ಬೆಂಗಳೂರು: ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕ್ರಮವನ್ನು ಪ್ರಶ್ನಿಸಿದ್ದಕ್ಕೆ ‘ಆಡಳಿತಾನುಭವದ’ ಪಾಠ ಹೇಳಿದ್ದ ಡಿಕೆಶಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕಟುವಾದ ಶಬ್ದಗಳಲ್ಲಿ ತಿರುಗೇಟು ನೀಡಿದ್ದಾರೆ. “ನಮ್ಮ ವಿಲೀನದ ಚಿಂತೆ ಪಕ್ಕಕ್ಕಿಡಿ, ಆಡಳಿತಾನುಭವದ ಬಗ್ಗೆ ಜನರನ್ನೇ ಕೇಳೋಣ” ಎಂದು ಅವರು ಸವಾಲು ಹಾಕಿದ್ದಾರೆ.
ತಮ್ಮ ಸುದೀರ್ಘ ರಾಜಕೀಯ ಜೀವನವನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಕುಮಾರಸ್ವಾಮಿ, “ಕೊಳ್ಳೆ, ಸುಲಿಗೆ, ಬೇಲಿ, ಕಮಿಷನ್, ಫಿಕ್ಸಿಂಗ್ ಮತ್ತು ಒದ್ದು ಕಿತ್ತುಕೊಳ್ಳುವುದು ನನ್ನ ಅನುಭವವಲ್ಲ ಡಿಕೆಶಿಯವರೇ. ಅಂತಹ ಭಾರೀ ಅನುಭವ ನನಗಿಲ್ಲ ಎಂಬುದನ್ನು ವಿನಮ್ರವಾಗಿ ಒಪ್ಪಿಕೊಳ್ಳುತ್ತೇನೆ” ಎಂದು ವ್ಯಂಗ್ಯವಾಡಿದ್ದಾರೆ.
ಬಳ್ಳಾರಿಯಲ್ಲಿ ಡಿಕೆಶಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದನ್ನು ‘ಖಾತೆ ಒತ್ತುವರಿ’ ಎಂದು ಕರೆದಿರುವ ಕುಮಾರಸ್ವಾಮಿ, “ನಿಮಗೆ ಭೂ ಕಬ್ಜ ಮತ್ತು ಒತ್ತುವರಿ ಕರತಲಾಮಲಕ. ಅದೇ ರೀತಿ ಮತ್ತೊಬ್ಬ ಸಚಿವರ ಖಾತೆಯನ್ನು ಒತ್ತುವರಿ ಮಾಡುವುದರಲ್ಲಿಯೂ ನೀವು ನಿಸ್ಸೀಮರು. ಬಳ್ಳಾರಿಯಲ್ಲಿ ಸಭೆ ನಡೆಸಬೇಕಿದ್ದವರು ಗೃಹ ಸಚಿವರು ಅಥವಾ ಮುಖ್ಯಮಂತ್ರಿಗಳು. ನೀವು ಸಭೆ ನಡೆಸಿದ್ದು ಶಿಷ್ಟಾಚಾರ ಮತ್ತು ಅಧಿಕಾರದ ಸ್ಪಷ್ಟ ಉಲ್ಲಂಘನೆ. ಇದನ್ನೇ ನೀವು ಸೀನಿಯಾರಿಟಿ ಎಂದು ಬೆನ್ನು ತಟ್ಟಿಕೊಳ್ಳುತ್ತಿದ್ದೀರಾ?” ಎಂದು ಪ್ರಶ್ನಿಸಿದ್ದಾರೆ.
ಗೃಹ ಸಚಿವ ಜಿ. ಪರಮೇಶ್ವರ್ ಅವರನ್ನು ಉದ್ದೇಶಿಸಿ ಮಾತನಾಡಿರುವ ಕುಮಾರಸ್ವಾಮಿ, “ಗೃಹ ಸಚಿವರು ಅಥವಾ ಸಿಎಂ ಅವರು ಸಭೆ ಮಾಡಿ ಎಂದು ನಿಮಗೆ ಹೇಳಿದ್ದರಾ? ಇಲ್ಲವಲ್ಲ. ಅದಕ್ಕೇ ನಾನು ಕೇಳಿದ್ದು, ಅವರೇನು ಹೆಬ್ಬೆಟ್ಟು ಗೃಹ ಮಂತ್ರಿಗಳಾ ಅಥವಾ ರಬ್ಬರ್ ಸ್ಟ್ಯಾಂಪ್‌ಗಳಾ ಎಂದು. ಒಬ್ಬ ಹಿರಿಯ ಸಚಿವರ ಖಾತೆಯನ್ನು ನೀವು ಅಕ್ರಮವಾಗಿ ಒತ್ತುವರಿ ಮಾಡಲು ಸಂವಿಧಾನದಲ್ಲಿ ವಿಶೇಷ ತಿದ್ದುಪಡಿ ಏನಾದರೂ ಮಾಡಿಸಿದ್ದೀರಾ?” ಎಂದು ಕಿಡಿಕಾರಿದ್ದಾರೆ.
ಡಿಸಿಎಂ ಹುದ್ದೆಗೆ ಮಂತ್ರಿ ಪದವಿಗೆ ಇರುವಷ್ಟೇ ಅಧಿಕಾರ ವ್ಯಾಪ್ತಿ ಇರುತ್ತದೆ, ಅದಕ್ಕೇನು ಎಕ್ಸ್‌ಟ್ರಾ ಕೊಂಬು ಇರುವುದಿಲ್ಲ. ನಿಮ್ಮ ಇಷ್ಟೊಂದು ವರ್ಷದ ಅನುಭವಕ್ಕೆ ಈ ಸಣ್ಣ ವಿಷಯ ತಿಳಿಯಲಿಲ್ಲವೇ ಎಂದು ಕುಮಾರಸ್ವಾಮಿ ಅವರು ಡಿಕೆಶಿ ಅವರ ವಿರುದ್ಧ ಹರಿಹಾಯ್ದಿದ್ದಾರೆ.
