ಬೇಲೂರು : ಬೇಲೂರು ಹಾಗೂ ಬಿಕ್ಕೋಡು ನಡುವಿನ ರಾಜ್ಯ ಹೆದ್ದಾರಿ ಕಳೆದ ಕೆಲವು ತಿಂಗಳಿಂದ ತುಂಬಾ ಹದಗೆಟ್ಟ ಸ್ಥಿತಿಯಲ್ಲಿದ್ದು, ದಿನನಿತ್ಯ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಜೀವ ಪಣಕ್ಕಿಟ್ಟು ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಇದೇ ರಸ್ತೆಯಲ್ಲಿ ಕುಶಾವರ ಗ್ರಾಮದ ನಿವಾಸಿಗಳಾದ ನರೇಂದ್ರ ಮತ್ತು ಸುರೇಶ್ ಕೆಲಸದ ನಿಮಿತ್ತ ಬೇಲೂರಿಗೆ ಬರುತ್ತಿದ್ದ ವೇಳೆ ಹಗರೆ ಗ್ರಾಮದ ಸಮೀಪದ ಬೃಹತ್ ಗುಂಡಿಯನ್ನು ತಪ್ಪಿಸಲು ಯತ್ನಿಸುವಾಗ ನಿಯಂತ್ರಣ ತಪ್ಪಿ ಬೈಕ್ ಸಮೇತ ಬಿದ್ದು ಗಾಯಗೊಂಡಿದ್ದಾರೆ. ಸ್ಥಳೀಯರು ಅವರನ್ನು ತಕ್ಷಣ ಬೇಲೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ
ರಸ್ತೆಗಳಲ್ಲಿ ಉಂಟಾಗಿರುವ ಆಳವಾದ ಗುಂಡಿಗಳು ಹಾಗೂ ಅಸಮತೋಲನದಿಂದಾಗಿ ವಾಹನ ಸವಾರರಿಗೆ ಸಂಚರಿಸಲು ತೀವ್ರ ತೊಂದರೆ ಉಂಟಾಗುತ್ತಿದ್ದು, ಸಾರ್ವಜನಿಕರ ಆಕ್ರೋಶ ಉಕ್ಕಿ ಬಂದಿದೆ. ಸ್ಥಳದಲ್ಲಿ ಹಗರೆ ಗ್ರಾಮದ ನರೇಂದ್ರ, ಚಂದ್ರಶೇಖರ್, ಆಕಾಶ್, ಲೋಕೇಶ್, ರಮೇಶ್ ಮತ್ತಿತರರು ಉಪಸ್ಥಿತರಿದ್ದು, ಗಾಯಗೊಂಡವರಿಗೆ ನೆರವು ನೀಡಿದರು. ಸ್ಥಳೀಯರು ಕೂಡಲೇ ರಸ್ತೆ ದುರಸ್ತಿ ಮಾಡುವಂತೆ ಸಾರ್ವಜನಿಕ ನಿರ್ಮಾಣ ಇಲಾಖೆಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.
ಸಾರ್ವಜನಿಕರ ಬೇಡಿಕೆ:
ರಸ್ತೆಯಲ್ಲಿನ ಗುಂಡಿಗಳನ್ನು ತಕ್ಷಣ ಮುಚ್ಚಿ, ಸಮರ್ಪಕ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಇಲ್ಲವಾದರೆ ಸ್ಥಳೀಯರು ರಸ್ತೆ ಬಂದ್ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ