“..ನಂಬಿಕೆ ಮತ್ತು ಮೂಢನಂಬಿಕೆಗಳ ನಡುವೆ ಇರುವ ವ್ಯತ್ಯಾಸಗಳಾದರೂ ಏನು? ಅವುಗಳ ನಡುವೆ ಎಲ್ಲಿ ಬೇಕಾದರೂ ಗೆರೆ ಎಳೆಯಬಹುದು. ಆದರೆ, ಆ ಗೆರೆ ಮಾತ್ರ ತುಂಬಾ ತೆಳುವಾಗಿರುತ್ತದೆ. ಇದನ್ನು ವಿವರಿಸಲು ನನ್ನ ಬಾಲ್ಯದ ಕೆಲವು ಅನುಭವಗಳನ್ನು ಇಲ್ಲಿ ಹೇಳುತ್ತೇನೆ…” ನಿಖಿಲ್ ಕೋಲ್ಪೆಯವರ ಬರಹದಲ್ಲಿ
ಒಂದು ಊಹೆಯಿಂದಲೇ ಆರಂಭಿಸೋಣ. ಕಿಟಕಿ ಬಾಗಿಲುಗಳನ್ನು ಮುಚ್ಚಿದ ಒಂದು ಕತ್ತಲೆ ಕೋಣೆ. ಅದರೊಳಗೆ ಒಂದು ಮಸಿ ಹಿಡಿದ ಒಲೆ. ಆ ಒಲೆಯ ಕರಿ ಬೂದಿಯಲ್ಲಿ ಒಂದು ಕಪ್ಪು ಬೆಕ್ಕು ಮುದುಡಿ ಮಲಗಿದೆ ಎನ್ನುವುದು ಅಥವಾ ಇಲ್ಲ ಎನ್ನುವುದು ಒಂದು ನಂಬಿಕೆ. ಈ ನಂಬಿಕೆಯು ತಿಳುವಳಿಕೆಯಾಗಲು ಕೈಯಲ್ಲೊಂದು ಬೆಳಕು ಬೇಕು. ಅಥವಾ ನಾವು ಕಿಟಕಿ, ಬಾಗಿಲುಗಳನ್ನು ತೆರೆಯಬೇಕು. ಹೊರಗೂ ಕತ್ತಲಿದ್ದರೆ, ‘ಒಳಗಿನ ಬೆಳಕು’ ಹಚ್ಚಬೇಕು. ಇವು ಯಾವುದೂ ಇಲ್ಲದೆ, ಬೆಕ್ಕಿನ ಅಸ್ತಿತ್ವದ ಬಗ್ಗೆ ‘ನಾಯಿ-ಬೆಕ್ಕುಗಳಂತೆ’ ಕಚ್ಚಾಡುವುದು ಮೂರ್ಖತನವಲ್ಲವೆ?
ಈ ನಂಬಿಕೆ ಎಂದರೇನು? ಮೂಢನಂಬಿಕೆ ಎಂದರೇನು? ಇವುಗಳ ನಡುವೆ ಗೆರೆ ಎಳೆಯುವುದು ಹೇಗೆ? ಈ ನಂಬಿಕೆಗಳ ಮೂಲ ಇರುವುದು ಎಲ್ಲಿ? ಪ್ರಾಣಿ ಪಕ್ಷಿಗಳ ನಡುವೆ ಇಂತಾ ನಂಬಿಕೆಗಳು ಇರುತ್ತವೆಯೇ? ಅಥವಾ ಮನುಷ್ಯರಲ್ಲಿ ಮಾತ್ರವೆ? ಈ ಪ್ರಾಣಿ ಪಕ್ಷಿಗಳಿಗೆ- ಆಹಾರ ಎಲ್ಲಿ ಸಿಗುತ್ತದೆ, ಯಾವುದನ್ನು ತಿನ್ನಬಹುದು, ಯಾವುದನ್ನು ತಿನ್ನಬಾರದು, ಸಂಗಾತಿಯನ್ನು ಸೇರಿ ಸಂತಾನೋತ್ಪತ್ತಿ ಹೇಗೆ ಮಾಡಬೇಕು, ಮರಿಗಳನ್ನು ಹೇಗೆ ಸಾಕಬೇಕು, ವೈರಿಗಳಿಂದ ಹೇಗೆ ರಕ್ಷಿಸಿಕೊಳ್ಳಬೇಕು ಇತ್ಯಾದಿಯಾದ ಪ್ರಕೃತಿದತ್ತವಾದ ಅಂತರ್ಗತ ಜ್ಞಾನ ಮಾತ್ರವೇ ಇರುವುದು. ಹುಟ್ಟಿದ ಕ್ಷಣವೇ ತಾಯಿಯ ಮೊಲೆಗಾಗಿ ಹುಡುಕುವ ಶಿಶುವಿನ ಸಹಜ ಜ್ಞಾನದಂತೆಯೇ ಇದು. ಪ್ರಾಣಿಗಳು ಮನುಷ್ಯರಂತೆ ದೇವರು, ದಿಂಡರು, ಕರ್ಮಫಲ, ಭವಿಷ್ಯ ಇತ್ಯಾದಿಗಳ ಬಗ್ಗೆ ಚಿಂತಿಸುವುದಿಲ್ಲ. ಈ ಕುರಿತ ಚರ್ಚೆಯೇ ಎಂದೆಂದಿಗೂ ಮುಗಿಯದ ವ್ಯರ್ಥ ಕತೆ.
ಇದನ್ನು ಬರೆಯುತ್ತಿದ್ದಂತೆ ನೆನಪಿಗೆ ಬರುವುದು ಕುವೆಂಪು ಅವರು ‘ಕಾನೂರು ಹೆಗ್ಗಡತಿ’ ಕಾದಂಬರಿಯಲ್ಲಿ ಕಟ್ಟಿಕೊಟ್ಟಿರುವ ಒಂದು ಚಿತ್ರ. ಸುಬ್ಬಮ್ಮ ಮನೆಯ ಹಿತ್ತಲಿನ ಬಾಗಿಲಲ್ಲಿ ಕೆಲಸದಾಳು ಸೇಸಿಯೊಂದಿಗೆ ಮಾತನಾಡುತ್ತಾ ಕೂತಿರುತ್ತಾಳೆ. ಅಲ್ಲಿಯೇ ಕೋಳಿಯೊಂದು ತನ್ನ ಹೂಮರಿಗಳೊಂದಿಗೆ ಬಚ್ಚಲ ಕೊಚ್ಚೆಯನ್ನು ಕೆದಕುತ್ತಾ ಹುಳ ಹುಪ್ಪಟೆಗಳನ್ನು ತಿನ್ನುತ್ತ ಇರುತ್ತದೆ. ಆಕಾಶದಲ್ಲಿ ಒಂದು ಗರುಡ ಗಿರಕಿ ಹೊಡೆಯುತ್ತಾ ಸುತ್ತುತ್ತಿರುತ್ತದೆ. ಏಕಾಏಕಿಯಾಗಿ ಅದು ಬಾಣದಂತೆ ನೆಲಕ್ಕೆ ಎರಗಿ, ಹೂಮರಿಯೊಂದನ್ನು ತನ್ನ ಹರಿತ ಉಗುರುಗಳಿಂದ ಹಿಡಿದು, ಸುಬ್ಬಮ್ಮ- ಸೇಸಿಯರ ಬೊಬ್ಬೆ, ತಾಯಿ ಕೋಳಿಯ ಚೀರಾಟ ಪ್ರತಿರೋಧದ ನಡುವೆಯೂ ಎತ್ತಿಕೊಂಡು ಹಾರುತ್ತದೆ. ಗರುಡ ಎಂದರೆ ವಿಷ್ಣುವಿನ ವಾಹನ ಎಂದು ನಂಬುವ ಸುಬ್ಬಮ್ಮ- ಅದನ್ನೂ ಲೆಕ್ಕಿಸದೇ ಗರಡನಿಗೆ ಹಿಡಿಶಾಪ ಹಾಕುತ್ತಾಳೆ. ಮರಿಯನ್ನು ಕಳೆದುಕೊಂಡ ತಾಯಿ ಕೋಳಿ ಮಾತ್ರ ಒಂದು ಕ್ಷಣ ಆಕಾಶದ ಶೂನ್ಯವನ್ನೇ ದಿಟ್ಟಿಸಿ ನೋಡಿ, ಮರುಕ್ಷಣವೇ ಏನೂ ಆಗಿಲ್ಲ ಎಂಬಂತೆ ಉಳಿದ ಮರಿಗಳೊಂದಿಗೆ ಕೆಸರು ಬೆದಕುವ ತನ್ನ ಕಾಯಕವನ್ನು ಮುಂದುವರಿಸುತ್ತದೆ. ಮನುಷ್ಯರು ಮಾತ್ರ ಹಾಗಿಲ್ಲ.
ಮನುಷ್ಯರಲ್ಲಿ ಯೋಚಿಸುವ, ಚಿಂತಿಸುವ, ತರ್ಕಿಸುವ ಶಕ್ತಿ ಬೆಳೆಯುವುದರ ಜೊತೆಜೊತೆಗೇ ನಂಬಿಕೆ ಮತ್ತು ಮೂಢನಂಬಿಕೆಗಳು ಹುಟ್ಟಿಕೊಂಡು ಬೆಳೆಯುತ್ತಾ ಬಂದಿರುವುದು ನಿಸರ್ಗದ ವಿಪರ್ಯಾಸಗಳಲ್ಲಿ ಒಂದು. ಭಾರೀ ಮಳೆ, ಮಿಂಚು- ಸಿಡಿಲುಗಳ ಆರ್ಭಟ, ಭಾರೀ ಪ್ರವಾಹ, ಭೂಕಂಪ, ಜ್ವಾಲಾಮುಖಿ ಮುಂತಾದ ಪ್ರಾಕೃತಿಕ ವಿಕೋಪಗಳು, ಹುಲಿ, ಸಿಂಹ, ಹಾವು ಮುಂತಾದ ಪ್ರಾಣಿಗಳು ಹುಟ್ಟಿಸಿದ ಭಯ, ವಿಸ್ಮಯಗಳು ಆದಿ ಮಾನವರ ಕಲ್ಪನೆಯಲ್ಲಿ ಸಾವಿರಾರು ಕತೆಗಳನ್ನು, ಕಾರಣಗಳನ್ನು ಹುಟ್ಟಿಸಿರಬಹುದು. ತನಗೆ ತಿಳಿಯದ್ದನ್ನು, ತನ್ನ ಅರಿವಿಗೆ ಮೀರಿದ್ದೆಲ್ಲವನ್ನೂ ‘ನಂಬಿಕೆ’ಯ ಹೆಸರಲ್ಲಿ ಆರಾಧಿಸುವ ಮನುಷ್ಯರ ಸ್ವಭಾವ ಇಂದು ನಿನ್ನೆಯದಲ್ಲ. ದೇವರು, ದೈವ, ಭೂತ, ಪಿಶಾಚಿ, ಬೇತಾಳ, ಅತಿಮಾನುಷ ಶಕ್ತಿ ಇತ್ಯಾದಿಗಳ ಮೂಲ ಇರುವುದು ಇಂತಾ ನಂಬಿಕೆಗಳಲ್ಲಿಯೇ.
ಇವು ಜನರ ಮನಸ್ಸಿನಲ್ಲಿ ತಲೆತಲಾಂತರಗಳಿಂದ ಆಳವಾಗಿ ಬೇರು ಬಿಟ್ಟಿರುವುದರಿಂದ ಮತ್ತು ಅವು ಧಾರ್ಮಿಕ ಮತ್ತು ಮನಶ್ಶಾಸ್ತ್ರೀಯ ಸ್ಮೃತಿಗಳ ಸ್ವರೂಪ ಪಡೆದುಕೊಂಡಿರುವುದರಿಂದ ಅವುಗಳನ್ನು ಸಾರಾಸಗಟಾಗಿ ವಿರೋಧಿಸುವುದು, ನಿಂದಿಸುವುದು ನೋವುಂಟುಮಾಡುವ ಕೆಲಸ ಮತ್ತು ಅದು ಅಪೇಕ್ಷಣೀಯ ಕೆಲಸವೂ ಅಲ್ಲ. ಆದರೆ, ಇಂತಾ ಸಹಜ ನಂಬಿಕೆಗಳಿಗೆ ನೀರೆರೆದು, ಅವುಗಳನ್ನು ತಮ್ಮ ಸ್ವಾರ್ಥ, ಲಾಭಕ್ಕಾಗಿ ಹೆಮ್ಮರವಾಗಿ ಬೆಳೆಸಿದ್ದು ಮಾತ್ರ ಪುರೋಹಿತಶಾಹಿ ವರ್ಗ. ಇದು ಎಲ್ಲಾ ಧರ್ಮಗಳು ಮತ್ತು ಪ್ರಪಂಚದ ಅಸಂಖ್ಯಾತ ಆದಿವಾಸಿ ಬುಡಕಟ್ಟುಗಳ ಮಟ್ಟಿಗೂ ನಿಜ.
ಹಾಗಾದರೆ, ಈ ನಂಬಿಕೆ ಮತ್ತು ಮೂಢನಂಬಿಕೆಗಳ ನಡುವೆ ಇರುವ ವ್ಯತ್ಯಾಸಗಳಾದರೂ ಏನು? ಅವುಗಳ ನಡುವೆ ಎಲ್ಲಿ ಬೇಕಾದರೂ ಗೆರೆ ಎಳೆಯಬಹುದು. ಆದರೆ, ಆ ಗೆರೆ ಮಾತ್ರ ತುಂಬಾ ತೆಳುವಾಗಿರುತ್ತದೆ. ಇದನ್ನು ವಿವರಿಸಲು ನನ್ನ ಬಾಲ್ಯದ ಕೆಲವು ಅನುಭವಗಳನ್ನು ಇಲ್ಲಿ ಹೇಳುತ್ತೇನೆ.
ನಾನು ಚಿಕ್ಕವನಿದ್ದಾಗ ನಮಗೆ- ಮಕ್ಕಳಿಗೆ ಹೊಟ್ಟೆ ಉಬ್ಬರಿಸಿ ನೋವಾದರೆ, ನಮ್ಮ ಅಜ್ಜಿಯರು ಒಂದು ‘ಮೂಲಿಗೆ’ ಮಾಡುತ್ತಿದ್ದರು. ಒಂದು ದೊಡ್ದ ಬಟ್ಟಲಲ್ಲಿ ನೀರು ಹಾಕಿ ಅದಕ್ಕೆ ಕುಂಕುಮ ಇತ್ಯಾದಿ ಬೆರೆಸಿ ‘ಕುರಿನೀರು’ ಮಾಡುತ್ತಿದ್ದರು. ನಮ್ಮನ್ನು ಅದರ ಮುಂದೆ ಒಂದು ಮಣೆಯಲ್ಲಿ ಕುಳ್ಳಿರಿಸಿ, ಕಿರಿದಾದ ಬಾಯಿಯ ಮಣ್ಣಿನ ಕೊಡದೊಳಗೆ ಒಣ ಮುಳಿಹುಲ್ಲು ಹಾಕಿ ಬೆಂಕಿ ಹಚ್ಚುತ್ತಿದ್ದರು. ಅದು ಚಟಚಟನೇ ಹೊತ್ತಿ ಉರಿದ ತಕ್ಷಣ ಕೊಡವನ್ನು ಬಟ್ಟಲಿನ ಮೇಲೆ ಬೋರಲು ಹಾಕುತ್ತಿದ್ದರು. ಕೂಡಲೇ ಬಟ್ಟಲಿನ ನೀರು ನಮ್ಮ ಹೊಟ್ಟೆಯೊಳಗಿನ ಗುಳುಗುಳು ಸದ್ದನ್ನೇ ಹತ್ತಾರು ಪಾಲು ಹೆಚ್ಚು ಮಾಡಿ, ‘ಗುಳುಂಕ್ ಬುಳುಂಕ್’ ಎಂದು ಕೊಡದೊಳಗೆ ಸೇರುತ್ತಿತ್ತು. ನಾವೆಲ್ಲಾ ಮೈಮರೆತು ನೋಡುತ್ತಿರುವಂತೆಯೇ ನೀರನ್ನು ಮೂರು ದಾರಿ ಸೇರುವಲ್ಲಿ ಚೆಲ್ಲುತ್ತಿದ್ದರು. ವಿಶೇಷವೆಂದರೆ, ಅದು ಹೇಗೋ ನಮ್ಮ ಹೊಟ್ಟೆನೋವು ಮಾಯವಾಗುತ್ತಿತ್ತು. ಇದನ್ನು ತುಳುವಿನಲ್ಲಿ ‘ಕೊದಿ ದೆಪ್ಪುನಿ’ (ಆಸೆ ತೆಗೆಯುವುದು- ಮಕ್ಕಳು ತಿನ್ನುವಾಗ ಬೇರಾರಾದರೂ ನೋಡಿ ಆಸೆಪಟ್ಟರೆ ಹೊಟ್ಟೆ ನೋವು ಬರುತ್ತದೆ ಎಂಬ ಮೂಢನಂಬಿಕೆಯ ಫಲವಿದು) ಎಂದು ಕರೆಯುತ್ತಾರೆ.
ನಂತರ ಶಾಲೆಯಲ್ಲಿ ನಿರ್ವಾತ ಮತ್ತು ಗಾಳಿಯ ಕೆಳಮುಖ ಒತ್ತಡವನ್ನು ತೋರಿಸಲು ಕೊಡದ ಬದಲು ಗಾಜಿನ ಸಲಕರಣೆಗಳನ್ನು ಬಳಸಿಪ್ರಯೋಗ ಮಾಡಿದಾಗ ಅದು ನಮಗೆ ವಿಜ್ಞಾನವಾಗಿ ಕಂಡಿತು. ಕೊಡದ ಒಳಗೆ ಹುಲ್ಲು ಹೊತ್ತಿ ಉರಿಯುವಾಗ ಅದು ಕೊಡದೊಳಗಿನ ಗಾಳಿಯಲ್ಲಿರುವ ಆಮ್ಲಜನಕವನ್ನು ಉಪಯೋಗಿಸುವುದರಿಂದ ಸ್ವಲ್ಪ ಮಟ್ಟಿನ ನಿರ್ವಾತ ಉಂಟಾಗುತ್ತದೆ. ನೀರು ತುಂಬಿದ ಬಟ್ಟಲಲ್ಲಿ ಕೊಡವನ್ನು ಕವಚಿಹಾಕಿದಾಗ ಗಾಳಿಯ ಕೆಳಮುಖ ಒತ್ತಡದ ಕಾರಣದಿಂದ ನೀರು ನಿರ್ವಾತ ಜಾಗವನ್ನು ತುಂಬಲು ಕೊಡದೊಳಗೆ ನುಗ್ಗುತ್ತದೆ. ನಿಸರ್ಗ ಸಹಜ ಕ್ರಿಯೆಯನ್ನು ತೋರಿ ಈ ಪ್ರಯೋಗವು ನಂಬಿಕೆಯ ಆಧಾರದಲ್ಲಿ ಹೊಟ್ಟೆನೋವು ಗುಣಪಡಿಸುವ ಜಾದೂ ಆಗಿ ಈ ರೀತಿಯಲ್ಲಿ ವಿಸ್ಮಯ ಹುಟ್ಟಿಸುತ್ತದೆ. ಆದರೆ, ಅದರ ಮಂತ್ರ-ತಂತ್ರ ಸಾಧ್ಯತೆಯನ್ನು ಶಾಲೆಗೆ ಹೋಗದ ನಮ್ಮ ಅಜ್ಜಿಯರಿಗೆ ಹೇಳಿಕೊಟ್ಟವರು ಯಾರು?
ಇದೇ ರೀತಿಯ ನಂಬಿಕೆಗಳು ಮೂಢನಂಬಿಕೆಗಳಾಗಿ ಬದಲಾಗಿ, ಮನಶ್ಶಾಸ್ತ್ರೀಯ ಪರಿಣಾಮ ಬೀರುತ್ತಾ ನಮ್ಮ ಜೀವನದಲ್ಲಿ ಪರಿಣಾಮ ಬೀರುತ್ತವೆ. ಐದು ದಶಕಗಳ ಹಿಂದೆ ನಮ್ಮ ಶಾಲೆಯಲ್ಲಿ 700-800 ವಿದ್ಯಾರ್ಥಿಗಳು ಇದ್ದರೂ, ಇದ್ದದ್ದು ಒಂದು ಶೌಚಾಲಯ ಮಾತ್ರ. ಅದಕ್ಕೆ ಬೀಗ ಹಾಕಿದ್ದು, ಶಿಕ್ಷಕ-ಶಿಕ್ಷಕಿಯರಿಗೆ ಮೀಸಲಾಗಿತ್ತು. ಗಂಡು ಮಕ್ಕಳಿಗೆ ಮೂತ್ರವಿಸರ್ಜನೆಗೆ ರಸ್ತೆ ಬದಿಯೇ ಗತಿ. ಹೆಣ್ಣು ಮಕ್ಕಳಿಗೆ ಮೂತ್ರಾಲಯವಿತ್ತು. ನಡುವೆ ಏನಾದರೂ,’ಎರಡು’ ಬಂದರೆ, ಅದರ ಕಷ್ಟ ಅನುಭವಿಸಿದವರಿಗೇ ಗೊತ್ತು. ಕೆಲವರು ಚಡ್ಡಿಯಲ್ಲೇ ಮಾಡಿಕೊಂಡು ನಗೆಪಾಟಲಾದದ್ದೂ ಇದೆ. ಶಾಲೆಗೆ ಹೋಗಲು ಎರಡು-ಮೂರು ಕಿ.ಮೀ. ನಡೆಯಬೇಕಾದ ನಾವು ದಾರಿಯಲ್ಲಿ ಏನಾದರೂ ‘ಬಂದಂತೆ’ ಆದರೆ, ಚಡ್ಡಿಯ ಜೇಬಿನಲ್ಲಿ ಒಂದು ಬೆಣಚುಕಲ್ಲನ್ನು ಹಾಕಿಕೊಳ್ಳುತ್ತಿದ್ದೆವು. ಹಾಗೆ ಮಾಡಿದರೆ, ‘ಅದು’ ನಿಲ್ಲುತ್ತದೆ ಎಂಬ ಮೂಢನಂಬಿಕೆ. ಪವಾಡ ಎಂಬಂತೆ ಹೆಚ್ಚಿನ ಬಾರಿ ಅದು ನಿಜವಾಗುತ್ತಿತ್ತು. ನಂಬಿಕೆ-ಮೂಡನಂಬಿಕೆಗಳ ಮನಶ್ಶಾಸ್ತ್ರೀಯ ಆಳವನ್ನು ಇಲ್ಲಿ ಗುರುತಿಸಬಹುದು.
ನನ್ನ ಗೆಳೆಯ ವೈದ್ಯರೊಬ್ಬರು ಹೇಳಿದಂತೆ, ಕೆಲವು ವೈದ್ಯರು ತಮ್ಮಲ್ಲಿ ಬಂದ ಕೆಲವರಿಗೆ ಯಾವ ಔಷಧಿಯ ಅಗತ್ಯ ಇಲ್ಲದೇ ಇದ್ದರೂ ಡಿಸ್ಟಿಲ್ಡ್ ವಾಟರ್ ಇಂಜೆಕ್ಷನ್ ನೀಡಿ ಹಣ ಸುರಿಯುತ್ತಾರಂತೆ. ನಿಮಗೆ ಔಷಧಿಯ ಅಗತ್ಯ ಇಲ್ಲ ಎಂದು ನಿಜ ಹೇಳಿದರೆ, ರೋಗಿಗಳು ಬೇರೆ ವೈದ್ಯರಲ್ಲಿ ಹೋಗುತ್ತಾರೆ; ಪ್ರಾಕ್ಟೀಸ್ ಹಾಳಾಗುತ್ತದೆ; ಡಿಸ್ಟಿಲ್ಡ್ ವಾಟರ್ ಕೊಟ್ಟರೆ ನಂಬಿಕೆಯಿಂದಲೇ ಗುಣವಾಗುತ್ತದಂತೆ.
ಬಾಲ್ಯದಲ್ಲಿ ಹೆಚ್ಚಾಗಿ ಕೇಳುತ್ತಿದ್ದ ಇನ್ನೊಂದು ವಿಷಯ ಎಂದರೆ, ‘ಮದ್ದು ಹಾಕುವುದು’. ತಮಗೆ ಆಗದವರ ಆಹಾರದಲ್ಲಿ ಮದ್ದು ಹಾಕಿ ಹಾನಿ ಮಾಡುವುದು, ವಶೀಕರಣ ಮಾಡುವುದು. ಒಂದು ಗಂಡು ಹೆಣ್ಣಿನ ನಡುವೆ ಸಂಬಂಧವಿದ್ದರೆ, ‘ಅವಳ ಮನೆಯವರು ಇವನಿಗೆ ಮದ್ದು ಹಾಕಿ ವಶಮಾಡಿಕೊಂಡಿದ್ದಾರೆ’ ಎಂದು ಹೇಳುತ್ತಿದ್ದರು. ಈ ಮದ್ದಿನಲ್ಲಿ ಓತಿ, ಅರಣೆ ಮುಂತಾದ ಸರೀಸೃಪಗಳ ರಕ್ತವೋ, ಸುಟ್ಟು ಮಾಡಿದ ಬೂದಿಯೋ ಇರುತ್ತದಂತೆ. ಮಾಟಮಂತ್ರ ಏನೇ ಇರಲಿ, ಇದೊಂದು ವಿಷಪ್ರಾಶನದಂತ ಕ್ರಿಮಿನಲ್ ಕೃತ್ಯ! ಮೂಢನಂಬಿಕೆಯ ಬಲದಲ್ಲಿ ನಡೆಯುವಂತದ್ದು. ನಕಲಿ ವೈದ್ಯರು ಮತ್ತು ಮಂತ್ರವಾದಿಗಳು ಇದನ್ನು ಕೊಡುತ್ತಾರೆ. ಶತ್ರುಗಳಿಗೆ ಮಾಟ ಮಾಡುವುದಾಗಿ ಹೇಳಿ ಹಣ ಸುಲಿಯುತ್ತಾರೆ. ನಿಮಗೆ ಮದ್ದು ಹಾಕಲಾಗಿದೆ, ಮಾಟ ಮಾಡಲಾಗಿದೆ ಎಂದು ಬೆದರಿಸಿ ಅದನ್ನು ತೆಗೆಯುತ್ತೇವೆ ಎಂದು ಹಣ ಪೀಕಿಸುವವರೂ ಅವರೇ.
ಹಾಗೆಂದು ನಮ್ಮಲ್ಲಿರುವ ನಾಟಿವೈದ್ಯರನ್ನೆಲ್ಲಾ ನಕಲಿ ಎನ್ನಲಾಗದು. ಹಾಗೆ ಹೇಳಿದರೆ, ಆಯುರ್ವೇದ, ಯುನಾನಿ ಮುಂತಾದ ಔಷಧ ಪದ್ಧತಿಗಳನ್ನು ನಕಲಿ ಎನ್ನಬೇಕಾಗುತ್ತದೆ. ಆಯುರ್ವೇದದಿಂದ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ ಎನ್ನುವುದೂ ಒಂದು ಮೂಢನಂಬಿಕೆ. ಆಲೋಪತಿಯಲ್ಲಿ ಇರುವ ರಾಸಾಯನಿಕಗಳಂತೆಯೇ ಅವುಗಳಲ್ಲೂ ನೈಸರ್ಗಿಕ ರಾಸಾಯನಿಕಗಳಿರುತ್ತವೆ. ಗಿಡಮೂಲಿಕೆಗಳಲ್ಲೂ ವಿಷಗಳಿರುತ್ತವೆ. ನಂಬಿಕೆ ಮತ್ತು ಮೂಢನಂಬಿಕೆಗಳ ನಡುವಿನ ತೆಳು ಗೆರೆಯನ್ನು ಇದು ತೋರಿಸುತ್ತದೆ.
ಚಿಕ್ಕಂದಿನಲ್ಲಿ ನಮ್ಮ ಅಜ್ಜಿಯರು ಬಿಸಿ ಅನ್ನಕ್ಕೆ ಮೊಸರು ಹಾಕಿದರೆ, ಮನೆಯ ದನಗಳ ಕೆಚ್ಚಲು ಒಡೆಯುತ್ತದೆ ಎಂದು ಹೇಳಿ ಹೆದರಿಸುತ್ತಿದ್ದರು. ಅದರ ಕಾರ್ಯಕಾರಣ ಅವರಿಗೆ ತಿಳಿದಿಲ್ಲ. ಅವರದ್ದು ಮೂಢನಂಬಿಕೆ. ಆದರೆ, ನಿಜವಾದ ಕಾರಣ ತಿಳಿದರೆ ಇದನ್ನು ಸಂಪೂರ್ಣವಾಗಿ ಮೂಢನಂಬಿಕೆ ಎನ್ನಲಾಗುವುದಿಲ್ಲ. ಮೊಸರಿನಲ್ಲಿರುವ ಉಪಯೋಗಿ ಬ್ಯಾಕ್ಟೀರಿಯಾಗಳು ಬಿಸಿಗೆ ನಾಶವಾಗುತ್ತವೆ ಎನ್ನುವುದೇ ನಿಜವಾದ ಕಾರಣ. ಆದರೆ, ಕಟ್ಟುಕತೆ- ಕಾರಣಗಳನ್ನು ನೀಡಿ ಮೂಢನಂಬಿಕೆಗಳನ್ನು ಸಮರ್ಥಿಸುವವರೂ ಇದ್ದಾರೆ.
ನಂಬಿಕೆ ಮತ್ತು ಮೂಢನಂಬಿಕೆಗಳನ್ನು ಗುರುತಿಸುವುದು ಹೇಗೆ? ಯಾವುದನ್ನು ವಿರೋಧಿಸಬೇಕು? ಯಾವುದನ್ನು ನಿಷೇಧಿಸಬೇಕು? ಇದಕ್ಕೆ ಮಾನದಂಡಗಳೇನು? ಕೆಲವು ನಿರುಪದ್ರವಿ ಮೂಢನಂಬಿಕೆಗಳೂ ಇರುತ್ತವೆ. ಅವುಗಳನ್ನು ವಿರೋಧಿಸುವುದರಿಂದ ಲಾಭವಾದರೂ ಏನು? ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಕೆಲವು ಅಪಾಯಕಾರಿ, ಅವಮಾನಕಾರಿ ಮೂಢನಂಬಿಕೆಗಳನ್ನು ಮುಂದೆ ನೋಡೋಣ.