ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣಾ ಭರಾಟೆ ಭರದಿಂದ ಸಾಗುವಾಗಲೇ ಈಗ ಕೇಂದ್ರ ಮಂತ್ರಿ ಕುಮಾರಸ್ವಾಮಿಯವರ ಪ್ರತಿಷ್ಠಿತ ಕ್ಷೇತ್ರ ಮಂಡ್ಯ ಜಿಲ್ಲೆಯಲ್ಲೇ ಜೆಡಿಎಸ್ ಗೆ ತೀವ್ರ ಮುಖಭಂಗವಾಗಿದೆ. ಅದರಲ್ಲೂ ದೇವೇಗೌಡರ ಬೀಗರ ಊರಾದ ಮದ್ದೂರಿನ ಪುರಸಭೆಯಲ್ಲಿ ಕಾಂಗ್ರೆಸ್ ಶಾಸಕರ ಕರಾಮತ್ತು ಜೋರಾಗಿ ನಡೆದಿದೆ.
ಮದ್ದೂರು ಪುರಸಭೆ ಚುನಾವಣೆಯಲ್ಲಿ ಶಾಸಕ ಕದಲೂರು ಉದಯ್ ಅವರು ರಣತಂತ್ರ ರೂಪಿಸಿದ್ದು, ಜೆಡಿಎಸ್ ಬಿಜೆಪಿ ಮೈತ್ರಿಗೆ ಭಾರೀ ಮುಖಭಂಗ ಉಂಟಾಗಿದೆ. 23 ಸದಸ್ಯರ ಸಂಖ್ಯಾಬಲ ಹೊಂದಿರುವ ಮದ್ದೂರು ಪುರಸಭೆಯಲ್ಲಿ ಶಾಸಕ ಮತ್ತು ಸಂಸದರ ಮತ ಸೇರಿ ಒಟ್ಟು 25 ಮತ ಹೊಂದಿದೆ. ಇದರಲ್ಲಿ ಜೆಡಿಎಸ್ ಪಕ್ಷ ಅಧಿಕಾರ ಹಿಡಿಯುವ ಎಲ್ಲಾ ಸಾಧ್ಯತೆಗಳಿದ್ದರೂ ಶಾಸಕರ ರಣತಂತ್ರದಿಂದ ಕಾಂಗ್ರೆಸ್ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಒಟ್ಟು 15 ಮತಗಳನ್ನ ಪಡೆಯುವ ಮೂಲಕ ಅಧ್ಯಕ್ಷ- ಉಪಾಧ್ಯಕ್ಷ ಪಟ್ಟ ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಜೆಡಿಎಸ್ 13 ಸದಸ್ಯರ ಸಂಖ್ಯಾಬಲ ಹೊಂದಿದ್ದರೂ ಜೆಡಿಎಸ್ ನ 6 ಸದಸ್ಯರ ಮತ ಕಾಂಗ್ರೆಸ್ ಪಾಲಾಗಿದೆ. ಆ ಮೂಲಕ ಜೆಡಿಎಸ್ ಬಿಜೆಪಿ ಮೈತ್ರಿಕೂಟ ತೀವ್ರ ಮುಖಭಂಗ ಅನುಭವಿಸಿದೆ.