ಅಮೆರಿಕ ಪ್ರವಾಸದ ವೇಳೆ ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆಗಳಿಗೆ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಪ್ರತಿಕ್ರಿಯಿಸಿದ್ದಾರೆ.
ರಾಹುಲ್ ಹೇಳಿಕೆಯನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ. ಸೋಮವಾರ ಜಾರ್ಖಂಡ್‌ನ ರಾಜಧಾನಿ ರಾಂಚಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹಿಮಂತ ಶರ್ಮಾ ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದರು. ರಾಹುಲ್ ಗಾಂಧಿ ಯಾವಾಗಲೂ ಚೀನಾಕ್ಕೆ ಆದ್ಯತೆ ನೀಡುತ್ತಾರೆ. ಭಾರತವನ್ನು ಅವಮಾನಿಸಿ ಮೂಲಕ ಚೀನಾವನ್ನು ಮಹಾನ್ ದೇಶ ಎಂದು ವೈಭವೀಕರಿಸುತ್ತಿದ್ದಾರೆ ಎಂದು ದುಯ್ಯದಾಡಿದರು.
ಚೀನಾದಲ್ಲಿ ಪ್ರಜಾಪ್ರಭುತ್ವ ಮತ್ತು ಧರ್ಮದ ಸ್ವಾತಂತ್ರ್ಯವಿಲ್ಲ ಎಂದು ರಾಹುಲ್ ಗಾಂಧಿ ಜನರಿಗೆ ಹೇಳುತ್ತಾರ ಎಂದು ಅವರು ಕೇಳಿದರು. ಕಾಂಗ್ರೆಸ್ ಪಕ್ಷ ಮತ್ತು ಚೀನಾದ ಕಮ್ಯುನಿಸ್ಟ್ ಪಕ್ಷದ ನಡುವೆ ಮಾಡಿಕೊಂಡಿರುವ ಒಪ್ಪಂದವನ್ನು ಬಹಿರಂಗಪಡಿಸುವಂತೆ ಹಿಮಂತ ಶರ್ಮಾ ಆಗ್ರಹಿಸಿದ್ದಾರೆ. ಇದೇ ವೇಳೆ ಟೆಕ್ಸಾಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಹುಲ್ ಗಾಂಧಿ ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಟೆಕ್ಸಾಸ್ ವಿಶ್ವವಿದ್ಯಾನಿಲಯದಲ್ಲಿ ಭಾರತೀಯ ಮೂಲದ ಜನರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ಆರೆಸ್ಸೆಸ್ ಏಕ ರೀತಿಯ ಭಾರತದ ಕಲ್ಪನೆಯ ಬಗ್ಗೆ ಯೋಚಿಸುತ್ತದೆ, ಆದರೆ ಭಾರತವು ವಿಭಿನ್ನ ಆಲೋಚನೆಗಳಿಗೆ ವೇದಿಕೆಯಾಗಿದೆ ಎಂದು ಅವರು ಭಾವಿಸುತ್ತಾರೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಸಂವಿಧಾನದ ಮೇಲೆ ದಾಳಿ ಮಾಡಲು ಮುಂದಾಗಿದ್ದಾರೆ ಎಂಬುದನ್ನು ಜನರು ಮನಗಂಡಾಗ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ಪ್ರಬಲ ಹೋರಾಟ ನಡೆದಿತ್ತು ಎಂದು ಸ್ಮರಿಸಿದರು.