ಸಾವರ್ಕರ್ ತುಳಿದ ದಾರಿ ಸಂಪೂರ್ಣವಾಗಿ ತಪ್ಪು ದಾರಿಯಾಗಿತ್ತೆಂದು ಅದು ಬರೆಯಿತು. ಅದರ ಜೊತೆಗೆ ಕ್ಷಮಾಪಣಾ ಪತ್ರಗಳನ್ನೂ ಸೇರಿಸಿಕೊಂಡರೆ ಸಾವರ್ಕರ್ ತಪ್ಪುಗಳು ದುಪ್ಪಟ್ಟಾಗುತ್ತವೆ. ಬ್ರಿಟಿಷರ ಎದುರು ಮೊಣಕಾಲೂರಿ ಕ್ಷಮೆ ಕೇಳಿಕೊಂಡು ಬಿಡುಗಡೆಗೊಂಡ ಇಂತಹ ಮನುಷ್ಯರಿಗಾಗಿ ಧನಸಹಾಯ ನೀಡುವುದು ಭಾರತದ ಇಂದಿನ ಮೌಲ್ಯಗಳಾದ ಧೀರತೆ ಮತ್ತು ದೇಶಪ್ರೇಮಗಳನ್ನು ಸಂಪೂರ್ಣವಾಗಿ ಗೇಲಿ ಮಾಡುವುದಕ್ಕೆ ಸಮಾನವಾಗಿರುತ್ತದೆಯೆಂದು ಇಂದುಪ್ರಕಾಶ್ ಬರೆಯಿತು.
೧೯೨೪ರಲ್ಲಿ ನಾವು ಈಗಾಗಲೆ ಚರ್ಚಿಸಿದ ಕ್ಷಮಾಪಣಾ ಪತ್ರಗಳು, ಕಾಂಗ್ರೆಸ್ ಸಹಿತ ಹಲವು ಸಂಘಟನೆಗಳು ಮತ್ತು ನಾರಾಯಣ ರಾವ್ ಸಹಿತ ಕುಟುಂಬ ಸದಸ್ಯರ ಒತ್ತಡಗಳ ಫಲವಾಗಿ ಸಾವರ್ಕರ್ ಬಿಡುಗಡೆಗೊಳ್ಳುತ್ತಾರೆ. ೫೦ ವರ್ಷಗಳ ಕಾರಾಗೃಹ ಶಿಕ್ಷೆಗೆ ಗುರಿಯಾಗಿ ಜೈಲು ಸೇರಿದ್ದ ಸಾವರ್ಕರ್‌ಗೆ ಸುಮಾರು ೧೪ ವರ್ಷಗಳ ಕಾಲವಷ್ಟೇ ಜೈಲಲ್ಲಿ ಕಳೆಯಬೇಕಾಗಿ ಬಂದಿತ್ತು. ಆದರೆ ಈ ಬಿಡುಗಡೆ ಸಂಪೂರ್ಣ ಸ್ವಾತಂತ್ರ್ಯದ ಬಿಡುಗಡೆಯಾಗಿರಲಿಲ್ಲ. ಐದು ವರ್ಷಗಳ ಕಾಲ ಪಾಲಿಸಬೇಕಾದ ಷರತ್ತುಗಳಿಗೆ ಒಪ್ಪಿಕೊಂಡು ಸಾವರ್ಕರ್ ಹೊರ ಬಂದಿದ್ದರು. ಸರಕಾರದ ಆ ಷರತ್ತುಗಳು ಹೀಗಿದ್ದವು:
೧. ಮೇಲೆ ವಿವರಿಸಿದ ವಿನಾಯಕ್ ದಾಮೋದರ್ ಸಾವರ್ಕರ್ ರತ್ನಗಿರಿ ಜಿಲ್ಲೆಯಲ್ಲಿ ಬಾಂಬೆ ಗವರ್ನರ್ ಆಡಳಿತದಡಿಯಲ್ಲಿರುವ ಜಾಗದಲ್ಲಿ ವಾಸಿಸಬೇಕು. ಸರಕಾರದ ಅನುಮತಿಯಿಲ್ಲದೆ ಜಿಲ್ಲೆ ಬಿಟ್ಟು ಹೋಗಬಾರದು. ತುರ್ತು ಪರಿಸ್ಥಿತಿ ಏನಾದರು ಬಂದರೆ ಜಿಲ್ಲಾ ಮ್ಯಾಜಿಸ್ಟ್ರೇಟರ ಅನುಮತಿ ಪಡೆದುಕೊಳ್ಳದೆ ಜಿಲ್ಲೆ ತೊರೆಯುವ ಹಾಗಿಲ್ಲ.
೨. ಐದು ವರ್ಷಗಳ ಕಾಲ ಸರಕಾರದ ಅನುಮತಿಯಿಲ್ಲದೆ ಸಾರ್ವಜನಿಕ ಅಥವಾ ಖಾಸಗಿ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಸಿಕೊಳ್ಳಬಾರದು. ಕಾಲಾವಧಿ ಮುಗಿಯುವಾಗ ಸರಕಾರ ಈ ಷರತ್ತನ್ನು ಪುನಃ ನವೀಕರಿಸಬಹುದು.
ಇದರ ಭಾಗವಾಗಿ ಸಾವರ್ಕರ್ ಒಂದು ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿ ಕೊಡುತ್ತಾರೆ.
ʼನನಗೆ ಉತ್ತಮವಾದ ವಿಚಾರಣೆ ಮತ್ತು ನೀತಿಯುತವಾದ ತೀರ್ಪು ಲಭಿಸಿದೆಯೆಂದೂ ಹಿಂದೆ ನಾನು ತುಳಿದಿದ್ದ ಅಕ್ರಮ ಮಾರ್ಗಗಳನ್ನು ನಾನು ಮನಃಪೂರ್ವಕ ತೊರೆಯತ್ತೇನೆಂದೂ ನನ್ನ ಎಲ್ಲ ಶಕ್ತಿಯನ್ನು ಬಳಸಿಕೊಂಡು ಕಾನೂನು ಮತ್ತು ಸಂವಿಧಾನವನ್ನು ಎತ್ತಿಹಿಡಿಯುವ ಜವಾಬ್ದಾರಿಗೆ ಕಟಿಬದ್ದನಾಗಿದ್ದೇನೆಂದೂ ಅನುಮತಿ ನೀಡಿದರೆ (ಸರಕಾರದ) ಸುಧಾರಣಾ ಕಾರ್ಯಕ್ರಮಗಳನ್ನು ಪ್ರಚಾರ ಪಡಿಸಲು ಇಲ್ಲಿಯ ತನಕ ಕೆಲಸ ಮಾಡಿದ ರೀತಿಯಲ್ಲಿ ಮುಂದೆಯೂ ಕೆಲಸ ಮಾಡುತ್ತೇನೆಂದೂ ನಾನು ಈ ಮೂಲಕ ಒಪ್ಪಿಕೊಳ್ಳುತ್ತೇನೆ.ʼ
ಹೀಗೆ ೧೯೨೪ ಜನವರಿ ೬ರಂದು ಮೇಲಿನ ಷರತ್ತುಗಳಿಗೆ ಒಪ್ಪಿಕೊಂಡು ಸಾವರ್ಕರ್ ಜೈಲಿನಿಂದ ಹೊರಬರುತ್ತಾರೆ. ತನ್ನ ಕ್ಷಮಾಪಣಾ ಪತ್ರಗಳಲ್ಲಿ ಮತ್ತೆ ಮತ್ತೆ ಹೇಳಿಕೊಂಡಂತೆ ಮತ್ತು ಬ್ರಿಟಿಷ್ ಸರಕಾರ ಸೂಚಿಸಿದಂತೆ ಬ್ರಿಟಿಷ್ ವಿರೋಧಿ ರಾಜಕಾರಣವನ್ನು ಸಾವರ್ಕರ್ ಸಂಪೂರ್ಣವಾಗಿ ತೊರೆಯುತ್ತಾರೆ. ನಂತರ ತಾನೇ ಆರಂಭಿಸಿದ ಹಿಂದುತ್ವ ಹೆಸರಿನ ಜನಾಂಗೀಯ ರಾಜಕಾರಣವನ್ನು ಮುಂದಕ್ಕೆ ಕೊಂಡಯ್ಯಲು ಸಾವರ್ಕರ್ ಶ್ರಮಿಸುತ್ತಾರೆ. ಅದು ಆ ಕಾಲದಲ್ಲಿ ಬ್ರಿಟಿಷರಿಗೆ ಸಿಗಬಹುದಾಗಿದ್ದ ಅತ್ಯಂತ ದೊಡ್ಡ ಸಹಾಯವೂ ಆಗಿತ್ತು. ಯಾಕೆಂದರೆ, ಖಿಲಾಫತ್ ಚಳುವಳಿ ಆರಂಭದೊಂದಿಗೆ ಹಿಂದೆಂದೂ ಕಾಣದ ರೀತಿಯಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದತೆಯು ಭಾರತದ ರಾಜಕಾರಣದಲ್ಲಿ ಮೂಡಿ ಬರುತ್ತಿತ್ತು. ಅದಕ್ಕೆ ದೊಡ್ಡ ಮಟ್ಟದ ಶಕ್ತಿಯೂ ದೊರೆಯುತ್ತಿತ್ತು. ಈ ಐಕ್ಯತೆಯನ್ನು ಒಡೆಯಲು ಹಿಂದುತ್ವ ರಾಜಕಾರಣ ಸಹಕಾರಿಯಾಗಿತ್ತು. ಹೀಗಿರುವಾಗ ತನ್ನ ಬ್ರಿಟಿಷ್ ವಿರೋಧಿ ಭೂತ ಮತ್ತು ಅದರ ಭಾಗವಾಗಿ ಲಭಿಸಿದ ಜೈಲುಶಿಕ್ಷೆಯಿಂದ ದೊರೆತ ಸಾಮಾಜಿಕ ಬಂಡವಾಳವನ್ನು ಸಾವರ್ಕರ್ ಫಲಕಾರಿಯಾಗಿ ಉಪಯೋಗಿಸಿಕೊಳ್ಳುತ್ತಾರೆ. ಗೋರಾಜಕಾರಣದಂತಹ ಭಾವನಾತ್ಮಕ ಸಂಗತಿಗಳ ಕುರಿತು ಸಾವರ್ಕರ್ ಹೊಂದಿದ್ದ ವಿಶೇಷ ದೃಷ್ಟಿಕೋನವನ್ನು ನಾವು ಈಗಾಗಲೆ ಚರ್ಚಿಸಿದೆವು. ಗೋಸಂರಕ್ಷಣೆ: ದನ ಪವಿತ್ರವಲ್ಲ ಎಂಬ ಲೇಖನದಲ್ಲಿ ಭಾವನಾತ್ಮಕ ಹಿಂದೂವಿನಿಂದ ಜನಾಂಗೀಯ ಹಿಂದೂವಿನ ಕಡೆಗೆ ಇರುವ ದೂರವನ್ನು ಸಾವರ್ಕರ್ ತೋರಿಸಿಕೊಡುತ್ತಾರೆ.
ʼಹಿಂದುತ್ವದ ಪ್ರತೀಕ ದನವಲ್ಲ. ಅದು ನರಸಿಂಹ. ದೇವರ ಗುಣಗಳು ಭಕ್ತರಿಗೆ ಹರಿದು ಬರುತ್ತವೆ. ಹಸುವನ್ನು ಪವಿತ್ರವಾಗಿ ಕಾಣುವುದು ಮತ್ತು ಅದನ್ನು ಪೂಜಿಸುವುದರಿಂದ ಪೂರ್ತಿ ಹಿಂದೂರಾಷ್ಟ್ರವೇ ದನದ ಹಾಗೆ ವಿಧೇಯವಾಗಿ ಬಿಡುವ ಅಪಾಯವಿದೆ. ಅದು ಹುಲ್ಲು ತಿನ್ನತೊಡಗುತ್ತದೆ. ಒಂದು ಪ್ರಾಣಿಯ ಆಧಾರದಲ್ಲಿ ರಾಷ್ಟ್ರವನ್ನು ಕಟ್ಟುವುದಾದರೆ ಅದು ಸಿಂಹವೇ ಆಗಿರಲಿ. ಸಿಂಹವು ತನ್ನ ಹರಿತ ಉಗುರುಗಳ ಮೂಲಕ ಒಂದೇಟಿಗೆ ಎದುರಾಳಿಯ ಮೇಲೆ ಮಾರಕ ದಾಳಿ ಮಾಡಿ ಗಾಯಗೊಳಿಸಿ ಬಿಡುತ್ತದೆ. ಅಂತಹದ್ದೊಂದು ನರಸಿಂಹವನ್ನು ನಾವು ಪೂಜಿಸಬೇಕಿದೆ. ದನವಲ್ಲ, ನರಸಿಂಹವೇ ಹಿಂದುತ್ವದ ಮುದ್ರೆ. ಶೋಷಣೆಗೊಳಗಾಗುವ ಮತ್ತು ಮುಂದೆ ಆಹಾರವಾಗುವ ದನವು, ನಮ್ಮ ಇಂದಿನ ದುರ್ಬಲತೆಗೆ ಸರಿಯಾಗಿ ಹೊಂದುತ್ತದೆ. ಆದರೆ, ನಾಳೆಯ ಹಿಂದೂರಾಷ್ಟ್ರಕ್ಕೆ ಇಂತಹದ್ದೊಂದು ಸಹತಾಪ ತುಂಬಿದ ಲಾಂಛನವಲ್ಲ ಬೇಕಾಗಿರುವುದು.ʼ
ಸಿಂಹದ ಕ್ರೌರ್ಯ ತುಂಬಿದ ಹಿಂದೂ ಜನಾಂಗೀಯತೆಯನ್ನು ಬ್ರಾಹ್ಮಣಿಸಮ್ಮಿನ ನಾಳೆಯಾಗಿ ಸಾವರ್ಕರ್ ಕಂಡಿದ್ದರು. ಎದುರಾಳಿಯ ಮೇಲೆ ಕರುಣೆಯಿಲ್ಲದ ನರಸಿಂಹ. ನಿಜದಲ್ಲಿ ಈ ರೂಪಕವು ಹಿಂದುತ್ವದ ಆಂತರಿಕ ಸತ್ವವನ್ನು ತೋರಿಸುತ್ತದೆಯೆಂದು ಮಾತ್ರವಲ್ಲ, ಸಾವರ್ಕರ್ ಅವರ ಮಾನಸಿಕ ನೆಲೆಯನ್ನೂ ಸೂಚಿಸುತ್ತದೆ. ಒಂದು ಸೈನ್ಯವನ್ನೇ ರೂಪಕದ ಮೂಲಕ ಕಟ್ಟಿಕೊಳ್ಳುವ ಜನಾಂಗೀಯತೆ ಮತ್ತು ವ್ಯಕ್ತಿತ್ವ. ಫಾಡ್ಕೇ ಮತ್ತು ಚಾಪೇಕರ್ ಸಹೋದರರಿಗಿಂತ ಲಕ್ಷ ಪಟ್ಟು ಮಿಗಿಲಾದ ದುರಭಿಮಾನ. ಇದು ಸಾವರ್ಕರ್ ಅವರ ಜನಾಂಗೀಯವಾದದ ಕಲ್ಪನೆ. ಅದು ಅದರೊಂದಿಗೆ ಹೊಂದಿಕೊಳ್ಳದ ಎಲ್ಲವನ್ನೂ ನಾಶಗೊಳಿಸುತ್ತದೆ. ಗಾಯಗೊಳಿಸುತ್ತದೆ. ಇನ್ನೊಂದು ಜನಾಂಗವೆಂಬ ಕಾರಣಕ್ಕೆ ಕರುಣೆಯಿಲ್ಲದೆ ನಡೆದುಕೊಳ್ಳುತ್ತದೆ.
ಸಾವರ್ಕರ್ ರತ್ನಗಿರಿಯಲ್ಲಿ ಜಿಲ್ಲಾಬಂಧನದಲ್ಲಿ ಬದುಕುತ್ತಿದ್ದಾಗ ಅಲ್ಲಿ ಪ್ಲೇಗ್ ಹರಡತೊಡಗುತ್ತದೆ. ೧೯೨೪ ಮೇ ೨೭ರಂದು ರೋಗ ಬಾಧಿಸದಿರಲು ಮುಂಜಾಗ್ರತೆಯಾಗಿ ಅಲ್ಲಿಂದ ಬೇರೆ ಕಡೆ ನೆಲೆಸಲು ಅನುಮತಿ ಕೋರಿ ಸಾವರ್ಕರ್ ಬಾಂಬೆ ಸರಕಾರಕ್ಕೆ ಪತ್ರ ಬರೆಯುತ್ತಾರೆ. ತನ್ನ ಬಾಲ್ಯಕಾಲದಲ್ಲಿ ಬ್ರಾಹ್ಮಣ್ಯದ ರಕ್ಷಣೆಗಾಗಿ ತಂದೆಯ ಪ್ಲೇಗ್ ರೋಗದ ಮಾಹಿತಿಯನ್ನು ಬಹಿರಂಗಪಡಿಸದೆ ಮನೆಯೊಳಗೆ ಅಡಗಿ ಕುಳಿತ ಬಗ್ಗೆ ಮತ್ತು ಬ್ರಿಟಿಷ್ ವಿರೋಧಿತನದ ಬೀಜ ಮನಸ್ಸಿನಲ್ಲಿ ಮೊಳೆತ ಕುರಿತು ತನ್ನ ಆತ್ಮಕತೆಯಲ್ಲಿ ಬಹಳವೇ ಮಾತನಾಡುವ ಅದೇ ಸಾವರ್ಕರ್ ಈಗ ತನ್ನ ಆರೋಗ್ಯ ಕಾಪಾಡಲು ಸರಕಾರದ ಬಳಿ ಕೇಳಿಕೊಳ್ಳುತ್ತಿರುವುದು. ಪ್ಲೇಗ್ ನಿಯಂತ್ರಣಕ್ಕೆ ಮನೆಮನೆ ಭೇಟಿ ನೀಡಿ ತಪಾಸಣೆ ನಡೆಸುತ್ತಿದ್ದ ಪ್ಲೇಗ್ ನಿಯಂತ್ರಣಾಧಿಕಾರಿಗಳಾದ ರಾನ್ಡ್ ಮತ್ತು ಅಯರ್ನ್ಸ್ಟ್ ಅವರನ್ನು ಕೊಲೆ ಮಾಡಿದ ಚಾಪೇಕರ್ ಸಹೋದರರನ್ನು ತನ್ನ ಲಂಡನ್ ವಾಸದ ಕಾಲದಲ್ಲಿ ಯುವಕ್ರಾಂತಿಕಾರಿಗಳ ಎದುರು ಧೀರ ಹುತಾತ್ಮರಾಗಿ ಚಿತ್ರಿಸುತ್ತಿದ್ದ ಅದೇ ಸಾವರ್ಕರ್ ಈ ಅರ್ಜಿಯನ್ನು ಬರೆಯುತ್ತಿರುವುದು. ಏನೇ ಆದರು ಆ ಅರ್ಜಿ ಪುರಸ್ಕೃತಗೊಂಡಿತು. ೧೯೧೨ ಜೂನ್ ೧೦ರಂದು ನಾಸಿಕ್‌ಗೆ ವಾಸ ಬದಲಾಯಿಸಲು ಅನುಮತಿ ದೊರೆಯಿತು. ಇದು ಮೂರು ತಿಂಗಳುಗಳಿಗೆ ಮಾತ್ರವಾಗಿತ್ತು. ಅದರಂತೆ ೧೯೨೪ ಜೂನ್ ೧ರಂದು ಸದಾಶಿವ ರಾಣಡೆಯ ಜೊತೆಗೆ ಸಾವರ್ಕರ್ ನಾಸಿಕ್‌ಗೆ ಹೊರಡುತ್ತಾರೆ. ಅಭಿನವ್ ಭಾರತ್ ಹುಟ್ಟಿಕೊಂಡ ಅದೇ ನಗರಕ್ಕೆ. ಅಲ್ಲಿ ವಾಸಿಸುವ ಸಂದರ್ಭದಲ್ಲಿ ತನ್ನ ಹುಟ್ಟೂರಾದ ಭಾಗೂರು ಮತ್ತು ಆಸುಪಾಸಿನ ಇಯೋಳ ಮತ್ತು ತ್ರಯಂಬಕಗಳಿಗೆ ಭೇಟಿ ನೀಡುತ್ತಾರೆ. ೧೯೨೪ ಜುಲೈ ೨೯ರಂದು ಇಯೋಳದಲ್ಲಿ ಮಾಡಿದ ಭಾಷಣದಿಂದ ಹಿಂದುತ್ವ ರಾಜಕಾರಣದ ಕೆಲ ವಿಶೇಷತೆಗಳನ್ನು ಅರ್ಥ ಮಾಡಿಕೊಳ್ಳಬಹುದು.
ಮೊದಲನೇ ಮಹಾಯುದ್ಧಕ್ಕಿಂತ ಮೊದಲು ಹಿಂದೂಗಳ ಜನಸಂಖ್ಯೆ ೬೦ ಕೋಟಿಯಾಗಿತ್ತೆಂಬುದು ಆ ಭಾಷಣದಲ್ಲಿ ಸಾವರ್ಕರ್ ಕೊಟ್ಟ ಲೆಕ್ಕ. ಆದರೆ, ಇವಾಗ ಅದು ೨೨ ಕೋಟಿಗೆ ಇಳಿದಿದೆ. ಅದರಲ್ಲಿಯೇ ಸುಮಾರು ೭ ಕೋಟಿಯಷ್ಟು ಜನರು ಅಸ್ಪೃಶ್ಯ ಜಾತಿಗಳ ಜನರು. ಈಗಾಗಲೇ ಅಸ್ಪೃಶ್ಯರಾಗಿರುವ ಅವರನ್ನು ಮತ್ತೆ ತೊಂದರೆಗೀಡು ಮಾಡಿದರೆ ಹಿಂದೂ ಛತ್ರಿಯಡಿಯಿಂದ ಅವರು ಹೊರ ನಡೆಯುತ್ತಾರೆ ಎಂದು ಮುನ್ನೆಚ್ಚರಿಕೆ ನೀಡುತ್ತಾರೆ.
ಸಂಪ್ರದಾಯವಾದಿ ಬ್ರಾಹ್ಮಣಿಸಂ ಮತ್ತು ರಾಜಕೀಯ ಮಹಾತ್ವಾಂಕ್ಷೆ ಹೊಂದಿರುವ ಹಿಂದುತ್ವ ಜನಾಂಗೀಯತೆಯ ನಡುವಿನ ವ್ಯತ್ಯಾಸವನ್ನು ಇಲ್ಲಿ ಸರಿಯಾಗಿ ಗುರುತಿಸಬಹುದು. ಸಾವರ್ಕರ್ ಭಾಗವಹಿಸಿದ ಬಹುತೇಕ ಸಭೆಗಳು ಬ್ರಾಹ್ಮಣರ ಕಾರ್ಯಕ್ರಮಗಳಾಗಿದ್ದವು ಎಂಬುದನ್ನು ನಾವಿಲ್ಲಿ ಗಮನಿಸಬೇಕು. ಹಳೆಯ ತಿಲಕ್‌ವಾದಿಗಳು ಮತ್ತು ಅಭಿನವ್ ಭಾರತ್‌ನ ಕಾರ್ಯಕರ್ತರುಗಳೇ ಇದರಲ್ಲಿ ಭಾಗವಹಿಸುತ್ತಿದ್ದರು. ಬ್ರಾಹ್ಮಣ ಮೇಲುಗೈ ಯಾವ ರೀತಿಯಲ್ಲಾದರೂ ನೆಲೆನಿಲ್ಲಬೇಕಾದರೆ ಒಂದು ಹಿಂದೂ ಮಂಡಲ ಅನಿವಾರ್ಯವಾಗಿತ್ತು. ಕೆಳಜಾತಿಗಳು ತಮ್ಮದೇ ರೀತಿಯಲ್ಲಿ ತಮ್ಮ ಕರ್ತೃತ್ವ ನಿರ್ಮಿತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದನ್ನು ಈ ಕೂಡಲೇ ಆಕ್ರಮಿಸಿಕೊಳ್ಳದಿದ್ದರೆ ಈಗಿರುವ ಬ್ರಾಹ್ಮಣ ಮೇಲುಗೈ ಕೂಡ ನಷ್ಟವಾಗಬಹುದು. ಆದರೆ ಆಕ್ರಮಣ ಮಾಡಲು ಸಾಧ್ಯವಾಗಿಬಿಟ್ಟರೆ ಬಹಳ ಸುಂದರವಾಗಿ ನೇಯಬಹುದಾದ ಒಂದು ಹಿಂದೂ ಮಂಡಲವು ಬ್ರಾಹ್ಮಣ ಮೇಲುಗೈಗೋಸ್ಕರ ದುಡಿಯಲು ಸಿದ್ದವಾಗಿಬಿಡುತ್ತದೆ. ಅದು ಮಾತ್ರವೇ ಬ್ರಾಹ್ಮಣರನ್ನು ರಾಷ್ಟ್ರೀಯ ಮುಂಚೂಣಿಗೆ ಮತ್ತು ಅಧಿಕಾರಕ್ಕೆ ಮುನ್ನಡೆಸುವುದು.
ಐದು ವರ್ಷಗಳ ಕಾಲ ರಾಜಕಾರಣವನ್ನು ಸಾವರ್ಕರ್‌ಗೆ ನಿಷೇಧಿಸಲಾಗಿತ್ತಾದರೂ ಹಿಂದೂ ಸಂಘಟನೆಯನ್ನು ಜನಾಂಗೀಯತೆಯ ಆಧಾರದಲ್ಲಿ ಕಟ್ಟಿಕೊಳ್ಳಲು ಬ್ರಿಟಿಷ್ ಸರಕಾರ ಸ್ವಾತಂತ್ರ್ಯ ನೀಡಿತ್ತು. ಇದು ಬ್ರಿಟಿಷ್ ಆಡಳಿತದ ವಿರುದ್ಧ ಗಾಂಧಿ ಮತ್ತು ಸಹಚರರು ಮುನ್ನಡೆಸುತ್ತಿರುವ ಚಳುವಳಿಯನ್ನು ಹಿಮ್ಮೆಟ್ಟಿಸುವ ಕಾರ್ಯವಾಗಿದ್ದರಿಂದ ಬ್ರಿಟಿಷ್ ಸರಕಾರ ಇದನ್ನು ತಡೆಯಲು ಮುಂದಾಗಲೇ ಇಲ್ಲ. ಈ ಕಾಲದಲ್ಲಿ ಸಾವರ್ಕರ್ ಹಲವು ಮುಸ್ಲಿಂ ವಿರೋಧಿ ಭಾಷಣಗಳನ್ನು ಮಾಡುತ್ತಾರೆ ಮತ್ತು ಲೇಖನಗಳನ್ನು ಬರೆಯುತ್ತಾರೆ. ದೇಶದ ಆಂತರಿಕ ಬದುಕನ್ನು ಬುಡಮೇಲು ಮಾಡುವ ಈ ಪ್ರಯತ್ನವನ್ನು ಕೆಳ ಹಂತದ ಅಧಿಕಾರಿಗಳು ಎತ್ತಿ ತೋರಿಸಿದರೂ ಇವೆಲ್ಲವೂ ರಾಜಕೀಯೇತರ ಚಟುವಟಿಕೆಗಳೆಂಬ ಹಿಂದುತ್ವಾನುಕೂಲ ವರದಿಗಳನ್ನು ಮೌಂಟ್ ಗೋಮರಿ ಮತ್ತು ಸಹಚರರು ನೀಡುತ್ತಾರೆ. ಅವರ ಪ್ರಕಾರ ರಾಜಕಾರಣವೆಂದರೆ ಬ್ರಿಟಿಷ್ ವಿರೋಧಿ ರಾಜಕಾರಣ ಮಾತ್ರವಾಗಿತ್ತು. ಅಂತಹ ರಾಜಕಾರಣವನ್ನು ತಾನು ತುಳಿಯುವುದಿಲ್ಲವೆಂದು ಬ್ರಿಟಿಷರಿಗೆ ನೀಡಿದ ಮಾತನ್ನು ಸಾವರ್ಕರ್ ತಮ್ಮ ಬದುಕಿನುದ್ದಕ್ಕೂ ಪಾಲಿಸುತ್ತಾರೆ. ಅದೇ ಹೊತ್ತು ಒಡೆದಾಳುವ ಬ್ರಿಟಿಷ್ ಸಾಮ್ರಾಜ್ಯದ ತಂತ್ರಕ್ಕೆ ತನ್ನದೇ ಆದ ಹಲವು ಕೊಡುಗೆಗಳನ್ನು ನೀಡುತ್ತಾರೆ.
ಬ್ರಿಟಿಷರೊಂದಿಗೆ ಕ್ಷಮಾಪಣೆ ಕೇಳಿಕೊಂಡು ಜೈಲಿನಿಂದ ಹೊರಬಂದ ಸಾವರ್ಕರ್ ಬಗ್ಗೆ ಬ್ರಾಹ್ಮಣವಾದಿಗಳ ನಡುವೆಯೇ ಟೀಕೆಗಳು ಎದ್ದವು. ೧೯೨೮ರಲ್ಲಿ ಗಣೇಶ್ ಶಂಕರ್ ವಿದ್ಯಾರ್ಥಿ, ಹಿಂದೂ ಪತ್ರಿಕೆಯಾಗಿದ್ದ ಶ್ರದ್ಧಾನಂದಕ್ಕೆ ಬರೆದ ಪತ್ರದಲ್ಲಿ ಭಾರತದ ಸಂಕಷ್ಟಗಳನ್ನು ನಿವಾರಿಸಲು ಹುತಾತ್ಮನಾಗಲು ಹೊರಟಿದ್ದ ಮನುಷ್ಯನೊಬ್ಬ ಯಾಕಾಗಿ ಹೀಗೆ ಕ್ಷಮೆ ಕೇಳುವ ಓಟದಲ್ಲಿ ಒಂದನೇ ಸ್ಥಾನಕ್ಕೇರುತ್ತಾನೆ ಎಂಬರ್ಥದಲ್ಲಿ ಪ್ರಶ್ನೆಗಳನ್ನು ಎತ್ತುತ್ತಾರೆ. ಯಾಕಾಗಿ ಅವರು ಜೈಲುಕೋಣೆಗಳ ಒಳಗೆ ಸಾವನ್ನು ಎದುರುಗೊಳ್ಳಲು ಹೆದರಿದರು? ಯಾಕಾಗಿ ಸರಕಾರಕ್ಕೆ ನಿರಂತರವಾಗಿ ಅರ್ಜಿಗಳನ್ನು ಬರೆದರು? ಇದಕ್ಕೂ ಮೊದಲು ಚಿತ್ಪಾವನ ಬ್ರಾಹ್ಮಣರೊಳಗಡೆಯೇ ಇದ್ದ ಪ್ರಗತಿಪರ ಬ್ರಾಹ್ಮಣರು ಈ ಪ್ರಶ್ನೆಯನ್ನು ಎತ್ತಿದ್ದರು. ಸಾವರ್ಕರ್ ರತ್ನಗಿರಿ ಜಿಲ್ಲೆಯಲ್ಲಿ ವಾಸಿಸುತ್ತಿದ್ದಾಗ ಸಾವರ್ಕರ್‌ಗೋಸ್ಕರ ಚಿತ್ಪಾವನ ಬ್ರಾಹ್ಮಣರ ಒಂದು ವಿಭಾಗದ ಮುಂದಾಳುತ್ವದಲ್ಲಿ ಆರ್ಥಿಕ ಸಹಾಯ ನೀಡುವ ಪ್ರಯತ್ನಗಳು ಶುರುವಾಗುವುದೇ ಈ ಪ್ರಶ್ನೆಗಳನ್ನು ಎತ್ತಲು ಕಾರಣವಾಗಿತ್ತು. ೧೯೨೪ರಲ್ಲಿಯೇ ಬಾಂಬೆ ಲೆಜಿಸ್ಲೇಟಿವ್ ಕೌನ್ಸಲ್‌ನಲ್ಲಿ ಸಾವರ್ಕರ್‌ಗೋಸ್ಕರ ಸಹಾಯ ಕೋರಿ ಎತ್ತಿದ್ದ ಅಹವಾಲನ್ನು ನಿರಾಕರಿಸಲಾಗಿತ್ತು. ಅದರ ನಂತರ ತಿಲಕ್ ಆರಂಭಿಸಿದ್ದ ನವ-ಸಂಪ್ರದಾಯವಾದಿ ರಾಜಕೀಯ ಬ್ರಾಹ್ಮಣಿಸಮ್ಮಿನ ಮುಖವಾಣಿಯಾದ ಕೇಸರಿಯಲ್ಲಿ ಅಂದಿನ ಸಂಪಾದಕರಾಗಿದ್ದ ಎನ್.ಸಿ. ಕೇಲ್ಕರ್ ಎಂಬ ಚಿತ್ಪಾವನ ಬ್ರಾಹ್ಮಣ ʼಸಾವರ್ಕರ್ ಸಹೋದರರ ಸಹಾಯ ನಿಧಿʼ ಸ್ಥಾಪಿಸಲು ಮನವಿ ಮಾಡುತ್ತಾರೆ. ತಿಲಕರ ಮರಣಾ ನಂತರ ತಿಲಕ್ ಎತ್ತಿದ್ದ ಬ್ರಾಹ್ಮಣ ರಾಜಕಾರಣವನ್ನು ಮುನ್ನಡೆಸುತ್ತಿದ್ದವರು ಕೇಲ್ಕರ್. ಈ ಆಹ್ವಾನದ ವಿರುದ್ಧ ಚಿತ್ಪಾವನ ಬ್ರಾಹ್ಮಣರಲ್ಲಿ ಪ್ರಗತಿಪರರಾಗಿದ್ದ ಮಹಾದೇವ್ ಗೋವಿಂದ್ ರಾಣಡೆ ಸ್ಥಾಪಿಸಿದ್ದ ಇಂದುಪ್ರಕಾಶ್ ಎಂಬ ಪತ್ರಿಕೆ ಉತ್ತರ ನೀಡುತ್ತದೆ. ಸಾವರ್ಕರ್ ತುಳಿದ ದಾರಿ ಸಂಪೂರ್ಣವಾಗಿ ತಪ್ಪು ದಾರಿಯಾಗಿತ್ತೆಂದು ಅದು ಬರೆಯಿತು. ಅದರ ಜೊತೆಗೆ ಕ್ಷಮಾಪಣಾ ಪತ್ರಗಳನ್ನೂ ಸೇರಿಸಿಕೊಂಡರೆ ಸಾವರ್ಕರ್ ತಪ್ಪುಗಳು ದುಪ್ಪಟ್ಟಾಗುತ್ತವೆ. ಬ್ರಿಟಿಷರ ಎದುರು ಮೊಣಕಾಲೂರಿ ಕ್ಷಮೆ ಕೇಳಿಕೊಂಡು ಬಿಡುಗಡೆಗೊಂಡ ಇಂತಹ ಮನುಷ್ಯರಿಗಾಗಿ ಧನಸಹಾಯ ನೀಡುವುದು ಭಾರತದ ಇಂದಿನ ಮೌಲ್ಯಗಳಾದ ಧೀರತೆ ಮತ್ತು ದೇಶಪ್ರೇಮಗಳನ್ನು ಸಂಪೂರ್ಣವಾಗಿ ಗೇಲಿ ಮಾಡುವುದಕ್ಕೆ ಸಮಾನವಾಗಿರುತ್ತದೆಯೆಂದು ಇಂದುಪ್ರಕಾಶ್ ಬರೆಯಿತು.
ಆದರೂ ಧನಸಹಾಯದ ಯೋಜನೆಯೊಂದಿಗೆ ತಿಲಕ್‌ವಾದಿಗಳು ಮುಂದುವರಿದರು. ೧೯೨೪ ಆಗಸ್ಟ್ ೨೮ರಂದು ನಾಸಿಕ್‌ನ ಬ್ರಹ್ಮಾನಂದ್ ಥಿಯೇಟರಿನಲ್ಲಿ ಮಹಾರಾಷ್ಟ್ರದಿಂದ ಒಟ್ಟುಗೂಡಿಸಿದ ೧೨,೭೫೭ ರೂಪಾಯಿಗಳು ಮತ್ತು ವಿದೇಶದಿಂದ ಒಟ್ಟುಗೂಡಿಸಿದ ೨೧೦ ರೂಪಾಯಿಗಳನ್ನು ಸೇರಿಸಿ ಒಟ್ಟು ೧೨,೯೬೭ ರೂಪಾಯಿಗಳ ಗಂಟನ್ನು ಸಾವರ್ಕರ್‌ಗೆ ಹಸ್ತಾಂತರಿಸಿದರು. ಎನ್.ಸಿ. ಕೇಲ್ಕರ್ ಜೊತೆಗೆ ನಂತರದ ಕಾಲದಲ್ಲಿ ಹಿಂದುತ್ವ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿದ ಬಾಲಕೃಷ್ಣ ಶಿವರಾಂ ಮುನ್ಜೇ ಎಂಬ ಬಿ.ಎಸ್. ಮುನ್ಜೇ, ಕಾರವಾರ ಪೀಠದ ಆಚಾರ್ಯ ಪದವಿಯಲ್ಲಿದ್ದ ಡಾ. ಕುರ್ತಕೋಟಿ ಮೊದಲಾದ ಬ್ರಾಹ್ಮಣರು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಾಸಿಕ್‌ನಲ್ಲಿ ವಾಸಿಸುತ್ತದ್ದ ಕಾಲದಲ್ಲಿ ಇಂಡಿಯಾ ಹೌಸ್ ಕಾಲದ ಸಹಪಾಠಿಯಾಗಿದ್ದ ಸೇನಾಪತಿ ಬಾಪಟ್ ಎಂಬ ಪಾಂಡುರಂಗ ಮಹಾದೇವ ಬಾಪಟ್ ಸಾವರ್ಕರ್ ಭೇಟಿಯಾಗುತ್ತಾನೆ. ಅದು ಗಾಂಧಿಯು ತನ್ನ ಪ್ರಗಿತಿಶೀಲ ರಾಜಕಾರಣವನ್ನು ಬಹಿರಂಗವಾಗಿ ವ್ಯಕ್ತಪಡಿಸುವಂತಹ ಆಂದೋಲನಗಳಲ್ಲಿ ತೊಡಗಿಕೊಂಡಿದ್ದ ಕಾಲ. ಅದರಲ್ಲಿ ಮುಖ್ಯವಾದದ್ದು ಬ್ರಿಟಿಷ್ ಸರಕಾರ ಮತ್ತು ಟಾಟಾ ಜಂಟಿಯಾಗಿ ಮುನ್ಷಿಯಲ್ಲಿ ನಿರ್ಮಿಸಲು ಹೊರಟಿದ್ದ ಜಲವಿದ್ಯುತ್ ಯೋಜನೆ ವಿರುದ್ಧದ ಹೋರಾಟ. ಹಲವಾರು ಎಕರೆ ಕೃಷಿಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಯೋಜನೆಯಾಗಿತ್ತದು. ಗಾಂಧಿಯ ನಾಯಕತ್ವದಲ್ಲಿ ರೂಪಿಸಿದ್ದ ಮುನ್ಷಿ ಸತ್ಯಾಗ್ರಹ ಮಾರ್ಗದರ್ಶಕ ಸಮಿತಿಯು ಸೇನಾಪತಿ ಬಾಪಟನ್ನು ಅದರಲ್ಲಿ ಪಾಲ್ಗೊಳ್ಳುವುದರಿಂದ ತಡೆಯಿತು. ಅಕ್ರಮ ದಾರಿಯಲ್ಲಿ ನಡೆಯುವವರು ಅಹಿಂಸೆಯ ಸತ್ಯಾಗ್ರಹದಲ್ಲಿ ಪಾಲ್ಗೊಂಡರೆ ಅದರ ನಿಜವಾದ ಉದ್ಧೇಶದ ಬಗ್ಗೆ ಸಂಶಯ ಹುಟ್ಟುವ ಸಾಧ್ಯತೆಗಳಿವೆಯೆಂದು ಗಾಂಧಿ ಹೇಳಿದರು. ಬಾಪಟ್ ಸಾವರ್ಕರನ್ನು ಭೇಟಿಯಾಗುವುದು ಈ ಹಿನ್ನೆಲೆಯಲ್ಲಾಗಿತ್ತು. ಅದರ ನಂತರ ಗಾಂಧಿಯ ಹೋರಾಟವನ್ನು ಬುಡಮೇಲು ಮಾಡಲು ಬಾಪಟ್ ಮುನ್ಷಿಯಲ್ಲಿ ಇನ್ನೊಂದು ಹೋರಾಟವನ್ನು ಘೋಷಿಸುತ್ತಾನೆ. ಅದು ಆಯುಧಗಳನ್ನು ಕೈಗೆತ್ತಿಕೊಳ್ಳಲು ಕರೆ ನೀಡುವ ಹೋರಾಟವಾಗಿತ್ತು. ಬಾಪಟ್ ಮತ್ತು ಸಹಚರರು ಮುನ್ಷಿ ಜಲವಿದ್ಯುತ್ ಯೋಜನೆಯ ಕಾರ್ಮಿಕರಿದ್ದ ರೈಲು ಗಾಡಿಯ ಮೇಲೆ ದಾಳಿ ನಡೆಸುತ್ತಾರೆ. ಅದರ ಭಾಗವಾಗಿ ಬಂಧಿತರಾಗುತ್ತಾರೆ.
ಬ್ರಿಟಿಷರ ಸಹಾನುಭೂತಿಯ ಕಾರಣದಿಂದ ೧೯೨೪ರಲ್ಲಿ ರತ್ನಗಿರಿ ಜಿಲ್ಲೆಗೆ ತಲುಪಿದ ಕೂಡಲೇ ಸಾವರ್ಕರ್ ತಾನು ಆವಿಷ್ಕರಿಸಿದ ಹಿಂದೂ ಜನಾಂಗೀಯ ರಾಜಕಾರಣದ ಪ್ರಾಯೋಗಿಕ ಚಟುವಟಿಕೆಗಳನ್ನು ಆರಂಭಿಸುತ್ತಾರೆ. ಹಿಂದೂ ಸಂಘಟನಾ ಚಟುವಟಿಕೆಗಳು ಅದಕ್ಕೂ ಮೊದಲೇ ಭಾರತದ ಹಲವು ಕಡೆಗಳಲ್ಲಿ ಹುಟ್ಟಿಕೊಂಡಿದ್ದವು. ಪಂಜಾಬ್ ಹೈಕೋರ್ಟಿನಿಂದ ನಿವೃತ್ತರಾಗಿದ್ದ ಜಸ್ಟಿಸ್ ಪ್ರತುಲ್ ಚಂದ್ರ ಚಟರ್ಜಿ ೧೯೦೯ರಲ್ಲಿ ಪಂಜಾಬಿನಲ್ಲಿ ಹಿಂದೂಸಭಾ ಎಂಬ ಹೆಸರಿನಲ್ಲಿ ಸಂಘಟನೆಯೊಂದನ್ನು ಹುಟ್ಟುಹಾಕಿದ್ದರು. ಅದರ ಮೊದಲ ಸಮ್ಮೇಳನದಲ್ಲಿ ಲಾಲಾ ಲಜಪತ್ ರಾಯ್ ಅವರಂತಹ ನಾಯಕರು ಪಾಲ್ಗೊಂಡಿದ್ದರು. ಹಿಂದೂಸಭಾದ ಚಟುವಟಿಕೆಗಳ ಮುಂದುವರಿಕೆಯಾಗಿ ಅಖಿಲ ಭಾರತ ಮಟ್ಟದಲ್ಲಿ ಒಂದು ಹಿಂದೂ ಸಂಘಟನೆಯನ್ನು ಕಟ್ಟಬೇಕೆಂಬ ಚಿಂತನೆಯೂ ಹುಟ್ಟಿಕೊಂಡಿತ್ತು. ಹೀಗೆ ೧೯೧೫ರಲ್ಲಿ ಸರ್ವ ದೇಶಕ್ ಹಿಂದೂಸಭಾ ರೂಪುಗೊಳ್ಳುತ್ತದೆ. ನಂತರ ಅದು ೧೯೨೦ ರಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಎಂದು ಮರುನಾಮಕರಣಗೊಳ್ಳುತ್ತದೆ. ಹಲವಾರು ಹಿಂದೂ ರಾಜರುಗಳ ಬೆಂಬಲವೂ ಅದಕ್ಕೆ ದೊರೆಯುತ್ತದೆ. ಪಂಡಿತ್ ಮದನ್ ಮೋಹನ್ ಮಾಳವೀಯ, ಆರ್ಯಸಮಾಜದ ಕಾರ್ಯಕರ್ತನೂ ಮುಂದೆ ಹಿಂದೂ ಜನಾಂಗೀಯವಾದಿಯೂ ಆಗಿ ಬದಲಾದ ಸ್ವಾಮಿ ಶ್ರದ್ಧಾನಂದ್ ಮೊದಲಾದವರು ಸರ್ವ ದೇಶಕ್ ಹಿಂದೂ ಮಹಾಸಭಾದ ರೂಪೀಕರಣದಲ್ಲಿ ಪಾಲುದಾರರಾಗಿದ್ದರು. ಹರಿದ್ವಾರದಲ್ಲಿ ನಡೆದ ಮೊದಲ ಸಮ್ಮೇಳನದಲ್ಲಿ ಈ ಅಖಿಲ ಭಾರತ ಹಿಂದೂ ಮಹಾಸಭಾದ ಗುರಿಗಳಾಗಿ ಈ ಕೆಳಗಿನ ಅಂಶಗಳನ್ನು ಅಂಗೀಕರಿಸಲಾಯಿತು.
೧. ಹಿಂದೂ ಸಮಾಜದ ಎಲ್ಲಾ ವಿಭಾಗಗಳ ನಡುವೆ ಪರಸ್ಪರ ಐಕ್ಯತೆ ಮತ್ತು ಒಗ್ಗಟ್ಟು ಉಂಟಾಗುವುದನ್ನು ಪ್ರೋತ್ಸಾಹಿಸಬೇಕು. ಒಂದು ಜೈವಿಕ ಏಕವಾಗಿ ಅದು ಬದಲಾಗುವಂತೆ ಮಾಡಬೇಕು.
೨. ಹಿಂದೂ ಸಮುದಾಯದ ಸದಸ್ಯರೊಳಗೆ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸಬೇಕು.
೩. ಹಿಂದೂ ಸಮುದಾಯದ ಎಲ್ಲ ವಿಭಾಗಗಳ ಜನಜೀವನವನ್ನು ಇನ್ನಷ್ಟು ಉತ್ತಮಗೊಳಿಸಬೇಕು.
೪. ಎಲ್ಲಿ ಯಾವಾಗ ಹಿಂದೂ ಹಿತಾಸಕ್ತಿಗಳ ರಕ್ಷಣೆ ಮತ್ತು ಪ್ರಚಾರ ಅಗತ್ಯವೆಂದು ತೋರುತ್ತದೆಯೋ, ಅಲ್ಲಿ ಆ ಕೂಡಲೇ ಅದನ್ನು ಕಾರ್ಯಗತಗೊಳಿಸಬೇಕು.
೫. ಭಾರತದಲ್ಲಿ ಹಿಂದೂಗಳ ನಡುವೆ ಪರಸ್ಪರ ಮತ್ತು ಹಿಂದೂಗಳು ಹಾಗೂ ಇತರ ಸಮದಾಯಗಳ ನಡುವೆ ಸದ್ವಿಚಾರಗಳನ್ನು ಹುಟ್ಟಿಸುವ ರೀತಿಯಲ್ಲಿ ಬಾಂಧವ್ಯ ಏರ್ಪಡುವಂತೆ ಕೆಲಸ ಮಾಡಬೇಕು. ಅದರ ಜೊತೆಗೆ ಸರಕಾರದದೊಂದಿಗೆ ವಿಧೇಯತೆಯಿಂದ ಮತ್ತು ಸಹಕಾರದಿಂದ ಬದುಕುವುದನ್ನು ಪ್ರೋತ್ಸಾಹಿಸಬೇಕು.
೬. ಹಿಂದೂ ಸಮುದಾಯದ ಧಾರ್ಮಿಕವೂ ಸಾಮಾಜಿಕವೂ ಶೈಕ್ಷಣಿಕವೂ ರಾಜಕೀಯವೂ ಆದ ಹಿತಾಸಕ್ತಿಗಳನ್ನು ಪ್ರೋತ್ಸಾಹಿಸಲು ಬೇಕಾದ ಸಾರ್ವಜನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.
ಸಾವರ್ಕರ್ ಬರೆದ ಹಿಂದುತ್ವ ಪುಸ್ತಕದ ಜನಾಂಗೀಯ ರಾಜಕಾರಣಕ್ಕಿಂತ ಬಹಳ ಲಘುವಾದ ಬ್ರಾಹ್ಮಣ ರಾಜಕೀಯವು ಸರ್ವದೇಶಕ್ ಹಿಂದೂಸಭಾಗೆ ಇದ್ದದ್ದು ಎಂದು ಈ ಗುರಿಗಳನ್ನು ಗಮನಿಸಿದರೆ ಮನದಟ್ಟಾಗುತ್ತದೆ. ಜಾತಿವ್ಯವಸ್ಥೆಯಲ್ಲಿ ಗಟ್ಟಿಯಾಗಿ ನಿಂತುಕೊಂಡರೆ ಇನ್ನು ಮುಂದೆ ತಮ್ಮ ಮೇಲುಗೈ ನಡೆಯುವುದಿಲ್ಲವೆಂಬ ವಾಸ್ತವದ ಅರಿವು ಈ ಹೊಸ ಗುರಿಗಳಲ್ಲಿ ಎದ್ದು ಕಾಣಿಸುತ್ತದೆ. ಆದರೆ ಈ ಹಿಂದೂ ಸಂಘಟನಾ ಪ್ರಜ್ಞೆ ಮತ್ತು ರಾಜಕೀಯ ಪ್ರಜ್ಞೆ ಹಿಂದೂ ರಾಜಕಾರಣ ಎಂಬುದಕ್ಕಿಂತ ಒಂದು ಚೌಕಾಸಿ ರಾಜಕಾರಣ ಎಂಬ ನೆಲೆಯಲ್ಲಿ ಮಾತ್ರವೇ ನೆಲೆಗೊಂಡಿತ್ತು. ಇತರ ಸಮುದಾಯದಗಳ ಸಾಮಾಜಿಕ ಅಸ್ತಿತ್ವವನ್ನು ಅದು ನಿರಾಕರಿಸಲಿಲ್ಲ. ಸ್ವಯಂಶಕ್ತಿ ಶೇಖರಿಸುವ ಮಾರ್ಗಗಳನ್ನು ಅದು ಹುಡುಕುವಾಗಲೂ ಮೇಲುಗೈ ಸಂರಕ್ಷಣಾ ಶಕ್ತಿಗಳು ಇತರ ಸಮುದಾಯಗಳೊಂದಿಗೆ ಸೌಹಾರ್ದತೆಯಿಂದ ಕೆಲಸ ಮಾಡಬೇಕು ಎಂಬ ಮನಸ್ಥಿತಿಯಲ್ಲಿದ್ದರು. ಅಂದರೆ, ತಮ್ಮ ಮೇಲುಗೈ ನಷ್ಟಗೊಳ್ಳದಿರಲು ಪ್ರಾಕೃತವಾದರೂ ಒಂದು ಪ್ರಜಾಪ್ರಭುತ್ವ ಪ್ರಜ್ಞೆಯನ್ನು ಈ ಸಂಘಟನೆ ಒಳಗೊಂಡಿತ್ತು.
ಆದರೆ, ಸಭಾ ತನ್ನ ಕಾರ್ಯಕ್ರಮದಲ್ಲಿ ಈ ಪ್ರಜಾಪ್ರಭುತ್ವ ಪ್ರಜ್ಞೆಯನ್ನು ಉಳಿಸಿಕೊಂಡಿತ್ತು ಎಂದು ಹೇಳಲಾಗದು. ಹಿಂದುತ್ವ ರಾಜಕೀಯ ವಲಯದಲ್ಲಿ ಮರಾಠಾ ಚಿತ್ಪಾವನ ಬ್ರಾಹ್ಮಣರು ಮುಂದಿಟ್ಟಿದ್ದ, ನವ-ಸಂಪ್ರದಾಯವಾದಿ ರಾಜಕೀಯ ಬ್ರಾಹ್ಮಣಿಸಮ್ಮಿನ ವಕ್ತಾರರು ಮುಂದಿಟ್ಟಿದ್ದ ರಾಜಕಾರಣದ ಕೌಶಲವನ್ನು ಅರ್ಥ ಮಾಡಿಕೊಳ್ಳದ ಸುಧಾರಿತ ಸನಾತನಿಗಳು ಮಾತ್ರವಾಗಿದ್ದರು ಅವರು. ೧೯೧೬ರಲ್ಲಿ ತಿಲಕ್ ಮಾಡಿಕೊಂಡಿದ್ದ ಲಕ್ನೋ ಒಪ್ಪಂದದ ತಿರುಳನ್ನು ಅರ್ಥ ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗಿರಲಿಲ್ಲ. ಅದರ ಭಾಗವಾಗಿ ತಿಲಕರ ಚಿತ್ಪಾವನ ರಾಜಕಾರಣದೊಂದಿಗೆ ಈ ಸುಧಾರಿತ ಸನಾತನಿಗಳ ನಾಯಕರಾಗಿದ್ದ ಮದನ್ ಮೋಹನ್ ಮಾಳವೀಯ ವಾಗ್ವಾದಕ್ಕಿಳಿದು ಅದಕ್ಕೆ ತಿಲಕ್ ವಿವರಣೆಯನ್ನು ನೀಡಿದ್ದನ್ನು ನಾವು ಈಗಾಗಲೇ ಗಮನಿಸಿದೆವು.
೧೯೨೦ರಲ್ಲಿ ಹರಿದ್ವಾರದಲ್ಲಿ ನಡೆದ ಹಿಂದೂ ಮಹಾಸಭಾದ ಸಮ್ಮೇಳನದಲ್ಲಿ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನಡುವೆ ನಡೆದ ಲಕ್ನೋ ಒಪ್ಪಂದವನ್ನು ವಿರೋಧಿಸಲು ಈ ನವಸನಾತನಿಗಳು ತೀರ್ಮಾನಿಸುತ್ತಾರೆ. ಅದರೊಂದಿಗೆ ಐದನೇ ಗುರಿಯಾಗಿ ಬರೆದಿದ್ದ, ಇತರ ಧರ್ಮಗಳು ಮತ್ತು ಸರಕಾರದೊಂದಿಗೆ ಸಹಕಾರದಿಂದ ಬದುಕುವ ಗುರಿಯಲ್ಲಿ ಬದಲಾವಣೆ ಮಾಡಿಕೊಳ್ಳಲಾಯಿತು. ʼಸರಕಾರದೊಂದಿಗೆ ವಿಧೇಯತೆಯ ಸಹಕಾರʼ ಎಂಬುದಕ್ಕೆ ಬದಲಾಗಿ ʼಸೀಮಿತವಾದರೂ ಸ್ವಯಂ ಆಡಳಿತದ ಭಾರತವನ್ನು ಕಟ್ಟುವುದುʼ ಎಂದು ಅದನ್ನು ಬದಲಾಯಿಸಲಾಯಿತು. ಇದರ ಜೊತೆಗೆ ತಮ್ಮ ಬ್ರಾಹ್ಮಣ ಅಸ್ಮಿತೆಯನ್ನು ಅಡಗಿಸಿಕೊಳ್ಳಲು ಸದಸ್ಯರನ್ನು ಆಯ್ಕೆ ಮಾಡುವ ಮಾನದಂಡದಲ್ಲಿ ʼಕೆಳಜಾತಿʼ ಜನರನ್ನು ಒಳಗೊಳ್ಳಿಸಲಾಯಿತು. ಜೊತೆಗೆ ʼಶುದ್ಧಿಪ್ರಕ್ರಿಯೆʼಯನ್ನೂ ಒಪ್ಪಿಕೊಳ್ಳಲಾಯಿತು.
ಅಂದರೆ ತಾವು ಸ್ವೀಕರಿಸಿದ್ದ ಪ್ರಜಾಪ್ರಭುತ್ವವಾದಿ ಚಿಂತನೆಯಿಂದ ದೂರವಾಗಿ ನಿಧಾನಕ್ಕೆ ಕೋಮುವಾದಿ ನಿಲುವಿಗೆ ಹಿಂದೂ ಮಹಾಸಭಾ ಬಂದು ನಿಂತಿತ್ತು. ಇದನ್ನು ಇನ್ನಷ್ಟು ತ್ವರಿತಗೊಳಿಸಿಕೊಳ್ಳಲು ʼಶುದ್ಧಿಚಳುವಳಿʼಯನ್ನು, ಹಿಂದೂ ಧರ್ಮಕ್ಕೆ ಇತರ ಧರ್ಮಗಳಿಂದ ಮತಾಂತರ ಮಾಡುವ ಚಳುವಳಿಯನ್ನು ತಮ್ಮ ಪ್ರಮುಖ ರಾಜಕೀಯ ಪ್ರಯೋಗವಾಗಿ ಕೈಗೆತ್ತಿಕೊಂಡರು. ಕಾರವಾರದ ಶಂಕರಪೀಠದ ಪೀಠಾಧಿಪತಿ ಡಾ. ಕುರ್ತಕೋಟಿ, ಸ್ವಾಮಿ ಶ್ರದ್ಧಾನಂದ್, ಬಿ.ಎಸ್ ಮುನ್ಜೇ, ಭಾಯ್ ಪರಮಾನಂದ್, ಲಾಲಾ ಲಜಪತ್ ರಾಯ್ ಮೊದಲಾದವರೆಲ್ಲ ಶುದ್ಧಿ ಚಳುವಳಿಯ ವಕ್ತಾರರಾದರು. ಹೀಗೆ ತಿಲಕರ ನೇತೃತ್ವದಲ್ಲಿ ನಡೆದ ಲಕ್ನೋ ಒಪ್ಪಂದವನ್ನು ಎದುರಿಸಲು ಕೋಮುವಾದಿ ಮಾರ್ಗಕ್ಕೆ ಹೊರಳಿಕೊಂಡ ಹಿಂದೂ ಮಹಾಸಭಾ ನಿಜದಲ್ಲಿ ತಿಲಕರ ರಾಜಕಾರಣದೊಂದಿಗೆ ಇನ್ನಷ್ಟು ಹತ್ತಿರವಾಯಿತು.