ಹಾಸನ : ಜೂನ್ 9, ಹಾಸನ ತಾಲೂಕಿನ ಮಾರನಹಳ್ಳಿ ಗ್ರಾಮದಲ್ಲಿ 30 ವರ್ಷದ ಯುವಕನೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದ್ದು, ಇದು ಕೊಲೆ ಪ್ರಕರಣ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ.
ಮೃತ ಯುವಕನನ್ನು ಅರುಣ್‌ಕುಮಾರ್ (30) ಎಂದು ಗುರುತಿಸಲಾಗಿದೆ. ಕೋಲಾರದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅರುಣ್‌ಕುಮಾರ್ ಕೆಲ ದಿನಗಳ ಹಿಂದೆ ಕೆಲಸ ಬಿಟ್ಟು ಸ್ವಗ್ರಾಮಕ್ಕೆ ಮರಳಿದ್ದು, ಮನೆಯಲ್ಲೇ ಇದ್ದನು ಎನ್ನಲಾಗಿದೆ.
ನಿನ್ನೆ ತನ್ನ ಸ್ನೇಹಿತ ಅಶ್ವತ್ಥ್ ಬಳಿ ಇದ್ದ ಬೈಕ್‌ನ್ನು ತೆಗೆದುಕೊಂಡು ಬರುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಅರುಣ್‌ಕುಮಾರ್, ಬಳಿಕ ಬಾರ್‌ವೊಂದರ ಬಳಿ ಅಶ್ವತ್ಥ್ ಜೊತೆ ಜಗಳವಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ನಂತರ ಮಾರನಹಳ್ಳಿ ಸಮೀಪದ ಹೊಂಡದ ಬಳಿ ಅರುಣ್‌ಕುಮಾರ್ ಮೃತದೇಹ ಪತ್ತೆಯಾಗಿದ್ದು, ಮೃತದೇಹದ ಪಕ್ಕದಲ್ಲೇ ಬೈಕ್ ಕೂಡ ನಿಂತಿರುವುದು ಕಂಡುಬಂದಿದೆ.
ಈ ಸಾವಿನ ಹಿಂದೆ ಸಂಚು ಇದೆ ಎಂದು ಆರೋಪಿಸಿರುವ ಕುಟುಂಬಸ್ಥರು, ಅರುಣ್‌ಕುಮಾರ್‌ನ್ನು ಕೊಲೆ ಮಾಡಿ ಅಪಘಾತದ ರೂಪ ನೀಡಲಾಗಿದೆ ಎಂದು ದೂರಿದ್ದಾರೆ. ಮನೆಯಿಂದ ಹೊರಡುವ ವೇಳೆ ಧರಿಸಿದ್ದ ಟೀ-ಶರ್ಟ್ ಮತ್ತು ಮೃತದೇಹ ಪತ್ತೆಯಾದಾಗ ಇದ್ದ ಟೀ-ಶರ್ಟ್ ವಿಭಿನ್ನವಾಗಿದ್ದವು ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಅಶ್ವತ್ಥ್‌ನೇ ಅರುಣ್‌ಕುಮಾರ್‌ನ್ನು ಕೊಲೆ ಮಾಡಿ ಅಪಘಾತವಾಗಿದೆ ಎಂದು ಬಿಂಬಿಸಲು ಯತ್ನಿಸುತ್ತಿದ್ದಾನೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಪ್ರಕರಣದ ಬಗ್ಗೆ ಸೂಕ್ತ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ ಅರುಣ್‌ಕುಮಾರ್ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
