ದೆಹಲಿ: ಅಪರಾಧಿಗಳನ್ನು ಪಕ್ಷಕ್ಕೆ ಸೇರಿಸಿಕೊಂಡು ನಂತರ ಅವರನ್ನು ಮುಖ್ಯಮಂತ್ರಿಗಳು ಮತ್ತು ಪ್ರಧಾನಮಂತ್ರಿಗಳನ್ನಾಗಿ ಮಾಡುವವರಿಗೆ ಎಷ್ಟು ವರ್ಷ ಜೈಲು ಶಿಕ್ಷೆ ವಿಧಿಸಬೇಕು ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಪ್ರಶ್ನಿಸಿದ್ದಾರೆ.
ಈ ಕುರಿತು ಕೇಜ್ರಿವಾಲ್ ಸೋಮವಾರ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಹಗರಣಗಳ ಆರೋಪ ಎದುರಿಸುತ್ತಿರುವ ನಾಯಕರನ್ನು ಬಿಜೆಪಿ ತನ್ನ ಪಕ್ಷಕ್ಕೆ ಸೇರಿಸಿಕೊಳ್ಳುವುದನ್ನು ಕೇಜ್ರಿವಾಲ್ ಟೀಕಿಸಿದ್ದಾರೆ.
“ಗಂಭೀರ ಅಪರಾಧಗಳನ್ನು ಎಸಗಿದವರನ್ನು ಪಕ್ಷಕ್ಕೆ ಸೇರಿಸಿಕೊಂಡು, ಅವರ ಮೇಲಿನ ಎಲ್ಲಾ ಪ್ರಕರಣಗಳನ್ನು ರದ್ದುಗೊಳಿಸಿ, ಅವರನ್ನು ಮಂತ್ರಿಗಳು, ಉಪಮುಖ್ಯಮಂತ್ರಿಗಳು ಮತ್ತು ಮುಖ್ಯಮಂತ್ರಿಗಳನ್ನಾಗಿ ಮಾಡುವ ವ್ಯಕ್ತಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಲ್ಲವೇ? ಅಂತಹ ವ್ಯಕ್ತಿಗೆ ಎಷ್ಟು ವರ್ಷ ಜೈಲು ಶಿಕ್ಷೆ ವಿಧಿಸಬೇಕು?” ಎಂದು ಕೇಜ್ರಿವಾಲ್ ತಮ್ಮ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಇನ್ನೊಂದು ಪೋಸ್ಟ್‌ನಲ್ಲಿ, “ಕೇಂದ್ರ ಸರ್ಕಾರ ನನ್ನನ್ನು ರಾಜಕೀಯ ಸಂಚಿನಿಂದ ಸುಳ್ಳು ಆರೋಪ ಹೊರಿಸಿ ಜೈಲಿಗೆ ಕಳುಹಿಸಿದಾಗ, ನಾನು 160 ದಿನಗಳ ಕಾಲ ಜೈಲಿನಿಂದಲೇ ಸರ್ಕಾರ ನಡೆಸಿದೆ” ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ತಾವು ಜೈಲಿನಿಂದ ಸರ್ಕಾರ ನಡೆಸಿದಾಗ ವಿದ್ಯುತ್ ಕಡಿತ ಇರಲಿಲ್ಲ, ಕುಡಿಯುವ ನೀರು ಲಭ್ಯವಿತ್ತು, ಆಸ್ಪತ್ರೆಗಳಲ್ಲಿ ಉಚಿತ ತಪಾಸಣೆ ಮತ್ತು ಔಷಧಿಗಳು ದೊರೆಯುತ್ತಿದ್ದವು ಎಂದು ಅವರು ಹೇಳಿದರು.
ಕಳೆದ ಏಳು ತಿಂಗಳಲ್ಲಿ ಬಿಜೆಪಿ ಸರ್ಕಾರ ದೆಹಲಿಯನ್ನು ದುಃಸ್ಥಿತಿಗೆ ತಂದಿದೆ ಎಂದು ಆರೋಪಿಸಿದ ಕೇಜ್ರಿವಾಲ್, ಜೈಲಿನಿಂದ ಕೆಲಸ ಮಾಡಿದ ಸರ್ಕಾರವೇ ಉತ್ತಮ ಎಂದು ದೆಹಲಿಯ ಜನರು ನೆನಪಿಸಿಕೊಳ್ಳುತ್ತಾರೆ ಎಂದು ತಿಳಿಸಿದರು.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅಮಿತ್ ಶಾ, “ಕೇಜ್ರಿವಾಲ್ ಅವರು ಏಕೆ ಜೈಲಿನಿಂದ ಸರ್ಕಾರ ನಡೆಸಬೇಕು? ಜೈಲಿಗೆ ಹೋದಾಗಲೇ ಅವರು ರಾಜೀನಾಮೆ ನೀಡಬೇಕಿತ್ತು” ಎಂದು ಹೇಳಿದ್ದರು. ಈ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ಕೇಜ್ರಿವಾಲ್ ಈ ಪ್ರಶ್ನೆಗಳನ್ನು ಕೇಳಿದ್ದಾರೆ.