ಮಂಗಳವಾರ ರಾಜ್ಯದಾದ್ಯಂತ ಸುರಿದ ಬಾರಿ ಮಳೆಗೆ ಹಲವು ಅವಾಂತರ ಸೃಷ್ಟಿಯಾಗಿದೆ. ಒಂದು ಕಡೆ ಬಿಸಿಲಿನ ಝಳದಿಂದ ಭೂಮಿ ತಂಪಾಗಿದೆ ಎನ್ನುವಾಗಲೇ ಹಲವು ಜಿಲ್ಲೆಗಳಲ್ಲಿ ಸಿಡಿಲು, ಮಿಂಚಿನ ಆರ್ಭಟಕ್ಕೆ ಒಂದೇ ದಿನಕ್ಕೆ 9 ಮಂದಿ ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ.
ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಸುರಿದ ಬಾರಿ ಮಳೆ ಒಂದಷ್ಟು ಕಟಾವಿಗೆ ಬಂದ ಬೆಳೆ ನಾಷಪಡಿಸಿದ್ದಲ್ಲದೆ, ಸಿಡಿಲು ಮಿಂಚಿನ ಹೊಡೆತಕ್ಕೆ ಸಾವು ನೋವಿಗೂ ಕಾರಣವಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಸಿಡಿಲಿನ ಹೊಡೆತಕ್ಕೆ ಇಬ್ಬರು, ಬಳ್ಳಾರಿ ಇಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ. ಇನ್ನು ಚಿಕ್ಕಮಗಳೂರು-1, ವಿಜಯಪುರದಲ್ಲಿ ಓರ್ವ ವ್ಯಕ್ತಿ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಹಾಗೇ ಗದಗ ಜಿಲ್ಲೆಯಲ್ಲಿ ಮಳೆ ನೀರಿಗೆ ಬೈಕ್ ಸವಾರ ಕೊಚ್ಚಿಕೊಂಡು ಹೋದರೆ, ಗೋಕಾಕ್ನಲ್ಲಿ ವ್ಯಕ್ತಿ ಚರಂಡಿಯಲ್ಲಿ ಕೊಚ್ಚಿ ಹೋಗಿದ್ದಾನೆ.
ಹಲವು ಕಡೆ ಮನೆಗಳಿಗೆ ನೀರು ನುಗ್ಗಿದೆ. ಹಾಗೇ ಜಮೀನಿನಲ್ಲಿ ಕಟಾವಿಗೆ ಬಂದಿದ್ದ ಬೆಳೆ ನಾಶವಾಗಿದೆ. ಹುಬ್ಬಳ್ಳಿಯ ಅನೇಕ ಕಡೆಗಳಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ನೀರು ಹೊರಹಾಕಲು ನಿವಾಸಿಗಳು ಪರದಾಡುವಂತಾಗಿದೆ. ಗೋಕಾಕನಲ್ಲಿ ಮಟನ್ ಮಾರ್ಕೆಟ್ ಒಳಗೆ ಮಳೆಯ ನೀರು ನುಗ್ಗಿದೆ. ದ್ವಿಚಕ್ರ ವಾಹನ ಹಾಗೂ ಕಾರು ನೀರಲ್ಲಿ ಮುಳುಗಡೆಯಾಗಿವೆ. ನಿರಂತರ ಮಳೆಗೆ ಗೋಕಾಕ್ ನಗರದ ಜನರು ಪರದಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಮನೆಗಳಿಗೆ ಹಾನಿಯಾಗಿದೆ. ಎರಡೂ ಮನೆಯ ಕುಟುಂಬದವರು ಅದೃಷ್ಟವಶಾತ್ ಪಾರಾಗಿದ್ದಾರೆ. ಮೀಟರ್ ಬೋರ್ಡ್, ಮನೆಯ ಹೆಂಚು, ವಿದ್ಯುತ್ ದೀಪಗಳು, ಯಂತ್ರೋಪಕರಣಗಳಿಗೆ ಭಾಗಶಃ ಹಾನಿಯಾಗಿದೆ. ಮನೆಯ ಎದುರಿನ ತೆಂಗಿನ ಮರ, ಮನೆಯ ಗೋಡೆ ಸಿಡಿಲು ಬಡಿದು ಹಾನಿಯಾಗಿದೆ.
ಬೆಂಗಳೂರಿನ ಹಲವು ಕಡೆಗಳಲ್ಲಿ ಸುರಿದ ಬಾರಿ ಮಳೆ ಅವಾಂತರ ಸೃಷ್ಟಿಸಿದೆ. ರಾಜಧಾನಿಯ ದಕ್ಷಿಣ, ಬೊಮ್ಮನಹಳ್ಳಿ ವಲಯದಲ್ಲಿ ಹೆಚ್ಚು ಮರಗಳು ಬಿದ್ದ ಬಗ್ಗೆ ವರದಿಯಾಗಿದೆ. ಬಿಬಿಎಂಪಿ 8 ವಲಯದಲ್ಲಿ 27ಕ್ಕೂ ಹೆಚ್ಚು ಮರ ಹಾಗೂ 94 ಕೊಂಬೆಗಳು ಧರೆಗುರುಳಿರುವೆ.
ಇದಲ್ಲದೆ ಮೆಜೆಸ್ಟಿಕ್, ಮಲ್ಲೇಶ್ವರಂ, ರಾಜಾಜಿನಗರ, ಯಶವಂತಪುರ, ರೇಸ್ ಕೋರ್ಸ್, ಆನಂದ್ ರಾವ್ ಸರ್ಕಲ್ ಸುತ್ತಮುತ್ತ ಭಾಗ ಬಾರಿ ಮಳೆಯಾಗಿದೆ.