ರಾಜ್ಯದಲ್ಲಿ ಬಿಡುಗಡೆಯಾಗುವ ಎಲ್ಲಾ ಭಾಷೆಯ ಸಿನಿಮಾಗಳಿಗೆ ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲಾ ಥಿಯೇಟರ್ ಗಳಲ್ಲೂ ಟಿಕೆಟ್ ಬೆಲೆ ₹200 ರೂಪಾಯಿ ನಿಗದಿ ಮಾಡಿದ್ದ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಗರಿಷ್ಠ 200 ರೂ.ಗಳ ಏಕರೂಪ ದರ ನಿಗದಿಪಡಿಸಿದ ರಾಜ್ಯ ಸರ್ಕಾರ ಹೊರಡಿಸಿದ ಆದೇಶಕ್ಕೆ ಮಧ್ಯಂತರ ತಡೆ ಸಿಕ್ಕಿದೆ.
ಈ ಕುರಿತಂತೆ ಆದೇಶವನ್ನು ಪ್ರಶ್ನಿಸಿದ ಮನವಿಯ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ಏಕ ಸದಸ್ಯ ಪೀಠ ಇಂದು ಈ ಕುರಿತು ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.
ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ಹೊಂಬಾಳೆ ಫಿಲಂನ ವಿಜಯ್ ಕಿರಗಂದೂರು, ಪಿವಿಆರ್ ಐನಾಕ್‌ಸ್ ಲಿಮಿಟೆಡ್, ವಿಕೆ ಫಿಲಂಸ್, ಕೀ ಸ್ಟೋನ್ ಎಂಟರ್‌ಟೇನ್ಮೆಂಟ್ ಪ್ರವೈಟ್ ಲಿಮಿಟೆಡ್ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಹೊಸಮನಿ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
ಅಕ್ಟೋಬರ್ 2 ಕ್ಕೆ ಬಿಡುಗಡೆ ಕಾಣಲಿರುವ ಕಾಂತಾರ ಚಾಪ್ಟರ್ 1 ಸಿನಿಮಾಗೆ ಈ ಆದೇಶ ಹೆಚ್ಚು ಹೊರೆ ಆಗಬಹುದು ಎನ್ನಲಾಗಿತ್ತು. ಇದೇ ಆದೇಶವನ್ನು ಪ್ರಶ್ನಿಸಿದ ತಂಡದಲ್ಲಿ ಹೊಂಬಾಳೆ ಫಿಲ್ಮ್ಸ್ ಕೂಡಾ ಇದ್ದ ಹಿನ್ನೆಲೆಯಲ್ಲಿ, ಕಾಂತಾರ ಸಿನೆಮಾಗೂ ಸಮಸ್ಯೆ ಆಗಲಿದೆ ಎಂಬ ಕಾರಣಕ್ಕೆ ಸಿನಿಮಾ ನಿರ್ಮಾಣ ಸಂಸ್ಥೆಯೂ ಸಹ ತಡೆಯಾಜ್ಞೆಗೆ ಅರ್ಜಿ ಸಲ್ಲಿಸಿದ್ದು ಗಮನಾರ್ಹ.
ಸೆಪ್ಟೆಂಬರ್ 12ರಂದು ರಾಜ್ಯ ಸರ್ಕಾರವು ಈ ಸಂಬಂಧ ಆದೇಶ ಹೊರಡಿಸಿತ್ತು. ಅದರಂತೆ ಎಲ್ಲ ಸಿನಿಮಾ ಪ್ರದರ್ಶನದ ಟಿಕೆಟ್ ಬೆಲೆ 200 ರೂಪಾಯಿ ಮೀರಬಾರದು. ಇದು ಎಲ್ಲ ಭಾಷೆಯ ಸಿನಿಮಾಗಳಿಗೂ ಅನ್ವಯಿಸಲಿದೆ ಎಂದು ಆದೇಶದಲ್ಲಿ ತಿಳಿಸಿತ್ತು. ಇದರಿಂದ ಕನ್ನಡ ಸಿನಿಮಾಗಳಿಗೆ ಅನುಕೂಲವಾಗುವುದಲ್ಲದೆ, ಪರಭಾಷಾ ಸಿನಿಮಾಗಳ ದಂಧೆಗೆ ಕಡಿವಾಣ ಹಾಕುವುದು ಹಾಗೂ ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಸೆಳೆಯುವ ಉದ್ದೇಶ ಹೊಂದಿತ್ತು.