ಹಾಸನ : ಎಲ್ಲಾರ ಗಮನಸೆಳೆದಿದ್ದ ಜಿಲ್ಲಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಮೂರನೇ ಬಾರಿಗೆ ಸೋಮನಹಳ್ಳಿ ನಾಗರಾಜ್ ಹಾಗೂ ಉಪಾಧ್ಯಕ್ಷರಾಗಿ ಅರಸೀಕೆರೆಯ ಶೇಖರಪ್ಪ ಅವಿರೋಧವಾಗಿ ಆಯ್ಕೆಯಾದರು.
ಬ್ಯಾಂಕಿನ ಸಭಾಂಗಣದಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಸೂಚನೆಯಂತೆ ಸೋಮನಹಳ್ಳಿ ನಾಗರಾಜ್ ಅವರು ಅಧ್ಯಕ್ಷ ಸ್ಥಾನಕ್ಕೆ ಮತ್ತು ಶೇಖರಪ್ಪ ಅವರು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಇನ್ನೂ ಯಾರೂ ಸ್ಪರ್ಧಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಮಾರುತಿ ಅವರು ಇಬ್ಬರೂ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಘೋಷಿಸಿದರು. ಒಟ್ಟು ೧೩ ನಿರ್ದೇಶಕರನ್ನೊಳಗೊಂಡ ಹೆಚ್‌ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಗೆ ಇಂದು ಚುನಾವಣೆಯನ್ನು ನಿಗದಿ ಮಾಡಲಾಗಿತ್ತು. ನಿನ್ನೆ ಎಚ್.ಡಿ. ರೇವಣ್ಣ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಶುಕ್ರವಾರ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಬಳಿಕ ಆಯ್ಕೆಯಾದ ೧೩ ನಿರ್ದೇಶಕರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, “ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಆಶೀರ್ವಾದ ಹಾಗೂ ಕುಮಾರಸ್ವಾಮಿ, ರೇವಣ್ಣ, ಹಾಸನ ಶಾಸಕರಾದ ಎಚ್.ಪಿ. ಸ್ವರೂಪ್ ಹಾಗೂ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರ ಸಹಕಾರದಿಂದ ಸರ್ವಾನುಮತದಿಂದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆದಿದೆ. ದೇವೇಗೌಡರು ಬ್ಯಾಂಕ್ ಉಳಿವಿಗಾಗಿ ಶ್ರಮಿಸಿದ್ದರು. ದಿವಂಗತ ಪಟೇಲ್ ಶಿವರಾಮ್ ಅವರ ಪಾತ್ರವೂ ಪ್ರಮುಖ. ನಾನು ಅಧ್ಯಕ್ಷನಾಗಿದ್ದಾಗ ೬೦೦ ಕೋಟಿ ರೂಪಾಯಿ ಠೇವಣಿ ಸಂಗ್ರಹಿಸಿ ೧.೩೦ ಲಕ್ಷ ರೈತರಿಗೆ ಸಾಲ ಸೌಲಭ್ಯ ಒದಗಿಸಲಾಗಿತ್ತು” ಎಂದು ಹೇಳಿದರು.
ಮೂರನೇ ಬಾರಿಗೆ ಮತ್ತೆ ಅಧ್ಯಕ್ಷರಾಗಿ ಆಯ್ಕೆಯಾದ ಸೋಮನಹಳ್ಳಿ ನಾಗರಾಜ್ ಮಾತನಾಡಿ, “ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದ ಎಚ್.ಡಿ. ರೇವಣ್ಣ ಹಾಗೂ ಬ್ಯಾಂಕಿನ ಎಲ್ಲ ನಿರ್ದೇಶಕರಿಗೂ ಹೃತ್ಪೂರ್ವಕ ಧನ್ಯವಾದಗಳು. ಮೂರನೇ ಬಾರಿ ಅಧ್ಯಕ್ಷನಾಗಿರುವುದರಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ. ಇದು ಅಧಿಕಾರವಲ್ಲ, ಮುಳ್ಳಿನ ಹಾಸಿಗೆ. ಇದನ್ನು ಸಮರ್ಥವಾಗಿ ನಿಭಾಯಿಸಿ ಬ್ಯಾಂಕಿನ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದು ಭರವಸೆ ನೀಡಿದರು.