ಭಾರತದಲ್ಲಿ ಶುಕ್ರವಾರ ಕನಿಷ್ಠ 40 ಶಂಕಿತ ಬಿಸಿಗಾಳಿ ಸಾವುಗಳು ವರದಿಯಾಗಿವೆ. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಲೋಕಸಭೆ ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ 25 ಸಿಬ್ಬಂದಿ ಇದರಿಂದ ಮೃತಪಟ್ಟಿದ್ದಾರೆ.
ಅಧಿಕಾರಿಗಳ ಪ್ರಕಾರ, ಗುರುವಾರ ಒಡಿಶಾ (10), ಬಿಹಾರ (8), ಜಾರ್ಖಂಡ್ (4), ಮತ್ತು ಉತ್ತರ ಪ್ರದೇಶ (1)ದಿಂದ ಬಿಸಿಗಾಳಿ ಸಂಬಂಧಿತ ಸಾವುಗಳು ವರದಿಯಾಗಿವೆ.
ರಾಜಸ್ಥಾನವು ಇಲ್ಲಿಯವರೆಗೆ ಕನಿಷ್ಠ ಐದು ಬಿಸಿಗಾಳಿ ಸಂಬಂಧಿತ ಸಾವುಗಳನ್ನು ದಾಖಲಿಸಿದೆ. ಶುಕ್ರವಾರ, ಉತ್ತರ ಪ್ರದೇಶದಿಂದ ಗರಿಷ್ಠ 17 ಸಾವುಗಳು, ಬಿಹಾರದಿಂದ 14, ಒಡಿಶಾದಿಂದ ಐದು ಮತ್ತು ಜಾರ್ಖಂಡ್
ರಾಜ್ಯದಿಂದ ನಾಲ್ಕು ಸಾವುಗಳು ವರದಿಯಾಗಿವೆ. ಈ ಪ್ರದೇಶಗಳಲ್ಲಿ 1,300ಕ್ಕೂ ಹೆಚ್ಚು ಜನರು ಬಿಸಿಗಾಳಿಯ ಆಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಉತ್ತರ ಪ್ರದೇಶದಲ್ಲಿ ಸೋನಭದ್ರ ಜಿಲ್ಲೆ ಮತ್ತು ಮಿರ್ಜಾಪುರ ಸೇರಿದಂತೆ 13 ಸ್ಥಾನಗಳಿಗೆ ಶನಿವಾರ ಮತದಾನ ನಡೆಯುತ್ತಿದ್ದು, ಕನಿಷ್ಠ 15 ಚುನಾವಣಾ ಸಿಬ್ಬಂದಿ ಶಂಕಿತ ಬಿಸಿಗಾಳಿ ಆಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ. 13 ಚುನಾವಣಾ ಸಿಬ್ಬಂದಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಿರ್ಜಾಪುರದ ಮಾ ವಿಂಧ್ಯವಾಸಿನಿ ಸ್ವಾಯತ್ತ ರಾಜ್ಯ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ ರಾಜ್ ಬಹದ್ದೂರ್ ಕಮಲ್ ಪಿಟಿಐಗೆ ತಿಳಿಸಿದ್ದಾರೆ.
ಮೃತರಲ್ಲಿ ಏಳು ಗೃಹ ರಕ್ಷಕ ದಳದ ಯೋಧರು, ಮೂವರು ನೈರ್ಮಲ್ಯ ಕಾರ್ಯಕರ್ತರು, ಮುಖ್ಯ ವೈದ್ಯಾಧಿಕಾರಿ ಕಚೇರಿಯ ಒಬ್ಬ ಗುಮಾಸ್ತ, ಒಬ್ಬ ಕನ್ಸಲಿಡೇಷನ್ ಅಧಿಕಾರಿ ಮತ್ತು ಗೃಹ ರಕ್ಷಕ ತಂಡದಲ್ಲಿದ್ದ ಒಬ್ಬ ಪ್ಯೂನ್ ಸೇರಿದ್ದಾರೆ.