Home ಅಂಕಣ Her Story: ಸ್ತನ ಕ್ಯಾನ್ಸರ್ ; ಎಲ್ಲೋ ದೂರದಲ್ಲಿ ಇದ್ದ ವಿಷಯ

Her Story: ಸ್ತನ ಕ್ಯಾನ್ಸರ್ ; ಎಲ್ಲೋ ದೂರದಲ್ಲಿ ಇದ್ದ ವಿಷಯ

0

ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಪ್ರತಿ ವರ್ಷ ಸುಮಾರು 2.3 ಮಿಲಿಯನ್‌ ಮಹಿಳೆಯರು ಸ್ತನ ಕ್ಯಾನ್ಸರ್‌ ನಿಂದ ಬಳಲುತ್ತಾರೆ ಜೊತೆಗೆ, ಶೇಕಡಾ 95 ರಾಷ್ಟ್ರಗಳಲ್ಲಿ ಮಹಿಳೆಯರ ಸಾವಿಗೆ ಸ್ತನ ಕ್ಯಾನ್ಸರ್‌ ಮೊದಲನೆಯ ಅಥವಾ ಎರಡನೆಯ ಮುಖ್ಯ ಕಾರಣವಾಗಿದೆ.

ಅಕ್ಟೋಬರ್‌ ತಿಂಗಳನ್ನು ಸ್ತನ ಕ್ಯಾನ್ಸರ್‌ ಜಾಗೃತಿ ಮಾಸಾಚರಣೆಯೆಂದು ಗುರುತಿಸಲಾಗುತ್ತದೆ. ವೈದ್ಯಕೀಯವಾಗಿ ಸ್ತನ ಕ್ಯಾನ್ಸರ್‌ ಗೆ ವಯಸ್ಸು, ಗರ್ಭಧಾರಣೆ, ಜೀವನ ಶೈಲಿ, ಮುಂತಾದ ಬೇರೆ ಬೇರೆ ಕಾರಣಗಳಿಲ್ಲದಿದ್ದರೂ, ಎಲ್ಲೋ ದೂರದಲ್ಲಿ ಇದ್ದ ಪ್ರಕರಣಗಳು ಈಗ ಬಹುಪಾಲು ನಮ್ಮ ಸುತ್ತಲಿನವರಿಗೇ ಬಂದಿತ್ತು ಎನ್ನುವಷ್ಟು ಹತ್ತಿರವಾಗುತ್ತಿದೆ.

ಮಧ್ಯಮ, ಕೆಳ ಮಧ್ಯಮ ವರ್ಗದವರಿಗೆ ಕ್ಯಾನ್ಸರ್‌ ಯಾವುದೇ ಆಗಲಿ, ಅದೊಂದು ಮದ್ದಿಲ್ಲದ ರೋಗ. ಅದಕ್ಕೆ ಔಷಧಿಯಿದ್ದರೂ ಅದನ್ನು ನಾವು ಕೊಂಡುಕೊಳ್ಳಲಾದಷ್ಟು ದುಬಾರಿ, ನಮ್ಮ ಮಿತಿಮೀರಿ ಖರ್ಚು ಮಾಡಿ ಬದುಕಿದರೆ ದಿನಾ ಸಾಯುವ ಅಗತ್ಯವಿದೆ, ಹಾಗಾಗಿ ಒಂದೇ ಸಲ ಸಾಯೋದು ವಾಸಿ ಎನಿಸುವಷ್ಟು ಹೆಚ್ಚಿನ ಚಿಕಿತ್ಸೆ, ಖರ್ಚು ವೆಚ್ಚ ಎಲ್ಲವನ್ನೂ ಅಪೇಕ್ಷಿಸುವ ಖಾಯಿಲೆ ಕ್ಯಾನ್ಸರ್.‌

ಪುರುಷರಲ್ಲಿ ಇಂತಹಾ ಖಾಯಿಲೆಗಳು ಬಂದಾಗ ಆಗುವುದಕ್ಕಿಂತ ತುಸು ವಿಭಿನ್ನವಾದ ಒತ್ತಡ ಮಹಿಳೆಯರದು. ಮನೆಯಲ್ಲಿ ದುಡಿಯುವ ಕೈಗಳನ್ನು ಕಟ್ಟಿಹಾಕಿದಾಗ ಆಗುವ ಒತ್ತಡದಿಂದ ಮೊದ ಮೊದಲಿನ ಲಕ್ಷಣಗಳನ್ನು ಗುರುತಿಸಿಕೊಳ್ಳದವರೇ ಹೆಚ್ಚು. ಯಾವ ಮಧ್ಯಮ, ಕೆಳ ಮಧ್ಯಮ ವರ್ಗದವರೂ ಇನ್ನು ಸಹಿಸಲು ಸಾಧ್ಯವೇ ಇಲ್ಲ ಎನ್ನುವವರೆಗೂ ವೈದ್ಯರ ಬಳಿಯಾಗಲೀ, ಪರೀಕ್ಷೆ ಮಾಡಿಸೋಣ ಎಂದಾಗಲೀ ಹೊರಡುವುದೇ ಇಲ್ಲ.

ರೋಗಗಳ ಕುರಿತು ಜಾಗೃತಿ ಇಲ್ಲದೇ ಇರುವುದು ಇದರ ಒಂದು ಮುಖ್ಯ ಕಾರಣವಾದರೆ, ಒಮ್ಮೆ ಒಳಗೆ ಕಾಲಿಟ್ಟರೆ ರಕ್ತ ಹೀರಲೆಂದೇ ಸಿದ್ಧವಾಗಿ ನಿಲಲುವ ಮೆಡಿಕಲ್‌ ಮಾಫಿಯಾ ಇನ್ನೊಂದೆಡೆ. ಒಂದು ಸಣ್ಣ ಜ್ವರಕ್ಕೂ ಒಬ್ಬ ವೈದ್ಯರು ಒಂದು ಲ್ಯಾಬ್‌ ಗೆ ಕಳಿಸುತ್ತಾರೆ, ಅದೇ ಕಡೆಯೇ ಹೋಗಬೇಕು, ಅಲ್ಲಿಂದ ಮತ್ತೊಂದು ಕಡೆ, ಅಲ್ಲಿಂದ ಇನ್ಯಾವುದೋ ಆಸ್ಪತ್ರೆ, ಅಲ್ಲಿನ ಬೇರೆ ಬೇರೆ ಡಿಪಾರ್ಟ್‌ ಮೆಂಟ ಗಳು. ಕಮಿಷನ್‌ ಪ್ರತಿ ಕಡೆಯೂ ಸರಿಯಾಗಿ ಹಂಚಿ ಹೋಗುವ ಹೊತ್ತಿಗೆ ರೋಗಿಯ ಮೃತದೇಹ ತರೋದಕ್ಕೂ ಮನೆಯವರ ಬಳಿ ಬಿಡಿಗಾಸು ಉಳಿದಿರೋದಿಲ್ಲ.

ನನ್ನ ತಾಯಿಗೊಮ್ಮೆ ಕಣ್ಣಿನ ಒಳಭಾಗದಲ್ಲಿ ನೋವು ಶುರುವಾಗಿತ್ತು. ಕಣ್ಣಿನ ಪರೀಕ್ಷೆಯಿಂದ ನೇರವಾಗಿ ಮೆದುಳಿನ ಪರೀಕ್ಷೆ ಮಾಡಿಸಿದರು, ಅಲ್ಲಿಂದ ಕಾರ್ಡಿಯಾಲಜಿ ಅಂದರು. ಕೊನೆಗೆ ಎಲ್ಲೆಲ್ಲೋ ಅಲೆದು ಬಂದಾಗ ಯಾರೋ ಡಾಕ್ಟರ್‌, ಏನಿಲ್ಲ ಜನರಲ್‌ ವೀಕ್ನೆಸ್‌, ಊಟ ತಿಂಡಿ, ನಿದ್ದೆ ಸರಿಯಾಗಿ ಮಾಡಿ ಅಂದು ಕಳಿಸಿದರು. ಇಂತಹಾ ಅನುಭವಗಳಿಲ್ಲದ ಮನೆ ಸಾವಿಲ್ಲದ ಮನೆಯ ಸಾಸಿವೆಯ ಹಾಗೆ. ಪ್ರತಿಯೊಬ್ಬರೂ ಈ ಮೆಡಿಕಲ್‌ ಮಾಫಿಯಾಗೆ ತುತ್ತಾದವರೇ. ಅದೃಷ್ಟವಂತರಿಗೆ ಅನುಭವ ಮಾತ್ರ ಆಗಿರುತ್ತದೆ. ಇನ್ನೆಷ್ಟೋ ಜನರು ಮನೆಯವರನ್ನೇ ಕಳೆದುಕೊಂಡಿರುತ್ತಾರೆ.

ಇಂತಹ ಅನುಭವಗಳಿಂದಾಗಿ ಸಣ್ಣ ಪುಟ್ಟ ಪ್ರಾಥಮಿಕ ಲಕ್ಷಣಗಳನ್ನು ಯಾರೂ ಯಾವತ್ತೂ ಗುರುತಿಸೋ ಧೈರ್ಯ ಮಾಡುವುದೇ ಇಲ್ಲ. ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ ಜೊತೆಗೆ ಗರ್ಭಾಶಯದ ಕ್ಯಾನ್ಸರ್‌, ಗರ್ಭ ಕಂಠದ ಕ್ಯಾನ್ಸರ್‌ ಇವುಗಳ ಲಕ್ಷಣಗಳನ್ನು ಮೊದ ಮೊದಲೇ ಹೇಳುತ್ತಾ ಕೂತರೆ, ಸಣ್ಣಪುಟ್ಟದಕ್ಕೂ ಓವರ್‌ ಥಿಂಕ್‌ ಮಾಡ್ತೀ, ಅಂತದ್ದೇನೂ ಆಗಿರೋದಿಲ್ಲ ಎನ್ನುವ ಮಾತುಗಳೇ ಮೊದಲು ಕೇಳಿಬರೋದು. ಇನ್ಯಾವತ್ತೋ ವಿಧಿಯಿಲ್ಲದೇ ಪರೀಕ್ಷೆ ಮಾಡಿಸೋ ಹೊತ್ತಿಗೆ ಸಮಯ ಕೈಮೀರಿ ಹೋಗಿರುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಪ್ರತಿ ವರ್ಷ ಸುಮಾರು 2.3 ಮಿಲಿಯನ್‌ ಮಹಿಳೆಯರು ಸ್ತನ ಕ್ಯಾನ್ಸರ್‌ ನಿಂದ ಬಳಲುತ್ತಾರೆ ಜೊತೆಗೆ, ಶೇಕಡಾ 95 ರಾಷ್ಟ್ರಗಳಲ್ಲಿ ಮಹಿಳೆಯರ ಸಾವಿಗೆ ಸ್ತನ ಕ್ಯಾನ್ಸರ್‌ ಮೊದಲನೆಯ ಅಥವಾ ಎರಡನೆಯ ಮುಖ್ಯ ಕಾರಣವಾಗಿದೆ. 2022ನೇ ಸಾಲಿನಲ್ಲಿ ಸುಮಾರು ಒಂದು ಲಕ್ಷ ಮಹಿಳೆಯರು ಭಾರತದಲ್ಲಿ ಸ್ತನ ಕ್ಯಾನ್ಸರ್‌ ಗೆ ಬಲಿಯಾಗಿದ್ದಾರೆ ಎಂದು ಅಂಕಿ ಅಂಶ ಗಳು ತಿಳಿಸುತ್ತವೆ..
ಸ್ತನ ಕ್ಯಾನ್ಸರ್‌ ನಂತಹಾ ಸಮಸ್ಯೆಗಳು ಮಹಿಳೆಯ ದೈಹಿಕ ಆರೋಗ್ಯ ಮಾತ್ರವಲ್ಲದೇ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ನೂರಾರು ವರ್ಷಗಳಿಂದ ಸಮಾಜದ ಕಣ್ಣಿಗೆ ಮಹಿಳೆ ಅನ್ನುವವಳು ತಾಯಿ. ಅವಳು ಎದೆಹಾಲುಣಿಸಬೇಕು, ಗರ್ಭ ಧರಿಸಬೇಕು, ತಾಯ್ತನವೇ ಅವಳ ಜೀವನದ ಪರಮೋಚ್ಛ ಗುರಿ. ಅದನ್ನು ಪೂರೈಸಲು ಸಾಧ್ಯವಿಲ್ಲದಿದ್ದರೆ ಆಕೆಯ ಬದುಕಿಗೆ ಅರ್ಥವೇ ಇಲ್ಲ ಎನ್ನುವುದನ್ನೇ ಸದಾ ತಲೆಗೆ ತುಂಬಿರುವುದು. ಹಾಗಿರುವಾಗ ತನ್ನ ದೇಹದ ಮಾತ್ರವಲ್ಲ, ಬದುಕಿನ ಅತಿದೊಡ್ಡ ಭಾಗವಾದ ಸ್ತನವನ್ನೇ ಕತ್ತರಿಸಿ ತೆಗೆಯಬೇಕು ಅನ್ನೋದು ಹೆಣ್ಣಿಗೆ ತನ್ನ ಐಡೆಂಟಿಟಿಯನ್ನೇ ಕತ್ತರಿಸಿ ತೆಗೆದು ಹಾಕಿದ ಮಟ್ಟಿಗೆ ಆಘಾತಕ್ಕೊಳಪಡಿಸುತ್ತದೆ. ತನ್ನ ಅಂದ ಚಂದದಿಂದ ಹಿಡಿದು, ತನ್ನ ಗುರುತೇ ಆಗಿರುವ ತನ್ನ ಮೊಲೆಗಳನ್ನು ಅಥವಾ ಗರ್ಭಾಶಯವನ್ನು ತೆಗೆದು ಹಾಕಿದರೆ ಇನ್ನು ತಾನೇನು ಎನ್ನುವ ಸಮಾಜ ಹೇರುವ ಗಿಲ್ಟ್‌ ನ ಭಾರವನ್ನು ಆಕೆ ಹೊರುತ್ತಲೇ ಹೋಗುತ್ತಾಳೆ.

ಇದಕ್ಕೆ ಸಂಬಂಧಿಸಿದ ತಪ್ಪು ತಿಳಿವಳಿಕೆಗಳನ್ನು ಹೋಗಲಾಡಿಸುತ್ತಲೇ, ಮಹಿಳೆಗೆ ತನ್ನನ್ನು ತಾನು ಪರೀಕ್ಷಿಸಿಕೊಳ್ಳುವುದು, ದೇಹದಲ್ಲಿ ಬದಲಾವಣೆಗಳಾದರೆ ತಕ್ಷಣವೇ ಅದನ್ನು ವೈದ್ಯರ ಗಮನಕ್ಕೆ ತಂದು ಅನುಮಾನ ಪರಿಹರಿಸಿಕೊಳ್ಳುವುದು ಈ ಎಲ್ಲದರ ಕುರಿತೂ ಜಾಗೃತಿ ಮೂಡಿಸುವ ಕೆಲಸಗಳು ಬಹಳಷ್ಟು ಆಗಬೇಕಾಗಿವೆ.
ಸ್ವಲ್ಪ ಸಮಯದ ಹಿಂದಷ್ಟೇ ನಟಿಯೊಬ್ಬಳು ಗರ್ಭಕಂಠದ ಕ್ಯಾನ್ಸರ್‌ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಒಂದು ಪ್ರಾಂಕ್‌ ಮಾಡಿದ್ದು ಸುದ್ದಿಯಾಗಿತ್ತು. ಆಗ ಇದ್ದಕಕಿದ್ದಂತೆ ಸರ್ವಿಕಲ್‌ ಕ್ಯಾನ್ಸರ್‌, ಓವರಿಯನ್‌ ಕ್ಯಾನ್ಸರ್‌ ಕುರಿತು ಮಾತುಕತೆಗಳು ಶುರುವಾದವು. ಕೆಲವು ಕ್ಯಾನ್ಸರ್‌ ಗಳಿಗೆ ಲಸಿಕೆಯಿದೆ ಎನ್ನುವ ಮಾತು ಒಂದಿಷ್ಟು ಕಡೆ ಬಂತು ಹೊರತಾಗಿ ಎಲ್ಲಿ ಏನು ಎನ್ನುವುದರ ಕುರಿತಾಗಿ ಎಲ್ಲೂ ಸುದ್ದಿಯಾಗಲಿಲ್ಲ.

ಭಾರತದಲ್ಲಿ ಕ್ಯಾನ್ಸರ್‌ ನಿಂದ ಶೇ% 60 ರಷ್ಟು ಜನರು ಮಾತ್ರ ಬದುಕುಳಿಯುತ್ತಿದ್ದಾರೆ ಎಂದು ಅಧ್ಯಯನಗಳು ಹೇಳುತ್ತವೆ. ಇದಕ್ಕೆ ಮುಖ್ಯ ಕಾರಣ ಜಾಗೃತಿಯಿಲ್ಲದಿರುವುದು ಮತ್ತು ಕಡಿಮೆ ವೆಚ್ಚದಲ್ಲಿ, ಜನಕ್ಕೆ ದೊರೆಯುವಂತೆ ಅವುಗಳ ಪತ್ತೆಹಚ್ಚುವಿಕೆ ಮತ್ತು ಚಿಕಿತ್ಸೆ ದೊರೆಯದೇ ಇರುವುದು.

ಸರ್ಕಾರ ಪಂಚಾಯತ್‌ ರಾಜ್‌ ಸಂಸ್ಥೆಗಳ ಮೂಲಕ ಗ್ರಾಮಗಳಲ್ಲಿ ಗ್ರಾಮಿಣ ಜನರಿಗೆ, ಕೂಲಿಕಾರರಿಗಾಗಿ ಗ್ರಾಮ ಆರೋಗ್ಯದಂತಹ ಅಭಿಯಾನಗಳನ್ನು ಆಯೋಜಿಸುತ್ತಿದೆ. ಇಂತಹ ಕಾರ್ಯಕ್ರಮಗಳಲ್ಲಿ ಕ್ಷಯರೋಗ, ಮಧುಮೇಹದಂತಹ ಕಾಯಿಲೆಗಳ ಕುರಿತು ಪರೀಕ್ಷೆ ಮತ್ತು ಜಾಗೃತಿ ಮೂಡಿಸುವುದರ ಜೊತೆಗೆ ಸ್ತನ ಕ್ಯಾನ್ಸರ್‌ನಂತಹ ಕಾಯಿಲೆಗಳ ಕುರಿತು ಪರೀಕ್ಷೆ ನಡೆಸುವ ಸೌಲಭ್ಯಗಳನ್ನೂ ಒದಗಿಸಬೇಕು. ಆಶಾ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮಹಿಳೆಯರಿಗೆ ತಮ್ಮನ್ನು ತಾವು ಯಾವುದೇ ಮುಜುಗರವಿಲ್ಲದೇ ಪರೀಕ್ಷಿಸಿಕೊಳ್ಳುವ ಕುರಿತು ಮಾಹಿತಿ ಮತ್ತು ಜಾಗೃತಿ ಮೂಡಿಸುವ ಅಗತ್ಯ ಹೆಚ್ಚಾಗಿಯೇ ಇದೆ.
ಎಲ್ಲಕ್ಕಿಂತ ಮುಖ್ಯವಾಗಿ, ನಮ್ಮ ದೇಹದ ಯಾವುದೇ ಭಾಗವೂ ನಮ್ಮ ಐಡೆಂಟಿಟಿಯಲ್ಲ, ಅದನ್ನು ಮೀರಿದ್ದು ನಮ್ಮ ವ್ಯಕ್ತಿತ್ವ, ಒಂದಿಷ್ಟು ದೈಹಿಕ ಬದಲಾವಣೆಗಳಾದಾಗ ಇನ್ನಷ್ಟು ಗಟ್ಟಿಯಾಗಿ ನಾವು ನಿಲ್ಲಬೇಕು ಎನ್ನುವುದು ಅರಿವಿಗಿಳಿಯಬೇಕು.

You cannot copy content of this page

Exit mobile version