ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆ ಇವತ್ತು ನಡೆಯಲಿದ್ದು, ಕೊಪ್ಪಳ, ವಿಜಯಪುರ, ರಾಯಚೂರು ಮತ್ತು ಇತರ ಸ್ಥಳಗಳ ಪ್ರಾಥಮಿಕ ಅಧ್ಯಯನವನ್ನು ಕೈಗೊಳ್ಳಲು ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮಕ್ಕೆ ಸಂಪುಟವು ಅನುಮತಿ ನೀಡುವ ಸಾಧ್ಯತೆಗಳಿವೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದ್ದು,ಸುತ್ತಮುತ್ತಲಿನ ಗ್ರಾಮಸ್ಥರ ವಿರೋಧದ ನಡುವೆಯೂ ಪರಮಾಣು ವಿದ್ಯುತ್ ಸ್ಥಾವರಕ್ಕೆ ಅನುಮೋದನೆ ನೀಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ದೇಶದ ದೀರ್ಘಕಾಲೀನ ಇಂಧನ ಪರಿವರ್ತನಾ ಕಾರ್ಯತಂತ್ರದ ಭಾಗವಾಗಿ ಪರಮಾಣು ಶಕ್ತಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಕೇಂದ್ರ ಸರ್ಕಾರವು 2047 ರ ವೇಳೆಗೆ 100 ಗಿಗಾವ್ಯಾಟ್ ಪರಮಾಣು ವಿದ್ಯುತ್ ಸಾಮರ್ಥ್ಯದ ಗುರಿಯನ್ನು ಹೊಂದಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಅನುಮತಿ ನೀಡೋಕೆ ಸರ್ಕಾರ ಮುಂದಾಗಿದೆ.
RCB ಕಾಲ್ತುಳಿತ ಕೇಸ್ ಚರ್ಚೆ ?
ದೇಶವನ್ನೇ ಬೆಚ್ಚಿಬೀಳಿಸಿದ್ದ RCB ಕಾಲ್ತುಳಿತ ಕೇಸ್ ಇಂದು ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿದೆ. ಇನ್ನು ಕೇಸ್ ಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ ಕುನ್ಹಾ ಅವರು ಸಲ್ಲಿಸಿದ ವರದಿಯ ಕುರಿತಂತೆಯೂ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಗಳಿವೆ.
ಇದಲ್ಲದೆ, ದೇವನಹಳ್ಳಿ ಬಳಿ ರಕ್ಷಣಾ ಮತ್ತು ಏರೋಸ್ಪೇಸ್ ಪಾರ್ಕ್‌ಗಾಗಿ 1,777 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಅಧಿಸೂಚನೆಯನ್ನು ಹಿಂತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ಅಂತಿಮ ಚರ್ಚೆ ನಡೆಯಲಿದೆ ಎನ್ನಲಾಗುತ್ತಿದೆ.
ಮತ್ತೊಂದೆಡೆ, ಸುರ್ಜೆವಾಲಾ ಈಗಾಗಲೆ ಸಚಿವರ ಜತೆ ಒನ್ ಟು ಒನ್ ಚರ್ಚೆ ನಡೆಸಿದ್ದು, ಭಿನ್ನಮತ ಶಮನಕ್ಕೆ ಸಕಲ ಸರ್ಕಸ್ ನಡೆಸಲಾಗಿದೆ. ಆಂತರಿಕ ಕಚ್ಚಾಟವನ್ನು ಕಡಿಮೆ ಮಾಡಿ ಸುಭದ್ರ ಆಡಳಿತ ನೀಡುವ ಸಂಬಂಧವೂ ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.