ಮಂಗಳೂರು ನಗರದ ಹೊರವಲಯದ ಕುಡುಪು ಸಮೀಪ ಭಾನುವಾರ ವ್ಯಕ್ತಿಯೊಬ್ಬನನ್ನು ಅಂದಾಜು 30 ಕ್ಕೂ ಹೆಚ್ಚು ಮಂದಿ ಸೇರಿ ಹತ್ಯೆ ಮಾಡಿದ್ದು ಧೃಡವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ. ಈ ಸಂಬಂಧ ಈಗಾಗಲೇ 15 ಮಂದಿಯನ್ನು ಬಂಧಿಸಲಾಗಿದ್ದು, ಘಟನೆ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಭಾನುವಾರ ಮಧ್ಯಾಹ್ನ ಸುಮಾರು 3 ಗಂಟೆಯ ಹೊತ್ತಿಗೆ ಭಟ್ರ ಕಲ್ಲುರ್ಟಿ ದೈವಸ್ಥಾನದ ಬಳಿಯ ಮೈದಾನದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾವಳಿಯ ಸಂದರ್ಭದಲ್ಲಿ ಮೃತ ವ್ಯಕ್ತಿಯ ಜೊತೆಗಿನ ವಾಗ್ವಾದದಲ್ಲಿ ಸ್ಥಳೀಯ ನಿವಾಸಿ ಸಚಿನ್ ಟಿ. ಎಂಬಾತ ಜಗಳಕ್ಕೆ ಮುಂದಾಗಿದ್ದಾನೆ. ಆ ಜಗಳ ಒಂದು ಹಂತ ಮೀರಿದಾಗ ಅಲ್ಲಿ ನೆರೆದಿದ್ದ 30 ಕ್ಕೂ ಹೆಚ್ಚು ಮಂದಿ ಒಂದೇ ಬಾರಿಗೆ ಆತನ ಮೇಲೆ ಮುಗಿ ಬಿದ್ದಿದ್ದಾರೆ. ಕಲ್ಲು, ಕಟ್ಟಿಗೆ, ಕ್ರಿಕೆಟ್ ಬ್ಯಾಟ್ ಮೂಲಕ ಹಲ್ಲೆ ನಡೆಸಲಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್, ಮೃತ ವ್ಯಕ್ತಿಯ ಬೆನ್ನಿನ ಭಾಗ ಮತ್ತು ಗುಪ್ತಾಂಗಕ್ಕೆ ಬಲವಾದ ಹೊಡೆತದ ಪರಿಣಾಮ ತೀವ್ರ ರಕ್ತಸ್ರಾವ, ಶಾಕ್ ಮತ್ತು ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ವ್ಯಕ್ತಿ ಸಾವನ್ನಪ್ಪಿರುವುದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ.
“ಗುಂಪು ಘರ್ಷಣೆಯಲ್ಲಿ ಕೆಲವರು ತಡೆಯಲು ಯತ್ನಿಸಿದರೂ ಗಲಾಟೆ ತೀವ್ರವಾಗಿ ಇದ್ದ ಪರಿಣಾಮ ಅಪರಿಚಿತ ವ್ಯಕ್ತಿ ಮೃತಪಟ್ಟಿರುವುದು ಕಂಡುಬಂದಿದೆ. ಹಾಗೆಯೇ ಗುಂಪು ಹಲ್ಲೆಯಲ್ಲಿ ಕೆಲವರು ಕಟ್ಟಿಗೆ ಉಪಯೋಗಿಸಿದರೆ ಇನ್ನೂ ಕೆಲವರು ಕೈಯಿಂದ ಮತ್ತು ಕಾಲಿನಿಂದ ಹಲ್ಲೆ ನಡೆಸಿದ್ದಾರೆ” ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಘಟನೆ ಸಂಬಂಧ ದೀಪಕ್ ಕುಮಾರ್ ಎಂಬುವವರು 19 ಜನರ ಗುರುತಿಸಿ ದೂರು ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್ ಇಲಾಖೆ ಈಗಾಗಲೇ 15 ಜನರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರಾಥಮಿಕ ಹಂತದ ವಿಚಾರಣೆ ಬಳಿಕ ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.
ಹತ್ಯೆಯಾದ ವ್ಯಕ್ತಿಯ ಮೇಲೆ ತೀವ್ರತರವಾದ ಹಲ್ಲೆಯ ಪರಿಣಾಮ ಈವರೆಗೂ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಬಂಧಿತರಲ್ಲಿ ಸಚಿನ್ ಟಿ., ದೇವದಾಸ್, ಮಂಜುನಾಥ್, ಸಾಯಿದೀಪ್, ನಿತೀಶ್ ಕಮಾರ್ ಯಾನೆ ಸಂತೋಷ್, ದೀಕ್ಷಿತ್ ಕುಮಾರ್, ಸಂದೀಪ್, ವಿವಿಯನ್ ಅಲ್ವಾರಿಸ್, ಶ್ರೀದತ್ತ, ರಾಹುಲ್, ಪ್ರದೀಪ್ ಕುಮಾರ್, ಮನೀಶ್ ಶೆಟ್ಟಿ, ಧನುಷ್, ದೀಕ್ಷಿತ್, ಕಿಶೋರ್ ಕುಮಾರ್ ಎಂಬವರನ್ನು ಬಂಧಿಸಲಾಗಿದೆ.
ಸ್ಥಳೀಯರ ಅಭಿಪ್ರಾಯದಂತೆ “ಹತ್ಯೆಯಾದ ವ್ಯಕ್ತಿಯ ಧರ್ಮ ಕೇಳಿ ಆತನ ಹತ್ಯೆ ಮಾಡಲಾಗಿದೆ. ಇತ್ತೀಚೆಗೆ ಪಹಲ್ಗಾಮ್ ದಾಳಿಯ ಉನ್ಮಾದದಿಂದ ಆತ ಮುಸ್ಲಿಂ ಎಂದು ಶಂಕಿಸಿ ಆತನ ಮೇಲೆ ಗುಂಪು ಹಲ್ಲೆ ನಡೆಸಲಾಗಿದೆ. ಪೊಲೀಸರು ತನಿಖೆ ಸಂಬಂಧ ಸೂಕ್ತ ರೀತಿಯ ಮಾಹಿತಿ ತಿಳಿಸುತ್ತಿಲ್ಲ” ಎಂದು ಇಲಾಖೆಯ ಮೇಲೆ ಆರೋಪಿಸಿದ್ದಾರೆ.