Home ಅಪರಾಧ ಅಂಗವಿಕಲರಿಗೆ ಅವಹೇಳನ; ಬ್ರಹ್ಮಾಂಡ ಗುರು ನರೇಂದ್ರ ಬಾಬು ಶರ್ಮಾ ವಿರುದ್ಧ ದೂರು ದಾಖಲು

ಅಂಗವಿಕಲರಿಗೆ ಅವಹೇಳನ; ಬ್ರಹ್ಮಾಂಡ ಗುರು ನರೇಂದ್ರ ಬಾಬು ಶರ್ಮಾ ವಿರುದ್ಧ ದೂರು ದಾಖಲು

0

ಖಾಸಗಿ ಚಾನಲ್‌ ಒಂದರಲ್ಲಿ ಬ್ರಹ್ಮಾಂಡ ಗುರೂಜಿ ಎಂಬ ಹೆಸರಿನಿಂದ ಕಾಣಿಸಿಕೊಳ್ಳುವ ನರೇಂದ್ರ ಬಾಬು ಶರ್ಮಾ ಆಡಿದ ವಿವೇಚನಾ ರಹಿತ ಹೇಳಿಕೆ ಈಗ ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿದೆ. ಅಂಗವಿಕಲರೊಬ್ಬರು ಈತನ ವಿರುದ್ಧ ದೂರು ದಾಖಲಿಸಿದ್ದು, ಖಾಸಗಿ ಚಾನಲ್‌ ಹಾಗೂ ನರೇಂದ್ರ ಬಾಬು ಶರ್ಮಾ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಸೆ.21 ರಂದು ಖಾಸಗಿ ಟಿವಿ ಚಾನೆಲ್ ನಲ್ಲಿ ಪ್ರಸಾರವಾಗುವ ಜ್ಯೋತಿಷ್ಯ ಕಾರ್ಯಕ್ರಮದಲ್ಲಿ ನಾಲಿಗೆ ಹರಿಬಿಟ್ಟ ನರೇಂದ್ರ ಬಾಬು ಶರ್ಮಾ ಅಂಗವಿಕಲರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಪಿತೃಪಕ್ಷದಲ್ಲಿ ಮಾಡಬೇಕಾದ ವಿಧಿವಿಧಾನಗಳ ಬಗ್ಗೆ ವಿವರಣೆ ನೀಡುತ್ತಾ, ಮೃತಪಟ್ಟವರಿಗೆ ಇಡುವ ಎಡೆಯನ್ನು ಮನೆಯವರು ಅಥವಾ ಬೇರೆಯವರು ತಿನ್ನಬಾರದು. ಅದನ್ನು ಕುರೂಪಿಗಳಿಗೆ , ಭಿಕ್ಷುಕರಿಗೆ ಹಾಗೂ ಅಂಗವಿಕಲರಿಗೆ ನೀಡಬೇಕೆಂದು ಸಲಹೆ ನೀಡಿದ್ದರು.

ಈ ಒಂದು ಹೇಳಿಕೆ ಹಲವರಲ್ಲಿ ಆಕ್ರೋಶ ಉಂಟುಮಾಡಿತ್ತು. ಮಾತು ಮಾತಿಗೆ ಮುಂಡೇದೇ, ಹಾಳಾಗಿ ಹೋಗ್ತೀರಾ ಎಂದೆಲ್ಲಾ ಶುಭಾಶೀರ್ವಾದಗಳನ್ನು ನೀಡುವ ಬ್ರಹ್ಮಾಂಡ ಗಾತ್ರದ ನರೇಂದ್ರ ಬಾಬು ಶರ್ಮಾ ಹಲವು ಸಂದರ್ಭಗಳಲ್ಲಿ ಇಂತಹ ಹೇಳಿಕೆ ನೀಡುತ್ತಲೇ ಬಂದಿದ್ದು, ಹಲವು ಬಾರಿ ದೂರನ್ನು ಎದುರಿಸಿದ್ದೂ ಇದೆ. ಈ ಬಾರಿ ಅಂಗವಿಕಲರೊಬ್ಬರು ಈತನ ಹೇಳಿಕೆ ವಿರುದ್ಧ ಠಾಣೆ ಮೆಟ್ಟಿಲೇರಿದ್ದಾರೆ.

ಹರೀಶ್‌ ಎಂಬ ಅಂಗವಿಕಲರೊಬ್ಬರು ಸೆ. 22 ರಂದು ಠಾಣೆಗೆ ತೆರಳಿ, ಹುಟ್ಟಿನಿಂದ ನಾನು ಅಂಗವೈಕಲ್ಯಕ್ಕೆ ತುತ್ತಾಗಿದ್ದೇನೆ. ಮೃತಪಟ್ಟವರಿಗೆ ಇಡುವ ಪಿಂಡವನ್ನು ನಮ್ಮಂಥವರಿಗೆ ನೀಡಿ ಎಂದು ಹೇಳುವ ಮೂಲಕ ಗುರೂಜಿ ಎಂದು ಹೇಳಿಕೊಳ್ಳುವ ಈ ವ್ಯಕ್ತಿ ನಮಗೆ ಅವಮಾನವೆಸಗಿದ್ದಾನೆ. ಈತನ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ದಾಖಲಿಸಿದ್ದಾರೆ.

ಹರೀಶ್‌ ನೀಡಿರುವ ದೂರಿನ ಆಧಾರದ ಮೇರೆಗೆ ಎನ್‌ಸಿಆರ್‌ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ನರೇಂದ್ರ ಬಾಬು ಹಾಗೂ ಖಾಸಗಿ ಚಾನಲ್‌ ಗೆ ನೋಟಿಸ್‌ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

You cannot copy content of this page

Exit mobile version