ಯಾವುದೇ ಸಾಮಾಜಿಕ ಸಂದೇಶದ ಜವಾಬ್ದಾರಿ ಇಲ್ಲದೇ, ಕೇವಲ ಮನರಂಜನೆಯನ್ನಷ್ಟೇ ಮುಖ್ಯ ಉದ್ದೇಶವನ್ನಾಗಿಸಿಕೊಂಡದ್ದ ಬಿಗ್ ಬಾಸ್ ರಿಯಾಲಿಟಿ ಶೋ ಈ ಬಾರಿ ಕನ್ನಡದ ಬಿಗ್ ಬಾಸ್ ಸೀಜನ್ 9 ಬಹುಶಃ ಹಿಂದಿನ ಎಲ್ಲಾ ಸೀಜನ್ ಗಿಂತಲೂ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಪಡೆದುಕೊಳ್ಳುತ್ತಿದೆ. ಹಿಂದಿನ ಕೆಲವು ಸೀಜನ್ ಗಳು ಬಿಗ್ ಬಾಸ್ ಮನೆಯ ವಿನ್ಯಾಸದ ಮೂಲಕ ಗಮನ ಸೆಳೆದಿದ್ದರೆ ಇನ್ನು ಕೆಲವು ಶೋ ಪ್ರಾರಂಭವಾಗಿ ಸ್ಪರ್ಧಿಗಳ appearance ಅಥವಾ performance ಆಧಾರದಲ್ಲಿ ಸುದ್ದಿ ಆಗುತ್ತಿತ್ತು. ಆದರೆ ಈ ಸೀಜನ್ ಶೋ ಪ್ರಾರಂಭದಲ್ಲೇ ಹೆಚ್ಚು ಪ್ರಚಾರ ಗಿಟ್ಟಿಸಿದ್ದು ಆ ಮಟ್ಟಿಗೆ ಬಿಗ್ ಬಾಸ್ ಟೀಂ ಶುರುವಿನಲ್ಲೇ ಸಿಕ್ಸರ್ ಬಾರಿಸಿದ ಸಂಭ್ರಮದಲ್ಲಿದೆ.
ಇಂಗ್ಲಿಷ್ ನಾಣ್ಣುಡಿ ‘Any publicity is good Publicity’ ಎಂಬುದನ್ನು ಈ ಬಿಗ್ ಬಾಸ್ ಟೀಂ ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಜೊತೆಗೆ ಅದನ್ನು ತನಗೆ ಹೇಗೆ ಬೇಕೋ ಹಾಗೆ ಬಳಸಿಕೊಳ್ಳುತ್ತಿದೆ ಕೂಡಾ. ಹಾಗಾಗಿ ಸಾರ್ವಜನಿಕ ಅಭಿಪ್ರಾಯ ಏನೇ ಬಂದರೂ ಪರವಾಗಿಲ್ಲ ಎಂಬಂತೆ ಶೋ ಮುಂದುವರೆಸಿದೆ. ಇದೇ ಮೊದಲ ಬಾರಿಗೆ ಬಿಗ್ ಬಾಸ್ ಕನ್ನಡದ ಈ ಸೀಜನ್ OTT ಪ್ಲಾಟಫಾರಂ ಅಡಿಯಲ್ಲಿ ಶೋ ಶುರು ಮಾಡಿದ್ದು ವಿಶೇಷ.
ಈ ಬಾರಿಯ ಶೋ ಅತಿ ಹೆಚ್ಚು ಸದ್ದು ಮಾಡಲು ಪ್ರಮುಖ ಕಾರಣವಾಗಿದ್ದು 15 ಮಂದಿ ಸ್ಪರ್ಧಿಗಳಲ್ಲಿ ಕೇವಲ ಇಬ್ಬರು ಸ್ಪರ್ಧಿಗಳ ಕಾರಣಕ್ಕೆ. ಒಬ್ಬರು “ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು” ಡೈಲಾಗ್ ಖ್ಯಾತಿಯ ಜ್ಯೋತಿಷಿ ಆರ್ಯವರ್ದನ್ ಕಾರಣಕ್ಕೆ, ಹಾಗೂ ಇನ್ನೊಂದು ಸೋಷಿಯಲ್ ಮೀಡಿಯಾ ಸೆನ್ಸೇಷನ್ ಟಿಕ್ ಟಾಕ್ ಸ್ಟಾರ್ ಸೋನು ಶ್ರೀನಿವಾಸ ಗೌಡ ಅವರ ಕಾರಣಕ್ಕೆ. ಈ ಇಬ್ಬರ ಆಯ್ಕೆ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಚರ್ಚೆ ನಡೆಯುತ್ತಿದ್ದು ಹೆಚ್ಚಿನ ಮಂದಿ ಈ ಆಯ್ಕೆಯನ್ನು ಅತ್ಯಂತ ಕಟುವಾಗಿ ಟೀಕಿಸಿ, ಟ್ರೋಲ್ ಮಾಡಿ ಸೋಷಿಯಲ್ ಪ್ಲಾಟಫಾರಂನಲ್ಲಿ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ಸುದೀಪ್ ಅವರಿಗೆ ಇದು ಬೇಕಿತ್ತಾ? ಎನ್ನುವ ಮೂಲಕವೂ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಜ್ಯೋತಿಷಿ ಆರ್ಯವರ್ದನ್ ಆಯ್ಕೆಗಿಂತ ಹೆಚ್ಚಾಗಿ ಸೋನು ಗೌಡ ಇಲ್ಲಿ ಅಗತ್ಯ ಇರಲಿಲ್ಲ ಎಂಬ ಮಾತು ಹೆಚ್ಚು ಪ್ರಚಲಿತದಲ್ಲಿದೆ. ಯಾವಾಗ ಬಿಗ್ ಬಾಸ್ ನ ಎರಡನೇ ಸ್ಪರ್ಧಿಯಾಗಿ ಸೋನು ಶ್ರೀನಿವಾಸ ಗೌಡ ಎಂಬ ಹೆಸರು ಹೊರಬಿತ್ತೋ ಸೋಷಿಯಲ್ ಮೀಡಿಯಾದಲ್ಲಿ ಅಕ್ಷರಶಃ ಬೆಂಕಿ ಬಿದ್ದಂತೆ ಬಿಸಿಬಿಸಿ ಚರ್ಚೆ ಶುರುವಾಗಿದೆ. ಕೆಲವೇ ದಿನಗಳ ಹಿಂದೆ ಸೋನು ಗೌಡ ಅವರ ಖಾಸಗಿ ವಿಡಿಯೋ ತುಣುಕು ಎಲ್ಲೆಡೆ ಹರಿದಾಡಿದ ಬೆನ್ನಲ್ಲೇ ಅವರ ಬಿಗ್ ಬಾಸ್ ಆಯ್ಕೆ ಈ ಟೀಕೆಗಳಿಗೆ ಪ್ರಮುಖ ಕಾರಣವಾಗಿದೆ. ಕೆಲವರ ಪ್ರಕಾರ ಆಕೆ ಹಣಕ್ಕಾಗಿ ಈ ರೀತಿ ವಿಡಿಯೋ ಮಾಡಿದ್ದು ಎನ್ನುವುದಾದರೆ, ಇನ್ನೂ ಕೆಲವರ ಪ್ರಕಾರ ಆಕೆಯ ಖಾಸಗಿ ವಿಡಿಯೋ Misuse ಆಗಿದೆ ಎಂಬಂತೆಯೂ ಮಾತುಗಳು ಕೇಳಿ ಬರುತ್ತಿದೆ. ಇದಕ್ಕೆ ಸರಿಯಾಗಿ ಕನ್ನಡದ ಬಹುತೇಕ ಟ್ರೋಲ್ ಪೇಜ್ ಗಳಿಗೆ ಸೋನು ಗೌಡ ಅವರ ಆಯ್ಕೆ ಆಹಾರವಾಗಿದೆ. ಹೆಚ್ಚಿನ ಮಂದಿ ನಕಾರಾತ್ಮಕವಾಗಿ ಇದನ್ನು ಟೀಕಿಸುತ್ತಿದ್ದರೂ ಬಿಗ್ ಬಾಸ್ ಟೀಂ ಇವ್ಯಾವುದಕ್ಕೂ ಕ್ಯಾರೇ ಎನ್ನದೇ ತನ್ನ ಶೋ ಮುಂದುವರೆಸಿದೆ.
ಇನ್ನು ಮತ್ತೊಂದು ವಿಶೇಷ ಎಂದರೆ ಈ ಬಾರಿಯ ಬಿಗ್ ಬಾಸ್ ಆಯ್ಕೆಯಲ್ಲಿ ಬಹುತೇಕ ಯುವಕ ಯುವತಿಯರೇ ತುಂಬಿದ್ದಾರೆ. ಜ್ಯೋತಿಷಿ ಆರ್ಯವರ್ದನ್ ಬಿಟ್ಟರೆ ಮತ್ತೆಲ್ಲರೂ 40 ವರ್ಷದ ಒಳಗಿನ ಯಂಗ್ ಅಂಡ್ ಎನರ್ಜೆಟಿಕ್ ಟೀಂ ಇದಾಗಿದೆ. ಇದರ ಮಧ್ಯೆ ಇತ್ತೀಚಿನ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಕಾಫಿನಾಡು ಚಂದು ಈ ಬಾರಿಯ ಶೋಗೆ ಬರಬಹುದು ಎಂಬ ನಿರೀಕ್ಷೆ ಕೂಡಾ ಹೆಚ್ಚಿನವರಿಗೆ ಇತ್ತು. ಚಂದು ಅವರ ನಿರೀಕ್ಷಿಸಿದವರಿಗೆ ಈ ಬಾರಿ ನಿರಾಸೆಯಾಗಿದೆ.
ಎಂದಿನಂತೆ ಬಿಗ್ ಬಾಸ್ ಮನೆಯ ವಿನ್ಯಾಸದಲ್ಲಿಯೂ ಕ್ರಿಯೇಟಿವ್ ಹೆಡ್ ಪರಮೇಶ್ವರ್ ಗುಂಡಕಲ್ ಹೊಸತನ ಮೆರೆದಿದ್ದಾರೆ. ಬಿಗ್ ಬಾಸ್ OTT ಪ್ಲಾಟಫಾರಂ ನಲ್ಲಿ ಒಟ್ಟು 42 ದಿನ ನಡೆಯುವ ಈ ಶೋ ಹಿಂದಿಗಿಂತ ಹೆಚ್ಚು ಆಕರ್ಷಕವಾಗಿದೆ. ವಿಶೇಷವಾಗಿ ಒಂದು ಗೊಂಬೆಯ ಕಣ್ಣನ್ನು ಹಾಗೂ ಕುತ್ತಿಗೆಯನ್ನು 2 ಕೈಗಳು ಹಿಡಿರುವ ಚಿತ್ರ ಇದ್ದು ಒಟ್ಟಾರೆ ಈ ಬಾರಿಯ ಶೋ ಹೆಚ್ಚು ಕುತೂಹಲ ಮೂಡಿಸಿದೆ.