ಹಾಸನ : ಬೇಲೂರು ತಾಲ್ಲೂಕು ಬೊಮ್ಮನಹಳ್ಳಿಯಲ್ಲಿ ಸಾಲ ಪಾವತಿ ಮಾಡದ ಹಿನ್ನೆಲೆಯಲ್ಲಿ ಜನ ಸ್ಮಾಲ್ ಫೈನಾನ್ಸ್ ಸಂಸ್ಥೆಯವರು ಸೀಝ್ ಮಾಡಿದ್ದ ಮನೆ ಬೀಗವನ್ನು ರೈತ ಸಂಘದ ನಾಯಕರು ಒಡೆದು, ಮನೆಮಾಲೀಕರಿಗೆ ಪ್ರವೇಶ ಕಲ್ಪಿಸಿದ ಘಟನೆ ಶುಕ್ರವಾರ ನಡೆದಿದೆ.
ಬೊಮ್ಮನಹಳ್ಳಿಯ ರೈತ ಪಾಲಾಕ್ಷ ಅವರು ಹಾಸನದ ಜನ ಸ್ಮಾಲ್ ಫೈನಾನ್ಸ್‌ನಿಂದ ಎರಡು ವರ್ಷಗಳ ಹಿಂದೆ ೫ ಲಕ್ಷ ರೂ. ಸಾಲ ಪಡೆದಿದ್ದರು. ಇದುವರೆಗೆ ೧ ಲಕ್ಷ ೮೭ ಸಾವಿರ ರೂ. ತೀರಿಸಿದ್ದರೂ, ತಂದೆಯ ಅನಾರೋಗ್ಯ ಕಾರಣದಿಂದ ಕಳೆದ ಕೆಲವು ತಿಂಗಳಿಂದ ಕಂತು ಬಾಕಿ ಉಳಿದಿತ್ತು. ಇದರಿಂದಾಗಿ ಸಂಸ್ಥೆಯವರು ಕಳೆದ ಒಂದುವರೆ ತಿಂಗಳ ಹಿಂದೆ ಪೊಲೀಸ್ ಭದ್ರತೆಯೊಂದಿಗೆ ಬಂದು ಮನೆಗೆ ಬೀಗ ಹಾಕಿ ಸೀಲ್ ಮಾಡಿದರು. ಮನೆಯಲ್ಲಿ ಅನಾರೋಗ್ಯ ಪೀಡಿತರು, ವೃದ್ಧೆ ಹಾಗೂ ಬಾಣಂತಿ ಮಗು ಇದ್ದರೂ ಸಹಾನುಭೂತಿ ತೋರದೆ ಹೊರ ಹಾಕಲಾಗಿದೆ ಎಂದು ಕುಟುಂಬ ದೂರಿದೆ. ಅಲ್ಲದೆ ಜಾನುವಾರು ಕಟ್ಟುವ ಕೊಟ್ಟಿಗೆಯನ್ನೂ ಸೀಝ್ ಮಾಡಲಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಮನೆಯಿಂದ ಹೊರ ಹಾಕಲ್ಪಟ್ಟ ಕುಟುಂಬವು ಮಳೆಯ ನಡುವೆ ಟಾರ್ಪಲ್ ಕಟ್ಟಿಕೊಂಡು ಆಶ್ರಯ ಪಡೆಯಬೇಕಾದ ದುಸ್ಥಿತಿ ಎದುರಿಸಿತು. ಇದರಿಂದ ಬೇಸತ್ತು ಕುಟುಂಬ ರೈತ ಸಂಘದ ನೆರವಿಗಾಗಿ ಮೊರೆಹೋದರು. ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕಣಗಾಲ್ ಮೂರ್ತಿ ಅವರ ನೇತೃತ್ವದಲ್ಲಿ ರೈತರು ಬೊಮ್ಮನಹಳ್ಳಿಗೆ ಆಗಮಿಸಿ ಮನೆಗೆ ಹಾಕಿದ್ದ ಬೀಗವನ್ನು ಒಡೆದು ಕುಟುಂಬವನ್ನು ಒಳಗೆ ಕಳುಹಿಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಕಣಗಾಲ್ ಮೂರ್ತಿ, ಬೊಮ್ಮನಹಳ್ಳಿಯ ರೈತ “ಪಾಲಾಕ್ಷ ಅವರು ೫ ಲಕ್ಷ ಸಾಲ ಪಡೆದಿದ್ದರೂ ಈಗಾಗಲೇ ಒಂದು ಭಾಗ ಹಣ ತೀರಿಸಿದ್ದಾರೆ. ಆದರೆ ಫೈನಾನ್ಸ್ ಸಂಸ್ಥೆ ಆರು ಲಕ್ಷ ರೂ. ಬಾಕಿ ಇದೆ ಎಂದು ಒತ್ತಾಯಿಸಿ, ಬಾಣಂತಿ ಮಗು, ಚಿಕ್ಕ ಮಕ್ಕಳು, ವಯೋವೃದ್ಧರನ್ನು ಗಮನಿಸದೆ ಹೊರಗೆ ಹಾಕಿದೆ. ಕೊಟ್ಟಿಗೆಗೂ ಬೀಗ ಹಾಕಲಾಗಿದೆ. ಕುಟುಂಬವು ಗುಡಿಸಿಲಿನಲ್ಲಿ ವಾಸಿಸುವಂತ ಪರಿಸ್ಥಿತಿ ಬಂದಿತ್ತು. ನಾವು ಸ್ಥಳಕ್ಕೆ ಭೇಟಿ ನೀಡಿ ಬೇಸರಗೊಂಡು ಬೀಗ ಒಡೆಯುವಂತಾಯಿತು” ಎಂದು ಹೇಳಿದರು.“ಜಿಲ್ಲೆಯಲ್ಲಿ ಫೈನಾನ್ಸ್ ಕಂಪನಿಗಳ ದೌರ್ಜನ್ಯ ಹೆಚ್ಚುತ್ತಿದೆ. ಹಲವೆಡೆ ಮನೆಗಳಿಗೆ ಬೀಗ ಹಾಕಿರುವ ಮಾಹಿತಿ ನಮಗೆ ಬಂದಿದೆ. ಮುಂದಿನ ದಿನಗಳಲ್ಲಿ ಈ ವಿಷಯದಲ್ಲಿ ಹೋರಾಟ ಆರಂಭಿಸುತ್ತೇವೆ. ಜಿಲ್ಲಾಧಿಕಾರಿಗಳ ಗಮನಕ್ಕೂ ವಿಷಯವನ್ನು ತಂದಿದ್ದೇವೆ. ರೈತರ ತೊಂದರೆ ಸಹಿಸಲಾಗುವುದಿಲ್ಲ” ಎಂದು ಎಚ್ಚರಿಕೆ ನೀಡಿದರು.
ಮಾಧ್ಯಮದೊಂದಿಗೆ ಮಾತನಾಡಿದ ರೈತ ಪಾಲಾಕ್ಷ, “ಎರಡು ತಿಂಗಳಿಂದ ಕಂತು ಕಟ್ಟಿರಲಿಲ್ಲ. ಫೈನಾನ್ಸ್ ಸಂಸ್ಥೆ ಎರಡು ನೋಟಿಸ್ ಕೊಟ್ಟಿದ್ದೇವೆ ಎಂದರೂ ನಮಗೆ ಯಾವುದೇ ನೋಟಿಸ್ ತಲುಪಿಲ್ಲ. ಮೊಬೈಲ್ ಮೂಲಕವೇ ನೋಟಿಸ್ ಕಳುಹಿಸಿದ್ದಾರೆ. ನಾನು ಮನೆಯಲ್ಲಿ ಇಲ್ಲದ ಸಮಯವನ್ನು ನೋಡಿ ಪೊಲೀಸರು ಕರೆದುಕೊಂಡು ಬಂದು ಮನೆಗೆ ಬೀಗ ಹಾಕಿದ್ದಾರೆ. ಲೋನ್ ಮಾಡಿಸದ ಕೊಟ್ಟಿಗೆಯಿಗೂ ಬೀಗ ಹಾಕಿದ್ದಾರೆ. ರೈತ ಸಂಘದ ಸಹಕಾರದಿಂದ ಮತ್ತೆ ಮನೆಯೊಳಗೆ ಹೋಗಲು ಸಾಧ್ಯವಾಗಿದೆ” ಎಂದು ಹೇಳಿದರು.