ರಾಹುಲ್ ಗಾಂಧಿ ಮೊದಲು ಕರ್ನಾಟಕಕ್ಕೆ ಬಂದು ತಮ್ಮ ಸರ್ಕಾರದ ಹಗರಣಗಳನ್ನು ನೋಡಲಿ: ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

ಹೊಸದೆಹಲಿ: ದೇಶಾದ್ಯಂತ ಸಂಚರಿಸುತ್ತಾ ಯುವಜನರ ಸಮಸ್ಯೆಗಳು ಮತ್ತು ನೀಟ್ ಪರೀಕ್ಷಾ ಲೋಪಗಳ ಕುರಿತು ಮಾತನಾಡುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮೊದಲು ಕರ್ನಾಟಕಕ್ಕೆ ಭೇಟಿ ನೀಡಿ, ತಮ್ಮದೇ ಪಕ್ಷದ ಸರ್ಕಾರದಲ್ಲಿ ನಡೆಯುತ್ತಿರುವ ನೇಮಕಾತಿ ಅಕ್ರಮಗಳು ಹಾಗೂ ಭ್ರಷ್ಟಾಚಾರವನ್ನು ಕಣ್ಣಾರೆ ನೋಡಲಿ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಹೊಸದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ರಾಹುಲ್ ಗಾಂಧಿ ದೇಶದ ವಿವಿಧ ನಗರಗಳಿಗೆ ತೆರಳಿ ಯುವಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಆದರೆ ಯುವಕರ ಹಿತದ ಬಗ್ಗೆ ಮಾತನಾಡುವ ಮೊದಲು ಅವರು ಕರ್ನಾಟಕಕ್ಕೆ ಬರಬೇಕು. ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಉದ್ಯೋಗ ಮತ್ತು ನೇಮಕಾತಿ ಹೆಸರಿನಲ್ಲಿ ಅಮಾಯಕ ಯುವಕರಿಂದ ಕೋಟ್ಯಂತರ ರೂಪಾಯಿ ಲೂಟಿ ಮಾಡಲಾಗುತ್ತಿದೆ. ನೇಮಕಾತಿ ವಿಚಾರದಲ್ಲಿ ಸರ್ಕಾರಿ ಯಂತ್ರಾಂಗವನ್ನು ಹೇಗೆ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬುದಕ್ಕೆ ಕರ್ನಾಟಕವೇ ಅತ್ಯುತ್ತಮ ನಿದರ್ಶನ” ಎಂದು ಆರೋಪಿಸಿದರು.

ಅನರ್ಹರ ಅಕ್ರಮ ನೇಮಕಾತಿಗಳನ್ನು ತಡೆಯುವಂತೆ ಸ್ವತಃ ಲೋಕಾಯುಕ್ತರೇ ಸರ್ಕಾರಕ್ಕೆ ಪತ್ರ ಬರೆದಿದ್ದರೂ, ಆ ಪತ್ರ ಬಂದ ನಾಲ್ಕು ತಿಂಗಳ ನಂತರವೂ ಅಕ್ರಮವಾಗಿ ನೇಮಕಾತಿ ಆದೇಶಗಳನ್ನು ನೀಡಲಾಗಿದೆ ಎಂದು ಕುಮಾರಸ್ವಾಮಿ ದಾಖಲೆಗಳನ್ನು ಪ್ರದರ್ಶಿಸಿ ದೂರಿದರು. “ಕಳೆದ ಎರಡು ದಿನಗಳಿಂದ ಮಾಧ್ಯಮಗಳ ಮುಂದೆ ಎಲ್ಲಾ ದಾಖಲೆಗಳನ್ನು ಇಡುತ್ತಿದ್ದರೂ, ಗೃಹ ಸಚಿವರು ಯಾವುದೇ ದಾಖಲೆಗಳಿಲ್ಲ ಎಂದು ಹೇಳುತ್ತಿದ್ದಾರೆ. ರಾಹುಲ್ ಗಾಂಧಿ ಅವರು ಬೇರೆ ನಗರಗಳಿಗೆ ಹೋಗಿ ಭಾಷಣ ಮಾಡುವ ಮುನ್ನ, ಕರ್ನಾಟಕ ಸರ್ಕಾರದಲ್ಲಿ ನಡೆಯುತ್ತಿರುವ ಈ ಹಗರಣಗಳ ಬಗ್ಗೆ ತಮ್ಮ ನಾಯಕರಿಂದ ಮಾಹಿತಿ ಪಡೆದುಕೊಳ್ಳಲಿ” ಎಂದು ವಾಗ್ದಾಳಿ ನಡೆಸಿದರು.

Related Articles

ಇತ್ತೀಚಿನ ಸುದ್ದಿಗಳು