ನವದೆಹಲಿ: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳಲು ನಿರಾಕರಿಸಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಕುರಿತು, ಸುಪ್ರೀಂ ಕೋರ್ಟ್ ಈ ವಾರ ನ್ಯಾಯಮೂರ್ತಿ ಹೇಮಂತ್ ಗುಪ್ತಾ ನಿವೃತ್ತರಾಗುವ ಮೊದಲು ತೀರ್ಪು ಪ್ರಕಟಿಸುವ ಸಾಧ್ಯತೆಯಿದೆ.
ನ್ಯಾಯಮೂರ್ತಿಗಳಾದ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ಪೀಠವು 10 ದಿನಗಳ ಕಾಲ ವಾದವನ್ನು ಆಲಿಸಿದ ನಂತರ ಸೆಪ್ಟೆಂಬರ್ 22 ರಂದು ಅರ್ಜಿಗಳ ತೀರ್ಪನ್ನು ಕಾಯ್ದಿರಿಸಿತ್ತು. ಈ ಹಿನ್ನಲೆಯಲ್ಲಿ ಪೀಠದ ನೇತೃತ್ವದ ನ್ಯಾಯಮೂರ್ತಿ ಗುಪ್ತಾ ಅವರು ಅಕ್ಟೋಬರ್ 16 ರಂದು ನಿವೃತ್ತರಾಗಲಿರುವುದರಿಂದ ಈ ವಾರ ಈ ಅರ್ಜಿಗಳ ತೀರ್ಪು ಪ್ರಕಟವಾಗುವ ನಿರೀಕ್ಷೆಯಿದೆ.
ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಾದದ ವೇಳೆ, ಶಾಲಾ-ಕಾಲೇಜುಗಳಲ್ಲಿ ಸಮಾನತೆ, ಸಮಗ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗುವ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸುವ ರಾಜ್ಯ ಸರ್ಕಾರದ ಫೆಬ್ರವರಿ 5, 2022 ರ ಆದೇಶ ಸೇರಿದಂತೆ ವಿವಿಧ ಅಂಶಗಳ ಕುರಿತು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು. ಈ ಕಾರಣ ಅರ್ಜಿದಾರರ ಪರ ಹಾಜರಾದ ಹಲವಾರು ವಕೀಲರು, ಮುಸ್ಲಿಂ ಹುಡುಗಿಯರು ಹಿಜಾಬ್ ಧರಿಸಿ ತರಗತಿಗೆ ಹೋಗುವುದನ್ನು ತಡೆಯುವುದರಿಂದ ಅವರ ಶಿಕ್ಷಣಕ್ಕೆ ತೊಂದರೆಯಾಗುತ್ತದೆ. ಇದರಿಂದ ಅವರು ತರಗತಿಗಳಿಗೆ ಹಾಜರಾಗುವುದನ್ನು ನಿಲ್ಲಿಸಬಹುದು ಎಂದು ಒತ್ತಾಯಿಸಿದರು. ಇನ್ನೂ ಕೆಲ ವಕೀಲರು ಈ ವಿಷಯವನ್ನು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ ಉಲ್ಲೇಖಿಸಬೇಕು ಎಂದು ವಾದಿಸಿದರು.
ಮತ್ತೊಂದೆಡೆ, ರಾಜ್ಯದ ಪರ ವಾದ ಮಂಡಿಸಿದ ವಕೀಲರು ಕರ್ನಾಟಕ ಸರ್ಕಾರದ ಆದೇಶವು ಹಿಜಾಬ್ ಕುರಿತು ಗದ್ದಲಕ್ಕೆ ಕಾರಣವಾಗಿದ್ದು, “ಧರ್ಮ ತಟಸ್ಥ” ಎಂದು ವಾದಿಸಿದರು.
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ಬೆಂಬಲಿಸುವ ಆಂದೋಲನವು ಕೆಲವು ವ್ಯಕ್ತಿಗಳ “ಸ್ವಾಭಾವಿಕ ಕೃತ್ಯ” ಅಲ್ಲ ಎಂದು ಒತ್ತಾಯಿಸಿದ ರಾಜ್ಯದ ವಕೀಲರು, ಸರ್ಕಾರವು ಒಂದು ವೇಳೆ “ಸಾಂವಿಧಾನಿಕ ಕರ್ತವ್ಯ ಲೋಪ” ದಲ್ಲಿ ತಪ್ಪಿತಸ್ಥರಾಗಬಹುದು ಎಂದು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ್ದರು.
ಮಾರ್ಚ್ 15 ರಂದು, ಕರ್ನಾಟಕದ ಉಡುಪಿಯ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರ ಒಂದು ವಿಭಾಗವು ತರಗತಿಯೊಳಗೆ ಹಿಜಾಬ್ ಧರಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು, ಇದು ಅಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ ಎಂದು ತೀರ್ಪು ನೀಡಿತ್ತು.
ಫೆಬ್ರವರಿ 5, 2022 ರ ರಾಜ್ಯ ಸರ್ಕಾರದ ಆದೇಶವನ್ನು ಕೆಲವು ಮುಸ್ಲಿಂ ಹುಡುಗಿಯರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದರು. ಈ ವೇಳೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ.