ಕೋಲ್ಕತ್ತಾ: ಮಧ್ಯರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಕೋಲ್ಕತ್ತಾ ತತ್ತರಿಸಿಹೋಗಿದೆ. ನಗರದ ಹಲವು ಪ್ರದೇಶಗಳು ಮತ್ತು ದುರ್ಗಾದೇವಿ ಮಂಟಪಗಳು ನೀರಿನಲ್ಲಿ ಮುಳುಗಿವೆ.
ರಸ್ತೆಗಳೆಲ್ಲ ನದಿಗಳಂತಾಗಿದ್ದು, ಸಾವಿರಾರು ಪ್ರಯಾಣಿಕರು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಮೆಟ್ರೋ ರೈಲು ಮತ್ತು ವಿಮಾನ ಸೇವೆಗಳ ಮೇಲೆಯೂ ತೀವ್ರ ಪರಿಣಾಮ ಬೀರಿದೆ. 30 ವಿಮಾನಗಳು ರದ್ದಾಗಿದ್ದರೆ, 31ಕ್ಕೂ ಹೆಚ್ಚು ವಿಮಾನಗಳು ತಡವಾಗಿ ಸಂಚರಿಸಿವೆ. ವಿದ್ಯುತ್ ಆಘಾತಕ್ಕೆ ಒಳಗಾಗಿ ಒಂಬತ್ತು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಕಳೆದ 24 ಗಂಟೆಗಳಲ್ಲಿ 251.4 ಮಿ.ಮೀ. ಮಳೆಯಾಗಿದ್ದು, 1986ರ ನಂತರ ಇದೇ ಅತಿಹೆಚ್ಚು ಮಳೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಘೋಷಿಸಿದೆ. ಕಳೆದ 137 ವರ್ಷಗಳಲ್ಲಿ ನಗರದಲ್ಲಿ ಸುರಿದ ಆರನೇ ಅತಿ ದೊಡ್ಡ ಮಳೆ ಇದಾಗಿದೆ ಎಂದು ಇಲಾಖೆ ತಿಳಿಸಿದೆ. ಸರ್ಕಾರವು ಶಾಲೆಗಳಿಗೆ ರಜೆ ಘೋಷಿಸಿದೆ.
“ಇಂತಹ ಮಳೆಯನ್ನು ನಾವು ಎಂದಿಗೂ ನೋಡಿಲ್ಲ. ನಿರ್ವಹಣೆ ಇಲ್ಲದ ವಿದ್ಯುತ್ ತಂತಿಗಳಿಂದ ವಿದ್ಯುತ್ ಶಾಕ್‌ಗೆ ಒಳಗಾಗಿ ಕೆಲವರು ಸಾವನ್ನಪ್ಪಿರುವುದು ಅತ್ಯಂತ ದುರದೃಷ್ಟಕರ” ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಷಾದ ವ್ಯಕ್ತಪಡಿಸಿದ್ದಾರೆ.