ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆಯ ಗರ್ಭಗುಡಿಯ ಬಾಗಿಲು ಗುರುವಾರ ಶಾಸ್ತ್ರೋಕ್ತವಾಗಿ ತೆರೆಯಿತು.
ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಮಧ್ಯಾಹ್ನ 12.21 ಕ್ಕೆ ವಿಧ್ಯುಕ್ತವಾಗಿ ಗರ್ಭಗುಡಿ ಬಾಗಿಲು ತೆರೆಯಲಾಯಿತು. ದೇವಿಯ ಪವಾಡವೆಂದು ನಂಬಲಾಗುವ ಗರ್ಭಗುಡಿಯೊಳಗಿನ ನಂದಾದೀಪ ಉರಿಯುತ್ತಲೇ ಇತ್ತು.
ತಳವಾರ ವಂಶಸ್ಥ ನರಸಿಂಹರಾಜು ಬಾಳೆಕಂಬ ಕತ್ತರಿಸುತ್ತಿದ್ದಂತೆಯೇ ಗರ್ಭಗುಡಿ ಬಾಗಿಲು ತೆರೆಯಲಾಯಿತು.
ಈ ವೇಳೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದಸ್ವಾಮೀಜಿ, ಶಂಭುನಾಥ ಸ್ವಾಮೀಜಿ, ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ, ಸಂಸದ ಶ್ರೇಯಸ್ ಪಟೇಲ್. ಶಾಸಕರಾದ ಹೆಚ್.ಪಿ.ಸ್ವರೂಪ್ ಪ್ರಕಾಶ್, ಕೆ.ಎಂ.ಶಿವಲಿಂಗೇಗೌಡ, ಸಿಮೆಂಟ್ ಮಂಜು, ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಸೇರಿದಂತೆ ಜಿಲ್ಲಾಡಳಿತದ ಎಲ್ಲಾ ಅಧಿಕಾರಿಗಳು ಹಾಜರಿದ್ದರು. ಭಕ್ತರು, ದೇವಿಗೆ ಜಯಘೋಷ ಮೊಳಗಿಸಿ ಕಾಪಾಡು ತಾಯೆ ಎಂದು ಪ್ರಾರ್ಥಿಸಿದರು