ಹಾಸನ : ಪರಿಹಾರ ನೀಡಲು ವಿಳಂಬ ಮಾಡಿದ ಹಾಸನ (Hassan) ಜಿಲ್ಲಾಧಿಕಾರಿಗಳ (DC) ಕಾರನ್ನು (Car) ಜಪ್ತಿ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ. ಕೋರ್ಟ್‌ನ (Court) ಆದೇಶದಂತೆ ವಕೀಲರ ಜೊತೆ ಆಗಮಿಸಿದ ರೈತ (Farmer) ಜಿಲ್ಲಾಧಿಕಾರಿ ಕೆ.ಎಸ್ ಲತಾಕುಮಾರಿಯವರ ಕಾರನ್ನು ಜಪ್ತಿ ಮಾಡಿದ್ದಾರೆ.
ಏನಿದು ಪ್ರಕರಣ..?: 15 ವರ್ಷಗಳ ಹಿಂದೆ ಯಗಚಿ ನಾಲೆಗಾಗಿ ಆಲೂರು ತಾಲೂಕಿನ ಭಕ್ತರವಳ್ಳಿ ಗ್ರಾಮದ ರೈತ ಮರಿಗೌಡ ಎಂಬವರಿಗೆ ಸೇರಿದ್ದ ಸರ್ವೆ ನಂ 44/1 ರಲ್ಲಿ ಹತ್ತೂವರೆ ಗುಂಟೆ ಜಮೀನನ್ನು ನೀರಾವರಿ ಇಲಾಖೆ ಸ್ವಾಧಿನಪಡಿಸಿಕೊಂಡಿತ್ತು. ಇದಕ್ಕೆ 11,22,559 ರೂ. ಪರಿಹಾರ ನೀಡಬೇಕಿತ್ತು. ಆದರೆ 15 ವರ್ಷ ಕಳೆದರೂ ಪರಿಹಾರ ನೀಡದ ಹಿನ್ನೆಲೆಯಲ್ಲಿ ರೈತ ಮರಿಗೌಡ ಹಾಗೂ ಅವರ ಮಕ್ಕಳು ಕೋರ್ಟ್ ಮೆಟ್ಟಿಲೇರಿದ್ದರು.
ಇದೀಗ ಕೋರ್ಟ್‌ನಿಂದ ಕಾರು ಜಪ್ತಿ ಮಾಡುವಂತೆ ಆದೇಶ ಬಂದ ಹಿನ್ನೆಲೆಯಲ್ಲಿ ರೈತ ಮರಿಗೌಡ ಪುತ್ರ ಅವರು ಮಧ್ಯಾಹ್ನ ವಕೀಲ ಮಂಜುನಾಥ್ ಜೊತೆ ಆಗಮಿಸಿ ಡಿಸಿ ಕಾರು ಜಪ್ತಿ ಮಾಡಿದರು. ಈ ವೇಳೆ ಜಿಲ್ಲಾಧಿಕಾರಿ ಕೆ.ಎಸ್ ಲತಾಕುಮಾರಿ ತಮ್ಮ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸುತ್ತಿದ್ದರು. ಅವರ ಪರವಾಗಿ ಎಡಿಸಿ ಜಗದೀಶ್.ಬಿ.ಎ ಆಗಮಿಸಿ ಸಂಜೆಯೊಳಗೆ ಪರಿಹಾರ ನೀಡಲಾಗುವುದು ಸಮಯ ಕೊಡಿ ಎಂದು ಎಂದು ಮನವಿ ಮಾಡಿದರು.
ಇತ್ತ ಎಡಿಸಿ ಮಾತು ಕೇಳದ ವಕೀಲರು ಹಾಗೂ ಮರೀಗೌಡ ಪುತ್ರ, ಡಿಸಿ ಕಾರು ಎಳೆದೊಯ್ಯಲು ವಾಹನ ತರಿಸಿದರು. ಆದರೆ ಆ ವಾಹನದಲ್ಲಿ ಇನ್ನೋವಾ ಕಾರು ಎಳೆದರೆ ಡ್ಯಾಮೇಜ್ ಆಗಲಿದ್ದು, ಎಳೆದೊಯ್ಯಲು ಆಗುವುದಿಲ್ಲ ಎಂದು ಚಾಲಕ ವಾಪಸ್ ಆದರು. ರೈತರು ಜಪ್ತಿ ಮಾಡಿಕೊಂಡ ಕಾರಿನ ಬಳಿಯೇ ಕುಳಿತಿದ್ದಾರೆ.
ಶಿವಮೊಗ್ಗದಲ್ಲಿಯೂ ನಡೆದಿತ್ತು ಇಂಥದ್ದೇ ಘಟನೆ: ರೈತನಿಗೆ ಪರಿಹಾರ ನೀಡಲು ವಿಳಂಬ ಮಾಡಿದ ಕಾರಣಕ್ಕೆ ಜಿಲ್ಲಾಧಿಕಾರಿಯವರ ಕಾರು ಹಾಗೂ ಕಚೇರಿ ವಸ್ತುಗಳನ್ನು ಸೀಜ್ ಮಾಡಲು ನ್ಯಾಯಾಲಯ ಮುಂದಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಕೋರ್ಟ್ ಆದೇಶದಂತೆ ವಸ್ತುಗಳ ಸೀಜ್ ಮಾಡಲು ಆಮೀನ್ ಡಿಸಿ ಕಚೇರಿಗೆ ಆಗಮಿಸಿದ ಪ್ರಸಂಗವೂ ನಡೆಯಿತು.
1995 ರಲ್ಲಿ ವಸತಿ ಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೆ ನಡೆದಿತ್ತು. ಆಗ ಹರಮಘಟ್ಟದ ನಂದ್ಯಪ್ಪ ಎಂಬ ರೈತ ಒಂದು ಎಕರೆ ಕಳೆದುಕೊಂಡಿದ್ದರು. ಇದಕ್ಕೆ ಭೂ ಸ್ವಾಧೀನಾಧಿಕಾರಿಯೂ ಆಗಿದ್ದ ಅಂದಿನ ಡಿಸಿ 22 ಲಕ್ಷ ರೂಪಾಯಿ ಪರಿಹಾರ ನಿಗದಿಪಡಿಸಿದ್ದರು. ಈ ಪೈಕಿ 9 ಲಕ್ಷ ರೂಪಾಯಿ ಮಾತ್ರ ಪರಿಹಾರ ನೀಡಲಾಗಿತ್ತು. ಪರಿಹಾರ ವಿಳಂಬ ವಿರುದ್ಧ ರೈತ ನಂದ್ಯಪ್ಪ ಅವರು ಕೋರ್ಟ್ ಹೋಗಿದ್ದರು.
ಇದೀಗ ಕೋರ್ಟ್ ಬಾಕಿ ಹಣದ ಜೊತೆಗೆ ಬಡ್ಡಿ ಸೇರಿಸಿ 95 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶ ನೀಡಿದೆ. ಜೊತೆಗೆ ಶಿವಮೊಗ್ಗ ಎರಡನೇ ಹೆಚ್ಚುವರಿ ಕೋರ್ಟ್ ಜಿಲ್ಲಾಧಿಕಾರಿಯ ಕಾರು ಮತ್ತು ಕಚೇರಿ ವಸ್ತುಗಳ ಸೀಜ್ ಮಾಡಲು ಆದೇಶ ನೀಡಿದೆ.
ಕೋರ್ಟ್ ನ ಅಮೀನ ಜೊತೆ ರೈತ ನಂದ್ಯಪ್ಪ ಡಿಸಿ ಕಚೇರಿಗೆ ಆಗಮಿಸಿದರು. ಡಿಸಿ ಜೊತೆ ಚರ್ಚೆ ನಡೆಸಿದರು. ನಿಮಗೆ ಬೇಕಾದರೆ ವಾಹನ ಸೀಜ್ ಮಾಡಿಕೊಳ್ಳಿ ಎಂದು ಡಿಸಿ ಮತ್ತು ಸಿಇಒ ಹೇಳಿದರು. ಬೇರೆ ದಾರಿ ಇಲ್ಲದೆ ಡಿಸಿ ಕೊಠಡಿಯಿಂದ ಹೊರ ಬಂದ ನಂದ್ಯಪ್ಪ ಮುಂದಿನ ಕ್ರಮಕ್ಕೆ ಕೋರ್ಟ್ ಮೊರೆ ಹೋಗುವುದಾಗಿ ಮಾಧ್ಯಮಗಳಿಗೆ ತಿಳಿಸಿದರು.
