ಹಾಸನ: ಬರುವ ನವೆಂಬರ್ 13 ರಿಂದ 15ರ ವರೆಗೆ ಸಿಐಟಿಯು16ನೇ ರಾಜ್ಯ ಸಮ್ಮೇಳನ ನಡೆಯಲಿದೆ ಎಂದು ಸಮಿತಿ ಜಿಲ್ಲಾಧ್ಯಕ್ಷ ಧರ್ಮೇಶ್ ತಿಳಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಅವರು, ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸಮ್ಮೇಳನ ನಡೆಯಲಿದೆ. ಕರ್ನಾಟಕ ಸೇರಿದಂತೆ ಎಲ್ಲೆಡೆ ಕಾರ್ಮಿಕರನ್ನು ದಮನ ಮಾಡುವ ಕೃತ್ಯ ನಡೆಯುತ್ತಿದೆ. ಖಾಸಗೀಕರಣ ಮೂಲಕ ಉದ್ಯೋಗ ಕಡಿತ ಮಾಡಲಾಗುತ್ತಿದೆ. ಕಾರ್ಮಿಕರಿಗೆ ತಿಂಗಳಿಗೆ ಕನಿಷ್ಠ 36 ಸಾವಿರ ವೇತನ ನೀಡಬೇಕು. 9ಸಾವಿರ ಪಿಂಚಿಣಿ, ಉದ್ಯೋಗ ಹಾಗೂ ಸಾಮಾಜಿಕ ಭದ್ರತೆಗಾಗಿ ಒತ್ತಾಯಿಸುವುದು ಸಮ್ಮೇಳನದ ಪ್ರಮುಖ ಉದ್ದೇಶ ಎಂದರು. ಹಾಗೆಯೇ ಕರಾಳ ಕಾರ್ಮಿಕ ಸಂಹಿತೆಗಳನ್ನು ವಾಪಸ್ ಪಡೆಯಬೇಕು. ಸಮೃದ್ಧ ಹಾಗೂ ಸೌಹಾರ್ದ ಕರ್ನಾಟಕ ನಿರ್ಮಾಣದ ಆಶಯ ನಮ್ಮದು ಎಂದರು.
ಈ ಸಮ್ಮೇಳನಕ್ಕೆ ರಾಜ್ಯದ ವಿವಿಧೆಡೆಗಳಿಂದ ಸಿಐಟಿಯುಗೆ ಸಂಯೋಜನೆಗೊಂಡಿರುವ ಕಾರ್ಮಿಕ ಸಂಘಗಳಿಂದ ಸುಮಾರು 450 ಪ್ರತಿನಿಧಿಗಳು ಹಾಗೂ ಸೌಹಾರ್ದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಮ್ಮೇಳನದಲ್ಲಿ ದುಡಿಯುವ ಜನರು ಮತ್ತು ಜನಸಾಮಾನ್ಯರ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗಾಗಿ ಮುಂದೆ ಮಾಡಬೇಕಾದ ಹೋರಾಟಗಳ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು. ಕಡೆಯ ದಿನ ರ‍್ಯಾಲಿ ಮತ್ತು ಬಹಿರಂಗ ಸಭೆ ನಡೆಯಲಿದೆ ಎಂದು ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ಸಮ್ಮೇಳನದ ಗೌರವಾಧ್ಯಕ್ಷ ಎಸ್.ಎನ್.ಪರಮಶಿವಯ್ಯ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ.ಪುಷ್ಪ, ಜಿಲ್ಲಾ ಉಪಾಧ್ಯಕ್ಷ ಜಿ.ಪಿ.ಸತ್ಯನಾರಾಯಣ, ಖಜಾಂಚಿ ಅರವಿಂದ್ ಇದ್ದರು.