ಹುಬ್ಬಳ್ಳಿ, ಸೆ. 09: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ʼಗೃಹಜ್ಯೋತಿʼ ಯೋಜನೆಗೆ ಇದೀಗ ವರ್ಷ ತುಂಬಿದೆ. ಈ ಸಂದರ್ಭದಲ್ಲಿ ವಿದ್ಯುತ್ ಕಂಪನಿಗಳು ಬಾಡಿಗೆ ಮನೆಯವರಿಗಾಗಿ ಡಿ.ಲಿಂಕ್ ಎನ್ನುವ ಹೊಸ ಸೌಲಭ್ಯವನ್ನು ಘೋಷಿಸಿದೆ. ಈ ಯೋಜನೆಯಡಿ ಫಲಾನುಭವಿ ಬಳಕೆದಾರರಿಗೆ 200 ಯೂನಿಟ್ ತನಕ ವಾರ್ಷಿಕ ಬಳಕೆಯ ಸರಾಸರಿ ಅನುಸರಿಸಿ ಉಚಿತ ವಿದ್ಯುತ್ ನೀಡಲಾಗುತ್ತಿದೆ.
ಬಾಡಿಗೆ ಮನೆಗಳಲ್ಲಿ ವಾಸ ಮಾಡುವವರು ಅಗ್ರಿಮೆಂಟ್ ಮುಗಿದಾಗ, ಅಥವಾ ಮನೆ ಬದಲಾಯಿಸಬೇಕು ಎನ್ನಿಸಿದಾಗ ಒಂದೆಡೆಯಿಂದ ಇನ್ನೊಂದೆಡೆಗೆ ತಮ್ಮ ವಾಸ್ತವ್ಯವನ್ನು ಬದಲಾಯಿಸುವುದು ಮಾಮೂಲಿ. ಅಂತಹ ಕುಟುಂಬಗಳಿಗೆ ವಿದ್ಯುತ್ ವಿತರಣಾ ಕಂಪನಿಗಳು ಒಂದು ಗುಡ್ ನ್ಯೂಸ್ ನೀಡಿವೆ.
ಈಗ ಇಂತಹ ಬಾಡಿಗೆ ಮನೆಯ ನಿವಾಸಿಗಳು ತಾವು ಹೋದ ಹೊಸ ಮನೆಯಲ್ಲಿಯೂ ಉಚಿತ ವಿದ್ಯುತ್ ಪಡೆಯಲು ಅನುಕೂಲ ಮಾಡಿಕೊಡಲು ವಿದ್ಯುತ್ ವಿತರಣಾ ಕಂಪನಿಗಳು ನಿರ್ಧರಿಸಿವೆ.
ಇದನ್ನು ಪಡೆಯಲು ನೀವು ಒಂದು ಮನೆಯಿಂದ ಇನ್ನೊಂದು ಮನೆಗೆ ಹೋದ ನಂತರ ಮೊದಲಿದ್ದ ಮನೆಯ ಮೀಟರ್ ಸಂಖ್ಯೆಯೊಂದಿಗೆ ಜೋಡಿಸಿದ್ದ ನಿಮ್ಮ ಆಧಾರ್ ಸಂಖ್ಯೆಯನ್ನು ಮೊದಲು ಡಿ-ಲಿಂಕ್ ಮಾಡಬೇಕು. ನಂತರ ಹೊಸ ಮನೆಯ ಮೀಟರ್ ಸಂಖ್ಯೆಯೊಂದಿಗೆ ನಿಮ್ಮ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಬೇಕು.
ಹುಬ್ಬಳ್ಳಿಯ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಹೆಸ್ಕಾಂ) ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ 2024ರ ಜುಲೈ ಅಂತ್ಯಕ್ಕೆ ಒಟ್ಟು 33.25 ಲಕ್ಷ ಜನರು ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಅವುಗಳ ಪೈಕಿ 32.67 ಲಕ್ಷ ಜನರು ಸದರಿ ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ. ಇಂತಹವರು ಮನೆ ಬದಲಾಯಿಸುವವರಿದ್ದರೆ ಅವರಿಗೆ ಡಿ.ಲಿಂಕ್ ಸೌಲಭ್ಯ ಸಿಗಲಿದೆ.
ಗೃಹ ಬಳಕೆದಾರರಿಗೆ
https://sevasindhu.karnataka.gov.in/GruhaJyothi_Delink/GetAadhaarData.aspxಲಿಂಕ್ ಮೂಲಕ ನೋಂದಣಿ ಮಾಡಿಕೊಂಡು ಈ ಡಿ-ಲಿಂಕ್ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಗೃಹ ಜ್ಯೋತಿ ಪೋರ್ಟಲ್ ಓಪನ್ ಆಗದೇ ಇದ್ದಲ್ಲಿ, Cache Memory Clear ಮಾಡಿ ನಂತರ ಪೋರ್ಟಲ್ ಲಿಂಕ್ ಕ್ಲಿಕ್ ಮಾಡಿ ಸೇವೆ ಪಡೆಯಬಹುದು.
ಹೊಸ ಮನೆಗೆ ಬಾಡಿಗೆ ಹೋದವರಿಗೆ
ನೀವು ಮೊದಲು ಮಾಡಬೇಕಿರುವ ಕೆಲಸವೇನೆಂದರೆ ನೀವು ಹೊಸದಾಗಿ ಹೋದ ಮನೆಯಲ್ಲಿ ಮೊದಲು ಇದ್ದವರು ತಮ್ಮ ಆಧಾರ್ ಸಂಖ್ಯೆಯನ್ನು ಆರ್ ಆರ್ ನಂಬರ್ ಜೊತೆ ಈಗಾಗಲೇ ಡಿ-ಲಿಂಕ್ ಮಾಡಿದ್ದಾರೆಯೇ ಎಂದು ಪರಿಶೀಲಿಸುವುದು. ಒಂದು ವೇಳೆ ಆಗಿರದಿದ್ದರೆ ಡಿ-ಲಿಂಕ್ ಮಾಡಿ, ಹೊಸದಾಗಿ ಆರ್.ಆರ್. ನಂಬರ್ ಲಿಂಕ್ ಮಾಡಿಕೊಂಡು ನೀವಿರುವ ಮನೆಯಲ್ಲಿ ಗೃಹ ಜ್ಯೋತಿಯ ಲಾಭ ಪಡೆದುಕೊಳ್ಳಬೇಕು.
ಕರ್ನಾಟಕ ರಾಜ್ಯ ಸರ್ಕಾರದ ಪ್ರಕಾರ, ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳು ಒಟ್ಟು 1.56 ಕೋಟಿಯಷ್ಟು ಜನ. ಇದರಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಸಹಾಯವಾಗಲಿದೆ. ಆದರೆ, ಮನೆ ಬದಲಿಸುವಾಗ ಈ ಸೌಲಭ್ಯ ಮುಂದುವರಿಸಲು ಡಿ-ಲಿಂಕ್ ಸೌಲಭ್ಯ ಕಲ್ಪಿಸಬೇಕೆಂದು ಕೋರಿದ್ದರು. ಅದರಂತೆ ಜನರ ಬೇಡಿಕೆ ಈಡೇರಿಸಿದ್ದೇವೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಅವರು ತಿಳಿಸಿದ್ದಾರೆ.