಿ.ಎಸ್.ಯಡಿಯೂರಪ್ಪ ಮತ್ತು ಬಿ.ವೈ.ವಿಜಯೇಂದ್ರ ಅವರುಗಳನ್ನು ʻಚಿಂದಿ ಚೋರ್‌ʼಗಳು ಎಂದು ನಿಂದಿಸಿದ್ದಾರೆ. ಈಗಲೂ ಯಥಾಪ್ರಕಾರ ಬಿಜೆಪಿ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಯಾಕೆಂದರೆ ಬಿಜೆಪಿ ಯತ್ನಾಳ್‌ ಅವರನ್ನು ಲೆಕ್ಕಕ್ಕೇ ಇಟ್ಟುಕೊಂಡಿಲ್ಲ. ಮುಂದೆಯೂ ಲೆಕ್ಕಕ್ಕೆ ಇಟ್ಟುಕೊಳ್ಳುವ ಸಾಧ್ಯತೆ ಇಲ್ಲ. ಇಸ್ಪೀಟ್‌ ಎಲೆಗಳ ನಡುವಿನ ಜೋಕರ್‌ ನಂತೆ ಯತ್ನಾಳ್‌ ಬಿಜೆಪಿಯಲ್ಲಿ ಇದ್ದಾರೆ ಅಷ್ಟೆ.

You cannot copy content of this page

Exit mobile version