ಬೆಂಗಳೂರು : ರಾಜ್ಯದಲ್ಲಿ ಓಲಾ, ಉಬರ್ ಮತ್ತು ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆಯನ್ನು ಜೂ.15ರವರೆಗೆ ಮುಂದುವರಿಸಲು ಅನುಮತಿ ನೀಡಿ ಕರ್ನಾಟಕ ಹೈಕೋರ್ಟ್ ಇಂದು ಆದೇಶ ಹೊರಡಿಸಿದೆ.
ಬೈಕ್ ಟ್ಯಾಕ್ಸಿ ಸೇವೆ ಮುಂದುವರಿಸುವಂತೆ ಕೋರಿ ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್, ರೊಪ್ಪೆನ್ ಟ್ರಾನ್ಸ್‌ಪೋರ್ಟೇಶನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ & ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾ.ಬಿ.ಎಂ.ಶ್ಯಾಮಪ್ರಸಾದ್ ಅವರ ಏಕಸದಸ್ಯ ಪೀಠದಲ್ಲಿ ಇಂದು ವಿಚಾರಣೆ ನಡೆದಿದ್ದು, ಈ ಅರ್ಜಿಯನ್ನು ಕೋರ್ಟ್ ಪುರಸ್ಕರಿಸಿದೆ.
ಮುಂದಿನ 6 ವಾರದೊಳಗೆ ಬೈಕ್ ಟ್ಯಾಕ್ಸಿ ಸೇವೆಯನ್ನು ನಿರ್ಬಂಧಿಸುವಂತೆ ಓಲಾ, ಉಬರ್, ರ‍್ಯಾಪಿಡೋ ಸಂಸ್ಥೆಗಳಿಗೆ ಹೈಕೋರ್ಟ್ ಗಡುವು ನೀಡಿತ್ತು. 6 ವಾರಗಳ ನಂತರ ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಖಚಿತಪಡಿಸುವಂತೆ ರಾಜ್ಯ ಸರ್ಕಾರಕ್ಕೂ ಕೋರ್ಟ್ ನಿರ್ದೇಶಿಸಿತ್ತು.
ಮೋಟಾರ್ ವಾಹನ ಕಾಯ್ದೆ 1988 ಸೆಕ್ಷನ್ 3 ಅಡಿಯಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಸರ್ಕಾರ ಸೂಕ್ತ ಮಾರ್ಗಸೂಚಿ ಹೊರಡಿಸಬೇಕು. ಅಲ್ಲಿಯತನಕ ಬೈಕ್ ಟ್ಯಾಕ್ಸಿ ಸೇವೆಗೆ ಅವಕಾಶ ಇಲ್ಲವೆಂದು ಏ.2ರಂದು ಹೈಕೋರ್ಟ್ ಆದೇಶಿಸಿತ್ತು. ಕೋರ್ಟ್ ಆದೇಶವನ್ನು ಪಾಲಿಸುವಂತೆ ಮೊನ್ನೆಯಷ್ಟೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಇಲಾಖೆಗೆ ಸೂಚನೆ ನೀಡಿದ್ದರು.