Home ಬ್ರೇಕಿಂಗ್ ಸುದ್ದಿ ಮುಳ್ಳಯ್ಯನಗಿರಿಗೆ ದಿನಕ್ಕೆ 1200 ವಾಹನಗಳಿಗೆ ಮಾತ್ರ ಪ್ರವೇಶ ?

ಮುಳ್ಳಯ್ಯನಗಿರಿಗೆ ದಿನಕ್ಕೆ 1200 ವಾಹನಗಳಿಗೆ ಮಾತ್ರ ಪ್ರವೇಶ ?

ಚಿಕ್ಕಮಗಳೂರು : ಮಲೆನಾಡಿನ ಪ್ರಸಿದ್ಧ ಪ್ರವಾಸಿ ತಾಣವಾದ ಮುಳ್ಳಯ್ಯನಗಿರಿಗೆ ವಾರಾಂತ್ಯಗಳಲ್ಲಿ ಹೆಚ್ಚುತ್ತಿರುವ ವಾಹನಗಳ ದಟ್ಟಣೆಯನ್ನು ನಿಯಂತ್ರಿಸಲು ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿದೆ. ಮುಳ್ಳಯ್ಯನಗಿರಿಗೆ ದಿನಕ್ಕೆ ಕೇವಲ 1200 ವಾಹನಗಳಿಗೆ ಮಾತ್ರ ಪ್ರವೇಶ ಅವಕಾಶವಿರುವಂತೆ ಎರಡು ಸ್ಲಾಟ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಪ್ರತಿದಿನ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12ರವರೆಗೆ ಮೊದಲ ಸ್ಲಾಟ್‌ನಲ್ಲಿ 600 ವಾಹನಗಳು ಹಾಗೂ ಮಧ್ಯಾಹ್ನ 1 ರಿಂದ ಸಂಜೆ 6ರವರೆಗೆ ಎರಡನೇ ಸ್ಲಾಟ್‌ನಲ್ಲಿ ಇನ್ನಷ್ಟು 600 ವಾಹನಗಳಿಗೆ ಪ್ರವೇಶ ನೀಡಲಾಗುವುದು. ಮಧ್ಯಾಹ್ನದ ಒಂದು ಗಂಟೆಯ ವಿರಾಮ ಸಮಯದಲ್ಲಿ ಮೇಲಕ್ಕೆ ತೆರಳಿದ ವಾಹನಗಳು ಸುರಕ್ಷಿತವಾಗಿ ಹಿಂತಿರುಗಲು ಅವಕಾಶ ಕಲ್ಪಿಸಲಾಗಿದೆ,” ಎಂದು ಹೇಳಿದರು.

ಸೀತಾಳಯ್ಯನಗಿರಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ

ಮೇಲ್ಗಡೆಗೆ ಪ್ರವೇಶ ಪಡೆದಿಲ್ಲದ ಪ್ರವಾಸಿಗರ ವಾಹನಗಳಿಗೆ ಸೀತಾಳಯ್ಯನಗಿರಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಅವರು ಅಲ್ಲಿಂದ ನಡೆದುಕೊಂಡು ಅಥವಾ ಅರಣ್ಯ ಇಲಾಖೆಯಿಂದ ಅನುಮತಿಪ್ರಾಪ್ತ ಟಿಟಿ, ತೂಫಾನ್ ಜೀಪುಗಳಲ್ಲಿ ಮುಳ್ಳಯ್ಯನಗಿರಿಗೆ ಹೋಗಬಹುದಾಗಿದೆ. “ಈ ವಾಹನಗಳಿಗೆ ಮುಂಗಡ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಹೆಚ್ಚಿನ ಮಾಹಿತಿಯನ್ನು ಆನ್‌ಲೈನ್‌ ಮೂಲಕ ಪಡೆಯಬಹುದಾಗಿದೆ,” ಎಂದು ಅವರು ಹೇಳಿದರು.

ಭೂಕುಸಿತ ಭೀತಿಯಿಂದ ಕ್ರಮ

“ಭೂಗರ್ಭ ಶಾಸ್ತ್ರಜ್ಞರ ವರದಿ ಪ್ರಕಾರ ಮುಳ್ಳಯ್ಯನಗಿರಿ ರಸ್ತೆ ಭಾಗದಲ್ಲಿ ಭೂಕುಸಿತ ಸಂಭವನೀಯತೆ ಇರುವ ಕಾರಣದಿಂದಾಗಿ ಗಿರಿಮಾರ್ಗದ ವಾಹನ ಸಂಚಾರವನ್ನು ನಿಯಂತ್ರಿಸಬೇಕಾಗಿದೆ. ಕಳೆದ ಆರು ತಿಂಗಳಲ್ಲಿ 2.5 ಲಕ್ಷಕ್ಕೂ ಹೆಚ್ಚು ವಾಹನಗಳು ಈ ಮಾರ್ಗದಲ್ಲಿ ಸಂಚರಿಸಿದ್ದು, ಭದ್ರತೆಯ ದೃಷ್ಟಿಯಿಂದ ಶ್ರೇಣಿಬದ್ಧ ಕ್ರಮಗಳ ಅಗತ್ಯವಿದೆ,” ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಅಭಿವೃದ್ಧಿ ಕಾಮಗಾರಿ ಹಾಗೂ ಸೌಲಭ್ಯಗಳು

ಜಿಲ್ಲಾಡಳಿತದಿಂದ ಸೀತಾಳಯ್ಯನಗಿರಿ ಭಾಗದಲ್ಲಿ ಶೌಚಾಲಯಗಳ ನವೀಕರಣ, ಫುಡ್‌ಕೋರ್ಟ್ ಮಾದರಿಯ ಅಂಗಡಿಗಳ ವ್ಯವಸ್ಥೆ, ಎನ್‌ಎಂಡಿಸಿ ಸರ್ಕಲ್ ಅಭಿವೃದ್ಧಿ ಕಾರ್ಯಗಳು ಕೈಗೊಂಡು ಪ್ರವಾಸಿಗರಿಗೆ ಉತ್ತಮ ಅನುಭವ ನೀಡುವ ಪ್ರಯತ್ನ ಮಾಡುತ್ತಿದೆ. “ಸ್ಥಳೀಯರಿಗೆ ಅನುಕೂಲವಾಗುವಂತೆ ಪಾಸ್‌ ವ್ಯವಸ್ಥೆ ಜಾರಿಯಲ್ಲಿದ್ದು, ತದನುಗುಣ ದಾಖಲೆಗಳನ್ನು ನೀಡಬೇಕಾಗುತ್ತದೆ,” ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ, ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಆರ್. ಲೋಹಿತ್ ಅವರು ಉಪಸ್ಥಿತರಿದ್ದರು.

You cannot copy content of this page

Exit mobile version