ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಸಂತ್ರಸ್ತರಿಂದ ನ್ಯಾಯಾಧೀಶರ ಮುಂದೆ ಹೇಳಿಕೆ ಕೊಡಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದರು. ಈ ನಡುವೆ ಹೆಚ್.ಡಿ.ರೇವಣ್ಣ ಮೇಲೂ ಲುಕ್ ಔಟ್ ನೋಟೀಸ್ ಜಾರಿ ಹಿನ್ನೆಲೆಯಲ್ಲಿ ರೇವಣ್ಣ ಅವರನ್ನು ಯಾವ ಸಂದರ್ಭದಲ್ಲಿಯೂ ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಬಗ್ಗೆ ಗೃಹ ಸಚಿವ ಡಾ ಪರಮೇಶ್ವರ್ ಹೇಳಿಕೆ ಕೊಟ್ಟಿದ್ದು, ಸಂತ್ರಸ್ತೆ ಕಡೆಯಿಂದ ಎಸ್‌ಐಟಿಯವರು ಒತ್ತಾಯಪೂರ್ವಕವಾಗಿ ಹೇಳಿಕೆ ಪಡೆದುಕೊಂಡಿದ್ದಾರೆ ಎಂಬ ಆರೋಪ ಯಾರಿಂದಲೂ ಬರಬಾರದು. ಹೀಗಾಗಿ ಮ್ಯಾಜಿಸ್ಟ್ರೇಟ್ ಮುಂದೆಯೇ ಅವರಿಂದ ಹೇಳಿಕೆ ಕೊಡಿಸಲಾಗಿದೆ. ಹೀಗಾಗಿ ಯಾವುದೇ ಕಾಲಾವಕಾಶಕ್ಕೆ ಅವಕಾಶ ಇರುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಪ್ರಜ್ವಲ್ ಪರ ವಕೀಲರು ಕಾಲಾವಕಾಶ ಕೇಳಿದ್ದಾರೆ. ಇದಕ್ಕೆ ಅವಕಾಶವಿಲ್ಲ ಎಂಬುದನ್ನು ತಿಳಿಸಿದ್ದೇವೆ. ರೇವಣ್ಣಗೂ ಕೂಡ 41A ಅಡಿ ನೊಟೀಸ್ ನೀಡಲಾಗಿದೆ. ರೇವಣ್ಣ ಸಹ 24 ಗಂಟೆ ಕಾಲಾವಕಾಶ ಕೇಳಿದ್ದಾರೆ. ಕಾನೂನು ಪ್ರಕಾರ ಮತ್ತೊಂದು ನೊಟೀಸ್ ನೀಡಿದ್ದೇವೆ. ಇದಕ್ಕೆ ಸ್ಪಂದಿಸದಿದ್ದರೆ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪ್ರಜ್ವಲ್ ರೇವಣ್ಣ ಕುರಿತು ಲುಕ್ ಔಟ್ ನೋಟೀಸ್ ಹೊರಡಿಸಲಾಗಿದೆ. ಎಲ್ಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಫೋಟೋ ಸಮೇತ ನೊಟೀಸ್ ಕಳುಹಿಸಲಾಗಿದೆ. ನಿಯಮಾನುಸಾರದ ಪ್ರಕಾರವೇ ಲುಕ್ ಔಟ್ ನೊಟೀಸ್ ನೀಡಿದ್ದೇವೆ. ರೇವಣ್ಣ ಅವರ ಮನೆ ಮೇಲೆ ಎಸ್‌ಐಟಿ ದಾಳಿ ನಡೆಸಿರುವುದು ಗೊತ್ತಿಲ್ಲ. ಪ್ರಜ್ವಲ್ ರೇವಣ್ಣ ದುಬೈಗೆ ಹೋಗಿರುವುದು ಗೊತ್ತಿಲ್ಲ. ಜರ್ಮನಿಗೆ ಹೋಗಿದ್ದಾರೆ ಎಂಬ ಮಾಹಿತಿ ಇದೆ. ಜರ್ಮನಿಯಿಂದ ಕರೆತರಲು ಕೇಂದ್ರದ ನೆರವು ಬೇಕು. ಎರಡನೇ ನೋಟಿಸ್‌ಗೂ ಸ್ಪಂದಿಸದಿದ್ದರೆ ಮುಂದಿನ ತೀರ್ಮಾನ ಏನು ಎಂಬುದನ್ನು ಎಸ್‌ಐಟಿಯವತು ಕೈಗೊಳ್ಳುತ್ತಾರೆ ಎಂದು ಹೇಳಿದರು.
ಹೆಚ್.ಡಿ.ರೇವಣ್ಣ ಮತ್ತು ರೇವಣ್ಣ ಪುತ್ರ ಪ್ರಜ್ವಲ್ ಇಬ್ಬರಿಗೂ ಲುಕ್ ಔಟ್ ನೋಟೀಸ್ ಜಾರಿ ಮಾಡಲಾಗಿದೆ. ರೇವಣ್ಣ 24 ಗಂಟೆ ಸಮಯಾವಕಾಶ ಕೇಳಿದ್ದಾರೆ. ಈಗಾಗಲೇ ಅವರ ಒಂದು ಅರ್ಜಿ ತಿರಸ್ಕೃತವಾಗಿದೆ. ಮತ್ತೊಂದು ನಿರೀಕ್ಷಣಾ ಜಾಮೀನಿಗೆ ಕೋರಿದ ಅರ್ಜಿಯನ್ನು ಹೈಕೋರ್ಟ ನಾಳೆಗೆ ಮುಂದೂಡಿದೆ. ಈ ನಡುವೆ ಸಾಕ್ಷ್ಯನಾಶದ ಆರೋಪ ಹೊತ್ತಿರುವ ರೇವಣ್ಣ ಬಂಧನ ಯಾವ ಕ್ಷಣದಲ್ಲಾದರೂ ಆಗಬಹುದು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.