ಆರಗದ ಪುರಂದರ ದಾಸರು ವಿಜಯನಗರ ಸಾಮ್ರಾಜ್ಯದ ಮೇರು ಕವಿಯಾಗಿ, ಹರಿಕೀರ್ತನೆಗಳ ಮೂಲಕ ಇಡಿ ವಿಜಯನಗರ ಸಾಮ್ರಾಜ್ಯದ ಆಸ್ಥಾನ ಪ್ರಮುಖರಾಗಿ ಹೊರಹೊಮ್ಮಿದ್ದು ಹೇಗೆ ಎನ್ನುವುದು ಬಹುದಿನಗಳ ಪ್ರಶ್ನೆಯಾಗಿತ್ತು.
ಎಲ್ಲಿಯ ಆರಗ? ಎಲ್ಲಿಯ ವಿಜಯನಗರ? ಎಲ್ಲಿಯ ಶ್ರೀನಿವಾಸ ನಾಯಕ? ಎಲ್ಲಿಯ ಹಂಪೆಯ ಅರಸರು? ಎನ್ನುವ ಪ್ರಶ್ನೆ ಮೂಡುತ್ತಿತ್ತು. ಆದರೆ ಇತಿಹಾಸದ ಪುಟದ ಆಳಕ್ಕೆ ಇಳಿದಂತೆ ಶ್ರೀನಿವಾಸ ನಾಯಕರಿಗಿಂತಾ ಬಹುಮುಂಚೆಯೆ ಆರಗ ಗುತ್ತಿ ಸಾಮ್ರಾಜ್ಯದ ಹತ್ತು ಹಲವು ಸಂಗತಿಗಳಿಂದ ಆರಗವು ಇತಿಹಾಸದ ಪುಟದಲ್ಲಿ ಚರಿತ್ರಾರ್ಹ ದಾಖಲೆಗೊಳೊಂದಿಗೆ ಸಮೃದ್ದ ಊರಾಗಿತ್ತು ಎನ್ನುವ ಮಹತ್ವದ ಸಂಗತಿ ಬಯಲಾಗುತ್ತದೆ.
ವಿಶೇಷವೆಂದರೆ ಪುರಂಧರದಾಸರು ಹುಟ್ಟುವ ನೂರು ವರ್ಷ ಮುಂಚೆಯೆ ಅಂದರೆ 1362ರ ಸುಮಾರಿಗೆ ಆರಗ – ಗುತ್ತಿ (ಈಗಿನ ಚಂದ್ರಗುತ್ತಿ) ಜಂಟಿ ರಾಜ್ಯವಾಗಿ ವಿಜಯನಗರದ ಆಳ್ವಿಕೆ ನಡೆಸುತ್ತಿದ್ದ ಸಂಗಮ ದೊರೆಗಳ ಅಧಿನದಲ್ಲಿತ್ತು. ವಿಜಯನಗರದ ಅರಸರು ತಮ್ಮ ಸಾಮ್ರಾಜ್ಯವನ್ನು ಹಲವು ರಾಜ್ಯಗಳಾಗಿ ವಿಂಗಡಿಸಿ ಸಂಗಮ ಸಹೋದರರಿಗೆ ಪಟ್ಟ ಕಟ್ಟಲಾಗಿತ್ತು ಅಂಥಹದೆ ಒಂದು ರಾಜ್ಯವಾಗಿ ಆರಗ ಗುತ್ತಿ ರಾಜ್ಯವೂ ವಿಜಯನಗರದ ಅಧೀನ ರಾಜ್ಯವಾಗಿ ಆರಗದ ಹದಿನೆಂಟು ಕಂಪಣ, ಗುತ್ತಿಯ ಹದಿನೆಂಟು ಕಂಪಣದ ಒಟ್ಟು ರಾಜ್ಯವಾಗಿ ಸಂಗಮ ದೊರೆಗಳ ಸಹೋದರರಲ್ಲೆ ಒಬ್ಬರಾದ ಮಾರಪ್ಪರಾಯನ ಆಡಳಿತಕ್ಕೆ ಒಳಪಟ್ಟಿತ್ತು.
ಈಗಿನ ಶಿವಮೊಗ್ಗದ ತೀರ್ಥಹಳ್ಳಿ, ಹೊಸನಗರ,ಶಿವಮೊಗ್ಗ,ಸಾಗರ ಚಿಕ್ಕಮಗಳೂರಿನ ಬಹುತೇಕ ಭಾಗಗಳಿಗೆ ಆರಗ ರಾಜಧಾನಿಯಾಗಿಯೂ, ಉತ್ತರ ಕನ್ನಡ ಮತ್ತು ಶಿವಮೊಗ್ಗದ ಸೊರಬ ಭಾಗಗಳಿಗೆ ಚಂದ್ರಗುತ್ತಿ ರಾಜಧಾನಿಯಾಗಿಯೂ ಆಡಳಿತಕ್ಕೊಳಪಟ್ಟಿತ್ತು. ಆಗಿನ ಪೊಂಬುರ್ಚಪುರ ಈಗಿನ ಹೊಂಬುಜದ ಸಾಂತರ( ಸಾಂತಳಿಕೆ, ಸಾಂತಳಿಗೆ -1000) ಜೈನ ಸಾಮ್ರಾಜ್ಯವು ಮೇರು ಪಥದಲ್ಲಿರುವವರೆಗೆ ಆರಗಕ್ಕೆ ಅಂಥಹ ಪ್ರಾಮುಖ್ಯತೆ ಸಿಕ್ಕಿರಲಿಲ್ಲಾ, ಸಾಂತರರು ಹೊಂಬುಜದಿಂದ ಹೊಸಗುಂದ ಅಲ್ಲಿಂದ ಕಳಸದೆಡೆಗೆ ಸಾಗಿದ ಮೇಲೆ ಹೊಯ್ಸಳರ ಕಾಲಘಟ್ಟದಲ್ಲೂ ಆರಗ ಎಲ್ಲಿಯೂ ಕಣ್ಣಿಗೆ ಬೀಳುವುದಿಲ್ಲಾ ಆದರೆ ವಿಜಯನಗರದ ಆರಂಭದೊಂದಿಗೆ ಹೊಂಬುಜ ಮರೆಯಾಗಿ ಸಂಗಮ ದೊರೆ ಮಾರಪ್ಪರಾಯ ಆರಗ ಗುತ್ತಿಯ ರಾಜ್ಯಾಧಿಕಾರ ಪಡೆಯುವುದರೊಂದಿಗೆ ಆರಗ ಪ್ರಾಮುಖ್ಯತೆ ಪಡೆದುಕೊಳ್ಳುತ್ತಾ ಸಾಗುತ್ತದೆ. ಆರಗ ರಾಜ್ಯವನ್ನು ಮಧುವಂಕ ನಾಡು ಎಂದು ಕರೆಯಲಾಗಿದೆ . ಈ ಮಧುವಂಕ ನಾಡು ಎಂಬುದು ಬನವಾಸಿಯ ಮಧುಕೇಶ್ವವರನಿಗೆ ಸಂಬಂಧಿಸಿದ್ದು ಎನ್ನುವವರು ಇದ್ದಾರಾದರು ದಾಖಲೆಗಳಿಲ್ಲಾ. ಇನ್ನು ವಿಜಯನಗರ ಕಾಲದ ರಾಜ್ಯವಾಗುವ ಮುಂಚೆಯೆ ಮಧುವಂಕ ನಾಡು ಅಸ್ತಿತ್ವದಲ್ಲಿರಲು ಬಹುದಾದರು ಆರಗ ಗುತ್ತಿ ರಾಜ್ಯಕ್ಕೆ ಮಧುವಂಕ ನಾಡಾಗಿ ಶಾಸನ, ದಾಖಲೆಗಳಲ್ಲಿ ಮಾನ್ಯತೆ ದೊರೆತಿದ್ದು ವಿಜಯನಗರ ಸಾಮ್ರಾಜ್ಯದಲ್ಲೆ.
ಆರಗ ರಾಜ್ಯವನ್ನು ಉಲ್ಲೇಖಿಸುವ ಶಾಸನಗಳು 1362 ರಿಂದ ಆರಂಭವಾಗಿ ವಿಜಯನಗರದ ಕೊನೆಯ ಕಾಲಘಟ್ಟವಾದ 1665ರವರೆಗೆ ಇದೆ. ವಿಜಯನಗರದ ಆಡಳಿತದ ನಂತರವು ಬಹುತೇಕ ಆರಗ ರಾಜ್ಯವು ಕೆಳದಿಯ ಅರಸರ ಆಡಳಿತಕ್ಕೆ ಒಳಪಟ್ಟಿದ್ದು ಕವಲೇದುರ್ಗ, ಬಿದನೂರು ಪ್ರಾಮುಖ್ಯತೆ ಪಡೆಯುವುದರೊಂದಿಗೆ ಆರಗದ ಪ್ರಾಮುಖ್ಯತೆ ಅಂತ್ಯವಾಗಿದೆ. ಈ ಆರಗ ರಾಜ್ಯದಲ್ಲಿ 18 ಕಂಪಣಗಳು ಹಾಗೂ ಮೂರು ಪಟ್ಟಣಗಳು ಇದ್ದವು ಎಂದು ಬಹುತೇಕ ಶಾಸನಗಳು ತಿಳಿಸುತ್ತವೆ. ಒಳಗೋಡಿನ ಕ್ರಿ.ಶ.1560ರ ಶಾಸನವೊಂದು ಆರಗ ರಾಜ್ಯದಲ್ಲಿ 50 ನಾಡುಗಳು(ಊರು) ಅಂತರ್ಗತವಾಗಿದ್ದವು ಎಂದು ತಿಳಿಸುತ್ತದೆ. ಭಾರತೀಪುರ ಹಾಗೂ ಹುಂಚದಕಟ್ಟೆಯ ಶಾಸನಗಳು ಆರಗ ರಾಜ್ಯದಲ್ಲಿ ಪ್ರಮುಖವಾದ 60 ಅಗ್ರಹಾರಗಳಿದ್ದವು ಎಂದು ತಿಳಿಸುತ್ತದೆ.
ಆರಗದ ಐವತ್ತು ನಾಡುಗಳ ಬಹು ಪ್ರದೇಶವು ಇಂದಿನ ತೀರ್ಥಹಳ್ಳಿಯ ಈಗಿನ ಊರುಗಳ ಹೆಸರೆ ಹೊಂದಿವೆ. ಅತ್ತಿಗಾರು, ಅಲುಗವಳ್ಳಿ, ಬಾಳಗೋಡು, ಮಳಲಿ, ಜಂಬೆ, ಬಸವನ ಕಲ್ಲು, ನೆರಟೂರು, ಹೊರಣಿ, ಶಿವರಾಜಪುರ, ಯಡೆಹಳ್ಳಿ, ಸಾಲೂರು, ಕೊಡಸಗೊಳಿ, ಬಳ್ಳೂರು, ಸೂರಳಿ, ಮರಗಳಲೆ, ಜೆಗಟಿಗಾರೆ, ಮಹಿಷಿ, ಕೂಳೂರು, ಬಿಕ್ಕನೂರು, ಬಸವಾನಿ, ಮತ್ತೂರು ಮುಂತಾದ ಊರುಗಳ ಆರಗ ರಾಜ್ಯದ ನಾಡುಗಳ ಪ್ರಸ್ತಾಪದಲ್ಲಿದೆ. ರಾಜಧಾನಿ ಆರಗವು ತುಂಗಾ ನದಿಯ ತಟದಲ್ಲಿ ಕುಶಾವತಿಯ ದಡದಿಂದ ಗೋಪಿನಾಥ ಹೊಳೆಯವರೆಗಿತ್ತು ಎನ್ನುವ ಪ್ರಸ್ತಾಪ ನೊಡಿದರೆ ತೀರ್ಥರಾಜಪುರ (ತೀರ್ಥಹಳ್ಳಿ) ವೂ ಆರಗದಲ್ಲಿ ಸೇರಿ ಹೊಗಿತ್ತು ಎನ್ನಬಹುದು.
ಇನ್ನೂ ಹಲವು ಗ್ರಾಮಗಳ ಗುಂಪಿಗೆ ಭಾಗೆ ಎಂತಲೂ ಮೇಲುಬಾಗೆಯಲ್ಲಿ ಬೊಂದಿ, ಕಲ್ಲಿನಾಥಪುರ, ತೊರಗಲೆಗಳಿದ್ದವು. ಸಾಲೂರು ಬಾಗೆಯಲ್ಲಿ ಸಿಂಗಪೊಟ್ಟಣ, ಸಾಲೂರು, ಕೋಳೂರುಗಳಿದ್ದವು. ಬೆಳ್ಳುರು ಬಾಗೆಯಲ್ಲಿ ಭಾರತೀಪುರ ಹಾಗೂ ಭಾವರಸನ ಕೊಪ್ಪ ಗ್ರಾಮಗಳಿದ್ದವು.
ಮಧುವಂಕ ನಾಡಿನಲ್ಲಿ ಕೆಲವು ಪಟ್ಟಡಿಗಳಿದ್ದವು. ಈ ಪಟ್ಟಡಿಗಳು ಕಂದಾಯ ವ್ಯವಸ್ಥೆಯ ಕೇಂದ್ರಭಾಗವಾಗಿದ್ದವು. ಕೊಡಸಗೊಳಿ ಪಟ್ಟಡಿಯಲ್ಲಿ ಬೊಬ್ಬಳ್ಳಿ, ವಡದಕೆರೆ ಗ್ರಾಮ, ಹಿಂಡಚವಳ್ಳಿ, ಕುಕ್ಕರಿ ಗ್ರಾಮ, ಮಾವಕೋಡು ಗ್ರಾಮ ಹಾಗೂ ಕೇದಗೆ ಬಯಲು ಗ್ರಾಮಗಳಿದ್ದವು. ಜಂಬೇ ಪಟ್ಟಡಿಯಲ್ಲಿ ಮರಗಳಲೆ, ನಿರಜವಳ್ಳಿ ಹಾಗೂ ಬಸವನಕಲ್ಲು ಗ್ರಾಮಗಳಿದ್ದವು. ವಂಬೀ ಪಟ್ಟಡಿಯಲ್ಲಿ ಬಸವನಕಲ್ಲು ಗ್ರಾಮವಿತ್ತು. ನೆರಟೂರು ಪಟ್ಟಿಡಿಯಲ್ಲಿ ಸೂರಳಿ ಗ್ರಾಮವಿತ್ತು.
ಆರಗ ರಾಜ್ಯದಲ್ಲಿನ ಆರ್ಥಿಕ ಚಟುವಟಿಕೆಗಳ ಮೂಲ ಕೇಂದ್ರವಾಗಿದ್ದುದು ಪೇಟೆಗಳು. ಸಮುದ್ರದಿಂದ ಬರುತ್ತಿದ್ದ ಪದಾರ್ಥಗಳಿಗೆ ಆರಗವು ಮುಖ್ಯ ನೆಲೆಯಾಗಿತ್ತು. ಆಂತರಿಕ ವ್ಯಾಪಾರ ಹಾಗೂ ವಿದೇಶಿ ವ್ಯಾಪಾರಗಳಿಗೆ ಇದು ಕೇಂದ್ರವಾಗಿತ್ತು. ಯಥೇಚ್ಛವಾಗಿ ಬೆಳೆಯುತ್ತಿದ್ದ ಮಲೆನಾಡಿನ ಪದಾರ್ಥಗಳಿಗೆ ವಿದೇಶದ ಮಾರುಕಟ್ಟೆಗಳಲ್ಲಿಯೂ ವಿಶೇಷವಾದ ಬೆಲೆಯಿತ್ತು. ಆರಗ ರಾಜ್ಯದಲ್ಲಿ ಇಂತಹ ಎಂಟು ಪೇಟೆಗಳನ್ನು ಶಾಸನಗಳಲ್ಲಿ ದಾಖಲಾಗಿವೆ.
ಆರಗದ ವೇಂಟೆ (ರಾಜಧಾನಿ) ಯಲ್ಲಿ 8 ಪೇಟೆಗಳು ಇದ್ದವು ಕವಲೇದುರ್ಗದ 1674ರ ಶಾಸನವು ಹೀಗೆ ದಾಖಲಿಸುತ್ತದೆ. “ಆರಗದ ವೆಂಟೆಯಕೆ ಸಲುವ ಆರಗ ಕೊಡಲೂರು, ಯೆಡೆಹಳ್ಳಿ, ಅವಿನಹಳ್ಳಿ, ಕಾರೂರು, ಬಿದರೂರು, ಮೊಸರೂರು ಮಾಳೇನಹಳ್ಳಿ ಸಹಾ ಎಂಟು ಪೇಟೆಗಳಲ್ಲಿ ಅರಮನೆಯ ಸುಂಕಕೆ…’’ ಈ ಎಂಟು ಪೇಟೆಗಳಲ್ಲಿ ನಾನಾ ರೀತಿಯ ತೆರಿಗೆಗಳನ್ನು ಅರಮನೆಯವರಿಗೆ ಕಟ್ಟಬೇಕಾಗಿತ್ತು.
“ಈ ಪೇಟೆಗಳಲ್ಲಿ ಅಡಕೆ, ಮೆಣಸು, ಝಲಿಪಟಿ, ಖೊಬರಿ, ಕವಾಡ ಮುಂತಾದ ಗಡಿಸಿನ ಸರಕು ಹೊರತಾಗಿ ಅಕ್ಕಿ, ಭತ್ತ, ರಾಗಿ, ಎಣ್ಣೆ, ತುಪ್ಪ, ಕಾಯಿ, ಬೆಲ್ಲ ಮುಂತಾಗಿ’’ ವಸ್ತುಗಳು ವಿಕ್ರಯವಾಗುತ್ತಿತ್ತು.
ಇನ್ನೂ ಆರಗ – ಗುತ್ತಿ ಯ ರಾಜರಾಗಿ ಮಾರಪ್ಪರಾಯರಿದ್ದರು ಆರಗ ಗುತ್ತಿ ರಾಜ್ಯದ ಅಧಿನದಲ್ಲಿದ್ದ ಮಧುವಂಕ ನಾಡನ್ನು ವಿಜಯನಗರದ ಅರಸ ವೀರ ಬುಕ್ಕಣ್ಣ ಒಡೆಯನ ಮಗ ವಿರುಪಾಕ್ಷರಾಯ (1362-1382) ಅಥವಾ ವಿರುಪಣ್ಣ ಒಡೆಯ ಆಳಿದ ಮೊದಲಿಗ. ಈ ವಿರುಪಾಕ್ಷರಾಯನ ಹೆಸರಿನಲ್ಲೆ ಈಗಿನ ವಿರುಪಾಕ್ಷ ಪುರ ಅಥವಾ ವಿರುಪಾಪುರ ಎಂಬ ಹೆಸರು ಗ್ರಾಮಕ್ಕಿಡಲಾಗಿದೆ ಎನ್ನುತ್ತಿವೆ ಆಕರಗಳು.
ನಂತರ ಸೋರಣ್ಣ ಒಡೆಯ, ಜನ್ನರಸ ರಾಯ, ವಿಠ್ಟಪ್ಪ ಒಡೆಯ, ಲಿಂಗಣ್ಣ ಒಡೆಯ, ಸಿರಿಗಿರಿನಾಥ ಒಡೆಯ, ದೇವಪ್ಪ ದಣ್ಣನಾಯಕ ಸೇನಭೋವ (ಸೇನಾಪತಿ ಮತ್ತು ಮಂತ್ರಿ) ಹರಿಯಪ್ಪ, ಸಿಂಗರಸರ ಹೆಸರು ಶಾಸನಗಳಲ್ಲಿವೆ ಹೀಗೆ ಮುಂದುವರೆದು ಹತ್ತು ಹಲವಾರು ಒಡೆಯರ ಆಳ್ವಿಕೆಗೊಳಪಟ್ಟಿದೆಯಾದರು ವಿಜಯನಗರದ ಅವನತಿಯ ನಂತರ ಆರಗ ರಾಜ್ಯದ ಪ್ರಸ್ತಾಪ ಅಲ್ಲಲ್ಲಿದ್ದರು ಕೆಳದಿಯ ಸಾಮ್ರಾಜ್ಯದ ಪ್ರಾಮುಖ್ಯತೆ ಹೆಚ್ಚಾಗಿ ಆರಗ ಪ್ರಾಮುಖ್ಯತೆ ಕಳೆದುಕೊಳ್ಳುತ್ತಾ ಪಕ್ಕದ ಪ್ರದೇಶವಾದ ಕವಲೆದುರ್ಗ ಪ್ರಾಮುಖ್ಯತೆ ಪಡೆಯುತ್ತಾ ಸಾಗಿದಂತೆ ಕಾಣುತ್ತದೆ.
ವಿಜಯನಗರ ಸಾಮ್ರಾಜ್ಯದ ಪ್ರಮುಖ ರಾಜ್ಯ ವ್ಯಾಪಾರಿ ಕೇಂದ್ರವಾಗಿದ್ದ ಆರಗದಲ್ಲಿ ಹುಟ್ಟಿದ ಪುರಂಧರ ದಾಸರು ಪ್ರಮುಖ ವ್ಯಾಪಾರಿಯ ಮಗನಾಗಿ ,ಅಗರ್ಭ ಶ್ರೀಮಂತರ ಮಗನಾಗಿ ಆರಗದಲ್ಲಿ ತಮ್ಮ ಜೀವನ ನಡೆಸಿ ನಂತರದಲ್ಲಿ ವೈರಾಗ್ಯ ಮೂಡಿ ಎಲ್ಲವ ತ್ಯಜಿಸಿ ಕೀರ್ತನೆಕಾರರಾಗಿ, ಕರ್ನಾಟಕ ಸಂಗೀತಕ್ಕೆ ಹೊಸ ಭಾಷ್ಯೆ ಬರೆಯುತ್ತಾ ವಿಜಯನಗರ ಸಾಮ್ರಾಜ್ಯದ ಆಸ್ಥಾನದ ಆಸ್ತಿಯಾಗುವಲ್ಲಿ ಆರಗ ಆ ಕಾಲಕ್ಕೆ ವಿಜಯನಗರ ಸಾಮ್ರಾಜ್ಯದ ಪ್ರಮುಖ ರಾಜ್ಯದ ರಾಜಧಾನಿಯಾಗಿದ್ದು ಪೂರಕವಾಗಿ ಕೆಲಸ ಮಾಡಿದ್ದು ಕಾರಣವಾಗಿರುವುದಂತೂ ಹೌದು……
“Powerful people comes from powerful places”
ಎಂಬಂತೆ ಮಧುವಂಕರ ನಾಡು ಆರಗ ಸೀಮೆಯಿಂದ ಹುಟ್ಟಿದ ಪುರಂಧರ ದಾಸರು ಆರಗ ಸೀಮೆಯ ಖ್ಯಾತಿ ನಾಡಿನೆಲ್ಲೆಡೆ ಪಸರುವಂತೆ ಮಾಡಿದರು. ಮಧುವಂಕರ ನಾಡು ಆರಗದ ಪುರಂಧರ ದಾಸರು ತೀರ್ಥಹಳ್ಳಿಯ ಹೆಮ್ಮೆ…
(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)
ಆದರ್ಶ ಹುಂಚದಕಟ್ಟೆ
ಚಿಂತಕರು, ಬರಹಗಾಗರು