Home ಹವಾಮಾನ ದೇಶದಲ್ಲಿ ಬಿಸಿಲಿನ ಅಟ್ಟಹಾಸ: ಕೇವಲ ಒಂದು ದಿನದ ಬಿಸಿಗಾಳಿಗೆ ಭಾರತದಲ್ಲಿ 3,400 ಅಕಾಲಿಕ ಸಾವು; ಸಂಶೋಧನಾ...

ದೇಶದಲ್ಲಿ ಬಿಸಿಲಿನ ಅಟ್ಟಹಾಸ: ಕೇವಲ ಒಂದು ದಿನದ ಬಿಸಿಗಾಳಿಗೆ ಭಾರತದಲ್ಲಿ 3,400 ಅಕಾಲಿಕ ಸಾವು; ಸಂಶೋಧನಾ ವರದಿ

0

ದೆಹಲಿ: ಜಾಗತಿಕ ತಾಪಮಾನ ಏರಿಕೆಯಿಂದಾಗಿ ಪ್ರಪಂಚದಾದ್ಯಂತ ಮರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಭಾರತದಲ್ಲಿ ಕೇವಲ ಒಂದೇ ಒಂದು ದಿನದ ತೀವ್ರ ಬಿಸಿಗಾಳಿಯ ಕಾರಣದಿಂದಾಗಿ ದೇಶಾದ್ಯಂತ 3,400 ಹೆಚ್ಚುವರಿ ಸಾವುಗಳು ಸಂಭವಿಸುತ್ತಿವೆ ಎಂದು ನೂತನ ಅಧ್ಯಯನವೊಂದು ಆತಂಕಕಾರಿ ಮಾಹಿತಿ ಬಿಡುಗಡೆ ಮಾಡಿದೆ. ಒಂದು ವೇಳೆ ಸತತ ಐದು ದಿನಗಳ ಕಾಲ ತೀವ್ರ ಸ್ವರೂಪದ ಬಿಸಿಗಾಳಿ ಮುಂದುವರಿದರೆ ದೇಶದಲ್ಲಿ ಸುಮಾರು 30,000 ಜನರು ಮೃತಪಡಬಹುದು ಎಂದು ಈ ವರದಿ ಎಚ್ಚರಿಸಿದೆ.

ಅಮೆರಿಕದ ಕ್ಯಾಲಿಫೋರ್ನಿಯಾ ಬರ್ಕ್ಲಿ ವಿಶ್ವವಿದ್ಯಾಲಯದ ‘ಇಂಡಿಯಾ ಎನರ್ಜಿ ಅಂಡ್ ಕ್ಲೈಮೇಟ್ ಸೆಂಟರ್’ ಸಂಶೋಧಕರಾದ ಪೀಯೂಷ್ ನಾರಂಗ್ ಮತ್ತು ಅಶೋಕ್ ಗಾಡ್ಗೀಳ್ ನೇತೃತ್ವದಲ್ಲಿ ನಡೆದ ಈ ಸಂಶೋಧನೆಯ ವಿವರಗಳು ‘ಫ್ರಾಂಟಿಯರ್ಸ್ ಇನ್ ಎನ್ವಿರಾನ್‌ಮೆಂಟ್ ಹೆಲ್ತ್’ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಸಂಶೋಧಕರು ಭಾರತದ 10 ಪ್ರಮುಖ ರಾಜ್ಯಗಳ ಜಿಲ್ಲಾವಾರು ಮರಣ ಪ್ರಮಾಣವನ್ನು 2024ರ ಜನಸಂಖ್ಯೆಯ ಅಂದಾಜಿನೊಂದಿಗೆ ಸಮೀಕ್ಷೆ ನಡೆಸಿ ಈ ಹೆಚ್ಚುವರಿ ಮರಣಗಳ ಆಘಾತಕಾರಿ ದತ್ತಾಂಶವನ್ನು ಅಂದಾಜಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಉತ್ತರ, ಮಧ್ಯ ಮತ್ತು ಪೂರ್ವ ಭಾರತದಲ್ಲಿ ತಾಪಮಾನವು 45 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚಾಗಿದ್ದು, ಬಿಸಿಗಾಳಿಯ ತೀವ್ರತೆ ವಿಪರೀತವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾವಾರು ವಿಶ್ಲೇಷಣೆ ನಡೆಸಿದಾಗ, ಸತತ ಐದು ದಿನಗಳ ಬಿಸಿಗಾಳಿಯ ಅವಧಿಯಲ್ಲಿ ಕೇವಲ ಉತ್ತರ ಪ್ರದೇಶವೊಂದರಲ್ಲೇ ಸುಮಾರು 8,100 ಹೆಚ್ಚುವರಿ ಸಾವುಗಳು ದಾಖಲಾಗಿವೆ. ಅಷ್ಟೇ ಅಲ್ಲದೆ, ಅಹಮದಾಬಾದ್, ಜೈಪುರ ಮತ್ತು ಸೂರತ್‌ನಂತಹ ಪ್ರಮುಖ ನಗರಗಳಲ್ಲಿ ತಲಾ 250 ಕ್ಕೂ ಹೆಚ್ಚು ಹೆಚ್ಚುವರಿ ಮರಣಗಳು ಸಂಭವಿಸಿವೆ ಎಂದು ವರದಿ ಹೇಳಿದೆ.

ಮುಖ್ಯವಾಗಿ ದೇಶದಲ್ಲೇ ಅತಿ ಹೆಚ್ಚು ಬಿಸಿಗಾಳಿಯ ಮರಣಗಳ ಹೊರೆ ಹೊರುತ್ತಿರುವ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಲ್ಲಿ ಸಂಭವಿಸುತ್ತಿರುವ ಮರಣಗಳ ತೀವ್ರತೆಗೂ ಹಾಗೂ ಅಲ್ಲಿನ ಆರ್ಥಿಕ ಸಾಮರ್ಥ್ಯಕ್ಕೂ ನಡುವೆ 2.3 ಪಟ್ಟು ಅಸಮಾನತೆ ಇರುವುದನ್ನು ಸಂಶೋಧಕರು ಗುರುತಿಸಿದ್ದಾರೆ. ಈ ಐದು ರಾಜ್ಯಗಳು ಸೇರಿ ದೇಶದ ಒಟ್ಟು ಬಿಸಿಗಾಳಿಯ ಮರಣಗಳಲ್ಲಿ ಶೇಕಡಾ 66 ರಷ್ಟು ಪಾಲನ್ನು ಹೊಂದಿವೆ. ಆದರೆ, ಭಾರತದ ಒಟ್ಟು ಜಿಡಿಪಿಯಲ್ಲಿ (GDP) ಈ ರಾಜ್ಯಗಳ ಒಟ್ಟು ಪಾಲು ಕೇವಲ ಶೇಕಡಾ 29 ರಷ್ಟು ಮಾತ್ರ ಇರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ.

ಭಾರತವು ತನ್ನ ಬಿಸಿಗಾಳಿ ತಡೆಗಟ್ಟುವಿಕೆ ವ್ಯವಸ್ಥೆಗಳನ್ನು (ಹೀಟ್ ವೇವ್ ಆಕ್ಷನ್ ಪ್ಲಾನ್) ರೂಪಿಸುವಲ್ಲಿ ಮತ್ತು ಹಣಕಾಸು ಅನುದಾನ ಹಂಚಿಕೆ ಮಾಡುವಲ್ಲಿ ತಕ್ಷಣವೇ ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳುವ ಅಗತ್ಯವನ್ನು ಈ ಫಲಿತಾಂಶಗಳು ನೆನಪಿಸುತ್ತಿವೆ ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA) ಮತ್ತು ಹವಾಮಾನ ಬದಲಾವಣೆಯ ರಾಷ್ಟ್ರೀಯ ಕ್ರಿಯಾ ಯೋಜನೆಯಡಿ ಕೇಂದ್ರ ಸರ್ಕಾರ ಬಿಡುಗಡೆ ಮಾಡುವ ನಿಧಿಗಳನ್ನು ಕೇವಲ ಜನಸಂಖ್ಯೆ ಅಥವಾ ಆಡಳಿತಾತ್ಮಕ ಸಾಮರ್ಥ್ಯದ ಆಧಾರದ ಮೇಲೆ ಹಂಚಿಕೆ ಮಾಡಬಾರದು.

ಆರ್ಥಿಕವಾಗಿ ಹಿಂದುಳಿದಿದ್ದು ಬಿಸಿಗಾಳಿಯ ತೀವ್ರತೆಗೆ ಹೆಚ್ಚು ತುತ್ತಾಗುತ್ತಿರುವ ರಾಜ್ಯಗಳಿಗೆ ಹೆಚ್ಚಿನ ಧನಸಹಾಯ ಸಿಗುವಂತೆ ವ್ಯೂಹಾತ್ಮಕ ಹೂಡಿಕೆಗಳನ್ನು ಮಾಡಬೇಕು ಎಂದು ಸಂಶೋಧಕರು ಶಿಫಾರಸು ಮಾಡಿದ್ದಾರೆ. ದಕ್ಷಿಣ ಏಷ್ಯಾ, ಅದರಲ್ಲೂ ಮುಖ್ಯವಾಗಿ ಭಾರತವು ತಾಪಮಾನಕ್ಕೆ ಸಂಬಂಧಿಸಿದ ಮರಣಗಳ ಅಪಾಯವನ್ನು ಎದುರಿಸುತ್ತಿದೆ ಎಂಬ ಜಾಗತಿಕ ಮುನ್ಸೂಚನೆಗಳಿಗೆ ಈ ಅಧ್ಯಯನವು ಬಲವಾದ ಸಾಕ್ಷಿಯಾಗಿದೆ.

You cannot copy content of this page

Exit mobile version