ಒಂದು ಕಡೆ ಕನ್ನಡ ಚಿತ್ರರಂಗ ತಮಗಾಗಿರುವ ಆಪತ್ತಿನ ಹಿನ್ನೆಲೆಯಲ್ಲಿ ಆಶ್ಲೇಷ ಬಲಿ, ಗಣಹೋಮದ ಮೊರೆ ಹೋಗಿ ಗಣಪಾತ್ರಿಗಳನ್ನು ಕರೆಸಿ ಪೂಜೆ ಪುನಸ್ಕಾರಗಳಲ್ಲಿ ಮುಳುಗಿರುವಾಗ, ಇತಿಹಾಸ ತಜ್ಞ ಧರ್ಮೇಂದ್ರ ಕುಮಾರ್ ಚಿತ್ರರಂಗ ಮಾಡಿರುವ, ಮಾಡುತ್ತಿರುವ ಯಡವಟ್ಟುಗಳ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಕನ್ನಡ ಚಿತ್ರರಂಗದ ಯಡವಟ್ಟಿನ ಬಗ್ಗೆ ದೂರಿದ್ದಾರೆ.
ಇತ್ತೀಚೆಗೆ ನಿಧನರಾದ ಕನ್ನಡದ ಹೆಸರಾಂತ ಕಥೆಗಾರ, ಗತಕಾಲದಲ್ಲಿ ಜನಮಾನಸದಲ್ಲಿ ಆಳವಾಗಿ ಬೇರೂರಿದ ಕಥೆಗಳನ್ನು ಕೊಟ್ಟ ಎಂಡಿ ಸುಂದರ್ ಅವರಿಗೆ ಎದುರಾದ ದುಸ್ಥಿತಿಗೆ ನೇರವಾಗಿ ಕನ್ನಡ ಚಿತ್ರರಂಗವೇ ಕಾರಣ ಎಂದು ದೂರಿದ್ದಾರೆ. ಹೆಸರಾಂತ ಕಥೆಗಾರ ಎಂಡಿ ಸುಂದರ್ ಅವರು ಹಸಿವಿನಿಂದ, ಚಿಕಿತ್ಸೆ ವೆಚ್ಚ ಭರಿಸಲಾಗದೇ ಅಸುನೀಗಿದ್ದು ಎಂಬುದೇ ಕನ್ನಡ ಚಿತ್ರರಂಗದ ಹೀನಾಯ ಸ್ಥಿತಿಗೆ ಹಿಡಿದ ಕನ್ನಡಿ ಎಂದಿದ್ದಾರೆ.
‘ಕನ್ನಡಿಗರು ನೆನಪಿನಲ್ಲಿ ಇಟ್ಟುಕೊಳ್ಳುವ ಗಂಧದ ಗುಡಿ ಸಿನೆಮಾ ಕಥೆಗಾರ ಈ ಎಂಡಿ ಸುಂದರ್ ಎಂಬುದು ನೆನಪಿದೆಯೇ? ಆಲ್ ಟೈಮ್ ಹಿಟ್ ಸಿನೆಮಾ ಶಂಕರ್ ಗುರು ಬರೆದವರು ಅವರೇ. ತಾಯಿಗೆ ತಕ್ಕ ಮಗ, ಚಕ್ರವ್ಯೂಹ, ಒಲವು ಗೆಲುವು, ತ್ರಿಮೂರ್ತಿ, ಸಿಂಗಾಪುರದಲ್ಲಿ ರಾಜಾಕುಳ್ಳ, ಆಟೋರಾಜ, ಕಿಲಾಡಿ ಕಿಟ್ಟು, ನಾರದ ವಿಜಯ, ಸಹೋದರರ ಸವಾಲ್, ಅವಳ ಹೆಜ್ಜೆ, ಕಳ್ಳಕುಳ್ಳ, ನೀ ನನ್ನ ಗೆಲ್ಲಲಾರೆ, ಪ್ರೀತಿ ಮಾಡು ತಮಾಷೆ ನೋಡು, ಕಾರ್ಮಿಕ ಕಳ್ಳನಲ್ಲ, ಮೂಗನ ಸೇಡು ಅಂತಹ ಕನ್ನಡ ಸಿನೆಮಾ ರಂಗಕ್ಕೆ ಅಮೋಘವಾದ ಚಿತ್ರಗಳನ್ನು ಕೊಟ್ಟ ಎಂಡಿ ಸುಂದರ್’ ಬೆಂಗಳೂರಿನಲ್ಲಿ ಹಸಿವಿನಿಂದ ಸತ್ತರು ಎಂಬುದೇ ಕನ್ನಡ ಚಿತ್ರರಂಗ ತಲೆ ತಗ್ಗಿಸಬೇಕಾದ ಸಂಗತಿ’ ಎಂದು ನೇರವಾಗಿ ಚಿತ್ರರಂಗದ ಬೇಜವಾಬ್ದಾರಿತನ ನೆನೆದು ದೂರಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಕಥೆಗಾರರನ್ನು ನೋಡಿಕೊಂಡ ಮತ್ತು ಈಗಲೂ ಕಥೆಗಾರರಿಗೆ ಸಿಗದ ಮಾನ್ಯತೆ ಬಗ್ಗೆ ಮರುಕ ವ್ಯಕ್ತಪಡಿಸಿರುವ ಇತಿಹಾಸ ತಜ್ಞ ಧರ್ಮೇಂದ್ರ ಕುಮಾರ್, ಇಂತಹ ಬೆಳವಣಿಗೆಯಿಂದಲೇ ಕನ್ನಡ ಚಿತ್ರರಂಗ ಉದ್ದಾರ ಆಗದೇ ಹಾಗೇ ಇದೆ ಎಂದಿದ್ದಾರೆ.
ಎಂಡಿ ಸುಂದರ್ ಅವರು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಅತ್ಯಮೋಘ ಸಿನೆಮಾಗಳನ್ನು ನೆನೆದು ಒಂದೊಂದೂ ಮುತ್ತಿನಂಥ ಸಿನೆಮಾಗಳನ್ನು ಕೊಟ್ಟಿರುವ ವ್ಯಕ್ತಿ ಬೆಂಗಳೂರಿನಲ್ಲಿ ಅನಾಮಿಕನಂತೆ ಜೀವ ಬಿಟ್ಟ ಬಗ್ಗೆಯೂ ಮರುಕ ವ್ಯಕ್ತಪಡಿಸಿದ್ದಾರೆ.
ಇಂದಿಗೂ ಕನ್ನಡ ಚಿತ್ರರಂಗ ಸ್ಯಾಂಡಲ್ವುಡ್ (ಗಂಧದ ಗುಡಿ) ಎಂದೇ ಹೆಸರಾಗಿರಲು ಎಂಡಿ ಸುಂದರ್ ಅವರು ಕೊಟ್ಟ ಕಥೆಯೇ ಮೂಲ ಕಾರಣ. ಹೀಗಿರುವಾಗ ಕಥೆಗಾರನೊಬ್ಬನನ್ನು ಕನ್ನಡ ಚಿತ್ರರಂಗ ನಡೆಸಿಕೊಂಡ ರೀತಿ ನೆನೆದರೆ ಇಂಡಸ್ಟ್ರಿ ಬೆಳೆಯಲಿ ಎಂದರೆ ಹೇಗೆ ಬೆಳೆಯಲು ಸಾಧ್ಯ.? ಕನ್ನಡದಲ್ಲಿ ಕಥೆ ಇಲ್ಲ ಎಂಬುವವರು ಎಂಡಿ ಸುಂದರ್ ಅವರ ಹೀನಾಯ ಸ್ಥಿತಿ ನೋಡಿದರೆ ತಿಳಿಯುತ್ತೆ ಯಾಕೆ ಚಿತ್ರರಂಗ ಉದ್ದಾರ ಆಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಕನ್ನಡ ಚಿತ್ರರಂಗದ 60 ವರ್ಷದ ನೆನಪಿಗೆ ತಂದ ಪುಸ್ತಕದಲ್ಲಿ ಎಂಡಿ ಸುಂದರ್ ಅವರ ಒಂದೇ ಒಂದು ಹೆಸರು ಕೂಡ ಇಲ್ಲವೆಂದರೆ ನೀವು ಕಥೆಗಾರರನ್ನು, ತಂತ್ರಜ್ಞರನ್ನು ನಡೆಸಿಕೊಂಡ ರೀತಿ ಹಾಗಿದೆ. ಅಂತವರ ಶಾಪದ ಫಲವಾಗಿ ಚಿತ್ರರಂಗ ಇಂತಹ ಡೋಲಾಯಮಾನ ಸ್ಥಿತಿಗೆ ತಲುಪಿದೆ ಎಂದು ಹೇಳಿದ್ದಾರೆ.
ಕನ್ನಡ ಚಿತ್ರರಂಗವನ್ನು ಜಗದಗಲ ಗುರುತಿಸುವಂತೆ ಮಾಡಿದ ಒಬ್ಬ ಪ್ರತಿಭಾವಂತ ಕಲಾವಿದನ ಸ್ಥಿತಿಯೇ ಹೀಗಿರಬೇಕಾದರೆ ಇನ್ನು ಸಣ್ಣಪುಟ್ಟ ಕಥೆಗಾರರು, ತಂತ್ರಜ್ಞರ ಸ್ಥಿತಿಯ ಬಗ್ಗೆಯೂ ಹೇಳಿರುವ ಧರ್ಮೇಂದ್ರ ಕುಮಾರ್ ಕನ್ನಡ ಚಿತ್ರರಂಗ ಯಾಕೆ ಇಂತಹ ದುಸ್ಥಿತಿ ತಲುಪಿದೆ ಎಂದು ನೋವಿನಿಂದ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ವಾಸ್ತವ ಸ್ಥಿತಿ ಹೀಗಿರಬೇಕಾದರೆ ಇಂದು ಚಿತ್ರರಂಗದ ಮಹಾನ್ ಘಟಾನುಘಟಿಗಳೆಲ್ಲ ಸೇರಿ ಆಶ್ಲೇಷ ಬಲಿ, ಗಣಹೋಮಕ್ಕೆ ಮೊರೆ ಹೋಗಿರುವುದು ದುರಂತವೇ ಸರಿ. ಇರುವ ಸಹೋದ್ಯೋಗಿಗಳನ್ನು ಸರಿಯಾಗಿ ನಡೆಸಿಕೊಳ್ಳದೇ ನೂರು ದೇವರನ್ನು ಪೂಜಿಸಿದರೂ ಪಕ್ಕದ ಯಾವ ಚಿತ್ರರಂಗಕ್ಕೂ ಸರಿಸಮನಾಗಿ ನಿಲ್ಲಲಾಗದು ಎಂಬುದು ಕಹಿ ಸತ್ಯ.