ಬೆಂಗಳೂರು : ಈಗಾಗಲೇ ಕಾಂಕ್ರೀಟ್ ಕಾಡಾಗಿರುವ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಮರಗಳ ಮಾರಣಹೋಮ ನಡೆಸಲು ಬಿಬಿಎಂಪಿ ಮುಂದಾಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರಿನ ಕ್ಯಾಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಅಭಿವೃದ್ಧಿ ಹೆಸರಿನಲ್ಲಿ ನೂರಾರು ಮರಗಳನ್ನು ಕಡಿಯಲು ರೈಲ್ವೆ ಇಲಾಖೆ ಮುಂದಾಗಿದೆ.
ಈ ಕುರಿತು ಬೆಂಗಳೂರಿಗರ, ಪರಿಸರ ಪ್ರೇಮಿಗಳ ಅಭಿಪ್ರಾಯ ತಿಳಿಯಲು ಬಿಬಿಎಂಪಿ ಅರಣ್ಯ ಇಲಾಖೆ ಸಾರ್ವಜನಿಕ ಅಭಿಪ್ರಾಯಕ್ಕೆ ಅವಕಾಶ ನೀಡಿದೆ.ಹೀಗಾಗಿ ಪರಿಸರ ಪ್ರೇಮಿಗಳು ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಬೆಂಗಳೂರಿನ ಕಂಟೋನ್ಮೆಟ್ ರೈಲ್ವೆ ನಿಲ್ದಾಣದ ನವೀಕರಣ ಬಹುಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭವಾಗಿದ್ದು,ಈ ಕಾಮಗಾರಿ ಪೂರ್ಣಗೊಳಿಸಲು ಬರೋಬ್ಬರಿ 368 ಮರಗಳನ್ನು ಕಡಿಯಬೇಕು ಅಂತ ರೈಲ್ವೆ ಪ್ರಾಧಿಕಾರ ಬಿಬಿಎಂಪಿ ಅರಣ್ಯ ವಿಭಾಗಕ್ಕೆ ಮನವಿ ಮಾಡಿದೆ.
ಆದ್ರೆ ಈ ಬಗ್ಗೆ ಬಿಬಿಎಂಪಿ ಸಾರ್ವಜನಿಕರ ಹಿತಾಸಕ್ತಿಗಾಗಿ ಪ್ರಕಟಣೆ ಹೊರಡಿಸಿದ್ದು ನಾಗರಿಕರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ. ಒಂದುವೇಳೆ ತೀವ್ರ ವಿರೋಧ ವ್ಯಕ್ತವಾದಲ್ಲಿ ಮರ ಕಡಿಯಲು ಅನುಮತಿ ನೀಡಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.ಬೆಂಗಳೂರಿನಲ್ಲಿ ಮರಗಳ ಹನನ ನಿಲ್ಲಬೇಕು ಎಂದು ಪರಿಸರವಾದಿಗಳು ಈಗಾಗಲೇ ತಮ್ಮ ಅಭಿಪ್ರಾಯವನ್ನು ಬಿಬಿಎಂಪಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.