‘ನಾವು ಕದನ ವಿರಾಮ ಮಾಡುವುದು ಸರಿ. ಆದರೆ ಅಮೆರಿಕದವರು ಹೇಳಿದರು ಎಂಬ ಕಾರಣಕ್ಕೆ ಯುದ್ಧ ನಿಲ್ಲಿಸುವುದು ಎಷ್ಟು ಸರಿ. ಅಮೇರಿಕಾ ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವುದು ಮತ್ತು ಅದಕ್ಕೆ ಭಾರತ ತಲೆ ಬಾಗುವುದಾದರೆ ನಮ್ಮ ಸಾರ್ವಭೌಮತ್ವ ಮತ್ತು ಅಸ್ಥಿತ್ವಕ್ಕೆ ಏನು ಬೆಲೆ’ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಬೇರೆ ದೇಶದವರು ಬಂದು ನಮ್ಮಆಂತರಿಕ ವಿಚಾರದಲ್ಲಿ ನ್ಯಾಯ ಪಂಚಾಯತಿ ಮಾಡುವುದಾದರೆ ಕಾಶ್ಮೀರ ಸಮಸ್ಯೆ ಬಗೆ ಹರಿದಂತಾಯಿತಾ? ಅಥವಾ ಮರಳಿ ಆರಂಭವಾಯಿತಾ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲದಂತಾಗಿದೆ’ ಎಂದು ಕೃಷ್ಣ ಭೈರೇಗೌಡ ವಿಜಯಪುರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಯಾವ ಉದ್ದೇಶ, ಗುರಿ ಇಟ್ಟುಕೊಂಡು ಯುದ್ಧ ಆರಂಭ ಆಯ್ತೋ ಆ ಗುರಿ ಈಡೇರಿತಾ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರವಿಲ್ಲ. ಪಾಕಿಸ್ತಾನಕ್ಕೆ ಪಾಠ ಕಲಿಸಬೇಕು ಅಂದುಕೊಂಡಿದ್ದೆವು ಆ ಪಾಠ ಈಡೇರಿತಾ? ಮೂರ್ನಾಲ್ಕು ದಿನ ಪ್ರಯತ್ನ ಮಾಡಿ ಅಲ್ಲಿಗೆ ಬಿಟ್ಟರೆ ಪಾಕಿಸ್ತಾನಕ್ಕೆ ಇನ್ನಷ್ಟು ಸಲುಗೆ ಬಿಟ್ಟಂತೆ ಆಗುತ್ತದೆ’ ಎಂದು ಹೇಳಿದ್ದಾರೆ.