ಬೊಗಸೆಗೆ ದಕ್ಕಿದ್ದು- 92 : RSS ಪುರುಷ “ಸ್ವಯಂ” ಸೇವಕ; ಮಹಿಳೆ… ಬರೇ “ಸೇವಿಕೆ”! ಯಾಕೆ!?

“..ಪುರುಷ ಪ್ರಧಾನ ಆರೆಸ್ಸೆಸ್- ದೇಶವನ್ನು “ಮಾತೃಭೂಮಿ”, “ಭಾರತ ಮಾತೆ” ಮುಂತಾಗಿ ಕರೆದರೂ, ಮಹಿಳಾ ವಿಚಾರ ಕುರಿತ “ರಾಷ್ಟ್ರೀಯ ಸ್ವಯಂ ಸೇವಕ ಸಂಘ” ಮತ್ತದರ ಮಹಿಳಾ ಅಂಗಸಂಸ್ಥೆ “ರಾಷ್ಟ್ರ ಸೇವಿಕಾ ಸಮಿತಿ”ಗಳ ನಡುವಿನ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳಬೇಕು..” ನಿಖಿಲ್ ಕೋಲ್ಪೆಯವರ ಬರಹದಲ್ಲಿ

ಪುರುಷ ಪ್ರಧಾನ ಆರೆಸ್ಸೆಸ್- ದೇಶವನ್ನು “ಮಾತೃಭೂಮಿ”, “ಭಾರತ ಮಾತೆ” ಮುಂತಾಗಿ ಕರೆದರೂ, “ಮಾತೃಶಕ್ತಿ”, “ಭಗಿನಿ” ಇತ್ಯಾದಿ ಆಡಂಬರದ ಸಂಸ್ಕೃತ ಪದಪುಂಜಗಳನ್ನು ಬಳಸಿದರೂ, ಮಹಿಳೆಯರ ಕುರಿತು ಅದರ ವಿಚಾರಗಳನ್ನು ತಿಳಿದುಗೊಳ್ಳಲು “ರಾಷ್ಟ್ರೀಯ ಸ್ವಯಂ ಸೇವಕ ಸಂಘ” ಮತ್ತದರ ಮಹಿಳಾ ಅಂಗಸಂಸ್ಥೆ “ರಾಷ್ಟ್ರ ಸೇವಿಕಾ ಸಮಿತಿ”ಗಳ ನಡುವಿನ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳಬೇಕು. ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ: ಪುರುಷರ ಸಂಘಟನೆಯಲ್ಲಿ “ರಾಷ್ಟ್ರೀಯ” ಇರುವಾಗ, ಮಹಿಳಾ ಸಂಘಟನೆಯಲ್ಲಿ “ರಾಷ್ಟ್ರ” ಮಾತ್ರ ಯಾಕಿದೆ? ಒಂದು “ಸಂಘ”ವಾದರೆ, ಇನ್ನೊಂದು ಕೇವಲ “ಸಮಿತಿ” ಯಾಕೆ? ಒಂದರಲ್ಲಿ “ಸ್ವಯಂ” “ಸೇವಕ” ಇದ್ದರೆ, ಇನ್ನೊಂದರಲ್ಲಿ ಬರೇ “ಸೇವಿಕಾ” ಯಾಕಿದೆ?

ಇವೆರಡೂ ಒಂದೇ; ಅಷ್ಟೆಲ್ಲಾ ಸೂಕ್ಷ್ಮವಾಗಿ ನೋಡಲು ಹೋಗಬೇಡಿ ಎಂದು ಆರೆಸ್ಸೆಸ್ ತಿಪ್ಪೆ ಸಾರಿಸಬಹುದು. ಆದರೆ, ಉದ್ದೇಶಪೂರ್ವಕವಾಗಿ ಮಾಡಲಾಗಿರುವ ಈ ವ್ಯತ್ಯಾಸಗಳಲ್ಲಿ- ಅರ್ಥದಲ್ಲಿ ಮತ್ತು ವಿಚಾರದಲ್ಲಿ ಅಜಗಜಾಂತರವಿದೆ. ಎಲ್ಲಾ ವಿಷಯಗಳಲ್ಲಿ ಆರೆಸ್ಸೆಸ್ಸಿನ ಇಬ್ಬಗೆ ನೀತಿ, ಪಾರಿಭಾಷಿಕ ಪದಗಳ ಇಬ್ಬಗೆ ಬಳಕೆಗಳ ಕುರಿತು ಹಿಂದೆ ಇಲ್ಲಿಯೇ ನೋಡಿರುವುದನ್ನು ಈಗ ವಿಸ್ತರಿಸಿ ಪರಿಶೀಲಿಸೋಣ.

“ರಾಷ್ಟ್ರೀಯ” ಎಂಬುದು ರಾಷ್ಟ್ರ ಮತ್ತು ವ್ಯಕ್ತಿಯನ್ನು ಒಳಗೊಂಡಿರುವ ಒಂದು ಗುರುತು. ರಾಷ್ಟ್ರಕ್ಕೆ ಸಂಬಂಧಿಸಿದ ಎಂದು ಅರ್ಥ. ಮಹಿಳಾ ಸಂಘಟನೆಯ ಹೆಸರಿನ “ರಾಷ್ಟ್ರ”ದಲ್ಲಿ ಬರೇ ದೇಶ ಇದೆಯೇ ಹೊರತು ವ್ಯಕ್ತಿಯ ಒಳಗೊಳ್ಳುವಿಕೆ ಇಲ್ಲ. ಇಲ್ಲಿ ರಾಷ್ಟ್ರದ ಎಂದರ್ಥ. ಪುರುಷ- “ಸ್ವಯಂ ಸೇವಕ” ಅಂದರೆ, ಸ್ವಂತ ಇಚ್ಚೆಯಿಂದ ಸೇವೆಯಲ್ಲಿ ತೊಡಗಿರುವವನು. ಆದರೆ ಮಹಿಳೆ ಬರೇ “ಸೇವಿಕಾ-ಸೇವಿಕೆ”. ಅಂದರೆ, ಸೇವೆ ಮಾಡುವವಳು ಅಂದರೆ, ಸಂಸ್ಕೃತದ ಒಂದು ಅರ್ಥದಲ್ಲಿ “ದಾಸಿ”. ಅಂದರೆ ರಾಷ್ಟ್ರದ ದಾಸಿ- ದೇವರ ದಾಸಿ ಇದ್ದಂತೆ. ಮಹಿಳೆಯರ ಸಂಘಟನೆಯಲ್ಲಿ “ಸ್ವಯಂ” ಎಂಬುದು ಇಲ್ಲ! ಒಳಾರ್ಥವೆಂದರೆ ಆಕೆಗೆ ಸ್ವಂತ ನಿರ್ಧಾರವಿಲ್ಲ; ಪುರುಷ ಸಂಘಟನೆಯ ಅಧೀನದಲ್ಲಿ ಕಾರ್ಯನಿರ್ವಹಿಸುವ ಸೇವಕಿ. ಇನ್ನು “ಸಂಘ” ಮತ್ತು “ಸಮಿತಿ”ಯ ನಡುವಿನ ವ್ಯತ್ಯಾಸದಲ್ಲಿ ಈ ಅಧೀನತೆ ಇನ್ನಷ್ಟು ಸ್ಪಷ್ಟವಾಗುತ್ತದೆ. “ಸಂಘ”ವು ಸ್ವತಂತ್ರ ಅಸ್ತಿತ್ವ ಹೊಂದಿದ್ದರೆ, “ಸಮಿತಿ” ಎಂಬುದು ಬೇರೆಯವರಿಗೆ ಉತ್ತರಿಸಬೇಕಾದ ಒಂದು ಗುಂಪು ಮಾತ್ರ. ಈಗ ಈ “ರಾಷ್ಟ್ರ ಸೇವಿಕಾ ಸಮಿತಿ”ಯ ಕುರಿತು ಸ್ವಲ್ಪ ತಿಳಿಯೋಣ.

ಪುರುಷ ಪ್ರಧಾನ ಆರೆಸ್ಸೆಸ್ಸಿನ ಅಡಿಯಲ್ಲಿ ಮಹಿಳಾ ಆರೆಸ್ಸೆಸ್ ಸ್ಥಾಪನೆ ಮಾಡಬೇಕಾಗಿಬಂದ ಅನಿವಾರ್ಯತೆ ಕುತೂಹಲಕಾರಿಯಾಗಿದೆ. 1933ರಲ್ಲಿ- ಆರೆಸ್ಸೆಸ್ ಸ್ಥಾಪನೆಯಾದ ಎಂಟು ವರ್ಷಗಳ ನಂತರ, ಮಹಾರಾಷ್ಟ್ರದ ವಾರ್ಧಾದಲ್ಲಿ ಎಂಟು ಮಕ್ಕಳನ್ನು ಸ್ವಂತವಾಗಿ ಬೆಳೆಸಿದ ವಿಧವೆ ತಾಯಿ ಲಕ್ಷ್ಮೀಬಾಯಿ ಕೇಳ್ಕರ್ (ಆರೆಸ್ಸೆಸ್ಸಿನವರ ಮಾವ್ಶಿ ಕೇಳ್ಕರ್-ಕೇಳ್ಕರ್ ದೊಡ್ಡಮ್ಮ) ಮಹಿಳೆಯರಿಗೆ ದೈಹಿಕ ಶಕ್ತಿ, ಧೈರ್ಯ ಮತ್ತು ರಾಜಕೀಯ ಅರಿವಿನ ಕೊರತೆಯಿದೆ ಎಂದು ಗಮನಿಸಿದರು. ತನ್ನ ಮಗಳು ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ಕುಟುಂಬದಲ್ಲಿ ಮದುವೆಯಾದ ನಂತರ ಅವರ ಆಸಕ್ತಿ ಹೆಚ್ಚಾಯಿತು. ಅವರು ಆರೆಸ್ಸೆಸ್ಸಿಗೆ ಮಹಿಳೆಯರನ್ನು ಸೇರಿಸಬೇಕೆಂದು ಒತ್ತಾಯಿಸಲು ಆರಂಭಿಸಿದರು.

1936ರ ಆರಂಭದಲ್ಲಿ ಕೇಳ್ಕರ್ ಅವರು ಆರ್‌ಎಸ್‌ಎಸ್ ಸಂಸ್ಥಾಪಕ ಡಾ. ಕೆ.ಬಿ. ಹೆಡಗೇವಾರ್ ಅವರನ್ನು ನಾಗಪುರದಲ್ಲಿ ಭೇಟಿ ಮಾಡಿದರು. ಮಹಿಳೆಯರನ್ನು ನೇರವಾಗಿ ಆರ್‌ಎಸ್‌ಎಸ್‌ಗೆ ಸೇರಿಸಿಕೊಳ್ಳುವಂತೆ ಅವರು ಒತ್ತಾಯಿಸಿದರು. 1930ರ ದಶಕದ ಸಂಪ್ರದಾಯವಾದಿ ಸಾಮಾಜಿಕ ರೂಢಿಗಳು, ಪುರುಷರು ಮತ್ತು ಮಹಿಳೆಯರು ಜೊತೆಯಾಗಿ ದೈಹಿಕ ತರಬೇತಿ ಪಡೆಯುವುದಕ್ಕೆ ಬರಬಹುದಾದ ಸಾರ್ವಜನಿಕ ವಿರೋಧದ ಅಪಾಯ ಮತ್ತು ಶಾಖೆಗಳಲ್ಲಿ ಪುರುಷ ಬ್ರಹ್ಮಚರ್ಯದ ಮೇಲೆ ಒತ್ತು ನೀಡಿರುವುದರಿಂದ ಪುರುಷರ ಏಕಾಗ್ರತೆಗೆ ಭಂಗ ಉಂಟಾಗುತ್ತದೆ ಮುಂತಾದ ನೆಪಗಳನ್ನು ಹೇಳಿ ಹೆಡಗೇವಾರ್ ಅದನ್ನು ನಿರಾಕರಿಸಿದರು.

ಹಟ ಬಿಡದ ಕೇಳ್ಕರ್ ಹಲವಾರು ಬಾರಿ ಹೆಡಗೇವಾರ್ ಅವರೊಂದಿಗೆ ವಿವರವಾದ ಚರ್ಚೆಗಳಲ್ಲಿ ತೊಡಗಿದರು. ಅರ್ಧದಷ್ಟು ಜನಸಂಖ್ಯೆಯು ಅಸಂಘಟಿತವಾಗಿ ಉಳಿದರೆ “ಹಿಂದೂ ರಾಷ್ಟ್ರ”ವು ಉದಯಿಸಲು ಸಾಧ್ಯವಿಲ್ಲ ಎಂದು ವಾದಿಸಿದರು. ಇದನ್ನು ಗುರುತಿಸಿದ ಹೆಡಗೇವಾರ್, ಮಹಿಳೆಯರಿಗಾಗಿ ಒಂದು ಸಂಘಟನೆಯನ್ನು ಬೆಂಬಲಿಸಲು ಒಪ್ಪಿಕೊಂಡರು – ಅದು ಸಂಪೂರ್ಣವಾಗಿ ಪ್ರತ್ಯೇಕವಾಗಿ, ರಚನಾತ್ಮಕವಾಗಿ ಸ್ವತಂತ್ರವಾಗಿ ಮತ್ತು ಮಹಿಳೆಯರಿಂದ ಮಾತ್ರ ಮುನ್ನಡೆಸಲ್ಪಡಬೇಕು ಎಂಬ ಷರತ್ತಿನ ಮೇಲೆ. ನಿಯಂತ್ರಣ ಮಾತ್ರ ಪುರುಷ ಆರೆಸ್ಸೆಸ್ ಕೈಯಲ್ಲಿ ಎಂದು ಬೇರೆ ಹೇಳಬೇಕಾಗಿಲ್ಲ. ಹೆಡಗೇವಾರ್ ಅವರ ಮಾರ್ಗದರ್ಶನ ಮತ್ತು ಸಾಂಸ್ಥಿಕ ಸಹಾಯದಿಂದ, ಲಕ್ಷ್ಮೀಬಾಯಿ ಕೇಳ್ಕರ್ ಅವರು ಮಹಾರಾಷ್ಟ್ರದ ವಾರ್ಧಾದಲ್ಲಿ ಅಕ್ಟೋಬರ್ 25, 1936ರಲ್ಲಿ “ರಾಷ್ಟ್ರ ಸೇವಿಕಾ ಸಮಿತಿ”ಯನ್ನು ಅಧಿಕೃತವಾಗಿ ಸ್ಥಾಪಿಸಿದರು.

ಮಹಿಳೆಯರ ರಾಷ್ಟ್ರ ಸೇವಿಕಾ ಸಮಿತಿ ಮತ್ತು ಪುರುಷರ ರಾಷ್ಟ್ರೀಯ ಸ್ವಯಂಸೇವಕ ಸಂಘ ಒಂದೇ ರೀತಿಯ ಬ್ರಾಹ್ಮಣ ಶ್ರೇಷ್ಟತೆಯನ್ನು ಒಪ್ಪಿಕೊಂಡ “ಹಿಂದೂತ್ವ” ಸಿದ್ಧಾಂತವನ್ನು ಹಂಚಿಕೊಂಡರೂ, ಅವುಗಳ ದೈನಂದಿನ ದಿನಚರಿ (ಶಾಖೆಗಳು) ಮತ್ತು ವಾರ್ಷಿಕ ತರಬೇತಿ ಶಿಬಿರಗಳು (“ಅಭ್ಯಾಸ ವರ್ಗ”) ಉದ್ದೇಶಪೂರ್ವಕ ರಚನಾತ್ಮಕ ವ್ಯತ್ಯಾಸಗಳನ್ನು ಹೊಂದಿವೆ. ಈ ವ್ಯತ್ಯಾಸಗಳು ಪ್ರತ್ಯೇಕ ಕಾರ್ಯಕ್ಷೇತ್ರಗಳು ಮತ್ತು ಶುದ್ಧ ಪುರುಷ ಅರೆಸೈನಿಕ ಕಲ್ಪನೆಗಿಂತ ಭಿನ್ನವಾದ ಸಾಂಪ್ರದಾಯಿಕ “ಮಾತೃಶಕ್ತಿ” ಎಂಬ ಇಬ್ಬಗೆಯ ಪರಿಕಲ್ಪನೆಯ ಮೇಲೆ ಆಧಾರಿತವಾಗಿವೆ.

​ಪುರುಷರ ಆರ್‌ಎಸ್‌ಎಸ್ ಶಾಖೆಗಳು ಪ್ರತಿದಿನ ಹೊರಾಂಗಣದಲ್ಲಿ ತೆರೆದ ಮೈದಾನಗಳಲ್ಲಿ ಸಾಮಾನ್ಯವಾಗಿ ಬೆಳಿಗ್ಗೆ ಬೇಗ ಅಥವಾ ಸಂಜೆ ತಡವಾಗಿ ನಡೆಯುತ್ತವೆ. ​ಸಮಿತಿಯ ಶಾಖೆಗಳು ಮಹಿಳೆಯರ ಮನೆಕೆಲಸ ಮತ್ತು ಮಕ್ಕಳ ಆರೈಕೆ ವೇಳಾಪಟ್ಟಿಗಳಿಗೆ ಅನುಗುಣವಾಗಿ ಮಧ್ಯಾಹ್ನ ಅಥವಾ ಸಂಜೆ ಯಾರದ್ದಾದರೂ ಮನೆ, ಸಭಾಂಗಣದಂತಾ ಮುಚ್ಚಿದ ಸ್ಥಳದಲ್ಲಿ ನಡೆಯುತ್ತದೆ. ವಾರಕ್ಕೊಮ್ಮೆ (ಸಾಪ್ತಾಹಿಕ್), ಪಾಕ್ಷಿಕ ಅಥವಾ ಮಾಸಿಕ ಕೂಟಗಳನ್ನು ನಡೆಸಿ, ದೈನಂದಿನ ಹಾಜರಾತಿಗೆ ಬದ್ಧರಾಗಲು ಸಾಧ್ಯವಾಗದ ಕೆಲಸ ಮಾಡುವ ಮಹಿಳೆಯರು, ಬಾಲಕಿಯರಿಗೆ ಅವಕಾಶ ಕಲ್ಪಿಸುತ್ತದೆ.

ಎರಡೂ ಸಂಸ್ಥೆಗಳಲ್ಲಿ “ಶಾರೀರಿಕ್” ಮತ್ತು “ಬೌದ್ಧಿಕ್” ಎಂಬ ಎರಡು ತರಬೇತಿ ವಿಷಯಗಳಿದ್ದು, “ಶಾರೀರಿಕ್”ನಲ್ಲಿ ಒಗ್ಗಟ್ಟು ತರುವ ದೈಹಿಕ ವ್ಯಾಯಾಮ ಮತ್ತು “ಬೌದ್ಧಿಕ್”ನಲ್ಲಿ ಆರೆಸ್ಸೆಸ್ಸಿನ “ಹಿಂದೂತ್ವ” ಮತ್ತು ಪರಧರ್ಮ ದ್ವೇಷವನ್ನು ತಲೆಗೆ ತುಂಬಿಸುವ ಕೆಲಸ ಸೂಕ್ಷ್ಮವಾಗಿ ನಡೆಯುತ್ತದೆ. ಆದರೆ, ಅವುಗಳ ತಂತ್ರಗಳು ಮತ್ತು ಮಹತ್ವ ಗಮನಾರ್ಹವಾಗಿ ಭಿನ್ನವಾಗಿರುತ್ತವೆ. ಪುರುಷ ಆರೆಸ್ಸೆಸ್ ಶಾಖೆಯು ಮೆರವಣಿಗೆ ಮತ್ತು ಅರೆ ಮಿಲಿಟರಿ ಶೈಲಿಯ ಕವಾಯತುಗಳ ಜೊತೆಗೆ ಉದ್ದವಾದ ಲಾಠಿ ಬಳಸಿದರೆ, ಇದಕ್ಕೆ ವ್ಯತಿರಿಕ್ತವಾಗಿ, ರಾಷ್ಟ್ರ ಸೇವಿಕಾ ಸಮಿತಿಯು ಲಾಠಿಯನ್ನು ಬಳಸುತ್ತದಾದರೂ, “ಚೂರಿ” (ಕಠಾರಿ/ಸಣ್ಣ ಚಾಕು) ಮತ್ತು “ಯೋಗಚಾಪ” (ಬಿಲ್ಲು) ಮುಂತಾದ ಸ್ಟ್ರೆಚ್ಚಿಂಗ್ ವ್ಯಾಯಾಮಗಳನ್ನು ಹೆಚ್ಚಾಗಿ ಬಳಸುತ್ತದೆ. ಪುರುಷ ಶಾಖೆಗಳು ಗುಂಪು ಘರ್ಷಣೆ ತಂತ್ರಗಳು, ಯೋಗ, ತಾಳ್ಮೆ, ಸಾಮೂಹಿಕ ದೈಹಿಕ ಪ್ರಾಬಲ್ಯ ಮತ್ತು ಮೆರವಣಿಗೆ ಮುಂತಾದವುಗಳ ತರಬೇತಿ ನೀಡಿದರೆ, ಮಹಿಳಾ ಸಮಿತಿಯು ಸ್ವರಕ್ಷಣೆ, ಚುರುಕುತನ, ದೈಹಿಕ ಸ್ವಾಸ್ಥ್ಯ ಮತ್ತು ವೈಯಕ್ತಿಕ ಸುರಕ್ಷತಾ ತಂತ್ರಗಳ ಮೇಲೆ (“ಆತ್ಮ-ರಕ್ಷಾ”) ಗಮನ ಕೇಂದ್ರೀಕರಿಸುತ್ತದೆ.

​ಆಟಗಳ ಆಯ್ಕೆಯು (“ಖೇಲ್”) ಈ ಪ್ರತ್ಯೇಕ ಆದ್ಯತೆಗಳನ್ನು ಪ್ರತಿಬಿಂಬಿಸುತ್ತದೆ. ಪುರುಷ ಆರ್‌ಎಸ್‌ಎಸ್ ಶಾಖೆಗಳು ಕಬಡ್ಡಿ ಮತ್ತು ಖೋ-ಖೋನಂತಹ ಆಕ್ರಮಣಕಾರಿ ಮತ್ತು ಒಗ್ಗಟ್ಟನ್ನು ಪ್ರೇರೇಪಿಸುವ ದೈಹಿಕ ಸಂಪರ್ಕ, ಶಕ್ತಿಯ ತಂಡ ಆಟಗಳನ್ನು ಬಳಸುತ್ತವೆ. ಸಮಿತಿಯು ಸಾಂಪ್ರದಾಯಿಕ ಆಟಗಳು, ಚುರುಕುತನದ ಡ್ರಿಲ್‌ಗಳು ಮತ್ತು ಕಥೆ ಹೇಳುವಿಕೆ ಮತ್ತು ತಂಡದ ಕೆಲಸಗಳ ಸುತ್ತ ಕೇಂದ್ರೀಕೃತವಾದ ಆಟಗಳನ್ನು ಬಳಸುತ್ತದೆ.

​ಎರಡೂ ಸಂಘಟನೆಗಳ “ಬೌದ್ಧಿಕ್”ನಲ್ಲಿಯೂ ವ್ಯತ್ಯಾಸಗಳಿವೆ. ​ಪುರುಷ ಆರ್‌ಎಸ್‌ಎಸ್‌ನ ಅಂತಿಮ ಚಿಹ್ನೆ ಮತ್ತು “ಗುರು” ಭಗವಾಧ್ವಜ (ಕೇಸರಿ ಧ್ವಜ). ಇದೇ ಗುರುವಿಗೆ “ಗುರುದಕ್ಷಿಣೆ” ಎಂದು ಆರೆಸ್ಸೆಸ್ ಅಪಾರ ಮೊತ್ತದ ಗುಪ್ತ ನಿಧಿಯನ್ನು ಸಂಗ್ರಹಿಸುವುದು. ಐತಿಹಾಸಿಕ ಪ್ರತಿಮೆಗಳು ಛತ್ರಪತಿ ಶಿವಾಜಿ ಮತ್ತು ಮಹಾರಾಣಾ ಪ್ರತಾಪ್‌ನಂತಹ ಪುರುಷ ಯೋಧ ವ್ಯಕ್ತಿಗಳು. ಮಹಿಳೆಯರ ​ಸಮಿತಿಯಲ್ಲಿ ಕೇಸರಿ ಧ್ವಜ ಇದೆಯಾದರೂ, ಸಮಿತಿಯು ತನ್ನ ಪ್ರಾಥಮಿಕ ದೇವತೆಯಾಗಿ “ಅಷ್ಟಭುಜ ದೇವಿ”ಯನ್ನು (ಶಕ್ತಿ, ಬುದ್ಧಿವಂತಿಕೆ ಮತ್ತು ಕ್ರಿಯೆಯನ್ನು ಸಾಕಾರಗೊಳಿಸುವ ಎಂಟು ತೋಳುಗಳ ದೇವತೆ) ಪೂಜಿಸುತ್ತದೆ. ಐತಿಹಾಸಿಕ ಪ್ರತಿಮೆಗಳು ಝಾನ್ಸಿಯ ರಾಣಿ ಲಕ್ಷ್ಮಿಬಾಯಿ, ಕಿತ್ತೂರಿನ ರಾಣಿ ಚೆನ್ನಮ್ಮ ಮತ್ತು ಜೀಜಾಬಾಯಿ (ಶಿವಾಜಿಯ ತಾಯಿ, ನಾಯಕನ ಆದರ್ಶ ತಾಯಿ-ನಿರ್ಮಾಪಕಿ ಎಂದು ನೋಡಲಾಗುತ್ತದೆ) ತರದ ಧೈರ್ಯಶಾಲಿ ಮಹಿಳೆಯರ ಮೇಲೆ ಕೇಂದ್ರೀಕರಿಸುತ್ತವೆ.

ಪುರುಷ ಆರ್‌ಎಸ್‌ಎಸ್‌ನ ಉಪನ್ಯಾಸಗಳು ರಾಷ್ಟ್ರೀಯ ಭದ್ರತೆ, ಭೌಗೋಳಿಕ- ರಾಜಕೀಯ ಬೆದರಿಕೆಗಳು, ಆಕ್ರಮಣಗಳ ಇತಿಹಾಸ, ರಾಜಕೀಯ ಪ್ರಜ್ಞೆ ಮತ್ತು ಸಾಂಸ್ಥಿಕ ವಿಸ್ತರಣೆಯ ಮೇಲೆ ಹೆಚ್ಚು ಕೇಂದ್ರೀಕರಿಸುತ್ತವೆ. ಇವು ಮುಸ್ಲಿಂ ಆಕ್ರಮಣ, ಅವರ ಕ್ರೌರ್ಯ, ಹಿಂದೂ ರಾಜರ ಶ್ರೇಷ್ಟತೆ, ಅವರ ಧರ್ಮಪರತೆ, ಶೌರ್ಯ, ಪಾಕಿಸ್ತಾನ, ಬಾಂಗ್ಲಾದೇಶ, ಹಿಂದೂ ಶ್ರೇಷ್ಟತೆ, ಭವ್ಯತೆ, ಪುರಾಣ, ಮುಸ್ಲಿಂ ಜನಸಂಖ್ಯೆ ಹೆಚ್ಚಳ, ಹಿಂದೂವಿಗೆ ಅಪಾಯ…ಇತ್ಯಾದಿ ಕಾಲ್ಪನಿಕ, ಉತ್ಪ್ರೇಕ್ಷಿತ, ಕೆಲವೊಮ್ಮೆ ಹಸಿಹಸಿ ಸುಳ್ಳು, ಗಾಂಧಿ-ನೆಹರೂ ಮುಂತಾದ ವಿರೋಧಿಗಳ ಕುರಿತ ಕಟ್ಟು ಕತೆಗಳು ಮುಂತಾದ ಬ್ರೈನ್‌ವಾಷಿಂಗ್ ವಿಷಯಗಳನ್ನು ಒಳಗೊಂಡಿರುತ್ತವೆ.

ಮಹಿಳೆಯರ ಸಮಿತಿಯ ಉಪನ್ಯಾಸಗಳು ರಾಷ್ಟ್ರೀಯ, ಧಾರ್ಮಿಕ ವಿಷಯಗಳನ್ನು ಕುಟುಂಬ ಬೋಧನೆ (“ಕುಟುಂಬ ಪ್ರಬೋಧನ್”), ಮಕ್ಕಳ ಪಾಲನೆ, ಮನೆಯಲ್ಲಿ ದೈವಭಕ್ತಿ, ಸಂಸ್ಕಾರ (ಸಾಂಸ್ಕೃತಿಕ ಮೌಲ್ಯಗಳು- ಪತ್ನಿಧರ್ಮ, ಪಾತಿವ್ರತ್ಯ, ಮಾತೃಧರ್ಮ, ಮಾತೃತ್ಯಾಗ…ಇತ್ಯಾದಿ), ಕುಟುಂಬ ಪೋಷಣೆ ಮತ್ತು ದೇಶೀಯ ಆರ್ಥಿಕತೆಯೊಂದಿಗೆ ಮನೆ ನಡೆಸುವುದು ಮುಂತಾದವುಗಳಿಗೆ ಸೀಮಿತಗೊಳಿಸಿ, ಗಂಡನ ಆಣತಿಯಂತೆ ಮನೆಯನ್ನು ನಿರ್ವಹಿಸುವುದು ರಾಷ್ಟ್ರೀಯ ಸೇವೆಯ ನೇರ ರೂಪ ಎಂದು ಮಹಿಳೆಯರಿಗೆ ಕಲಿಸುತ್ತವೆ. ದಶಕಗಳ ಹಿಂದೆ ಗಂಡುಮಕ್ಕಳನ್ನು ಮೆಡಿಕಲ್ ಇಂಜಿನಿಯರಿಂಗ್‌ಗೆ ಕಳುಹಿಸಿ, ಹೆಣ್ಣುಮಕ್ಕಳಿಗೆ ಗೃಹ ನಿರ್ವಹಣೆಯ “ಹೋಂ ಸಾಯನ್ಸ್” ಕಲಿಸುತ್ತಿದ್ದಂತೆ. “ಹೆಣ್ಣು ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ಯಾಕೆ? ಹೇಗೂ ಗಂಡನ ಮನೆಗೆ ಹೋಗುವವರು” ಎಂಬಂತ ಸಾಂಪ್ರದಾಯಿಕ ಚಿಂತನೆ ಸಾಮಾನ್ಯ ಮಹಿಳೆಯರ ಕುರಿತು ಆರೆಸ್ಸೆಸ್ಸಿನ ಆಂತರ್ಯದಲ್ಲಿ ಇನ್ನೂ ಇದೆ. (ಆರೆಸ್ಸೆಸ್ ಹಿನ್ನೆಲೆಯ ಬಿಜೆಪಿ ನಾಯಕರ, ಶ್ರೀಮಂತ ಬೆಂಬಲಿಗರ ಮಕ್ಕಳು ಪಾಶ್ಚಾತ್ಯ ಶೈಲಿಯ ಜೀವನ ನಡೆಸುವುದು, ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವುದು ಸಾಮಾನ್ಯ ಕಾರ್ಯಕರ್ತರಿಗೆ ಅರ್ಥವಾಗುವುದೇ ಇಲ್ಲ!)

ಆರ್‌ಎಸ್‌ಎಸ್‌ನ ಪುರುಷ ಆದರ್ಶವೆಂದರೆ, ಸ್ವಯಂಸೇವಕನನ್ನು ಬಾಹ್ಯ ರಕ್ಷಕನಾಗಿ ತರಬೇತಿ ನೀಡಿ ರೂಪಿಸುವುದು – ರಾಷ್ಟ್ರ, ಸಮುದಾಯ ಮತ್ತು ಧರ್ಮದ ಭೌತಿಕ ಗಡಿಗಳನ್ನು ರಕ್ಷಿಸುವ ಶಿಸ್ತುಬದ್ಧ, ಆಕ್ರಮಣಕಾರಿ ರಕ್ಷಕನಾಗಿ (ಅಗ್ರಹಾರದ ಗೇಟ್‌ಕೀಪರ್) ಸಿದ್ಧಗೊಳಿಸುವುದು. ಮಹಿಳಾ ಸಮಿತಿಯು “ಸೇವಿಕಾ”ಳನ್ನು ಮೂರು ಆಯಾಮದ ಆದರ್ಶಗಳನ್ನು ಪಾಲಿಸಲು ತರಬೇತಿ ನೀಡುತ್ತದೆ: ಮಾತೃತ್ವ (ತಾಯ್ತನವನ್ನು ಪೋಷಿಸುವುದು), ಕರ್ತೃತ್ವ (ದಕ್ಷತೆ ಮತ್ತು ಔದ್ಯಮಿಕತೆ), ಮತ್ತು ನೇತೃತ್ವ (ನಾಯಕತ್ವ). ಭವಿಷ್ಯದ ಪೀಳಿಗೆಗಳು ಸ್ವಯಂಚಾಲಿತವಾಗಿ “ಹಿಂದೂ ರಾಷ್ಟ್ರಕ್ಕೆ ಮೀಸಲು” ಆಗಿರುವಂತೆ ಕುಟುಂಬಗಳನ್ನು ಬೆಳೆಸುವ ಮತ್ತು “ಹಿಂದೂತ್ವ”ದ ವಿಚಾರಗಳನ್ನು ಮಕ್ಕಳ, ಕುಟುಂಬದ ಸದಸ್ಯರ ತಲೆಗೆ ತುಂಬಿಸುವ ಜವಾಬ್ದಾರಿಯನ್ನು ಹೊಂದಿರುವ ಸಮಾಜದ ಆಂತರಿಕ ಬೆನ್ನೆಲುಬಾಗಿ ಅವಳನ್ನು ನೋಡಲಾಗುತ್ತದೆ. ಇದು “ಹಿಂದೂತ್ವ ರಕ್ಷಣೆ”ಯಲ್ಲಿ ಮಹಿಳೆಗೆ ನೀಡಲಾಗಿರುವ “ಸತಿ ಸಾವಿತ್ರಿ”ಯ ವಾಸ್ತವ ಪಾತ್ರ. ವಿಶೇಷವೆಂದರೆ, ಇದು ಸಾಮಾನ್ಯ ಮಹಿಳೆಯರಿಗೆ ಮಾತ್ರ ಅನ್ವಯಿಸುತ್ತದೆ.

ಮಹಿಳೆಯರಿಗೆ ಇಂತಾ ಸ್ಥಾನಮಾನ ನೀಡಲಾಗಿರುವ ಹಿನ್ನೆಲೆಯಲ್ಲಿ ಆರೆಸ್ಸೆಸ್ಸ್ ರಾಷ್ಟ್ರೀಯತೆಯು ಮಾತೃಪ್ರಧಾನವಾದ “ಮಾತೃಭೂಮಿ”ಯೇ, ಅಥವಾ ಜರ್ಮನಿ, ಇಟಲಿ, ಇಸ್ರೇಲ್‌ಗಳಲ್ಲಿ ಇರುವ ಆರ್ಯನ್ ಮೂಲದ ಪಿತೃಪ್ರಧಾನ “ಪಿತೃಭೂಮಿ” ಅಥವಾ ಮೋದಿಯ ಇಸ್ರೇಲ್ ಮಾದರಿಯ ಫಾದರ್ ಲ್ಯಾಂಡೇ? ಈ ಕುರಿತು ಕೂಡಾ ಇರುವ ಆರೆಸ್ಸೆಸ್ಸಿನ ಇಬ್ಬಗೆ ನೀತಿಯನ್ನು ಮುಂದೆ ನೋಡೋಣ.

Related Articles

ಇತ್ತೀಚಿನ ಸುದ್ದಿಗಳು