ಬಳ್ಳಾರಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ಕೊಲೆ ಹಾಗೂ ನಗರದಲ್ಲಿ ಸಂಭವಿಸಿದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಶಾಸಕ ಜನಾರ್ದನ ರೆಡ್ಡಿ ರಾಜ್ಯ ಸರ್ಕಾರ ಹಾಗೂ ಪೊಲೀಸರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಲೆ ಪ್ರಕರಣದಲ್ಲಿ ಶಾಸಕ ಭರತ್ ರೆಡ್ಡಿ ಹಾಗೂ ಸತೀಶ್ ರೆಡ್ಡಿ ಅವರನ್ನು ಈ ಹೊತ್ತಿಗಾಗಲೇ ಬಂಧಿಸಬೇಕಿತ್ತು ಎಂದು ಆರೋಪಿಸಿದರು. ಪೊಲೀಸರೇ ಭರತ್ ರೆಡ್ಡಿ ಅವರನ್ನು ತಮ್ಮ ಮನೆಯವರೆಗೆ ಕರೆದುಕೊಂಡು ಬಂದಿದ್ದಾರೆ ಎಂದು ದೂರಿದ ಅವರು, ಈ ಇಡೀ ಘಟನೆಗೆ ಪೊಲೀಸರ ವೈಫಲ್ಯವೇ ಕಾರಣ ಎಂದಿದ್ದಾರೆ.
ತಮ್ಮ ದೂರಿಗೆ ಸಂಬಂಧಿಸಿದಂತೆ ಪೊಲೀಸರು ಇನ್ನೂ ಎಫ್‌ಐಆರ್ ದಾಖಲಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ರೆಡ್ಡಿ, ಎಎಸ್‌ಪಿ ರವಿಕುಮಾರ್, ಡಿವೈಎಸ್ಪಿ ನಂದಾರೆಡ್ಡಿ ಹಾಗೂ ಭರತ್ ರೆಡ್ಡಿ ವಿರುದ್ಧ ಖಾಸಗಿ ದೂರು ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಗೃಹ ಸಚಿವ ಪರಮೇಶ್ವರ್ ತನಿಖೆಗೆ ರಾಜ್ಯ ಪೊಲೀಸರು ಸಮರ್ಥರಿದ್ದಾರೆ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಅವರು, “ಇಡೀ ಕರ್ನಾಟಕವೇ ಗೃಹ ಸಚಿವರನ್ನು ಅಸಮರ್ಥರು ಎಂದು ಕರೆಯುತ್ತಿದೆ. ಒಬ್ಬ ಶಾಸಕನ ಮೇಲೆ ಖಾಸಗಿ ಅಂಗರಕ್ಷಕ ಗುಂಡಿನ ದಾಳಿ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಕಾರ್ಯಕರ್ತನ ಸಾವಿನ ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತೆಯೊಬ್ಬರ ಮೇಲೆ ಹಲ್ಲೆ ನಡೆದಾಗ ಸ್ವರಕ್ಷಣೆಗೆ ಖಾರದ ಪುಡಿ ಎರಚಲಾಗಿತ್ತು ಎಂದು ಸಮರ್ಥಿಸಿಕೊಂಡರು. ಅಲ್ಲದೆ, ಸತೀಶ್ ರೆಡ್ಡಿ ಆಸ್ಪತ್ರೆಗೆ ದಾಖಲಾಗಿರುವುದು ಕೇವಲ ಬಂಧನದಿಂದ ತಪ್ಪಿಸಿಕೊಳ್ಳುವ ನಾಟಕ ಎಂದು ವ್ಯಂಗ್ಯವಾಡಿದರು. ಪ್ರಕರಣದ ನಿಷ್ಪಕ್ಷಪಾತ ತನಿಖೆಗಾಗಿ ಸಿಬಿಐ ಅಥವಾ ಹೈಕೋರ್ಟ್ ನ್ಯಾಯಾಧೀಶರ ಮೂಲಕ ತನಿಖೆ ನಡೆಸಬೇಕು ಎಂದು ಆಗ್ರಹಿಸಿರುವ ಅವರು, ಶೀಘ್ರದಲ್ಲೇ ರಾಜ್ಯಮಟ್ಟದ ನಾಯಕರನ್ನು ಒಳಗೊಂಡ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
