Home ಬೆಂಗಳೂರು ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಅಗ್ನಿ ಅವಘಡ – ತಪ್ಪಿದ ದುರಂತ

ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಅಗ್ನಿ ಅವಘಡ – ತಪ್ಪಿದ ದುರಂತ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ (Bengaluru) ಮತ್ತೊಂದು ಭೀಕರ ಅಗ್ನಿ ಅವಘಡ (Fire Mishap) ಸಂಭವಿಸಿದೆ. ನಗರದ ನಾಗದೇವನಹಳ್ಳಿಯಲ್ಲಿರುವ ಪ್ರಸಿದ್ಧ ಚಿತ್ರಕೂಟ ಕೌಸಲ್ಯ ಶಾಲೆಯಲ್ಲಿ (School) ಇಂದು ದಿಢೀರನೆ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಶಾಲಾ ಕಟ್ಟಡದಿಂದ ದಟ್ಟವಾದ ಹೊಗೆ ಮತ್ತು ಬೆಂಕಿಯ ಜ್ವಾಲೆಗಳು ಆವರಿಸಿದ್ದರಿಂದ ಸುತ್ತಮುತ್ತಲಿನ ನಿವಾಸಿಗಳು ಆತಂಕಗೊಂಡಿದ್ದರು.

ಆದರೆ, ಈ ಭೀಕರ ಅಗ್ನಿ ಅವಘಡದ ನಡುವೆಯೂ ಅತ್ಯಂತ ದೊಡ್ಡ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಶಾಲೆಯಲ್ಲಿ ಇಂದು ಪೋಷಕರ ಸಭೆ (Parents Meeting) ಇದ್ದ ಹಿನ್ನೆಲೆಯಲ್ಲಿ ಮಕ್ಕಳಿಗೆ ತರಗತಿಗಳು ಇರಲಿಲ್ಲ. 

ಹೀಗಾಗಿ ವಿದ್ಯಾರ್ಥಿಗಳು ಯಾರೂ ಶಾಲೆಯಲ್ಲಿ ಉಪಸ್ಥಿತರಿರಲಿಲ್ಲ. ಒಂದು ವೇಳೆ ಎಂದಿನಂತೆ ತರಗತಿಗಳು ನಡೆದು ಮಕ್ಕಳು ಶಾಲೆಯೊಳಗಿದ್ದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ದೊಡ್ಡ ದುರಂತವೇ ಸಂಭವಿಸುವ ಸಾಧ್ಯತೆಯಿತ್ತು.

ಇನ್ನು ಈ ಶಾಲೆಯ ಪಕ್ಕದಲ್ಲೇ ಪೆಟ್ರೋಲ್ ಬಂಕ್ ಇರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿತ್ತು. ಬೆಂಕಿ ಏನಾದರೂ ಪಕ್ಕದ ಪೆಟ್ರೋಲ್ ಬಂಕ್‌ಗೆ ವ್ಯಾಪಿಸಿದ್ದರೆ ಇಡೀ ಪ್ರದೇಶವೇ ಭಸ್ಮವಾಗುವಂತಹ ಭೀಕರ ಪರಿಸ್ಥಿತಿ ಎದುರಾಗುತ್ತಿತ್ತು. 

ಸ್ಥಳೀಯರ ಸಕಾಲಿಕ ಮಾಹಿತಿ ಮೇರೆಗೆ ತಕ್ಷಣವೇ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಜಂಟಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಬೆಂಕಿ ನಂದಿಸುವ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಶಾರ್ಟ್ ಸರ್ಕ್ಯೂಟ್ ಅಥವಾ ಬೇರೆ ಯಾವುದಾದರೂ ಕಾರಣದಿಂದ ಬೆಂಕಿ ತಗುಲಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

You cannot copy content of this page

Exit mobile version