‘ಡಿಸೆಂಬರಿನ ಚಳಿಯಲ್ಲಿ ನಮ್ಮಂತೆಯೇ ಲಂಕೇಶ್ ಮೇಷ್ಟ್ರಲ್ಲೂ ಹೆಚ್ಚು ಪ್ರೇಮ ಜಾಗೃತವಾಗಿರುತಿತ್ತೋ ಏನೋ?! ಮೇಷ್ಟ್ರು, ಪ್ರೇಮದಿಂದ ಮುದಗೊಳ್ಳುವ ಅನೇಕ ನೀಲು ಪದ್ಯಗಳನ್ನು ಬರೆಯುತ್ತಿದ್ದದ್ದು ಇದೇ ಸೀಸನ್ನಿನಲ್ಲಿ..!!’ ಪಿ ಲಂಕೇಶರ ಆಪ್ತರಲ್ಲಿ ಒಬ್ಬರಾದ ಸಿಎಸ್ ದ್ವಾರಕಾನಾಥ್ ಅವರ ಬರಹದಲ್ಲಿ
ಡಿಸೆಂಬರ್ ಬಂತೆಂದರೆ ಮೇಷ್ಟ್ರು(ಲಂಕೇಶ್) ನೆನಪಾಗುತ್ತಾರೆ, ಡಿಸೆಂಬರಿನ ಚಳಿ ಅವರಿಗಿಷ್ಟ, ಸಂಜೆಯಾದರೆ ಸಾಕು ನಮ್ಮಂತ ಪ್ರೀತಿಪಾತ್ರರಾದ ಹುಡುಗರು ಸಿಕ್ಕರೆ ಮುದ್ದುಮುದ್ದಾಗಿ ನಗುತ್ತಾ “ಬಾರಯ್ಯ ವಿಸ್ಕಿ ಕುಡಿ..” ಎಂದು ಆಪ್ತವಾಗಿ ಕೂರಿಸಿಕೊಂಡು, ಸಿಗರೇಟ್ ಸೇದುತ್ತಾ, ಸುರಳಿ ಸುರಳಿಯಾಗಿ ಹೊಗೆಬಿಡುತ್ತಾ, ಕೊರೆಯುವ ಚಳಿಯಲ್ಲೂ ಐಸ್ ಕ್ಯೂಬ್ಸ್ ಹಾಕಿಕೊಂಡ ಬೆಚ್ಚನೆಯ ವಿಸ್ಕಿ ಗುಟುಕರಿಸುತ್ತಾ, ಬಣ್ಣಬಣ್ಣದ ಶ್ವೆಟರ್ ತೊಟ್ಟು ಜಗತ್ತಿನ ಅನೇಕ ವಿಷಯಗಳನ್ನು ಜೋವಿಯಲ್ ಆಗಿ ಮಾತಾಡುತಿದ್ದರು. ಒಳ್ಳೇ ಮೂಡ್ ನಲ್ಲಿದ್ದರಂತೂ ಮುಗೀತು ಹೆಮಿಂಗ್ವೇ, ಬೋದಿಲೇರ್, ಡಾಂಟೇ, ಮಾರ್ಕ್ವೆಸ್ ಗಳಂತವರ ಸಾಹಿತ್ಯ ಮತ್ತು ಅವರ ಜೀವನದಲ್ಲಿನ ಅನೇಕ ಖಾಸಗಿ ಘಟನೆಗಳನ್ನು ತೀರಾ ಇಂಟೆರೆಸ್ಟಿಂಗ್ ಆಗಿ, ಅವರೂ ಎಂಜಾಯ್ ಮಾಡುತ್ತಾ ಹೇಳುತಿದ್ದರು. ನಮ್ಮಂತ ಗೂಬೆಗಳಿಗೆ ಅದರ ಮೌಲ್ಯ ಆಗ ಗೊತ್ತಿರಲಿಲ್ಲ! ನಾನಂತೂ ಆಗ ಒಂದು ಸಣ್ಣ ಟಿಪ್ಪಣಿಯೊಂದನ್ನೂ ಮಾಡಿಕೊಂಡಿಲ್ಲ! ಇಂತಹ ಅನೇಕ ಸಂಜೆಗಳನ್ನು ಆ ಕ್ಷಣಕ್ಕೆ ಅನುಭವಿಸಿ ಮರೆತುಬಿಡುತ್ತಿದ್ದೆವು. ಯಾಕೆಂದರೆ ಮೇಷ್ಟ್ರಿಗೂ ಸಾವು ಬರುತ್ತದೆಂದು ನಾನಂತೂ ಎಂದೂ ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ!!
ಇಂತದ್ದೇ ಡಿಸೆಂಬರಿನ ಚಳಿಯಲ್ಲಿ ನಮ್ಮಂತೆಯೇ ಅವರಲ್ಲೂ ಹೆಚ್ಚು ಪ್ರೇಮ ಜಾಗೃತವಾಗಿರುತಿತ್ತೋ ಏನೋ?! ಮೇಷ್ಟ್ರು, ಪ್ರೇಮದಿಂದ ಮುದಗೊಳ್ಳುವ ಅನೇಕ ನೀಲು ಪದ್ಯಗಳನ್ನು ಬರೆಯುತ್ತಿದ್ದದ್ದು ಇದೇ ಸೀಸನ್ನಿನಲ್ಲಿ..!!
ಹೀಗೇ.. ಇದೇ ಮನಸ್ಥಿತಿಯಲ್ಲಿ ಕುಂತು ಯೋಚಿಸುತಿದ್ದಾಗ ಹಿಂದಿನ ನೆನಪಿನ ಗುಂಗಿಗೆ ಬಿದ್ದೆ!, ಮೇಷ್ಟ್ರೇ ಖುದ್ದು ಬಂದು ಮತ್ತೇ ನೀಲು ಕವನಗಳನ್ನು ಓದಿಸತೊಡಗಿದರು!?
ಡಿಸೆಂಬರ್ ಚಳಿ, ಪ್ರೇಮ ವಿರಹಗಳ ಬಗೆಗಿನ ಒಂದಷ್ಟು ನೀಲು ಪದ್ಯಗಳನ್ನು ಓದಿದಂತೆಲ್ಲಾ ಹಿಂದಿನ ಒಂದಷ್ಟು ರೊಮ್ಯಾಂಟಿಕ್ ದಿನಗಳು ನೆನಪಾಗಿ ಇನ್ನಷ್ಟು ಕನಸುಗಳು ಗರಿಗೆದರಿದವು..!
ನಿಮಗಾಗಿ ಒಂದಷ್ಟು ನೀಲು ಪದ್ಯಗಳನ್ನು ಹೆಕ್ಕಿ ಇಲ್ಲಿ ಹಂಚಿಕೊಂಡಿದ್ದೇನೆ… ಓದಿ, ಡಿಸೆಂಬರ್ ಚಳಿಯನ್ನು ಅನುಭವಿಸುತ್ತಾ, ನಿಮ್ಮಲ್ಲೂ ಕನಸುಗಳಿದ್ದರೆ ಅವಕ್ಕೆ ರೆಕ್ಕೆ ಜೋಡಿಸುತ್ತಾ ಎಂಜಾಯ್ ಮಾಡಿ..!!
– ಸಿ.ಎಸ್.ದ್ವಾರಕಾನಾಥ್
ಡಿಸೆಂಬರ್,
ಚಳಿ ಮತ್ತು ನೀಲು…
————————–
ಡಿಸೆಂಬರ್ ಬಂತೆಂದರೆ
ಬೆಂಗಳೂರ ಮೋಹಿನಿಯರಿಗೆ
ಗಂಡುಗಳ
ಉಣ್ಣೆ ಉಡುಪು
ಪ್ರೇಮಗೀತೆಯಂತೆ
ಕಾಣುತ್ತದೆ
—–
ಈ ಚಳಿಯ ಎದುರಿಸಲು
ಪಶುಪಕ್ಷಿಗಳಿಗೆ
ರೋಮ, ರೆಕ್ಕೆ ಕೊಟ್ಟ ದೇವರು
ಮನುಷ್ಯನಿಗೆ
ಪ್ರೇಮವನ್ನಾದರೂ ಕೊಡದಿದ್ದರೆ
ಅವನನ್ನು
ಹೇಗೆ ದೇವರೆನ್ನುವುದು?
——-
ಕೊರೆವ ಚಳಿಯಲ್ಲಿ ಬಡ ಕಪ್ಪು ಹುಡುಗ
ಲಾಲ್ ಬಾಗ್ ಮರದೊಳಗೆ
ಅವಿತಿದ್ದ ನೋಡಿ
ಕೊಂಬೆಯ ಕಟ್ಟಿರುವೆ
ಅವನ್ನ ಕಚ್ಚಲಾರದೆ ಕಣ್ಣೀರುಗರೆಯಿತು
——-
ಪ್ರೇಮವಿಲ್ಲದ ಸುಬ್ಬು ಬೆಂಗಳೂರ ಚಳಿಯಲ್ಲಿ
ಬ್ರಿಗೇಡ್ ರೋಡಲ್ಲಿ ತಳಕುಹಾಕಿ ನಡೆವ
ಪ್ರೇಮಿಗಳ ಹಿಂದೆ ಬೆಚ್ಚಗೆ ನಡೆದ
——-
‘ಮಂಜು’ ಎಂಬ ನನ್ನ ಬೆಕ್ಕು
ತೊಡೆಯಲ್ಲಿ ಬೆಚ್ಚಗೆ
ಕೂತಿದ್ದಾಗ
ಅದೇಕೋ ಜೀವ ನಚ್ಚಗೆ
———
ಕಳೆದ ಐವತೊಂಬತ್ತು ಚಳಿಗಾಲ
ನಲ್ಲೆಯೊಂದಿಗೆ
ಕೆಂಪು ತೋಟದಲ್ಲಿ ನಡೆಯುತ್ತಿದ್ದ ಮುದುಕ
ಈ ಸಲ ಗೆಳತಿಯಿಲ್ಲದೆ
ಒಬ್ಬಂಟಿ ಕೂತು
ಕಂಬಳಿ ಹೊದ್ದು ಷಟ್ಯಬ್ದಿ ಆಚರಿಸಿದರು
———
ಚಳಿಗೆ ಕನಸುಗಳು ಅಲ್ಲಾಡಿದೊಡನೆ
ಸ್ವೆಟರ್ ಕೊಂಡ ನಮ್ಮ ಕೇರಿಯ ಭಗವತಿ
ತೋಟದ ನಡುವೆ ತುಂಟ ನಗುವ ರಘುಪತಿಯಿಂದ ಬೆಚ್ಚಗಾಗಿ
ಸ್ವೆಟರನ್ನು ಅಟ್ಟಕ್ಕೆ ಎಸೆದು ಕನಸಿದಳು
———
ಮನುಷ್ಯದ್ವೇಷಿ ಶೆಟ್ಟರು ಮೊನ್ನೆ
ಕಡುಚಳಿಯಲ್ಲಿ
ಅರಳಿದ ಕೆಂಪು ಗುಲಾಬಿ ಕಂಡು
ಕರುಣೆಗೊಂಡು ಕಂಬಳಿ ಹೊದಿಸಿದ್ದಾರೆ,
ಲಾಲ್ ಬಾಗ್ ಹೂದೋಟಕ್ಕೆ
ಹೋಗಿ ನೋಡಿ
———
ನಾನು ಬಲ್ಲವಳೊಬ್ಬಳು
ಚಳಿಗೆ
ಕಂಬಳಿ ಕೊಳ್ಳುವ ಬದಲು
ಪ್ರೇಮಿಗಾಗಿ ಹುಡುಕಾಡಿದ್ದು
ಈ ಕವನದ ವಸ್ತು
———-
ಎರಡು ವರ್ಷಗಳ ಹಿಂದೆಯೂ
ಹೀಗೆಯೇ ಚಳಿ
ಬಡವಿಯ ಗುಡಿಸಲಿಂದ
ಪ್ರೇಮದ ನರಲಾಟವಾಗಿ
ಬಂದದ್ದು ನೆನಪಾಗುತ್ತಿದೆ.
