Home ಅಂಕಣ ಹಿಂದುತ್ವ ರಾಜಕಾರಣದ ಕಥೆ – 28 : ಗಾಂಧಿಯ ವಿರುದ್ಧ ಹಿಂದುತ್ವ

ಹಿಂದುತ್ವ ರಾಜಕಾರಣದ ಕಥೆ – 28 : ಗಾಂಧಿಯ ವಿರುದ್ಧ ಹಿಂದುತ್ವ

0

ಕ್ಷಮಾಪಣೆ ಬರೆದುಕೊಟ್ಟು ಜೈಲಿನಿಂದ ಹೊರಬಂದ ಸಾವರ್ಕರ್‌ ಅವರ ಈ ಸೈದ್ಧಾಂತಿಕ ಹುಡುಕಾಟವನ್ನು, ಬ್ರಿಟಿಷ್‌ ವಿರೋಧಿತನದಿಂದ ಬ್ರಿಟಿಷ್‌ ಆಡಳಿತದ ಮೌನ ಬೆಂಬಲಿಗನಾಗಿಯೂ ಸ್ವಾತಂತ್ರ್ಯ ಹೋರಾಟದ ಎದುರಾಳಿಯಾಗಿಯೂ ಆದ ಬದಲಾವಣೆಯನ್ನು ಹಲವರು ಆಶ್ಚರ್ಯದಿಂದ ಗಮನಿಸುತ್ತಿದ್ದರು.

ಹಿಂದುತ್ವ ಜನಾಂಗೀಯ ರಾಜಕಾರಣ ಒಮ್ಮೆಯೂ ಬ್ರಿಟಿಷರನ್ನು ನೋಯಿಸಲಿಲ್ಲ ಎಂಬುದನ್ನು ನಾವು ಗಮನಿಸಿದೆವು. ಅದೇ ಹೊತ್ತು ಭಾರತದ ಬಹುಜನ ಸಂಸ್ಕೃತಿಯ ಮೇಲೆ ನಿರಂತರವಾಗಿ ಬಿರುಕುಗಳನ್ನು ಮೂಡಿಸುವ ಕೊಡಲಿ ಕಾವಾಗಿ ಅದು ಪರಿಣಮಿಸಿತ್ತು. ಗಾಂಧಿಯ ನಾಯಕತ್ವದ ರಾಷ್ಟ್ರೀಯ ಆಂದೋಲನವನ್ನು ಅದು ನಿರಂತರವಾಗಿ ವಿರೋಧಿಸತೊಡಗಿತು. ತನ್ನ ರತ್ನಗಿರಿ ವಾಸದ ಕಾಲದಲ್ಲಿ ಹಲವು ಹೆಸರುಗಳ ಮೂಲಕ ಗಾಂಧಿಯನ್ನು ವಿರೋಧಿಸುವ ಲೇಖನಗಳನ್ನು ಸಾವರ್ಕರ್‌ ಬರೆಯುತ್ತಾರೆ. ರತ್ನಗಿರಿಯ ಕಾಲದಲ್ಲಿ ಮೂರು ನಾಟಕಗಳನ್ನು ಸಾವರ್ಕರ್‌ ಬರೆಯುತ್ತಾರೆ. ಈ ಮೂರೂ ನಾಟಕಗಳು ಜನಾಂಗೀಯ ರಾಜಕಾರಣವನ್ನು ಎತ್ತಿ ಹಿಡಿಯುವಂತವು. ಮೊದಲನೆಯದು ಸಂಗೀತ್‌ ಉಷಾಪ್‌, ಮತಾಂತರದ ಕುರಿತು ದಲಿತ ಮತ್ತು ಹಿಂದುಳಿದ ಜಾತಿಗಳ ಜನರಿಗೆ ಮುನ್ನೆಚ್ಚರಿಕೆ ನೀಡುವುದು. ಮುಸ್ಲಿಮರು ಮತ್ತು ಕ್ರೈಸ್ತರು ಮತಾಂತರಕ್ಕೆ ಹೊಂಚು ಹಾಕಿ ಕುಳಿತಿದ್ದಾರೆಂದು ಅದರಲ್ಲಿ ಹೇಳಲಾಗಿತ್ತು. ಮರಾಠಿಯ ಪ್ರಮುಖ ಸಾಹಿತ್ಯ ಮಾಸಪತ್ರಿಕೆ ಮಾಜ್‌ ಅದರ ಸಾಹಿತ್ಯಿಕ ಗುಣಮಟ್ಟನ್ನು ಅತ್ಯಂತ ಕಟುವಾಗಿ ವಿಮರ್ಶಿಸಿತ್ತು. ಎರಡನೆಯದು ಸನ್ಯಾಸ ಖಡ್ಗ, ಬುದ್ಧನ ಬದುಕನ್ನು ಆಧಾರವಾಗಿಟ್ಟ ನಾಟಕವೆಂದು ಅನಿಸಿದರೂ ಅದು ನಡೆಸಿದ್ದು ಮಾತ್ರ ಗಾಂಧಿಯ ಅಹಿಂಸಾ ಹೋರಾಟದ ಕೀಳು ವಿಮರ್ಶೆಯಾಗಿತ್ತು. ಚಿಂತಾಮನ್‌ ರಾವ್‌ ಕೋಲತ್ಕರ್ ಎಂಬ ನಟ ಮತ್ತು ನಾಟಕ ಕಂಪೆನಿಯ ಒಡೆಯನ ಆಗ್ರಹದಂತೆ ಆ ನಾಟಕವನ್ನು ಬರೆಯಲಾಗಿತ್ತು. ಅದಕ್ಕಾಗಿ ಆ ಕಾಲದಲ್ಲಿ ಎಲ್ಲೂ ಕೇಳಿರದಷ್ಟು ದೊಡ್ಡ ಮೊತ್ತವಾದ ಸಾವಿರ ರೂಪಾಯಿಗಳನ್ನು ಕೋಲತ್ಕರ್‌ ಸಾವರ್ಕರ್‌ಗೆ ನೀಡಿದ್ದರು. ಲತಾ ಮಂಗೇಷ್ಕರ್‌ ಅವರ ತಂದೆ, ಸಾವರ್ಕರ್‌ ಅವರ ಕಟ್ಟಾ ಅನುಯಾಯಿ ದೀನನಾಥ್‌ ಮಂಗೇಷ್ಕರ್‌ ಅದಕ್ಕೆ ಸಂಗೀತ ನೀಡಿದ್ದರು. ಆ ನಾಟಕವೂ ಗೆಲವು ಕಾಣಲಿಲ್ಲ. ಮೂರನೆಯ ನಾಟಕ ಉತ್ತರಕ್ರಿಯೆ, ಮುಸ್ಲಿಂ ವಿರೋಧಿ ನೀತಿಯನ್ನು ಎತ್ತಿ ಹಿಡಿಯುವ ನಾಟಕವಾಗಿತ್ತು. ಪೇಶ್ವೆಗಳನ್ನು ಧೀರರಾದ ಮುಸ್ಲಿಂ ವಿರೋಧಿ ನಾಯಕರೆಂದು ಬಣ್ಣಿಸುವ ಆ ನಾಟಕವೂ ನೆಲೆಕಚ್ಚಿತ್ತು.

ಕ್ಷಮಾಪಣೆ ಬರೆದುಕೊಟ್ಟು ಜೈಲಿನಿಂದ ಹೊರಬಂದ ಸಾವರ್ಕರ್‌ ಅವರ ಈ ಸೈದ್ಧಾಂತಿಕ ಹುಡುಕಾಟವನ್ನು, ಬ್ರಿಟಿಷ್‌ ವಿರೋಧಿತನದಿಂದ ಬ್ರಿಟಿಷ್‌ ಆಡಳಿತದ ಮೌನ ಬೆಂಬಲಿಗನಾಗಿಯೂ ಸ್ವಾತಂತ್ರ್ಯ ಹೋರಾಟದ ಎದುರಾಳಿಯಾಗಿಯೂ ಆದ ಬದಲಾವಣೆಯನ್ನು ಹಲವರು ಆಶ್ಚರ್ಯದಿಂದ ಗಮನಿಸುತ್ತಿದ್ದರು. ಸಾವರ್ಕರ್‌ ಆತ್ಮಕಥೆಯನ್ನು ಅನುಭಾವಪೂರ್ವಕ ಬರೆದ ವೈಭವ್‌ ಪುರಂದರೇ ಕೂಡ ಇಂತಹದ್ದೊಂದು ಸಂಗತಿಯನ್ನು ಬೊಟ್ಟು ಮಾಡಿ ಬರೆಯುತ್ತಾರೆ. ಇಂಡಿಯನ್‌ ನ್ಯಾಷನಲ್‌ ಹೆರಾಲ್ಡ್‌ ಮತ್ತು ಇಂಡಿಪೆಂಡೆಂಟ್‌ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದ ಪ್ರಸಿದ್ಧ ಪತ್ರಕರ್ತ ವಾಮನ್‌ ಕಬಾಡಿ ಅವರ ಅನುಭವವನ್ನು ಪುರಂದರೇ ಬರೆಯುತ್ತಾರೆ. ೧೯೩೦ರ ಆರಂಭದಲ್ಲಿ ಗೋವಾದಿಂದ ಬಾಂಬೆಗೆ ಬೋಟ್‌ ಮೂಲಕ ಕಬಾಡಿ ಪ್ರಯಾಣಿಸುತ್ತಿದ್ದರು. ರತ್ನಗಿರಿ ಜಿಲ್ಲೆಯಲ್ಲಿ ಯಾವುದೋ ಕಾರ್ಯಕ್ರಮದಲ್ಲಿ ಭಾಗವಹಿಸಿ ಮರಳುತ್ತಿದ್ದ ಸಾವರ್ಕರ್‌ ಅದೇ ಬೋಟ್‌ ಹತ್ತುತ್ತಾರೆ. ಅನ್ನ ಮತ್ತು ಮೀನು ಸಾರು ಊಟ ಮಾಡಿ ಕುಳಿತುಕೊಂಡಿದ್ದ ಸಾವರ್ಕರ್‌ ಬಳಿಗೆ ಕಬಾಡಿ ಲಗುಬಗೆಯಿಂದ ಬರುತ್ತಾರೆ. ಆದರೆ, ತನ್ನ ನಿರೀಕ್ಷೆಗಳು ಬಡಮೇಲಾಗುವಂತೆ ಸಾವರ್ಕರ್‌ ಅಂದು ಅಸಹಕಾರ ಚಳುವಳಿಯ ಕುರಿತು ಅತ್ಯಂತ ಕಟುವಾಗಿ ಟೀಕಿಸುತ್ತಾರೆ. ಗಾಂಧಿ ಮತ್ತು ಖಿಲಾಫತ್‌ ಚಳುವಳಿಯನ್ನು ಇನ್ನಿಲ್ಲದಂತೆ ಗೇಲಿ ಮಾಡುತ್ತಾರೆ. ಕಬಾಡಿ ನಂತರ ಹೀಗೆ ಬರೆದರು. ʼಆತ ದೊಡ್ಡ ಪಂಡಿತ ಮತ್ತು ಭಾಷಣಗಾರ ಎಂಬುದರಲ್ಲಿ ಯಾವುದೇ ಸಂಶಯವೂ ಇಲ್ಲ. ಯೋಚಿಸುವ ಮೊದಲೇ ಮಾತುಗಳು ತೂರಿ ಬರುತ್ತಿರುವುದನ್ನು ನಾನು ಗಮನಿಸಿದೆ. ಅವು ಅಲ್ಲೇ ಇದ್ದವೇನೋ ಎಂಬಂತೆ.ʼ ಆದರೆ ಆ ಸಾವರ್ಕರ್‌ ಒಂದು ರಾಷ್ಟ್ರೀಯ ದುರಂತವಾಗಿ ಕಬಾಡಿಗೆ ಅನಿಸುತ್ತದೆ. ʼಬ್ರಿಟಿಷರ ಕೈಯಿಂದ ಅನೇಕ ಕೆಟ್ಟ ಅನುಭವಗಳನ್ನು ಪಡೆದುಕೊಂಡಿದ್ದ ಆ ಮಹಾನ್‌ ಸಾಮ್ರಾಜ್ಯ ವಿರೋಧಿಯ ಗಮನವು ಈಗ ಆ ದಬ್ಬಾಳಿಕೆ ನಡೆಸುವವರ ಮೇಲಿನಿಂದ ಇಳಿದು, ದೇಶವನ್ನು ಸ್ವಾತಂತ್ರ್ಯದ ಹೊಸ್ತಿಲಿಗೆ ತಂದು ನಿಲ್ಲಿಸುವ ದೃಢ ನಿಶ್ಚಯ ಕೈಗೊಂಡಿರುವ ಗಾಂಧಿಯನ್ನು ವಿರೋಧಿಸುವಲ್ಲಿಗೆ ಬಂದು ನಿಂತಿದೆ.ʼ

ಸಾವರ್ಕರ್‌ ಬ್ರಿಟಿಷ್‌ ವಿರೋಧಿಯಾಗಿದ್ದ ಕಾಲದಲ್ಲೂ ಗಾಂಧಿಯೊಂದಿಗೆ ಒಮ್ಮತಕ್ಕೆ ಬಂದಿರಲಿಲ್ಲವೆಂದು ನಾವು ಮೊದಲೇ ನೋಡಿದ್ದೆವು. ರಾಜಾಡಳಿತ ಕಾಲದ ರಾಜನ ಮನಸ್ಥಿತಿಯನ್ನು ಸಾವರ್ಕರ್‌ ತನ್ನ ಬದುಕಿನುದ್ದಕ್ಕೂ ಇಟ್ಟುಕೊಂಡಿದ್ದರು. ಅಧಿಕಾರಯುತ ದರ್ಪವೇ ಸಾವರ್ಕರ್‌ ಬದುಕಿನುದ್ದಕ್ಕೂ ಪಾಲಿಸಿದ ನೀತಿಯಾಗಿತ್ತು. ಆದ್ದರಿಂದಲೇ ಅಧಿಕಾರದ ಸುತ್ತಲೇ ಇರುವ ರಾಜ, ರಾಜಗುರು ಮೊದಲಾದ ಅದೃಶ್ಯ ಕಲ್ಪನೆಗಳ ಸುತ್ತಲೇ ಸಾವರ್ಕರ್‌ ಆಡುತ್ತಿದ್ದರು. ಈ ಕಾರಣದಿಂದಲೇ ಒಬ್ಬ ರಾಜನಿಗೆ ಇರುವ ಹಾಗೆ ಶತ್ರುಗಳು ಮತ್ತು ಮಿತ್ರರು ಅದಲು ಬದಲಾಗುತ್ತಲೇ ಹೋದರು. ಬ್ರಿಟಿಷರು ಮತ್ತು ಮುಸ್ಲಿಮರು ಆರಂಭ ಕಾಲದ ಶತ್ರುಗಳಾಗಿದ್ದರು. ನಂತರ ಅದು ಬ್ರಿಟಿಷ್‌ ಮಾತ್ರ ಎಂಬಲ್ಲಿಗೆ ಬಂದಿತ್ತು. ಕ್ಷಮಾಪಣೆ ಬರೆದುಕೊಟ್ಟು ಹೊರಬಂದ ಮೇಲೆ ಮುಸ್ಲಿಮರು ಮತ್ತು ಅಲ್ಪಸಂಖ್ಯಾತರು ಶತ್ರುಗಳಾದರು. ಆದ್ದರಿಂದ ಸೈದ್ಧಾಂತಿಕ ಬದ್ಧತೆಯಾಗಲಿ ನೈತಿಕ ಸಮಸ್ಯೆಗಳಾಗಲಿ ಸಾವರ್ಕರನ್ನು ಎಲ್ಲೂ ಸೋಂಕುವುದೇ ಇಲ್ಲ. ಅದರ ಬದಲಿಗೆ, ಅಧಿಕಾರದ ಕಡೆಗಿನ ಯಾತ್ರೆಯಲ್ಲಿ ತನಗೆ ತಾನೇ ಕೊಡಲಿಯೇಟು ನೀಡದಂತೆ ಎಚ್ಚರಿಕೆ ವಹಿಸಿಕೊಳ್ಳುವುದು, ತನಗೆ ಬೇಕಾಗಿ ಬಲಿದಾನಗೈಯ್ಯುವಷ್ಟು ವಿಧೇಯತೆಯನ್ನು ತನ್ನ ಸುತ್ತಲಿನ ಜನರಲ್ಲಿ ಹುಟ್ಟಿಸುವುದು, ಅಧಿಕಾರದೆಡೆಗಿನ ಹೆಜ್ಜೆಗಳಿಗೆ ಅಗತ್ಯವಾದ ತಂತ್ರಗಳನ್ನು ಆಗಾಗ ತಾತ್ವಿಕತೆ ಎಂಬ ಹೆಸರಿನಲ್ಲಿ ಮುಂದಿಡುವುದು ಮುಂತಾದವುಗಳನ್ನು ಸಾವರ್ಕರ್‌ ನಡೆಸುತ್ತಲೇ ಬಂದರು. ಬಹುತೇಕ ಸಂದರ್ಭಗಳಲ್ಲಿ ಶಿವಾಜಿಯ ಕಥೆಗಳು ಎಂದು ಹೇಳಿಕೊಂಡು ವಾದಿಸುತ್ತಿದ್ದರು. ಈಗಲೂ ರಾಜಾಡಳಿತವಿದೆ ಎಂಬ ರೀತಿಯಲ್ಲಿ. ಗಾಂಧಿ ಬ್ರಿಟಿಷರನ್ನು ವಿರೋಧಿಸುವುದು ಎಂಬುದಕ್ಕಿಂತ ವಸಾಹತುಶಾಹಿ ಎಂಬ ಶೋಷಣಾ ವ್ಯವಸ್ಥೆಯನ್ನು ವಿರೋಧಿಸುತ್ತಿದ್ದರು. ಆದ್ದರಿಂದ ಅಧಿಕಾರದ ಸಮೀಕರಣಗಳನ್ನು ಬಳಸಿಕೊಂಡು ರಾಜಿ ಮಾಡಿಕೊಳ್ಳಲು ಗಾಂಧಿ ತಯಾರಿರಲಿಲ್ಲ. ಒಂದು ಪ್ರಜಾಸತ್ತಾತ್ಮಕ ಸಮಾಜದ ಸದಸ್ಯನಾಗಿದ್ದುಕೊಂಡು ಗಾಂಧಿ ತನ್ನ ಅಭಿಪ್ರಾಯಗಳನ್ನು ಮುಂದಿಟ್ಟರು. ಪ್ರತಿ ದಿನವೂ ತಿದ್ದಿಕೊಳ್ಳುವಿಕೆಗೆ ವಿಧೇಯರಾಗಿ ತನ್ನನ್ನು ತಾನೇ ಒಡೆದು ಕಟ್ಟಿದರು.

೧೯೦೭ರ ಅಕ್ಟೋಬರ್‌ ತಿಂಗಳಲ್ಲಿ ಸಾವರ್ಕರ್‌ ಮತ್ತು ಗಾಂಧಿಯ ಮೊದಲ ಭೇಟಿ ಲಂಡನ್ನಿನಲ್ಲಿ ನಡೆದಿತ್ತೆಂದು ನಾವು ನೋಡಿದೆವು. ಮದನ್‌ ಲಾಲ್‌ ಡಿಂಗ್ರಾ ನಡೆಸಿದ ಕರ್ಜನ್‌ ವಿಲ್ಲಿಯ ಕೊಲೆಯ ಕುರಿತು ಬಿಸಿಬಿಸಿ ಚರ್ಚೆಗಳು ನಡೆಯುತ್ತಿದ್ದ ಕಾಲವಾಗಿತ್ತದು. ಗಾಂಧಿ ಸಹಜವಾಗಿಯೇ ಈ ಹಿಂಸಾ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದರು. ಅದರ ನಂತರ ಬೇಸ್‌ ವಾಟರ್‌ನಲ್ಲಿರುವ ನಿಜಾಮುದ್ದೀನ್‌ ಇಂಡಿಯನ್‌ ರೆಸ್ಟೋರೆಂಟಲ್ಲಿ ನಡೆದ ಭಾರತೀಯರ ಸಮ್ಮೇಳನದಲ್ಲಿ ಗಾಂಧಿ ಅಧ್ಯಕ್ಷತೆ ವಹಿಸಿದ್ದರು. ದಸರಾದ ಭಾಗವಾಗಿ ಆ ಸಮ್ಮೇಳನ ನಡೆಯುತ್ತಿತ್ತು. ಸಾವರ್ಕರ್‌ ಈ ಸಮ್ಮೇಳನದಲ್ಲಿ ಒಬ್ಬ ಭಾಷಣಗಾರರಾಗಿದ್ದರು. ದೇಶಪ್ರೇಮ ಮತ್ತು ನಿಸ್ವಾರ್ಥತೆ ಎಂಬ ವಿಷಯವನ್ನು ಇಟ್ಟುಕೊಂಡು ಗಾಂಧಿ ಮಾತನಾಡಿದ್ದರು. ರಾವಣನ ಮೇಲೆ ರಾಮನ ಗೆಲುವನ್ನು ಆಚರಿಸುವ ಹಬ್ಬದ ಸಂದರ್ಭದಲ್ಲಿ ಗಾಂಧಿ ಹೇಳಿದ್ದು ರಾಮ ಮತ್ತು ರಾವಣರು ನಮ್ಮ ಮಾನಸಿಕ ಭಾವನೆಗಳು ಎಂಬ ನೆಲೆಯಲ್ಲಾಗಿತ್ತು. ಮಾತುಗಳನ್ನು ಇನ್ನಿಲ್ಲದಷ್ಟು ಹಿತಮಿತವಾಗಿ ಬಳಸಿಕೊಂಡು ಹತ್ತೊ ಹನ್ನೆರಡೋ ವಾಕ್ಯಗಳಲ್ಲಿ ಮಾತು ಮುಗಿಸಿದ್ದರು. ತನ್ನ ಬದುಕಿನಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದತೆ ಮೂಡುವುದನ್ನು ಕಾಣಬೇಕೆಂದು ಸಾವರ್ಕರ್‌ ಬಯಸಿದ್ದ ಕೆಲವೇ ಕೆಲವು ದಿನಗಳ ಕಾಲವಾಗಿತ್ತದು. ಆ ಒಂದು ವಿಷಯದಲ್ಲಿ ಮಾತ್ರ ಅವರು ಸಹಮತ ಹೊಂದಿದ್ದರು ಎಂದು ನಂತರ ಗಾಂಧಿಯ ಆತ್ಮಕತೆ ಬರೆದ ರೋಬರ್ಟ್‌ ಪೈನ್‌ ಬರೆಯುತ್ತಾರೆ. ರಾಮ ಮತ್ತು ರಾವಣರ ನಡುವಿನ ಯುದ್ಧವನ್ನು ಯುದ್ಧವಾಗಿಯೇ ಸಾವರ್ಕರ್‌ ಅಂದು ವಿವರಿಸಿದ್ದರು. ಹಿಂಸೆಯ ಅನಿವಾರ್ಯತೆಯನ್ನು ಎತ್ತಿಹಿಡಿದುಕೊಂಡಿದ್ದರು.

ಸಾವರ್ಕರ್‌ ಅವರ ರತ್ನಗಿರಿ ವಾಸದ ಕಾಲದಲ್ಲಿ ಗಾಂಧಿ ಒಬ್ಬ ರಾಷ್ಟ್ರೀಯ ನಾಯಕನಾಗಿ ರೂಪುಗೊಂಡಿದ್ದರು. ʼಮಹಾತ್ಮಾʼ ಎಂಬ ಬಿರುದನ್ನು ಭಾರತದ ಎಲ್ಲ ಜನಗಳೂ ಅಪ್ಪಿಕೊಂಡಿದ್ದರು. ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟವು ಗಾಂಧಿಯ ನಾಯಕತ್ವದಲ್ಲಿ ಬಹುಜನ ಹೋರಾಟವಾಗಿ ಬದಲಾಗಿತ್ತು. ಅದರಲ್ಲೂ ಹಿಂದೂ-ಮುಸ್ಲಿಂ ಸೌಹಾರ್ದತೆ ಆ ಹೋರಾಟದೊಳಗಡೆ ಸಹಜವಾಗಿ ಮೂಡಿತ್ತು. ತಿಲಕರ ನವ-ಸಂಪ್ರದಾಯವಾದಿ ಬ್ರಾಹ್ಮಣಿಸಂ ರಾಷ್ಟ್ರೀಯ ಆಂದೋಲನದಲ್ಲಿ ಬರಿಯ ಒಂದು ಅಜ್ಜಿಕತೆಯಾಗಿ ಬದಲಾಗಿತ್ತು. ಸಾವರ್ಕರ್‌ ಮತ್ತು ಸಂಗಡಿಗರು ಮುಂದಿಟ್ಟಿದ್ದ ಹಿಂಸಾತ್ಮಕ ಹೋರಾಟವೂ ಮೂಲೆಗುಂಪಾಗಿತ್ತು. ತನ್ನ ಹೊಚ್ಚ ಹೊಸ ಬ್ರಿಟಿಷ್‌ ಸೇವಕಸ್ಥಾನವನ್ನೂ ಹಿಂದುತ್ವ ರಾಜಕಾರಣವನ್ನೂ ಮುಂದಕ್ಕೆ ಕೊಂಡೊಯ್ಯಬೇಕಾದರೆ ಗಾಂಧಿ ಎಂಬ ಬೆಟ್ಟವನ್ನು ಸರಿಸಲೇಬೇಕಾಗಿತ್ತು ಎಂದು ಸಾವರ್ಕರ್‌ ಅರ್ಥ ಮಾಡಿಕೊಳ್ಳುವ ಸಮಯವಾಗಿ ನಮಗೆ ಈ ಕಾಲವನ್ನು ಗುರುತು ಮಾಡಬಹುದು.

ಹಿಂದೂ ಸಂಘಟನೆ ಎಂಬ ಕಲ್ಪನೆಯನ್ನು ಶಕ್ತಿಯುತವಾಗಿ ಮುಂದಕ್ಕೊಯ್ಯಲು ಹಿಂದುತ್ವವಾದಿಗಳು ಹೆಚ್ಚಾಗಿ ಅವಲಂಬಿಸಿಕೊಂಡಿದ್ದು ಶುದ್ಧಿ ಎಂದು ಹೆಸರಿಟ್ಟಿದ್ದ ಹಿಂದೂ ಧರ್ಮಕ್ಕೆ ಮತಾಂತರಗೊಳಿಸುವ ಪ್ರಕ್ರಿಯೆಯನ್ನು ಎಂದು ನಾವು ಗಮನಿಸಿದೆವು. ಮನುವಾದಿಗಳಾಗಿದ್ದ ಸಂಪ್ರದಾಯಸ್ಥ ಬ್ರಾಹ್ಮಣರು ಶುದ್ಧಿಬಂಧಿಯಲ್ಲಿ ನಂಬಿಕೆಯಿಟ್ಟವರಾಗಿದ್ದರು. ಅಂದರೆ ಹಿಂದೂ ಧರ್ಮಕ್ಕೆ ಯಾರನ್ನೂ ಮತಾಂತರ ಮಾಡಿಕೊಂಡು ತರಲು ಸಾಧ್ಯವಿಲ್ಲವೆಂದೂ, ಆದರೆ ಹಿಂದೂ ಧರ್ಮದಿಂದ ಯಾರನ್ನು ಬೇಕಾದರು ಹೊರಹಾಕಬಹುದು ಎಂದೂ ಅದರ ತಿರುಳಾಗಿತ್ತು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಬ್ರಾಹ್ಮಣ ಧರ್ಮದೊಳಗಡೆ ಯಾರನ್ನೂ ಜಾತಿ ಅಥವಾ ಮತ ಪರಿವರ್ತನೆ ಮಾಡಿಕೊಂಡು ತರಲು ಸಾಧ್ಯವಿಲ್ಲ. ಆದರೆ, ಬ್ರಾಹ್ಮಣಿಸಮ್ಮಿನಿಂದ ಮನುವಾದಿಗಳಲ್ಲದವರನ್ನು ಹೊರಹಾಕಬಹುದು ಎಂಬ ಜಾತಿಶುದ್ಧಿ ಕಲ್ಪನೆಯಾಗಿತ್ತು ಅದು. ಅದನ್ನು ಅಡಗಿಸಿಟ್ಟುಕೊಂಡು ಒಂದು ಹಿಂದೂ ಜನಾಂಗೀಯ ರಾಜಕಾರಣವನ್ನು ಕಟ್ಟಿಕೊಳ್ಳಬೇಕೆಂದರೆ, ಹಿಂದೂ ಸಂಘಟನೆ ಎಂಬ ಕಲ್ಪನೆಯನ್ನು ಕಾರ್ಯಗತಗೊಳಿಸಬೇಕಾದರೆ, ಶುದ್ಧಿಬಂಧಿ ಎಂಬ ನಿಷೇಧವನ್ನು ಬದಿಗಿಡಬೇಕೆಂದು ಮೊದಲು ಕಂಡುಕೊಂಡಿದ್ದು ಆರ್ಯಸಮಾಜ ಮತ್ತು ಅದರ ಸ್ಥಾಪಕರಾದ ದಯಾನಂದ ಸರಸ್ವತಿ ಅವರು. ಅವರೇ ಶುದ್ಧಿಚಳುವಳಿಯನ್ನು ಆರಂಭಿಸಿದ್ದರು. ಅವರ ಅನುಯಾಯಿಯಾಗಿದ್ದ ಭಾಯ್‌ ಪರಮಾನಂದ್‌ ಅಂಡಮಾನಿನ ಸೆಲ್ಯುಲಾರ್‌ ಜೈಲು ಸೇರಿದಾಗ ಈ ಚಳುವಳಿಯನ್ನು ಸಾವರ್ಕರ್‌ಗೆ ಧಾರೆಯೆರೆದದ್ದನ್ನು ನಾವು ನೋಡಿದೆವು. ಅದನ್ನು ಸಾವರ್ಕರ್‌ ಜೈಲಿನಲ್ಲಿಯೇ ಕೈಗೆತ್ತಿಕೊಂಡಿದ್ದರು. ರತ್ನಗಿರಿಯಲ್ಲಿ ಇದನ್ನು ವ್ಯಾಪಕವಾಗಿ ಬಳಸಿಕೊಂಡರು. ಅದಕ್ಕಾಗಿ ಎಂದಿನಂತೆ ಶಿವಾಜಿ ಕಾಲದ ಕಥೆಗಳು ಎಂದು ಅರೆವಾಸ್ತವಗಳನ್ನು ಸಾವರ್ಕರ್‌ ಬಳಸಿಕೊಳ್ಳುತ್ತಾರೆ. ೧೯೨೭ರಲ್ಲಿ ನಡೆಸಿದ ಒಂದು ಭಾಷಣ ಹೀಗಿತ್ತು.

ʼಶಿವಾಜಿಯ ಧೀರತೆಯನ್ನು ಕೈಗೆತ್ತಿಕೊಳ್ಳಲು ನಿಮ್ಮಿಂದ ಸಾಧ್ಯವಾಗಬೇಕು ಎಂದೇನಿಲ್ಲ. ಆದರೆ ಕನಿಷ್ಠವೆಂದರೂ ಶುದ್ಧಿಯ ವಿಷಯದಲ್ಲಿ ಶಿವಾಜಿಯ ಉದಾಹರಣೆಗಳನ್ನು ನಿಮಗೆ ಪಾಲಿಸಬಹುದು. ಔರಂಗಜೇಬ್‌ ಬಲವಂತದಿಂದ ಮತಾಂತರಿಸಿ ಮುಸ್ಲಿಮಾಗಿಸಿದ್ದ ನೇತಾಜಿ ಪಾಲ್ಕರನ್ನು ಶಿವಾಜಿ ಹೇಗೆ ಮರುಮತಾಂತರಿಸಿ ಹಿಂದೂ ಧರ್ಮಕ್ಕೆ ಸೇರಿಸಿಕೊಂಡರು ಎಂಬುದನ್ನು ಒಮ್ಮೆ ಯೋಚಿಸಿ ನೋಡಿ.ʼ ದಕ್ರಾಸ್‌ ಕುಟುಂಬವನ್ನು ಹೀಗೆ ಕ್ರೈಸ್ತ ಧರ್ಮದಿಂದ ಹಿಂದೂ ಧರ್ಮಕ್ಕೆ ಸಾವರ್ಕರ್‌ ಮತಾಂತರಿಸುತ್ತಾರೆ. ೧೯೨೬ರಲ್ಲಿ ಲಕ್ನೋ ವಿಶ್ವವಿದ್ಯಾಲಯದ ಪ್ರೊ. ಪಿಂಟೋ ಅವರನ್ನೂ ಸಾವರ್ಕರ್‌ ಮತಾಂತರಿಸುತ್ತಾರೆ.

ಇಂತಹ ಮತಾಂತರಗಳ ಆರ್ಥಿಕ ಹಿನ್ನೆಲೆಯನ್ನೂ ಗಮನಿಸುವಾಗ ಈ ಶುದ್ಧಿ, ಧರ್ಮ ಮೊದಲಾದ ಮಾತುಗಳ ಪೊಳ್ಳುತನ ಸ್ಪಷ್ಟವಾಗಿ ಕಾಣಿಸುತ್ತದೆ. ೧೯೨೮ರಲ್ಲಿ ಇಂಡೋರಿನ ಮಹಾರಾಜನಾಗಿದ್ದ ತುಕ್ಕೋಜಿ ಹೋಲ್ಕರ್‌, ಮಿಸ್‌ ಮಿಲ್ಲರ್ ಎಂಬ ಅಮೆರಿಕನ್‌ ಮಹಿಳೆಯನ್ನು ಮದುವೆಯಾಗಲು ಬಯಸುತ್ತಾರೆ. ಸಾವರ್ಕರ್‌ ಮತ್ತು ಹಿಂದೂ ಮಹಾಸಭಾ ನಾಯಕರು ಮಧ್ಯಪ್ರವೇಶಿಸಿ ಕಾರವಾರದ ಮಠಾಧಿಪತಿಯೂ ಸಾವರ್ಕರ್‌ ಬೆಂಬಲಿಗರೂ ಆಗಿದ್ದ ಡಾ. ಕುರ್ತಕೋಟಿಯನ್ನು ಬಳಿಸಿಕೊಂಡು ಮಿಸ್‌ ಮಿಲ್ಲರನ್ನು ಹಿಂದೂ ಧರ್ಮಕ್ಕೆ ಬರಮಾಡಿಕೊಳ್ಳುತ್ತಾರೆ. ೧೯೨೮ರಲ್ಲಿ ಈ ಕಾರ್ಯವನ್ನು ಸಾಧಿಸಿದ ಡಾ. ಕುರ್ತಕೋಟಿಯವರಿಗೆ ಮಹಾರಾಜ ನೀಡಿದ ಕಾಣಿಕೆ ಎರಡು ಲಕ್ಷ ರೂಪಾಯಿಗಳು!

ಗೋವಾದಲ್ಲಿ ಮಾತ್ರವೇ ೭೮೧೫ ಜನರನ್ನು ಸಾವರ್ಕರ್‌ ಹೀಗೆ ಮತಾಂತರಿಸುತ್ತಾರೆ. ಇದೇ ಹೊತ್ತು ಹಿಂದೂ ಧರ್ಮದ ಜಾತಿಪದ್ಥತಿಯು ಇಂತಹ ಮತಾಂತರಕ್ಕೆ ತಡೆಗೋಡೆಯಾಗಿ ನಿಂತಿದ್ದರಿಂದ, ಹೊಸದಾಗಿ ಮತಾಂತರಗೊಂಡು ಬರುವವರಿಗೆ ಜಾತಿಯಲ್ಲದ ಪತಿಸ್ಥಿತಿ ಹುಟ್ಟಿಕೊಂಡಿತು. ಹಿಂದೂಧರ್ಮದಲ್ಲಿ ಜಾತಿವಂತನಲ್ಲದೆ ಧರ್ಮವಂತನಾಗಿ ಬದುಕಲು ಸಾಧ್ಯವಿಲ್ಲದ ಕಾರಣ, ಇವರನ್ನು ಒಳಗೊಳ್ಳಿಸಿಕೊಳ್ಳಲು ನವಹಿಂದೂ ಗೌಡ ಎಂಬ ಜಾತಿಯನ್ನು ಸೃಷ್ಟಿಸಲು ಶುದ್ಧಿಚಳುವಳಿಯ ನಾಯಕರು ನಿರ್ಬಂಧಿತರಾಗುವುದು ಇಲ್ಲಿ ಗಮನಾರ್ಹವಾಗಿದೆ.

ದಯಾನಂದ ಸರಸ್ವತಿಯವರ ನಂತರ ಹಿಂದೂ ಸಂಘಟನೆಯೆಂಬ ಕಲ್ಪನೆಯ ಭಾಗವಾಗಿ ಶುದ್ಧಿಚಳುವಳಿಯನ್ನು ಮುಂದಕ್ಕೊಯ್ದವರು ಸ್ವಾಮಿ ಶ್ರದ್ಧಾನಂದ. ನಡುವೆ ಒಮ್ಮೆ ಗಾಂಧಿಯೊಂದಿಗೆ ಸೇರಿಕೊಂಡು ಕೆಲಸ ಮಾಡಿದರಾದರೂ ಗಾಂಧಿ ಖಿಲಾಫತ್‌ ಜೊತೆ ಕೈ ಜೋಡಿಸಿದಾಗ ಶ್ರದ್ಧಾನಂದ ಕವಲುದಾರಿ ತುಳಿದರು. ನಂತರ ಆಕ್ರಮಣಕಾರಿ ರೀತಿಯಲ್ಲಿ ಮತಾಂತರವನ್ನು ಮುಂದುವರಿಸಿಕೊಂಡು ಹೋದರು. ದ್ವೇಷದ ವಾತಾವರಣ ಸೃಷ್ಟಿಸಲು ಇದು ದೊಡ್ಡ ಕೊಡುಗೆ ನೀಡಿತು. ೧೯೨೩ರಲ್ಲಿ ಪಂಡಿತ್‌ ಕಾಳಿಚರಣ್‌ ಶರ್ಮ ವಿಚಿತ್ರ ಜೀವನ್‌ ಎಂಬ ಹೆಸರಿನಲ್ಲಿ ಪ್ರವಾದಿ ಮುಹಮ್ಮದರ ಕುರಿತು ಅವಹೇಳನಕಾರಿ ಕರಪತ್ರವನ್ನು ಪ್ರಕಟಿಸುತ್ತಾರೆ. ೧೯೨೪ರಲ್ಲಿ ಸುಮಾರಾಗಿ ಇಂತದ್ದೇ ರೀತಿಯ ಕರಪತ್ರವನ್ನು ಪಂಡಿತ್‌ ಚಾಮುಪತಿ ಪ್ರಕಟಿಸುತ್ತಾರೆ. ೧೯೨೭ರಲ್ಲಿ ರಿಸಾಲ ಏ ವರ್ತಮಾನ್‌ ಮಾಸಪತ್ರಿಕೆಯಲ್ಲಿ ಬಂದ ಸೈರ್‌ ಐದೋಷಕ್‌ ಎಂಬ ದೇವಿಶರಣ್‌ ಶರ್ಮಾ ಎಂಬವರ ಲೇಖನವೂ ಪ್ರವಾದಿನಿಂದೆಯಿಂದ ಕೂಡಿತ್ತು. ಅವೆಲ್ಲ ಹೊಸಲೋಕಕ್ಕಾಗಿ ನಡೆಸುವ ಆಧುನಿಕ ರೀತಿಯ ಧಾರ್ಮಿಕ ಟೀಕೆಗಳು ಆಗಿರಲೇ ಇಲ್ಲ. ಬದಲಿಗೆ ಧರ್ಮಯುದ್ಧಗಳಿಗೆ ಪ್ರಚೋದನೆ ನೀಡುವಂತಹ ಸ್ಫೋಟಕ ಸಾಹಿತ್ಯಗಳಾಗಿದ್ದವು. ಉದಾಹರಣೆಗೆ, ರಂಗೀಲ ರಸೂಲ್‌ ಲೇಖನದಲ್ಲಿ ಪ್ರವಾದಿಯ ಖಾಸಗಿ ಬದುಕು ಮತ್ತು ಬಹುಪತ್ನಿತ್ವವನ್ನು ಗೇಲಿ ಮಾಡಲಾಗಿತ್ತು. ಈ ಲೇಖಕರು ಮತ್ತು ಪ್ರಕಾಶಕರುಗಳೆಲ್ಲ ಆರ್ಯಸಮಾಜದೊಂದಿಗೆ ಸಂಬಂಧ ಹೊಂದಿದವರಾಗಿದ್ದರು. ದೇಶದ ಬಹುತ್ವದ ಜನಜೀವನವನ್ನು ಅದು ಬುಡಮೇಲುಗೊಳಿಸಿತು ಎಂದು ವಿಶೇಷವಾಗಿ ಹೇಳಬೇಕಾಗಿಲ್ಲವಲ್ಲ.

ಬ್ರಿಟಿಷ್‌ ಆಡಳಿತವಿದ್ದ ಯುನೈಟೆಡ್‌ ಪ್ರಾವಿನ್ಸಿನ ಪಶ್ಚಿಮ ವಲಯದಲ್ಲಿ ಸ್ವಾಮಿ ಶ್ರದ್ಧಾನಂದ ಶುದ್ಧಿಚಳುವಳಿಯನ್ನು ಅತಿ ಹೆಚ್ಚಾಗಿ ನಡೆಸುತ್ತಿದ್ದರು. ಮಾಲ್ಕನ್ನರು ಸೆನ್ಸಸ್‌ ವರದಿಯಲ್ಲಿ ಮುಸ್ಲಿಮರಾಗಿದ್ದರು. ಯುನೈಟೆಡ್‌ ಪ್ರಾವಿನ್ಸಿನ ಆಗ್ರಾ, ಇಟಾವ, ಮೆಯಿನ್‌ಪುರ ಮೊದಲಾದ ಕಡೆಗಳಲ್ಲಿ ಮಾಲ್ಕನ್ನರು ವಾಸಿಸುತ್ತಿದ್ದರು. ಅವರನ್ನು ಹಿಂದೂಗಳಾಗಿ ಮತಾಂತರಗೊಳಿಸಲು ಶ್ರದ್ಧಾನಂದ ಬಹಳವೇ ಶ್ರಮಿಸುತ್ತಾರೆ. ಸಹಜವಾಗಿಯೇ ಮುಸ್ಲಿಂ ಸಮಾಜದ ಒಳಗಡೆಯಿಂದ ಇದಕ್ಕೆದುರಾಗಿ ಪ್ರತಿರೋಧಗಳು ಮತ್ತು ಪ್ರತಿದಾಳಿಗಳು ಶುರುವಾಗುತ್ತವೆ. ಇವೆಲ್ಲದರ ಫಲವಾಗಿ ಕೊನೆಗೆ ೧೯೨೬ ಡಿಸೆಂಬರ್‌ ೨೩ರಂದು ದೆಹಲಿಯ ತನ್ನ ನಿವಾಸದಲ್ಲಿ ಸ್ವಾಮಿ ಶ್ರದ್ಧಾನಂದ ಕೊಲೆಯಾಗಿ ಹೋಗುತ್ತಾರೆ. ಅಬ್ದುಲ್‌ ರಶೀದ್‌ ಎಂಬ ಮಸ್ಲಿಂ ಯುವಕ ಆ ಕೊಲೆಯನ್ನು ಮಾಡಿದ್ದ.

ಗಾಂಧಿಗೆ ಅದೊಂದು ನಿರ್ಣಾಯಕ ಘಟ್ಟವಾಗಿತ್ತು. ಒಂದು, ತನ್ನ ನಾಯಕತ್ವದಲ್ಲಿ ಹುಟ್ಟಿಕೊಂಡಿರುವ ಹಿಂದೂ-ಮುಸ್ಲಿಂ ಸೌಹಾರ್ದತೆಗೆ ಕುತ್ತು ತರಬಲ್ಲ ತಾಕತ್ತು ಆ ಕೊಲೆಯಲ್ಲಿ ಇತ್ತು. ಎರಡು, ರಾಜಕಾರಣದಲ್ಲಿ ತಾನು ತರಲು ಪ್ರಯತ್ನಿಸುತ್ತಿದ್ದ ನೈತಿಕ ಮೌಲ್ಯಗಳ ಪ್ರಾಯೋಗಿಕ ಹಂತವಾಗಿಯೂ ಅದು ಬದಲಾಯಿತು. ಈ ಎರಡು ಸಂಗತಿಗಳನ್ನು ಮುಂದಿಟ್ಟುಕೊಂಡು ಗಾಂಧಿ ಆ ಸಂದರ್ಭವನ್ನು ಎದುರಿಸಿದರು. ೧೯೧೬ ಡಿಸೆಂಬರ್‌ ೨೪ರಂದು ಕೊಲೆ ನಡೆದ ಮರುದಿನ ಗುವಾಹಟಿಯಲ್ಲಿ ನಡೆದ ಕಾಂಗ್ರೆಸ್‌ ಸಮ್ಮೇಳನದಲ್ಲಿ ಗಾಂಧಿ ಭಾಷಣ ಮಾಡುತ್ತಾರೆ. ʼಈ ಕೊಲೆಯ ನಿಜವಾದ ಅರ್ಥವನ್ನು ನಮಗೆ ತಿಳಿಸಿ ಕೊಡಲು ದೇವರ ಬಳಿ ಪ್ರಾರ್ಥಿಸೋಣ. ಹಿಂದೂಗಳು ಶಾಂತಿಯಿಂದ ವರ್ತಿಸಿಕೊಂಡು ಈ ಕೊಲೆಗೆ ಪ್ರತೀಕಾರ ತೀರಿಸುವಂತಹ ಚಟುವಟಿಕೆಗಳಿಂದ ತಮ್ಮನ್ನು ತಾವು ಪಾರು ಮಾಡಿಕೊಳ್ಳಬೇಕು. ಈ ಸಂದರ್ಭದಲ್ಲಿ ಎರಡೂ ಸಮುದಾಯಗಳ ನಡುವೆ ಸೌಹಾರ್ದತೆ ಅಸಾಧ್ಯವೆಂದೂ ಪರಸ್ಪರ ಹೊಡೆದಾಡಿಕೊಳ್ಳುವವರೆಂದೂ ಯಾರೂ ಭಾವಿಸಬಾರದು. ಯಾರಾದರು ಹೀಗೆ ಮಾಡುತ್ತಾರಾದರೆ ಅವರು ಮಾಡುತ್ತಿರುವುದು ಅಪರಾಧವೂ ತಂತಮ್ಮ ಧರ್ಮಗಳಿಗೆ ಮಾಡುವ ಅಪಮಾನವೂ ಆಗಿರುತ್ತದೆ.ʼ ೧೯೨೬ ಡಿಸೆಂಬರ್‌ ೨೬ರಂದು ಗಾಂಧಿ ಪುನಹ ಮಾತನಾಡುತ್ತಾರೆ. ʼದೆಹಲಿಯಲ್ಲಿ ಹಿಂದೂ-ಮುಸ್ಲಿಂ ಜಗಳಗಳು ಹುಟ್ಟಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ನೀವೆಲ್ಲರೂ ಸೇರಿಕೊಂಡು ಈ ತೀರ್ಮಾನವನ್ನು ಅಂಗೀಕರಿಸುತ್ತಿದ್ದೀರಿ. ಆದರೆ, ನಾನು ಹೇಳುತ್ತೇನೆ, ಸ್ವಾಮಿ ಶ್ರದ್ಧಾನಂದಜೀ ನಮಗಾಗಿ ಬಿಟ್ಟು ಹೋದ ಪಾಠವನ್ನು ನಾವು ಪ್ರತಿಯೊಬ್ಬರೂ ಅರ್ಥಮಾಡಿಕೊಂಡು ಅದರಲ್ಲಿ ಪೂರ್ತಿಯಾಗಿ ನಮ್ಮ ಮನಸ್ಸನ್ನು ಅರ್ಪಿಸಿದರೆ, ಸ್ವರಾಜ್ಯವನ್ನು ಈ ಕೂಡಲೆ ಪಡೆಯಬಹುದು. ಹಿಂದುಮುಂದು ಯೋಚಿಸದೆ, ಸುಮ್ಮನೆ ಭರವಸೆಗಳನ್ನು ನೀಡುವ ಒಬ್ಬ ಹುಚ್ಚ ನಾನೆಂದು ನೀವು ಹೇಳಬಹುದು. ನಾನು ಹುಚ್ಚನಲ್ಲ. ೧೯೨೦ರಲ್ಲಿ ನನಗೆ ಯಾವ ಯೋಜನೆಯಿತ್ತೋ ಅದರಲ್ಲಿಯೇ ಈಗಲೂ ವಿನೀತನಾಗಿ ನಿಂತಿರುವೆ. ಆದರೆ ೧೯೨೦ರಲ್ಲಿ ಪ್ರತಿಜ್ಞೆ ಸ್ವೀಕರಿಸಿದವರು ಅದನ್ನು ಉಲ್ಲಂಘಿಸಿದರೆಂದು ಮಾತ್ರವಲ್ಲ ಅಂದು ಸ್ವರಾಜ್ಯ ನನಸಾಗುವುದನ್ನು ಇಲ್ಲವಾಗಿಸಿದರು. ನಾವೆಲ್ಲರೂ ಒಬ್ಬನೇ ತಂದೆಯ ಮಕ್ಕಳು. ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬುದೆಲ್ಲ ಆತನ ವಿವಿಧ ಹೆಸರುಗಳು.ʼ

ಕೊಲೆಗಾರ ಅಬ್ದುಲ್‌ ರಶೀದ್‌ನನ್ನು ಸಹೋದರ ಎಂದು ಗಾಂಧಿ ಕರೆದರು ಎಂಬುದು ಸಾವರ್ಕರ್‌ವಾದಿಗಳ ಆರೋಪವಾಗಿತ್ತು. ಗಾಂಧಿ ಅದಕ್ಕೆ ಈ ಮಾತುಕತೆಯಲ್ಲಿ ಉತ್ತರವನ್ನು ನೀಡುತ್ತಾರೆ.

ʼಈಗ ಬಹುಷ ನಿಮಗೆ, ನಾನು ಯಾಕೆ ಅಬ್ದುಲ್‌ ರಶೀದ್‌ನನ್ನು ಸಹೋದರ ಎಂದು ಕರೆದೆ ಎಂಬುದಕ್ಕೆ ಉತ್ತರ ಲಭಿಸಿರಬಹುದು. ನಾನು ಮತ್ತೆ ಮತ್ತೆ ಹೇಳುತ್ತೇನೆ. ಆತನನ್ನು ಸ್ವಾಮಿಯ ಕೊಲೆಗೆ ಉತ್ತರದಾಯಿಯಾಗಿ ನಾನು ಕಾಣುವುದೇ ಇಲ್ಲ. ಪರಸ್ಪರ ದ್ವೇಷವನ್ನು ಹೊತ್ತು ಮೆರೆಸುವ ಎಲ್ಲರೂ ಇದರಲ್ಲಿ ಪಾಲುದಾರರು. ನಮಗೆ, ಹಿಂದೂಗಳಿಗೆ ಗೀತೆಯು ಸಮಾನತೆಯ ಪಾಠ ಕಲಿಸಿದೆ. ನಾವು ಆ ಪಾಠವನ್ನು ಪಂಡಿತನಿಗೂ ಚಾಂಡಾಳನಿಗೂ ನಾಯಿ ಹಸು ಆನೆಗೂ ಕಲಿಸಿಕೊಡಬೇಕು. ಇದು ಅಳುವುದಕ್ಕೋ ಕಣ್ಣೀರು ಸುರಿಸುವುದಕ್ಕೋ ಇರುವ ಸಮಯವಲ್ಲ. ಇದು ಧೈರ್ಯದ ಪಾಠವನ್ನು ಕಲಿತುಕೊಂಡು ನಮ್ಮ ಹೃದಯಗಳನ್ನು ಬೆಳಗಿಸಬೇಕಾದ ಕ್ಷಣ. ಧೈರ್ಯವೆಂಬುದು ಕ್ಷತ್ರಿಯರಿಗೆ ಮಾತ್ರವೇ ಇರುವ ಗುಣವಲ್ಲ. ಅದು ಅವರಿಗೆ ವಿಶೇಷವಾಗಿರಬಹುದು. ಆದರೆ, ಸ್ವರಾಜ್ಯಕ್ಕಾಗಿ ನಾವು ನಡೆಸುವ ಹೋರಾಟದಲ್ಲಿ ಕ್ಷತ್ರಿಯರಿಗೆಂಬಂತೆ ಬ್ರಾಹ್ಮಣನಿಗೂ, ವೈಶ್ಯನಿಗೂ, ಶೂದ್ರನಿಗೂ ಧೀರತೆಯು ಅತ್ಯಗತ್ಯವಾಗಿದೆ. ಆದ್ದರಿಂದ ನಾವು ದುಃಖಕಣ್ಣೀರು ಸುರಿಸುವುದರಲ್ಲಿ ಅರ್ಥವಿಲ್ಲ.ʼ

ನವ-ಸಂಪ್ರದಾಯವಾದಿ ರಾಜಕೀಯ ಬ್ರಾಹ್ಮಣಿಸಂ ಮತ್ತು ಹಿಂದೂ ಸಂಘಟನೆ ಎಂಬ ಕಲ್ಪನೆಗಳ ಹಿಂದಿರುವ ಹಿಂದೂ ಜನಾಂಗೀಯ ರಾಜಕಾರಣ ಕಾರ್ಯಾಚರಿಸುತ್ತಿದ್ದದ್ದು ಅಂದಿನ ಸಾಮಾಜಿಕ ಮಾಧ್ಯಮಗಳೆಂದು ಕರೆಯಬಹುದಾದ ಪತ್ರಿಕೆಗಳ ಮೂಲಕವಾಗಿತ್ತು. ಸುದ್ದಿ ಮಾಧ್ಯಮಗಳು ಹಿಂದುತ್ವದ ಸತ್ಯೋತ್ತರ ರಾಜಕಾರಣವನ್ನು ಪ್ರಚಾರಪಡಿಸುವ ಪ್ರಮುಖ ದಾರಿಯೆಂಬುದನ್ನು ಗಾಂಧಿ ಅದಾಗಲೇ ಗುರುತಿಸಿದ್ದರು. ೧೯೨೬ ಡಿಸೆಂಬರ್‌ ೩೦ರ ಯಂಗ್‌ ಇಂಡಿಯಾದಲ್ಲಿ ಗಾಂಧಿ ಹೀಗೆ ಬರೆದರು.

ʼಪತ್ರಕರ್ತನು ನಡೆದಾಡುವ ಪ್ಲೇಗ್‌ ಇದ್ದ ಹಾಗೆ. ಆತ ಸುಳ್ಳುಸುದ್ದಿಗಳನ್ನು ಹರಡುತ್ತಾನೆ. ಆತನ ಓದುಗನ ಸಂಶಯ ರಹಿತವೂ ಸ್ವೀಕಾರಾರ್ಹವೂ ಆದ ಮನಸ್ಸಿನ ಮೇಲೆ ತನ್ನ ಭಾಷೆಯ ಕೊಳಕು ಪ್ರಯೋಗಗಳನ್ನು ತಂದು ಸುರಿಯುತ್ತಾನೆ ಮತ್ತು ತನ್ನ ವೈರಸ್ಸನ್ನು ಚುಚ್ಚುತ್ತಾನೆ. ತನ್ನ ಸ್ವಂತ ಭಾಷಾ ಪ್ರಯೋಗದಿಂದ ಆನಂದತುಂದಿಲರಾಗುವ ನಾಯಕರು ತಮ್ಮ ನಾಲಿಗೆ ಮತ್ತು ಲೇಖನಿಗೆ ಎಲ್ಲಿ ಕಡಿವಾಣ ಹಾಕಬೇಕು ಎಂಬುದನ್ನು ಅರಿಯದೇ ಹೋಗುತ್ತಾರೆ. ರಹಸ್ಯಾತ್ಮಕವೂ ಅಂತರ್‌ ಸಂಚಾರಿಯೂ ಆದ ಪ್ರಚಾರ ಅದರ ಕರಾಳವೂ ಭಯಾನಕವೂ ಪರಿಶೋಧನೆಗೆ ವಿಧೇಯವಾಗದೆಯೂ ಇರುವ ನಿರ್ಲಜ್ಜ ಕಾರ್ಯವನ್ನು ಜಾರಿಗೊಳಿಸಿದೆ. ಆದ್ದರಿಂದ ವಿದ್ಯಾವಂತರೂ ಅರೆವಿದ್ಯಾವಂತರೂ ಆದ ನಾವೇ ಅಬ್ದುಲ್‌ ರಶೀದನ ಸುಡುಸುಡುವ ಜ್ವರಕ್ಕೆ ಉತ್ತರದಾಯಿಗಳು. ಎದುರಾಳಿಗಳ ನಡುವಿನ ಪರಸ್ಪರ ಆರೋಪಗಳನ್ನು ಸೀಳುತ್ತಾ ಕೂರುವುದು ಮತ್ತು ಪಕ್ಷಬೇಧ ತೋರಿಸುವುದು ಅನಗತ್ಯವಾಗಿದೆ. ಎರಡು ಕಡೆಯವರೂ ಆರೋಪಿಗಳಾಗಿರುವಾಗ ಸುವರ್ಣ ಮಾನದಂಡಗಳನ್ನು ಬಳಸಿಕೊಂಡು ತೀರ್ಪು ನೀಡಲು ಯಾರಿಂದ ಸಾಧ್ಯವಿದೆ? ಆರೋಪಣೆಯ ಸರಿಯಾದ ಅನುಪಾತವನ್ನು ನಿರ್ಣಿಯಿಸುವುದು ಯಾರಿಗೆ ಸಾಧ್ಯವಿದೆ? ಸುಳ್ಳು ಹೇಳುವುದು ಮತ್ತು ಅದನ್ನು ದೊಡ್ಡದಾಗಿಸುವುದು ಆತ್ಮರಕ್ಷಣೆಯ ಭಾಗ ಅಲ್ಲವೇ ಅಲ್ಲ.ʼ

ಬಹುಷ, ಭಾರತದಲ್ಲಿ ಮಾಧ್ಯಮ ಟೀಕೆಯ ಮೊದಲ ದನಿಯಾಗಿ ಗಾಂಧಿಯ ಮಾತುಗಳನ್ನು ಕಾಣಬಹುದು. ಫ್ಯಾಸಿಸಮ್ಮಿಗೆ ತುತ್ತೂರಿ ಊದುವ ಮಾಧ್ಯಮಗಳು ಭಾರತದಲ್ಲಿ ಆರಂಭದಿಂದಲೇ ಇದ್ದವು ಎಂದು ಮಾತ್ರವಲ್ಲ, ಅಂದಿನಿಂದಲೇ ಸತ್ಯೋತ್ತರ ಪತ್ರಿಕೋದ್ಯಮವನ್ನು ಅವು ನಡೆಸುತ್ತಿದ್ದವು ಎಂಬುದು ಗಾಂಧಿಯ ಈ ಮಾತುಗಳಿಂದ ಅರ್ಥವಾಗುತ್ತದೆ. ತನ್ನ ಕಾಲದ ಪ್ರಮುಖ ಬುದ್ಧಿಜೀವಿ ತಾನೇ ಆಗಿದ್ದರು ಎಂಬುದಕ್ಕೆ ಸಾಕ್ಷಿಯನ್ನೂ ಗಾಂಧಿ ಇಲ್ಲಿ ನೀಡುತ್ತಿದ್ದಾರೆ. ಬಹತ್ವ ಸಮಾಜವೊಂದರಲ್ಲಿ ಒಂದು ಧರ್ಮವನ್ನು ಅನುಸರಿಸಿಕೊಂಡು ಹೇಗೆ ಜಾತ್ಯಾತೀತನಾಗಿ ಬದುಕಬಹುದು ಎಂಬುದನ್ನು ಗಾಂಧಿ ಚಿತ್ರಿಸುತ್ತಾರೆ. ಸಂಸ್ಕೃತಿಯ ದೂರಗಾಮಿತನವನ್ನು ಗಾಂಧಿ ಇಲ್ಲಿ ತೋರಿಸಿಕೊಡುತ್ತಾರೆ.

ಭಾರತದ ಬಹುತ್ವ ಯೋಜನೆಯು ಒಂದೇ ಸಮಯಕ್ಕೆ ಹೃಸ್ವಕಾಲ ಯೋಜನೆಯೂ ದೀರ್ಘಕಾಲ ಯೋಜನೆಯೂ ಆಗಿರುತ್ತದೆಯೆಂದು ಗಾಂಧಿ ಅಗಾಧವಾದ ಸ್ಪಷ್ಟತೆಯೊಂದಿಗೆ ತೋರಿಸಿಕೊಡುತ್ತಿದ್ದಾರೆ.
ಆದರೆ ಸಾವರ್ಕರ್‌ ತರದವರ ಬೌದ್ಧಿಕತೆಯೂ ಭಾವನೆಗಳೂ ಧರ್ಮದ ಗಡಿರೇಖೆಯೊಳಗೆ ನಿಂತು ಬಿಡುತ್ತಿದ್ದವು. ಹಿಂದೂ ಜನಾಂಗೀಯ ರಾಜಕಾರಣವನ್ನು ಕಟ್ಟಲು ಅವರು ಮಹಾರ್‌ ಮತ್ತು ಚಮಾರ್‌ಗಳಿಗೆ ಸಹಪಂಕ್ತಿ ಭೋಜನ ಏರ್ಪಡಿಸುತ್ತಾರೆ. ಆದರೆ ಮುಸ್ಲಿಮರ ಜೊತೆ ಸಮಭಾವನೆಯಿಂದು ಕುಳಿತುಕೊಳ್ಳಲು ಅವರು ತಯಾರಿರಲಿಲ್ಲ. ಧರ್ಮದ ಬೇಲಿಯೇ ಅವರ ಮೌಲ್ಯಗಳ ಮಿತಿಯಾಗಿತ್ತು. ಹೀಗೆ ನೋಡುವಾಗ ಜಾತಿ ಬೇಲಿಯನ್ನು ಧರ್ಮದ ಬೇಲಿಯ ತನಕ ಕೊಂಡೊಯ್ಯಲು ಅವರು ಶ್ರಮಿಸುತ್ತಿದ್ದರು ಎಂಬುದು ಸ್ಪಷ್ಟವಾಗುತ್ತದೆ. ಅಂದರೆ, ಜಾತಿಯನ್ನು ನಿರಂತರವಾಗಿ ಉತ್ಪಾದಿಸಿಕೊಂಡು ಅದನ್ನು ನೆಲೆ ನಿಲ್ಲಿಸುವ ವ್ಯವಸ್ಥೆಯಾದ ಬ್ರಾಹ್ಮಣಿಸಂ ಮಾತ್ರವೇ ಹಿಂದುತ್ವದ ಅಡಿಪಾಯವಾಗಿತ್ತು ಎಂಬುದನ್ನು ಕಾಣಬಹುದು. ಧರ್ಮದ ಗಡಿರೇಖೆಯನ್ನು ದಾಟುವ ಗಾಂಧಿಯನ್‌ ತತ್ವಗಳನ್ನು ಆ ಬ್ರಾಹ್ಮಣಿಸಂ ಹೇಗೆ ಎದುರಿಸಿತು ಎಂಬುದಕ್ಕೆ ಗಾಂಧಿಯ ಈ ಮೇಲಿನ ಮಾತುಗಳಿಗೆ ಸಾವರ್ಕರ್‌ ನೀಡಿದ ಉತ್ತರ ಕ್ಲಾಸಿಕ್‌ ಉದಾಹರಣೆಯಾಗಬಲ್ಲದು.

೧೯೨೭ ಫೆಬ್ರವರಿ ೨೭ರಂದು ಪ್ರಕಟಗೊಂಡ ಗಾಂಧೀಜಿ ಮತ್ತು ನಿಷ್ಕಳಂಕ ಹಿಂದೂಗಳು ಎಂಬ ಗೇಲಿ ತುಂಬಿದ ತಲೆಬರಹದ ಲೇಖನದಲ್ಲಿ ಕಟು ವಾಗ್ದಾಳಿಯನ್ನು ಸಾವರ್ಕರ್‌ ನಡೆಸುತ್ತಾರೆ. ಗಾಂಧಿಯ ಆಜ್ಞೆಗೆ ತಲೆಬಾಗಿ ಅವರ ಬೆನ್ನ ಹಿಂದೆ ನಿಲ್ಲುವ ಹಿಂದೂ ಸಮಾಜದ ರೀತಿಯನ್ನು ಆಪತ್ಕಾರಿ ಎಂದು ಕರೆದುಕೊಂಡು ಆರಂಭವಾಗುವ ಲೇಖನದಲ್ಲಿ ಹೀಗೆ ಬರೆದರು. ʼಲೋಕ ಎಂಬುದು ಆತ್ಯಂತಿಕವಾಗಿ ಒಂದು ರಂಗಭೂಮಿ ಮತ್ತು ಪ್ರತಿಯೊಬ್ಬರೂ ಇಲ್ಲ ಪಾತ್ರಧಾರಿಗಳು. ಆದ್ದರಿಂದ ಪ್ರತಿಯೊಬ್ಬರೂ ತಾವು ಆಡುವ ಪಾತ್ರವನ್ನು ಜೀವಿಸಲೇಬೇಕಾಗಿದೆ. ಒಬ್ಬನು ಮಹಾತ್ಮನ ಪಾತ್ರ ಮಾಡುತ್ತಿದ್ದಾನೆಂದಾದರೆ ಆತನಿಗೆ ಅಂತಹ ಕ್ಲಾಸಿಕ್‌ ಸಂಭಾಷಣೆಗಳ ಮೂಲಕ ಅದನ್ನು ಸಾಬೀತು ಪಡಿಸಬೇಕಾಗುತ್ತದೆ.

ಶೀವಾಜಿಯಂತೆಯೋ ರಾಮದಾಸರಂತೆಯೋ ಸಾಮಾನ್ಯದ ವ್ಯಕ್ತಿಯಲ್ಲ ಇವರು. ಬದಲಿಗೆ ಮಹಾನರಾದ ಮಹಾತ್ಮ ಇವರು.ʼ ಹಿಂದೂಗಳ ತ್ಯಾಗವನ್ನು ಗಾಂಧಿ ಒಪ್ಪುವುದಿಲ್ಲವೆಂದೂ ಮುಸ್ಲಿಮರ ತ್ಯಾಗವನ್ನು ಮಾತ್ರವೇ ಒಪ್ಪುತ್ತಾರೆಂದೂ ತಾರ್ಕಿಕ ನ್ಯಾಯವನ್ನು ಎತ್ತಿಕೊಂಡು ಸಾವರ್ಕರ್‌ ಮುಂದುವರಿಸುತ್ತಾರೆ. ʼಓ ನಿಷ್ಕಳಂಕ ಹಿಂದೂಗಳೇ, ಯಾಕಾಗಿ ನಾವು ಒಬ್ಬ ಮಹಾತ್ಮನ ಮಾತುಗಳಿಗೆ ಕಿವಿ ಕೊಡಬೇಕು?ʼ ಗಾಳಿ ತುಂಬಿಸಿ ಉಬ್ಬಿಸಿದ ಸಿದ್ಧಾಂತಗಳ ಹಿಂದೆ ಓಡುವ ಹಿಂದೂಗಳ ಕುರಿತೂ ಇದರಲ್ಲಿ ಖೇಧ ವ್ಯಕ್ತಪಡಿಸುತ್ತಾರೆ.

ಸಾವರ್ಕರ್‌ ಅವರ ಕುಟಿಲತೆಯ ಉದಾಹರಣೆಯಾಗಿಯೂ ಈ ಲೇಖನವನ್ನು ಕಾಣಬಹುದು. ಗಾಂಧಿ ಮುಸ್ಲಿಮರನ್ನು ರಕ್ತಸಂಬಂಧಿಗಳು ಎಂದು ಕರೆದದ್ದನ್ನು ಸಾವರ್ಕರ್‌ ಒಪ್ಪಿಕೊಳ್ಳುತ್ತಾರೆ. ಯಾಕೆಂದರೆ, ಅವರೆಲ್ಲ ಮತಾಂತರಗೊಂಡವರು. ಒಂದು ಕಾಲದಲ್ಲಿ ಹಿಂದೂಗಳಾಗಿದ್ದವರು.

ಶ್ರದ್ಧಾನಂದರ ಕೊಲೆಯನ್ನು ಹಿಂದೂ ಜನಾಂಗೀಯ ರಾಜಕಾರಣಕ್ಕೆ ಗೊಬ್ಬರವಾಗಿಸಲು ಸಾವರ್ಕರ್‌ ಬಹಳ ಶ್ರಮಿಸುತ್ತಾರೆ. ಸಾವರ್ಕರ್‌ ಸಹೋದರರಲ್ಲಿ ಕಿರಿಯವನಾಗಿದ್ದ ನಾರಾಯಣ ರಾವ್‌ ಸಾವರ್ಕರ್‌ ೧೯೨೭ ಜನವರಿ ೧೦ರಂದು ಶ್ರದ್ಧಾನಂದ್‌ ಎಂಬ ಹೆಸರಿನ ವಾರಪತ್ರಿಕೆಯನ್ನು ಬಾಂಬೆಯಿಂದ ಆರಂಭಿಸುತ್ತಾರೆ. ವಿ.ಡಿ ಸಾವರ್ಕರ್‌ ಹಲವು ಹೆಸರುಗಳಲ್ಲಿ ಹಿಂದೂ ಸಂಘಟನಾ ಶ್ರಮಗಳನ್ನು ಮತ್ತು ಶುದ್ಧಿಚಳುವಳಿಯನ್ನು ಪ್ರೋತ್ಸಾಹಿಸುವಂತಹ ಲೇಖನಗಳನ್ನು ಅದರಲ್ಲಿ ಬರೆದರು. ಜೊತೆಗೆ ಹಿಂದೂ ಮಹಾಸಭಾ ಮತ್ತು ಸಾವರ್ಕರ್‌ ಸೇರಿಕೊಂಡು ಸ್ವಾಮಿ ಶ್ರದ್ಧಾನಂದ ನಿಧಿ ಎಂಬ ಹೆಸರಿನಲ್ಲಿ ಧನಸಂಗ್ರಹವನ್ನೂ ಆರಂಭಿಸುತ್ತಾರೆ. ಶ್ರದ್ಧಾನಂದರು ತೊಡಿಗಿಸಿಕೊಂಡಿದ್ದ ಶುದ್ಧಿಚಳುವಳಿಯನ್ನು ಮುಂದುವರಿಸಿಕೊಂಡು ಹೋಗಲು ಈ ಹಣವನ್ನು ವಿನಿಯೋಗಿಸಲಾಗುತ್ತಿತ್ತು.

ಶ್ರದ್ಧಾನಂದ್‌ ವಾರ ಪತ್ರಿಕೆಯ ಮೊದಲ ಮುಖಪುಟ ಲೇಖನವನ್ನು ಬರೆದದ್ದು ಸ್ವತಹ ವಿ.ಡಿ ಸಾವರ್ಕರ್. ಆ ಲೇಖನದ ಹೆಸರು‌ ಸ್ವಾಮಿ ಶ್ರದ್ಧಾನಂದರ ಕೊಲೆ ಮತ್ತು ಗಾಂಧೀಜಿಯ ಎಲ್ಲೂ ಸಲ್ಲದ ಪಕ್ಷಪಾತಿ ಧೋರಣೆ.

You cannot copy content of this page

Exit mobile version