Home ವಿಶೇಷ ಮನೋರೋಗಕ್ಕೆ ಮದ್ದಿದೆ

ಮನೋರೋಗಕ್ಕೆ ಮದ್ದಿದೆ

0

ಮಾನಸಿಕ, ಭಾವನಾತ್ಮಕ ಮತ್ತು ಸಾಂದರ್ಭಿಕ ಸಮಸ್ಯೆಗಳು ಮನೋರೋಗವಾಗಿ ಉಲ್ಬಣಿಸುವ ಮುನ್ನವೇ ಎಚ್ಚೆತ್ತುಕೊಳ್ಳುವ ಮತ್ತು ಉಪಚರಿಸಿಕೊಳ್ಳುವ ಅಗತ್ಯವಿದೆ ಎನ್ನುತ್ತಾರೆ ಖ್ಯಾತ ಆಪ್ತ ಸಮಾಲೋಚಕರಾದ ಯೋಗೇಶ್ ಮಾಸ್ಟರ್.

ವಿಶ್ವ ಆರೋಗ್ಯ ಸಂಸ್ಥೆ ವರದಿಯಲ್ಲಿ ಬೆಳಕಿಗೆ ಬಂದ ವಿಷಯವಿದು. ಭಾರತದ ಜನಸಂಖ್ಯೆಯಲ್ಲಿ ನೂರಕ್ಕೆ ಸುಮಾರು 7.5 ರಷ್ಟು ಜನ ಒಂದಲ್ಲಾ ಒಂದು ಮನೋರೋಗದಿಂದ ಬಳಲುತ್ತಿದ್ದಾರೆ. ಈ ಮನೋರೋಗ  ಆರನೇ ಒಂದರಷ್ಟು ಆರೋಗ್ಯದ ಮೇಲೆ ನೇರವಾಗಿ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ವಿಶ್ವದ ಸುಮಾರು ಶೇಕಡಾ ಹದಿನೈದರಷ್ಟು ಮಾನಸಿಕ ಮತ್ತು ನರದೌರ್ಬಲ್ಯದ ಸಮಸ್ಯೆಗಳನ್ನು ಭಾರತ ತಾನೊಂದೇ ಹೊತ್ತುಕೊಂಡಿದೆ. ಇನ್ನೂ ಗಾಬರಿಯ ವಿಷಯವೆಂದರೆ ಭಾರತದಲ್ಲಿ ನುರಿತ ಮತ್ತು ವೃತ್ತಿಪರ ಮನೋರೋಗ ತಜ್ಞರು ಸುಮಾರು ನಾಲ್ಕು ಸಾವಿರಕ್ಕೂ ಕಡಿಮೆ ಇದ್ದಾರೆ.

ಭಾರತದಲ್ಲಿ ಮಾನಸಿಕ ಸಮಸ್ಯೆಗಳು ಮತ್ತು ಮನೋರೋಗಗಳು ಇಷ್ಟರ ಮಟ್ಟಿಗೆ ತೀವ್ರತರವಾಗಿದ್ದರೂ, ಕೆಲವು ಅಂಕಿಅಂಶಗಳ ಪ್ರಕಾರ ಸೈಕ್ರಿಯಾಟಿಸ್ಟ್‌ಗಳ ಸಂಖ್ಯೆ ಪ್ರತಿ ಹತ್ತು ಸಾವಿರ ಜನಕ್ಕೆ ಒಂದಕ್ಕಿಂತ ಕಡಿಮೆ ಇದ್ದಾರೆ. ಇನ್ನು ಸಮಾಲೋಚಕರು ಎಂದರೆ ಒಂದೋ ಕನಿಷ್ಠ ತರಬೇತಿ ಪಡೆದವರು ಅಥವಾ ತರಬೇತಿಯನ್ನೇ ಪಡೆಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರ ವಿಶ್ಲೇಷಣೆಗಳು ವೈಜ್ಞಾನಿಕವಾಗಿರದೇ ಕೆಲವು ಸಲ ಸಹಾಯವಾಗುವುದಕ್ಕಿಂತ ತೊಂದರೆಯೇ ಆಗಬಹುದು.

ಒಟ್ಟಾರೆ ಮನೋರೋಗಕ್ಕೆ ಮದ್ದಿಲ್ಲ ಎಂಬ ಗಾದೆ ಮಾತನ್ನು ನಿಜವಾಗಿಸುವಂತಹ ಪ್ರಯತ್ನದಲ್ಲಿದೆ ನಮ್ಮ ಸದ್ಯದ ಮಾನಸಿಕ ಆರೋಗ್ಯ ನಿರ್ವಹಣೆಯ ವ್ಯವಸ್ಥೆ.

ಹದಗೆಟ್ಟ ವ್ಯವಸ್ಥೆಗೆ ಕಾರಣಗಳು..

ಭಾರತದಲ್ಲಿ ಮಾನಸಿಕ ಆರೋಗ್ಯ ನಿರ್ವಹಣೆಯ ವ್ಯವಸ್ಥೆ ಹದಗೆಡಲು ಕಾರಣವೇನು ಎಂಬುದನ್ನು ಗಮನಿಸಿದರೆ ಮೊಟ್ಟ ಮೊದಲನೆಯದಾಗಿ ನಿರ್ಲಕ್ಷ್ಯ, ತನ್ನಲ್ಲಿ ಮಾನಸಿಕ ಸಮಸ್ಯೆ ಇರುವುದೇ ಇಲ್ಲ ಎಂಬ ಭ್ರಮೆ, ಆತ್ಮಾವಲೋಕನ ಅಥವಾ ಸ್ವಯಂವಿಶ್ಲೇಷಣೆಗೆ ತಯಾರಿಲ್ಲದಿರುವುದು, ಸಾಮಾಜಿಕ ಕಳಂಕವೆಂಬಂತೆ ಮನೋರೋಗವನ್ನು ಕಾಣುವುದು; ಹೀಗೆ ಹಲವು ಕಾರಣಗಳಿವೆ. ಆದರೆ ಮಾನಸಿಕ ಆರೋಗ್ಯದ ವ್ಯವಸ್ಥೆಯನ್ನು ಕಾಪಾಡುವ ವಾತಾವರಣವನ್ನು ನಿರ್ಮಾಣ ಮಾಡುವುದರಲ್ಲಿ ಮತ್ತು ಅದರ ಬಗ್ಗೆ ಅರಿವು ನೀಡುವುದರಲ್ಲಿ ಶಿಕ್ಷಣ ಸಂಸ್ಥೆಗಳು ಮೊಟ್ಟ ಮೊದಲನೆಯ ಸ್ಥಾನವನ್ನು ಹೊಂದಲು ಸಾಧ್ಯ. ವಾಸ್ತವವಾಗಿ ಇದು ಮನೆಯಲ್ಲಿಯೇ ಪ್ರಾರಂಭವಾಗಬೇಕು. ಆದರೆ ಭಾರತವಿನ್ನೂ ಗುಣಮಟ್ಟದ ಜೀವನ, ಆಲೋಚನೆ, ಆರ್ಥಿಕ ಸ್ಥಿತಿ, ಶಿಕ್ಷಣ, ಉದ್ಯೋಗ, ಗಳಿಕೆ, ಸಂವಹನ, ಸಂವೇದನೆ, ಸಂಬಂಧ, ಆಡಳಿತ ವ್ಯವಸ್ಥೆಗಳನ್ನು ಅಗತ್ಯವಿರುವಷ್ಟರ ಮಟ್ಟಿಗೆ ಖಂಡಿತ ಹೊಂದಿಲ್ಲ. ಹಾಗಾಗಿ ಮನೆಯೇ ಮೊದಲ ಪಾಠಶಾಲೆಯಾದರೂ, ಮನೆಗಳನ್ನು ನೆಚ್ಚಿಕೊಳ್ಳುವಷ್ಟು ಧೈರ್ಯ ತಾಳಲಾಗದು. ಹೋಗಲಿ, ಶಿಕ್ಷಣ ಸಂಸ್ಥೆಗಳಾದರೂ ಈ ಪಾತ್ರವನ್ನು ವಹಿಸಬೇಕು. ಆದರೆ ಮಗುವಿನ ಉಚ್ಚಾರಣೆಯ ಸಮಸ್ಯೆಯನ್ನು ಅಥವಾ ಕಲಿಕೆಯ ನ್ಯೂನ್ಯತೆಯನ್ನು ಅಣಕಿಸುವ ಅಥವಾ ದಂಡಿಸುವ ಕುಚೇಷ್ಟೆಯ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸರಿಸುತ್ತಾ ಮಜ ತೆಗೆದುಕೊಳ್ಳುವ ಶಿಕ್ಷಕರು ಶಿಕ್ಷಣ ಸಂಸ್ಥೆಗಳಲ್ಲಿದ್ದರೆ ಎಂತಹ ಮಾನಸಿಕ ಆರೋಗ್ಯದ ಪ್ರತಿನಿಧಿಗಳನ್ನು ನಾವು ನಿರೀಕ್ಷಿಸಬಹುದು!

ಮನೋರೋಗ ಅಂದರೆ ಯಾವುದು? ಮನೋರೋಗಿಗಳು ಎಂದರೆ ಯಾರು?

ಯಾರನ್ನೂ ಸೇರದೇ, ತಮ್ಮ ಪಾಡಿಗೆ ತಾವು ಏನೇನೋ ಮಾತಾಡಿಕೊಂಡು, ಯಾವುದೋ ಮೂಲೆಯಲ್ಲಿ, ಕತ್ತಲೆಯಲ್ಲಿ, ಯಾರಿಗೂ, ಯಾವುದಕ್ಕೂ ಸ್ಪಂದಿಸದೇ, ಅಥವಾ ಎಲ್ಲಕ್ಕೂ ಭಯಂಕರವಾಗಿ ಪ್ರತಿಕ್ರಿಯಿಸುತ್ತಾ ಇರುವವರೋ ಅಥವಾ ಬಟ್ಟೆ ಹರಿದುಕೊಂಡು, ಯಾರನ್ನೂ ಗುರುತಿಸದೇ, ಯಾರೆಂದರೆ ಅವರಿಗೆ ಕಲ್ಲುಗಳಲ್ಲಿ ಹೊಡೆಯುತ್ತಾ ಇರುವವರು ಎಂದೇನಾದರೂ ಅಂದುಕೊಂಡಿದ್ದರೆ ಅವರ ಬಗ್ಗೆ ನನಗೆ ತೀವ್ರ ಅನುಕಂಪವಿದೆ.

ತಲೆಗೆ, ಕಣ್ಣಿಗೆ, ಹೊಟ್ಟೆಗೆ, ಬೆನ್ನಿಗೆ, ಚರ್ಮಕ್ಕೆ, ಕೈ ಕಾಲಿಗೆ ನೋವೋ, ಬಾವೋ, ತುರಿಕೆಯೋ, ಊತವೋ, ಉರಿಯೋ ಎಂತದ್ದೋ ಬರುತ್ತದೆ. ಯಾವುದೇ ಕಾರಣದಿಂದ ಸಮಸ್ಯೆ ಬಂದು ಅದು ಆ ಹೊತ್ತಿಗೆ, ಒಂದು ಮಟ್ಟಕ್ಕೆ ಕಾಣಿಸಿಕೊಳ್ಳುವುದು. ಅದಕ್ಕೆ ಬೇಕಾದ ಔಷಧವನ್ನು ತೆಗೆದುಕೊಳ್ಳುತ್ತೇವೆ. ನಿವಾರಿಸಿಕೊಳ್ಳುತ್ತೇವೆ. ನೋವು, ಬಾವು, ಊತ, ಉರಿ ಹೋಯಿತೆಂದರೆ ಸಮಸ್ಯೆ ಹೋಯಿತೆಂದರ್ಥ. ಒಂದು ವೇಳೆ ಯಾವುದೇ ಒಂದು ಸಮಸ್ಯೆ ಬಂದು, ಸಣ್ಣ ಪುಟ್ಟ ಮದ್ದುಗಳಿಂದ, ಉಪಚಾರಗಳಿಂದ ಹೋಗದೇ ಒಂದೇ ಸಮನೆ ಕಾಡುತ್ತಿದ್ದರೆ ಅದಕ್ಕೆ ರೋಗ ಎನ್ನಬಹುದೇನೋ. ಅದಕ್ಕೂ ದೀರ್ಘಕಾಲದ ಉಪಚಾರ, ನಿಯಮಿತ ಮದ್ದಿನ ಸೇವನೆ ಇರುತ್ತದೆ. ಒಟ್ಟಾರೆ ದೇಹಕ್ಕೆ ಏನಾದರೂ ಆದರೆ ಕಾಣುವಂತಹ ಲಕ್ಷಣಗಳಿಂದ ಸಮಸ್ಯೆಯನ್ನೋ, ರೋಗವನ್ನೋ ಪತ್ತೆ ಹಚ್ಚಿ ಅದಕ್ಕೆ ಅಗತ್ಯವಿರುವ ಚಿಕಿತ್ಸೆ ಮಾಡುತ್ತೇವೆ ಅಥವಾ ಮಾಡಿಕೊಳ್ಳುತ್ತೇವೆ. ಅದೇ ರೀತಿ ಮನಸ್ಸಿಗೂ ಆಗಾಗ ಸಮಸ್ಯೆ ಬರುತ್ತದೆ. ಆ ಸಮಸ್ಯೆಯನ್ನು, ಲಕ್ಷಣಗಳನ್ನು ನಿರ್ಲಕ್ಷಿಸಿದರೆ ಅದು ರೋಗವಾಗಿ ಮುಂದುವರಿಯುತ್ತದೆ. ವಿಪರ್ಯಾಸವೆಂದರೆ ತಮಗೆ ತಲೆನೋವು ಇದೆ ಎಂದು ಒಪ್ಪಿಕೊಂಡಂತೆ, ಸಕ್ಕರೆ ಖಾಯಿಲೆ ಅಥವಾ ರಕ್ತದೊತ್ತಡ ಇದೆ ಎಂದು ಒಪ್ಪಿಕೊಂಡಂತೆ ಮನೋರೋಗವಿದೆ ಎಂದು ಒಪ್ಪಿಕೊಳ್ಳಲು ಸಾಮಾನ್ಯವಾಗಿ ತಯಾರಿರುವುದಿಲ್ಲ. ಅದೇ ಸಮಸ್ಯೆ.

ಮೂಡುವ ಭಾವನೆಗಳಿಂದಾಗಿ, ಮಾಡುವ ಆಲೋಚನೆಗಳಿಂದಾಗಿ, ತೋರುವ ವರ್ತನೆಗಳಿಂದಾಗಿ, ನೀಡುವ ಪ್ರತಿಕ್ರಿಯೆಗಳಿಂದಾಗಿ, ಸ್ಪಂದಿಸುವ ರೀತಿಗಳಿಂದಾಗಿ ರೋಗಗ್ರಸ್ತ ಮನಸ್ಥಿತಿಯು ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಆದರೆ ಅದನ್ನು ಆ ಹೊತ್ತಿನ ಸಂಗತಿ ಅಥವಾ ಸನ್ನಿವೇಶಕ್ಕೆ ತಮ್ಮ ಪ್ರತಿಕ್ರಿಯೆ ಅಥವಾ ತಮ್ಮ ಮೇಲಾಗಿರುವ ಪ್ರಭಾವ ಎಂದುಕೊಂಡು ಸುಮ್ಮನಾಗಿಬಿಡುತ್ತಾರೆ. ಅದು ಮತ್ತೂ ದೊಡ್ಡ ಸಮಸ್ಯೆ. ಹೀಗಾಗಿ ತಾವೇ ತಮ್ಮ ಮನೋರೋಗವನ್ನು ಪತ್ತೆ ಹಚ್ಚಿಕೊಳ್ಳುವುದಿಲ್ಲ. ಒಂದು ವೇಳೆ ಬೇರೆಯವರು ಪತ್ತೆ ಹಚ್ಚಿದರೆ ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ಸಮಾಜದಲ್ಲಿ ಮನೋರೋಗಿಗಳು ತುಂಬಾ ಸಹಜವಾಗಿ ಬಹಳ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನೋಡಿ ಸ್ವಾಮಿ ನಾವಿರೋದು ಹೀಗೆ ಅಂತ ಅವರೂ ಇರ್ತಾರೆ. ಅವರಿರೋದೇ ಹಾಗೆ ಅಂತ ಉಳಿದವರೂ ಇರ್ತಾರೆ.

ತನ್ನನ್ನು ತಾನು ಅರಿಯುವಂತಹ, ತನ್ನೊಳಗಿನ ಮತ್ತು ವಿಶ್ವದ ಆಂತರ್ಯದ ರಹಸ್ಯವನ್ನು ತಿಳಿಯುವಂತಹ ಆಧ್ಯಾತ್ಮದಲ್ಲಿ ಆತ್ಮ ಸಾಕ್ಷಾತ್ಕಾರ ಅತ್ಯಂತ ಮಹತ್ತರವಾದದ್ದು ಮತ್ತು ಉನ್ನತವಾದದ್ದು. ಹಾಗೆಯೇ ಯಾರೊಬ್ಬರೂ ವ್ಯಕ್ತಿಗತವಾಗಿ ಮತ್ತು ಸಾಮಾಜಿಕವಾಗಿ ತನ್ನನ್ನು ತಾನು ಮಾನಸಿಕ ನೆಲೆಯಿಂದ ತಿಳಿಯುವುದು ಮತ್ತು ಸಮಸ್ಯೆಗಳಿದ್ದಲ್ಲಿ ಪತ್ತೆ ಹಚ್ಚುವುದು, ರೋಗವಾಗಿದ್ದಲ್ಲಿ ಅದನ್ನು ಗುಣಪಡಿಸಿಕೊಳ್ಳೋದು ಬಹಳ ಮುಖ್ಯವಾದದ್ದು. ಇದು ಆಧ್ಯಾತ್ಮಿಕ ಸಾಧನೆಗಿಂತಲೂ ಬಹಳ ಹೆಚ್ಚಿನದು ಎಂದು ನನ್ನ ಅಭಿಪ್ರಾಯ. ತಾನೂ, ತನ್ನೊಂದಿಗೆ ಇತರರು, ಕುಟುಂಬ, ಸಮಾಜ, ದೇಶ ಎಲ್ಲವೂ ಆರೋಗ್ಯವಾಗಿರಲು ಸಾಧ್ಯವಾಗುವುದು ಇದರಿಂದ ಎಂದೇ ನನ್ನ ಅಂಬೋಣ.

ಯಾವುದೇ ಒಬ್ಬ ವ್ಯಕ್ತಿಯು ತನ್ನನ್ನು ತಾನು ಮತ್ತು ಇತರರನ್ನು ಅವರವರ ವರ್ತನೆಗಳ, ಭಾವನೆಗಳ, ವಿಚಾರಗಳ, ಕ್ರಿಯೆ-ಪ್ರತಿಕ್ರಿಯೆಗಳ ಮೂಲಕ ಮನೋವೈಜ್ಞಾನಿಕವಾಗಿ ಅರಿಯುತ್ತಾನೋ ಆಗ ಅವನಿಗೆ ಸಮಸ್ಯೆಗಳನ್ನು, ಸಂಘರ್ಷಗಳ ಕಾರಣಗಳನ್ನು, ಸಂಬಂಧಗಳಲ್ಲಿನ ಬಿರುಕುಗಳನ್ನು, ಖಿನ್ನತೆಗೆ ಮೂಲಗಳನ್ನು, ಭಿನ್ನ ಮನಸ್ಥಿತಿಗಳನ್ನು ಅರಿಯಲು ಸಾಧ್ಯವಾಗುತ್ತದೆ. ಆಗ್ರಹ ತೋರುವ  ಎಡೆಯಲ್ಲಿ ಅನುಕಂಪ ತೋರಲು ಸಾಧ್ಯವಾಗುತ್ತದೆ. ದ್ವೇಷ ಸಾಧಿಸುವ ಬದಲು ಪ್ರೀತಿಸಲು ಸಾಧ್ಯವಾಗುತ್ತದೆ. ದೂರುವ ಬದಲು ತಿದ್ದಲು ಸಾಧ್ಯವಾಗುತ್ತದೆ. ದೂಷಿಸುವ ಬದಲು ಅರಿಯಲು ಸಾಧ್ಯವಾಗುತ್ತದೆ. ವ್ಯಕ್ತಿಯೊಬ್ಬನ ಮಾತಿಗೆ, ಕೃತ್ಯಕ್ಕೆ ಆತನನ್ನೇ ಎತ್ತಿ ಎಸೆಯುವ ಬದಲು, ಅವನ ಯಾವುದೋ ದೋಷಪೂರಿತ ಗುಣದ ಕಣವನ್ನು ಹೆಕ್ಕಿ ಎಸೆಯಲು ಸಾಧ್ಯವಾಗುತ್ತದೆ. ಮೆತ್ತಿಕೊಂಡಿರುವ ಮಲಿನವನ್ನು ತೊಳೆಯಲು ಸಾಧ್ಯವಾಗುತ್ತದೆ. ಕಾಟ ಕೊಡುವ ಅವರ್ಯಾರದೋ ಹಟಕ್ಕೆ, ಮುಂದುವರಿಯಲು ಬಿಡದ ಇವರ್ಯಾರದೋ ಮೌಢ್ಯಕ್ಕೆ, ಎಷ್ಟೇ ತಿಳಿಯಾದ ತಿಳುವಳಿಕೆಯನ್ನು ನೀಡಿದರೂ ತಾವೆಂದಿಗೂ ಬಿಡದ ತಮ್ಮ ವಾದಕ್ಕೆ ಕಾರಣಗಳು ತಿಳಿಯುತ್ತವೆ.

ಹೀಗೆ ಮನೋವಿಜ್ಞಾನವು ವ್ಯಕ್ತಿಯ ಮತ್ತು ಸಮಾಜದ ಹೂರಣವನ್ನು ಅರಿವಿಗೆ ತರುತ್ತಾ ವ್ಯಕ್ತಿಗತವಾದ ಮಾನಸಿಕ ಮತ್ತು ಸಾಮಾಜಿಕ ಆರೋಗ್ಯವನ್ನು ಕಾಪಾಡುವುದರಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸುತ್ತದೆ. ಯಾವುದೇ ಸಮಾಜದ ಮಟ್ಟಿಗಾದರೂ ರಾಕೆಟ್ ವಿಜ್ಞಾನವು ಮನೋವಿಜ್ಞಾನದ ಅಗತ್ಯದ ಮುಂದೆ ಮೊದಲನೆಯ ಪ್ರಾಧಾನ್ಯತೆ ಆಗಲಾರದು ಎಂಬುದು ನನ್ನ ಗ್ರಹಿಕೆ.

ಮನೋರೋಗಕ್ಕೆ ನಾನಾ ಕಾರಣಗಳಿದ್ದಂತೆ, ನಾನಾ ಆಯಾಮಗಳೂ, ಮುಖಗಳೂ, ರೀತಿಗಳೂ ಇವೆ. ಯಾವುದೇ ಆದರೂ ಗುರುತು ಹಚ್ಚಲು ಸಾಕಷ್ಟು ಸಾಧ್ಯವಿದೆ. ಮಾನಸಿಕ, ಭಾವನಾತ್ಮಕ ಮತ್ತು ಸಾಂದರ್ಭಿಕ ಸಮಸ್ಯೆಗಳು ಮನೋರೋಗವಾಗಿ ಉಲ್ಬಣಿಸುವ ಮುನ್ನವೇ ಎಚ್ಚೆತ್ತುಕೊಳ್ಳುವ ಮತ್ತು ಉಪಚರಿಸಿಕೊಳ್ಳುವ ಅಗತ್ಯವಿದೆ.

ಮನೋರೋಗದ ಹಾಳು ಗಾದೆ

ಮನೋರೋಗಕ್ಕೆ ಮದ್ದಿಲ್ಲ ಎಂಬ ಗಾದೆಯ ಮಾತು ತಿಳಿವಿನ ಕಾಲ ಪಕ್ವವಾಗಿಲ್ಲದಿದ್ದಾಗ ಹುಟ್ಟಿದೆ. ಆದರೆ ಇಂದು ಹಾಗಿಲ್ಲ. ವೇದ ಸುಳ್ಳಾದರೂ ಗಾದೆ ಸುಳ್ಳಲ್ಲ ಎಂಬುದೇನೂ ನಿಜವಲ್ಲ. ಆಯಾ ಕಾಲಘಟ್ಟದಲ್ಲಿ, ಆಯಾ ವ್ಯವಸ್ಥೆಗಳಿಗೆ ಅನುಗುಣವಾಗಿ ಹುಟ್ಟಿರುವ ಗಾದೆಗಳು ಎಲ್ಲ ಕಾಲಕ್ಕೂ ಸಲ್ಲುವುದಿಲ್ಲ. ಇರಲಿ, ಸದ್ಯಕ್ಕೆ ಇಷ್ಟು ನಂಬೋಣ. ಯಾವುದೇ ಮನೋರೋಗಕ್ಕೆ ಮದ್ದಿದೆ. ಆದರೆ ಗುರುತಿಸಬೇಕು, ಒಪ್ಪಿಕೊಳ್ಳಬೇಕು ಮತ್ತು ಚಿಕಿತ್ಸೆ ನೀಡಬೇಕು. ವ್ಯಕ್ತಿಗತವಾಗಿ ಒಬ್ಬ ಮಾನಸಿಕವಾಗಿ ಆರೋಗ್ಯವಂತನಾದರೆ ಅವನು ಆರೋಗ್ಯಕರವಾದಂತಹ ಪರಿಸರ ನಿರ್ಮಿಸುವುದರಲ್ಲಿ, ಆರೋಗ್ಯಕರವಾದಂತಹ ವಾತಾವರಣವನ್ನು ಮೂಡಿಸುವುದರಲ್ಲಿ ತನ್ನ ಪಾತ್ರ ನಿರ್ವಹಿಸುತ್ತಾನೆ. ತಾನೂ ನೆಮ್ಮದಿಯಾಗಿ ಬಾಳುತ್ತಾನೆ, ಇತರರನ್ನೂ ಬಾಳಗೊಡುತ್ತಾನೆ.

ತನ್ನಲ್ಲಿ ಮತ್ತು ಇತರರಲ್ಲಿ ರೋಗಲಕ್ಷಣಗಳನ್ನು ಕಂಡುಕೊಂಡು, ಎಚ್ಚೆತ್ತುಕೊಂಡು ಮಾನಸಿಕವಾಗಿ ಎಲ್ಲರೂ ಗುಣಮುಖರಾಗಲಿ ಎಂಬುದೇ ಈ ಲೇಖನಮಾಲೆಯ ಉದ್ದೇಶ.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ.)

ಯೋಗೇಶ್ ಮಾಸ್ಟರ್
ಕಾದಂಬರಿ, ನಾಟಕ, ಕವಿತೆ, ಮಕ್ಕಳ ಸಾಹಿತ್ಯ ಇತ್ಯಾದಿ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಬರೆಯುತ್ತಿರುವ ಇವರು ಖ್ಯಾತ ಆಪ್ತ ಸಮಾಲೋಚಕರು.

You cannot copy content of this page

Exit mobile version