ದೆಹಲಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಅಲೋಕ್ ಆರಾಧೆ ಮತ್ತು ಪಾಟ್ನಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ವಿಪುಲ್ ಮನುಭಾಯ್ ಪಂಚೋಲಿ ಅವರ ಹೆಸರನ್ನು ಶಿಫಾರಸು ಮಾಡಲು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಜಸ್ಟಿಸ್ ಬಿ.ಆರ್. ಗವಾಯ್ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ನಿರ್ಧರಿಸಿದೆ.
ಸಿಜೆಐ ಸೇರಿದಂತೆ 34 ನ್ಯಾಯಮೂರ್ತಿಗಳ ಹುದ್ದೆಗಳನ್ನು ಹೊಂದಿರುವ ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತುತ ಖಾಲಿ ಇರುವ ಎರಡು ಸ್ಥಾನಗಳನ್ನು ತುಂಬಲು ಕೊಲಿಜಿಯಂ ಈ ಇಬ್ಬರ ಹೆಸರುಗಳನ್ನು ಆಯ್ಕೆ ಮಾಡಿದೆ. 1964ರ ಏಪ್ರಿಲ್ 13ರಂದು ಜನಿಸಿದ ಜಸ್ಟಿಸ್ ಅಲೋಕ್ ಆರಾಧೆ ಈ ಹಿಂದೆ ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. ಜಸ್ಟಿಸ್ ಪಂಚೋಲಿ ಅವರು 1968ರ ಮೇ 28ರಂದು ಜನಿಸಿದ ಅವರು ಕಳೆದ ತಿಂಗಳ 21ರಂದು ಪಾಟ್ನಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾದರು.
ಇವರಿಬ್ಬರ ನೇಮಕಕ್ಕೆ ರಾಷ್ಟ್ರಪತಿಗಳು ಅನುಮೋದನೆ ನೀಡಿದರೆ, ಹಿರಿತನದ ಆಧಾರದಲ್ಲಿ ಜಸ್ಟಿಸ್ ಜೋಯ್ಮಲ್ಯ ಬಾಗ್ಚಿ ನಂತರ ಜಸ್ಟಿಸ್ ಪಂಚೋಲಿ ಅವರು 3.10.2031ರಂದು ಸಿಜೆಐ ಆಗಿ ಅಧಿಕಾರ ವಹಿಸಿಕೊಂಡು 27.5.2033ರವರೆಗೆ ಆ ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆಯಿದೆ. ಈ ವರ್ಷದ ಜನವರಿಯಿಂದ ಇಲ್ಲಿಯವರೆಗೆ ಆರು ನ್ಯಾಯಮೂರ್ತಿಗಳು ನಿವೃತ್ತರಾಗಿದ್ದಾರೆ. ಆ ಸ್ಥಾನಗಳಿಗೆ ಐವರನ್ನು ನೇಮಿಸಲಾಗಿದೆ. ಈಗ ಕೊಲಿಜಿಯಂ ಹೊಸದಾಗಿ ಇಬ್ಬರ ಹೆಸರುಗಳನ್ನು ಶಿಫಾರಸು ಮಾಡಿದೆ.