ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಹೊಂದಿಸಿ ಬರೆಯಿರಿ’ ಸಿನಿಮಾ ಸಾಕಷ್ಟು ವಿಶೇಷತೆಗಳಿಂದ ಗಮನಸೆಳೆಯುತ್ತಿದೆ. ತಾರಾಗಣ, ಕಂಟೆಂಟ್, ಕ್ವಾಲಿಟಿ , ಟೀಸರ್ ಹಾಗೂ ಹಾಡಿನ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಸಿನಿಮಾದಿಂದ ಈಗ ‘ಬದುಕಿ ಸುಮ್ಮನೆ’ ಎಂಬ ಮೆಲೋಡಿ ಹಾಡು ಬಿಡುಗಡೆಯಾಗಿದೆ.
ರಾಮೇನಹಳ್ಳಿ ಜಗನ್ನಾಥ್ ಅರ್ಥಪೂರ್ಣವಾಗಿ ರಚಿಸಿರುವ ಹಾಡಿಗೆ ಜೋ ಕೋಸ್ಟ ಅದ್ಭುತ ಸಂಗೀತ ನೀಡುವುದರ ಜೊತೆಗೆ ಹಾಡಿಗೆ ಧ್ವನಿಯಾಗಿದ್ದಾರೆ. ಗುಳ್ಟು ಖ್ಯಾತಿಯ ನವೀನ್ ಹಾಗೂ ಕೆಜಿಎಫ್ ಸಿನಿಮಾದಲ್ಲಿ ರಾಕಿಭಾಯ್ ಅಮ್ಮನಾಗಿ ನಟಿಸಿದ್ದ ಅರ್ಚನಾ ಜೋಯಿಸ್ ಕೆ. ಜಿ. ಎಫ್ ನಂತರ ಹೊಂದಿಸಿ ಬರೆಯಿರಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪರಿಸ್ಥಿತಿಗಳನ್ನು ಹೊಂದಿಕೊಂಡು ಸಾಗುವ ಬದುಕಿನ ಪಯಣದ ‘ಹೊಂದಿಸಿ ಬರೆಯಿರಿ’ ಸಿನಿಮಾ ಏಳು ಯುವಕ-ಯುವತಿಯರ ಪ್ರೇಮಕಥೆ ಹೊಂದಿದೆ.
ಈಗಾಗಲೇ ಹೊಂದಿಸಿ ಬರೆಯಿರಿ ಸಿನಿಮಾದ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಟಗರು ಖ್ಯಾತಿಯ ಮಾಸ್ತಿ, ಪೊಗರು ಖ್ಯಾತಿಯ ಪ್ರಶಾಂತ್ ರಾಜಪ್ಪ ಹಾಗೂ ಜಗನ್ನಾಥ್ ಸೇರಿದಂತೆ ಮೂವರು ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ‘ಗುಳ್ಟು’ ಚಿತ್ರಕ್ಕೆ ಸಿನಿಮಾಟೋಗ್ರಫಿ ಮಾಡಿದ್ದ ಶಾಂತಿ ಸಾಗರ್ ಈ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ.
ಈ ಚಿತ್ರವನ್ನು “ಸಂಡೇ ಸಿನಿಮಾಸ್ “ಬ್ಯಾನರ್ ನಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಅವರ ಸ್ನೇಹಿತರು ನಿರ್ಮಾಣ ಮಾಡಿದ್ದು, ಚೂರಿಕಟ್ಟೆ ಖ್ಯಾತಿಯ ಪ್ರವೀಣ್, ಐಶಾನಿ ಶೆಟ್ಟಿ, ಸಂಯುಕ್ತ ಹೊರನಾಡು, ಗಜಾನನ ಅಂಡ್ ಗ್ಯಾಂಗ್ ಖ್ಯಾತಿಯ ಶ್ರೀಮಹಾದೇವ್, ಗಾಳಿಪಟ ಚಿತ್ರ ಖ್ಯಾತಿಯ ಭಾವನಾರಾವ್ ಹೀಗೆ ಹಲವು ಪ್ರತಿಭೆಗಳು ಅಭಿನಯಿಸಿದ್ದಾರೆ.