ಪ್ರೆಸ್ ಕ್ಲಬ್ ಆಫ್ ಇಂಡಿಯಾವು ಮಾಧ್ಯಮಗಳ ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ನಿಯಂತ್ರಣಕ್ಕಾಗಿ ಕರಡು ಮಸೂದೆ ಒಂದನ್ನು ಸಿದ್ಧಪಡಿಸಿ, ಚರ್ಚೆಗಾಗಿ ಸಾರ್ವಜನಿಕರ ಮುಂದಿಟ್ಟಿದೆ. ಇದನ್ನು ಸಂಸತ್ತಿಗೆ ಒಯ್ಯುವವರು ಯಾರು, ಅನುಮೋದಿಸುವವರು ಯಾರು ಎಂಬುದನ್ನೆಲ್ಲ ಕಾದು ನೋಡಬೇಕಾದರೂ, ಸದ್ಯಕ್ಕಿದು ಸ್ವಾಗತಾರ್ಹ.
ಉದ್ಯಮಪತಿಗಳ ಕೈಯಲ್ಲಿ ಮಾಧ್ಯಮಗಳು ಸಿಲುಕಿ, ಅದರ ಮಾಲಕತ್ವ ಯಾರದೆಂಬುದರಲ್ಲಿ ಪಾರದರ್ಶಕತೆ ಇಲ್ಲ, ಸರ್ಕಾರಿ ಜಾಹೀರಾತುಗಳಲ್ಲಿ ತಾರತಮ್ಯ, ಪತ್ರಕರ್ತರ ಮೇಲೆ ಹಠಸಾಧನೆಗಳೇ ಮೊದಲಾದ ಸವಾಲುಗಳು ಈ ಮಸೂದೆ ಸಿದ್ಧಪಡಿಸಲು ಕಾರಣ ಎಂದು ಮಸೂದೆಯ ಕವರ್ ನೋಟ್ ಹೇಳುತ್ತದೆ.
ಭಾರತದಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿ ಕಾಯಿದೆಗಳೇ ಇಲ್ಲ ಎಂದೇನಿಲ್ಲ. ಈಗಾಗಲೇ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಕಾಯಿದೆ ಎಂಬ ಹಲ್ಲಿಲ್ಲದ ಹುಲಿಯೊಂದು ಮಾಧ್ಯಮಗಳ ನಿಯಂತ್ರಣದಲ್ಲಿ ನಿರತವಾಗಿದೆ. ಅದರ ಉದ್ದೇಶ ಮೀಡಿಯಾ ಸ್ವಾತಂತ್ರ್ಯವನ್ನು ಕಾಯ್ದುಕೊಳ್ಳುವುದು ಮತ್ತು ಪತ್ರಿಕೆಗಳು ಮತ್ತು ಸುದ್ದಿ ಸಂಸ್ಥೆಗಳ ಗುಣಮಟ್ಟವನ್ನು ಸುಧಾರಿಸಲು ಪ್ರಯತ್ನಿಸುವುದು!
ಇದೆಲ್ಲ ಎಷ್ಟು ಪ್ರಮಾಣದಲ್ಲಿ ನಡೆಯುತ್ತಿದೆ ಎಂಬುದನ್ನು ಈಗಷ್ಟೇ ಮುಗಿದಿರುವ ಸಾರ್ವತ್ರಿಕ ಚುನಾವಣಾ ಪ್ರಚಾರದ ಅವಧಿಯಲ್ಲೇ ಲೇಟೆಸ್ಟ್ ಆಗಿ ದೇಶ ನೋಡಿ ಆಗಿದೆ. ಬಹಳ ತಮಾಷೆ ಎಂದರೆ, ಹೊಸ ಕಾಯಿದೆಯ ಮುಖ್ಯ ಉದ್ದೇಶ: ಭಾರತದಲ್ಲಿ ಮಾಧ್ಯಮ ವಾತಾವರಣ “ಸ್ಟೇಬಲ್” ಮತ್ತು “ಪ್ರಿಡಿಕ್ಟೆಬಲ್” ಆಗಿರುವಂತೆ ನೋಡೀಕೊಳ್ಳುವುದು ಮತ್ತು ಅವು ಉಲ್ಲಂಘನೆ ಆದಾಗ ಪರಿಣಾಮಕಾರಿಯಾಗಿ ನಿಭಾಯಿಸುವುದು! ಅಂದರೆ, ಮಾಧ್ಯಮ ಈಗ ಬರೀ ಸ್ವಾತಂತ್ರ್ಯ ಮಾತ್ರವಲ್ಲ, ತನ್ನ ಅಸ್ಥಿತ್ವದ ಮೇಲೆ ಆಗುತ್ತಿರುವ ದಾಳಿಗಳ ಬಗ್ಗೆಯೂ ಯೋಚಿಸುವ ಸ್ಥಿತಿ ಬಂದಿದೆ.
ಈಗ ಪ್ರಶ್ನೆ ಇರುವುದು ಇಷ್ಟೇ. ಇಂತಹದೊಂದು ಹೊಸ ಕಾಯಿದೆ ಬಂದರೆ ಪ್ರೆಸ್ ಕೌನ್ಸಿಲ್ ಕಾಯಿದೆ ಹೇಗೆ ಪ್ರಸ್ತುತವಾಗಿ ಉಳಿಯುತ್ತದೆ? ಆ ಕಾಯಿದೆಗೆ ಅಗತ್ಯ ಬಂದಾಗ ಕಚ್ಚಬಲ್ಲ ಹಲ್ಲು ಮೂಡಿಸುವ ಬದಲು ಹೊಸದೇ ಕಾಯಿದೆ ತರುವುದು ಎಷ್ಟು ಸರಿ? ಮಾಧ್ಯಮದಲ್ಲಿ ಇರುವವರು ಸರಿಯಾಗದೇ ಮಾಧ್ಯಮ ಮತ್ತು ಅದರ ಮಾಲಕರು ಸರಿ ಆಗುವುದು ಸಾಧ್ಯ ಇದೆಯೆ?
ಡಿಯರ್_ಮೀಡಿಯಾ
ರಾಜಾರಾಂ ತಲ್ಲೂರು