ಹೊಸದುರ್ಗ: ಚಿತ್ರದುರ್ಗ ಜಿಲ್ಲೆಯ ವೃದ್ಧ ದಂಪತಿಗಳನ್ನು, ಹೊಸದುರ್ಗ ಪಟ್ಟಣದ ಅವರ ನಿವಾಸದಲ್ಲಿ ಕೊಲೆ ಮಾಡಿರುವ ಘಟನೆ ಗುರುವಾರ ಸಂಜೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರು, ಹೊಸದುರ್ಗದ ವಿನಾಯಕ ಲೇಔಟ್ ನಿವಾಸಿಗಳಾದ ಖಾದ್ಯ ತೈಲ ವ್ಯಾಪರ ನಡೆಸುತ್ತಿದ್ದ ಪ್ರಭಾಕರ್ ಶೆಟ್ಟಿ (75) ಮತ್ತು ವಿಜಯಲಕ್ಷ್ಮಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಪೊಲೀಸರು, ನೆರೆಹೊರೆಯವರು ಅವರ ಮನೆಗೆ ಹೋದ ನಂತರ ಗುರುವಾರ ರಾತ್ರಿ ಈ ಘಟನೆ ಬೆಳಕಿಗೆ ಬಂದಿದೆ. ದಂಪತಿಗಳು ಮನೆಯಲ್ಲಿ ಒಬ್ಬರೇ ಇದ್ದಾರೆ ಎಂದು ತಿಳಿದು, ಮನೆಗೆ ನುಗ್ಗಿ ದಂಪತಿಯ ಕತ್ತು ಸೀಳಿ ಕೊಲೆಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಆರೋಪಿಗಳು ಯಾವ ಉದ್ದೇಶದಿಂದ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿಲ್ಲ. ಹೀಗಾಗಿ ಮನೆಯಲ್ಲಿನ ಆಭರಣಗಳು ಮತ್ತು ಬೆಳೆಬಾಳುವ ವಸ್ತುಗಳು ಕಾಣೆಯಾಗಿವೆಯೇ ಎಂದು ಖಚಿತಪಡಿಸಿಕೊಳ್ಳಲು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನೂ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಅದರಲ್ಲಿ ಒಬ್ಬರು ದಾವಣಗೆರೆ, ಮತ್ತೊಬ್ಬರು ಚಿಕ್ಕನಾಯಕನಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.