Home ದೇಶ ಒಡಿಶಾದಲ್ಲಿ ಭೀಕರ ಎನ್‌ಕೌಂಟರ್: ಅಗ್ರನಾಯಕ ಗಣೇಶ್ ಯುಯಿಕೇ ಸೇರಿದಂತೆ ಆರು ಮಾವೋಯಿಸ್ಟ್‌ಗಳ ಸಾವು

ಒಡಿಶಾದಲ್ಲಿ ಭೀಕರ ಎನ್‌ಕೌಂಟರ್: ಅಗ್ರನಾಯಕ ಗಣೇಶ್ ಯುಯಿಕೇ ಸೇರಿದಂತೆ ಆರು ಮಾವೋಯಿಸ್ಟ್‌ಗಳ ಸಾವು

0

ಭುವನೇಶ್ವರ: ಮಾವೋಯಿಸ್ಟ್ ಮುಕ್ತ ದೇಶವೇ ಗುರಿಯಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ‘ಆಪರೇಷನ್ ಕಗಾರ್’ ಯೋಜನೆಯ ಭಾಗವಾಗಿ ಒಡಿಶಾದ ಕಾಡುಗಳು ಮತ್ತೊಮ್ಮೆ ರಕ್ತಸಿಕ್ತವಾಗಿವೆ. ಕಂಧಮಾಲ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಮಾವೋಯಿಸ್ಟ್‌ಗಳ ನಡುವೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಆರು ಮಂದಿ ಮಾವೋಯಿಸ್ಟ್‌ಗಳು ಹತರಾಗಿದ್ದಾರೆ.

ಮೃತರ ಪೈಕಿ ಮಾವೋಯಿಸ್ಟ್ ಪಕ್ಷದ ಕೇಂದ್ರ ಸಮಿತಿ ಸದಸ್ಯ ಮತ್ತು ಒಡಿಶಾ ಕಾರ್ಯಾಚರಣೆಯ ಉಸ್ತುವಾರಿ ಗಣೇಶ್ ಯುಯಿಕೇ (69) ಇರುವುದು ಗಮನಾರ್ಹ.

ಒಡಿಶಾ-ಛತ್ತೀಸ್‌ಗಢ ಗಡಿಯ ಬೆಲ್ಘರ್ ಪೊಲೀಸ್ ಠಾಣೆ ವ್ಯಾಪ್ತಿಯ ಗುಮ್ಮಾ ಅರಣ್ಯ ಪ್ರದೇಶದಲ್ಲಿ ಮಾವೋಯಿಸ್ಟ್‌ಗಳ ಸಂಚಾರವಿದೆ ಎಂಬ ಗುಪ್ತಚರ ಮಾಹಿತಿಯ ಮೇರೆಗೆ ಸ್ಪೆಷಲ್ ಆಪರೇಷನ್ ಗ್ರೂಪ್ (SOG), ಸಿಆರ್‌ಪಿಎಫ್ (CRPF) ಮತ್ತು ಬಿಎಸ್‌ಎಫ್ (BSF) ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿದ್ದವು.

ಒಟ್ಟು 23 ತಂಡಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು. ಮಂಗಳವಾರ ಆರಂಭವಾದ ಈ ಗುಂಡಿನ ಚಕಮಕಿಯು ಗುರುವಾರ ಮುಂಜಾನೆಯವರೆಗೆ ಮುಂದುವರಿದಿತ್ತು. ಘಟನಾ ಸ್ಥಳದಿಂದ ಆರು ಮೃತದೇಹಗಳ ಜೊತೆಗೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೃತರ ಪೈಕಿ ಗಣೇಶ್ ಯುಯಿಕೇ ಜೊತೆಗೆ ರಾಯಗಡ ಏರಿಯಾ ಕಮಿಟಿ ಸದಸ್ಯ ಬಾರಿ (ಅಲಿಯಾಸ್ ರಾಕೇಶ್) ಮತ್ತು ಅಮೃತ್ ಎಂಬ ಮಾವೋಯಿಸ್ಟ್‌ಗಳನ್ನು ಪೊಲೀಸರು ಗುರುತಿಸಿದ್ದಾರೆ. ಉಳಿದವರ ವಿವರಗಳು ಇನ್ನಷ್ಟೇ ತಿಳಿಯಬೇಕಿದೆ. ಗಣೇಶ್ ಯುಯಿಕೇ ಅವರ ತಲೆಯ ಮೇಲೆ 1.1 ಕೋಟಿ ರೂಪಾಯಿಗಳ ಭಾರಿ ಬಹುಮಾನವಿತ್ತು. ಹಾಗೆಯೇ ಬಾರಿ ಅವರ ಮೇಲೆ 22 ಲಕ್ಷ ರೂ. ಮತ್ತು ಅಮೃತ್ ಮೇಲೆ 1.65 ಲಕ್ಷ ರೂ. ಬಹುಮಾನವಿತ್ತು. ಗಣೇಶ್ ಅವರ ಸಾವು ಮಾವೋಯಿಸ್ಟ್ ಪಕ್ಷಕ್ಕೆ ದೊಡ್ಡ ಹೊಡೆತ ಎಂದು ಅಧಿಕಾರಿಗಳು ಭಾವಿಸಿದ್ದಾರೆ.

ಗಣೇಶ್ ಅವರ ಮೂಲಸ್ಥಳ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಚಂಡೂರು ಮಂಡಲದ ಪುಲ್ಲೇಮ್ಲ ಗ್ರಾಮ. ನಿಷೇಧಿತ ಮಾವೋಯಿಸ್ಟ್ ಪಕ್ಷದ ಅತ್ಯಂತ ನಿರ್ಣಾಯಕವಾದ ಕೇಂದ್ರ ಸಮಿತಿಯಲ್ಲಿ ಸಕ್ರಿಯರಾಗಿದ್ದ ಬೆರಳೆಣಿಕೆಯಷ್ಟು ಸದಸ್ಯರಲ್ಲಿ ಇವರೂ ಒಬ್ಬರಾಗಿದ್ದರು. ಒಂದು ಕಾಲದಲ್ಲಿ 21 ಸದಸ್ಯರನ್ನು ಹೊಂದಿದ್ದ ಕೇಂದ್ರ ಸಮಿತಿಯು, ಸತತ ಕಾರ್ಯಾಚರಣೆಗಳ ಪರಿಣಾಮವಾಗಿ ಈಗ ಐದಕ್ಕಿಂತ ಕಡಿಮೆ ಸಂಖ್ಯೆಗೆ ಕುಸಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಎನ್‌ಕೌಂಟರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ‘ಎಕ್ಸ್’ (ಟ್ವಿಟ್ಟರ್) ಖಾತೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. “ಮಾವೋಯಿಸ್ಟ್ ಮುಕ್ತ ಭಾರತದ ಗುರಿಯತ್ತ ಇದು ಒಂದು ಪ್ರಮುಖ ಮೈಲಿಗಲ್ಲು. ಕಂಧಮಾಲ್ ಕಾರ್ಯಾಚರಣೆಯಲ್ಲಿ ಪ್ರಮುಖ ನಾಯಕರನ್ನು ಮಟ್ಟಹಾಕಿದ ಭದ್ರತಾ ಪಡೆಗಳಿಗೆ ಅಭಿನಂದನೆಗಳು” ಎಂದು ಅವರು ಬರೆದುಕೊಂಡಿದ್ದಾರೆ.

ಮತ್ತೊಂದೆಡೆ, ನಾಗರಿಕ ಹಕ್ಕುಗಳ ಸಂಘಟನೆಗಳು ಈ ಎನ್‌ಕೌಂಟರ್‌ಗಳ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ‘ಆಪರೇಷನ್ ಕಗಾರ್’ ಹೆಸರಿನಲ್ಲಿ ಮೋದಿ ಸರ್ಕಾರವು ಮಾವೋಯಿಸ್ಟ್‌ಗಳ ನಿರ್ಮೂಲನೆಯ ನೆಪದಲ್ಲಿ ಹಿಂಸೆಯನ್ನು ಪ್ರಚೋದಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ.

You cannot copy content of this page

Exit mobile version